ಪಠ್ಯದ ಹೊರೆ ಇಳಿಕೆ ಸ್ವಾಗತಾರ್ಹ ಚಿಂತನೆ

7

ಪಠ್ಯದ ಹೊರೆ ಇಳಿಕೆ ಸ್ವಾಗತಾರ್ಹ ಚಿಂತನೆ

Published:
Updated:
ಪಠ್ಯದ ಹೊರೆ ಇಳಿಕೆ ಸ್ವಾಗತಾರ್ಹ ಚಿಂತನೆ

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‍ಸಿಇಆರ್‌ಟಿ) ಪಠ್ಯಕ್ರಮವನ್ನು ಹಗುರಗೊಳಿಸುವ ಮೂಲಕ ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವ ಕೇಂದ್ರ ಸರ್ಕಾರದ ಚಿಂತನೆ ಸ್ವಾಗತಾರ್ಹ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‍ ಜಾವಡೇಕರ್‍ ಅವರು ರಾಜ್ಯಸಭಾ ಟಿ.ವಿ.ಗೆ ನೀಡಿರುವ ಸಂದರ್ಶನದಲ್ಲಿ ಪಠ್ಯವನ್ನು ಕಡಿತಗೊಳಿಸುವ ನಿರ್ಧಾರ ಪ್ರಕಟಿಸಿದ್ದಾರೆ. 2019ರ ಶೈಕ್ಷಣಿಕ ಸಾಲಿನಿಂದಲೇ ‘ಹಗುರ ಪಠ್ಯ’ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ. ‘ಈಗ ಜಾರಿಯಲ್ಲಿರುವ ಶಾಲಾ ಪಠ್ಯಗಳ ಪ್ರಮಾಣವು ಬಿ.ಎ., ಬಿ.ಕಾಂ., ತರಗತಿಗಳ ಪಠ್ಯಕ್ಕಿಂತಲೂ ಎರಡು ಪಟ್ಟು ಹೆಚ್ಚಾಗಿದೆ. ಇದನ್ನು ಕಡಿತಗೊಳಿಸುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅವಕಾಶ ಕಲ್ಪಿಸುವುದು’ ಸರ್ಕಾರದ ಉದ್ದೇಶ. ಶೈಕ್ಷಣಿಕ ಗುಣಮಟ್ಟ ಹಾಗೂ ಶಿಕ್ಷಕರ ಸಾಮರ್ಥ್ಯ ಕುಸಿತಕ್ಕೆ ಸಂಬಂಧಿಸಿದಂತೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಈ ಅಭಿಪ್ರಾಯವು ವರ್ಷದಿಂದ ವರ್ಷಕ್ಕೆ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಸಾಮಾಜಿಕ ವಲಯದಲ್ಲಿ ಇರುವ ಆತಂಕಕ್ಕೆ ಕನ್ನಡಿ ಹಿಡಿದಂತಿದೆ. ಸಾಮಾನ್ಯವಾಗಿ, ಪಠ್ಯಗಳನ್ನು ಬದಲಿಸುವ ಬಗ್ಗೆ ವ್ಯಕ್ತವಾಗುವ ಉತ್ಸಾಹವು ಶಿಕ್ಷಕರ ಸಾಮರ್ಥ್ಯವನ್ನು ವೃದ್ಧಿಸುವ ವಿಷಯದಲ್ಲಿ ವ್ಯಕ್ತವಾಗುವುದಿಲ್ಲ. ಶಿಕ್ಷಕರ ಸಾಮರ್ಥ್ಯ ಕುಂದಲಿಕ್ಕೆ ಒಂದರ್ಥದಲ್ಲಿ ಸರ್ಕಾರಗಳೇ ಕಾರಣವಾಗಿವೆ. ಬೋಧನೆಗೆ ಹೊರತಾದ ಹಲವು ಜವಾಬ್ದಾರಿಗಳನ್ನು ಬೋಧಕರ ಮೇಲೆ ಹೇರುವ ಮನೋಭಾವದಲ್ಲೇ, ‘ಪಾಠ ಹೇಳುವುದು ಎರಡನೇ ಆದ್ಯತೆ’ ಎನ್ನುವುದನ್ನು ಸೂಚಿಸುವಂತಿದೆ. ಗಣತಿ, ಚುನಾವಣೆ, ತರಬೇತಿಯಂಥ ಬೋಧಕೇತರ ಚಟುವಟಿಕೆಗಳಲ್ಲಿ ಶಿಕ್ಷಕ ತೊಡಗಿಸಿಕೊಂಡರೆ ಮಕ್ಕಳನ್ನು ಕೇಳುವವರು ಯಾರು?

ಪಠ್ಯಕ್ರಮ ಬದಲಾವಣೆ ಎನ್ನುವುದು ನಮ್ಮಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿಗಿಂತಲೂ ಹೆಚ್ಚಾಗಿ ರಾಜಕೀಯ ಪಕ್ಷಗಳ ಅಭಿವ್ಯಕ್ತಿಗೆ ಸಂಬಂಧಿಸಿದ ಪ್ರಕ್ರಿಯೆ ಎನ್ನುವಂತಾಗಿದೆ. ಸರ್ಕಾರಗಳು ಬದಲಾದಂತೆ ಅವುಗಳ ಮೂಗಿನ ನೇರಕ್ಕೆ ತಕ್ಕಂತೆ ಪಠ್ಯಕ್ರಮಗಳನ್ನು ಬದಲಿಸುತ್ತವೆ. ಪಠ್ಯವನ್ನು ರೂಪಿ

ಸಲಿಕ್ಕೆ ವೈಜ್ಞಾನಿಕ ದೃಷ್ಟಿಕೋನ ಮಾನದಂಡವಾಗಬೇಕೇ ವಿನಾ ಪಕ್ಷಗಳ ಸಿದ್ಧಾಂತಗಳಲ್ಲ ಎನ್ನುವುದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು. ರಾಜಕಾರಣದ ಮರ್ಜಿಗೆ ತಕ್ಕಂತೆ ಶಿಕ್ಷಣಕ್ರಮವನ್ನು ಹೇರಲಿಕ್ಕೆ ಮಕ್ಕಳು ಪ್ರಯೋಗಪಶುಗಳಲ್ಲ. ಕಲಿಕೆ ಎನ್ನುವುದು ಎಳೆಯರ ಪಾಲಿಗೆ ಉಲ್ಲಾಸದಾಯಕವಾದ ಹಾಗೂ ಮನೋವಿಕಾಸಕ್ಕೆ ಪೂರಕವಾದ ಅನುಭವವಾಗಬೇಕು. ಅದು, ಶಿಕ್ಷೆ ಅಥವಾ ಹೇರಿಕೆ ಅನ್ನಿಸಬಾರದು. ಶಿಕ್ಷಣದ ಮೂಲಕ ಮಾನವೀಯ ಸಂವೇದನೆಗಳುಳ್ಳ ತಲೆಮಾರನ್ನು ರೂಪಿಸುವುದು ನಮ್ಮ ಕಾಳಜಿಯಾಗಬೇಕೇ ವಿನಾ ಯಂತ್ರಮಾನವರ ಸೃಷ್ಟಿಯಲ್ಲ.

ಪುಸ್ತಕಗಳ ರಾಶಿಯನ್ನು ಬೆನ್ನ ಮೇಲೆ ಹೊತ್ತುಕೊಂಡು ಹೋಗುವ ಮಕ್ಕಳನ್ನು ನೋಡಿದರೆ, ಪೋಷಕರು ಮತ್ತು ವ್ಯವಸ್ಥೆಯ ಆಶೋತ್ತರಗಳನ್ನೆಲ್ಲ ಅವರ ಬೆನ್ನ ಮೇಲೆ ಹೇರಿರುವಂತೆ ಕಾಣಿಸುತ್ತದೆ. ಶಾಲಾಚೀಲದ ಭಾರವನ್ನು ಹೊರುವುದರಿಂದಾಗಿ ಬೆನ್ನುನೋವು, ಕತ್ತುನೋವು, ಉಸಿರಾಟದ ತೊಂದರೆಗಳಿಂದ ಬಳಲುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಈ ಒತ್ತಡವು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಸ್ಪರ್ಧೆಯ ಹೆಸರಿನಲ್ಲಿ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದಕ್ಕೆ ಯಾವ ಸಮರ್ಥನೆಯೂ ಇಲ್ಲ. ಮಕ್ಕಳಿಗೆ ಬಾಲ್ಯವನ್ನು ಮರಳಿ ದೊರಕಿಸಿಕೊಡುವ ನಿಟ್ಟಿನಲ್ಲಿ ಪಠ್ಯದ ಹೊರೆಯನ್ನು ಕಡಿಮೆಗೊಳಿಸುವ ನಿರ್ಧಾರ ಒಳ್ಳೆಯದು. ಪಠ್ಯೇತರ ಚಟುವಟಿಕೆಗಳನ್ನು ಕೂಡ ಕಲಿಕೆಯ ಭಾಗವಾಗಿಯೇ ಗುರ್ತಿಸಬೇಕಾಗಿದೆ. ಪ್ರಸಕ್ತ ಬಜೆಟ್‍ ಅಧಿವೇಶನದ ಮುಂದುವರಿದ ಭಾಗದಲ್ಲಿ, ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿದ ಮಸೂದೆ ಮಂಡನೆಯಾಗಲಿದೆ ಎಂದು ಸಚಿವರು ಹೇಳಿದ್ದಾರೆ. ಸುಧಾರಣೆಯ ಈ ಪ್ರಯತ್ನ ಮಕ್ಕಳಿಗೆ ಹೊರೆ ತಗ್ಗಿಸುವುದರ ಜೊತೆಗೆ, ಶಿಕ್ಷಕರ ಮೇಲಿನ ಪಠ್ಯೇತರ ಹೇರಿಕೆಯನ್ನೂ ತಪ್ಪಿಸಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry