ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲಿಬಾರ್ ಮಾಡಿಸಿದವರು ರೈತ ಬಂಧುನಾ: ಸಿದ್ದರಾಮಯ್ಯ ಪ್ರಶ್ನೆ

Last Updated 27 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರೈತರ ಮೇಲೆ ಗೋಲಿಬಾರ್ ಮಾಡಿಸಿದ ಯಡಿಯೂರಪ್ಪ ರೈತ ಬಂಧುನಾ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ದಾವಣಗೆರೆಯಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ರೈತರ ಸಮಾವೇಶದ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ‘ರೈತರ ಸಾಲ ಮನ್ನಾ ಮಾಡಲು ನೋಟ್ ಮುದ್ರಿಸುವ ಯಂತ್ರ ಇಲ್ಲ ಎಂದು ಮುಖ್ಯಮಂತ್ರಿಯಾಗಿದ್ದ ಹೇಳಿದ್ದ ಯಡಿಯೂರಪ್ಪ, ಈಗ ರೈತ ಬಂಧು ಆಗಲು ಹೇಗೆ ಸಾಧ್ಯ’ ಎಂದು ಕೇಳಿದರು.

ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ, ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿಸಿದ್ದರು. ಆ ಶಾಲಿಗೆ ಮೆತ್ತಿರುವ ರೈತರ ರಕ್ತದ ಕಲೆ ಇನ್ನೂ ಮಾಸಿಲ್ಲ. ಅವರಿಗೆ ‘ರೈತ ಬಂಧು’ ಬಿರುದು ಕೊಡಬೇಕಾ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಗಿ ಪ್ರಶ್ನಿಸಿದರು.

ಮೋದಿ ಟೀಕೆಗೆ ಕಾಂಗ್ರೆಸ್ ತಿರುಗೇಟು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದಾವಣಗೆರೆಯಲ್ಲಿ ಮಾಡಿದ ಭಾಷಣಕ್ಕೆ ಟ್ವಿಟರ್‌ನಲ್ಲಿ ತಿರುಗೇಟು ನೀಡಿರುವ ಕರ್ನಾಟಕ ಕಾಂಗ್ರೆಸ್, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಏನೇನು ಮಾಡಲಿದೆ ಎಂಬ ಪಟ್ಟಿಯನ್ನು ‘ಜೈಲ್‌ ಬರ್ಡ್’ ಹ್ಯಾಷ್‌ಟ್ಯಾಗ್ ಅಡಿ ಪ್ರಕಟಿಸಿದೆ.

ಬಿಜೆಪಿ ಸರ್ಕಾರ ಎಂದರೆ ಭೂಮಿ ಲೂಟಿ, ಅಕ್ರಮ ಗಣಿಗಾರಿಕೆ, ರೈತರ ಮೇಲೆ ಗೋಲಿಬಾರ್, ರೆಸಾರ್ಟ್ ರಾಜಕೀಯ, ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರ ಜೈಲುವಾಸ ಅಷ್ಟೆ. ಬಿಜೆಪಿ ನಿಜ ಬಣ್ಣ ಏನೆಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಟ್ವೀಟ್‌ ಪ್ರತಿಪಾದಿಸಿದೆ.

ಮೋದಿಗೆ 10 ಪ್ರಶ್ನೆ:

‘ಪ್ರಧಾನಿ ಮೋದಿಯವರೇ, ದಾವಣಗೆರೆಯ ರೈತ ಸಮಾವೇಶ ಸಂಪೂರ್ಣ ವಿಫಲವಾಗಿದೆ. ಜನರಿಗೆ ತಪ್ಪು ಸಂದೇಶ ಕೊಡುವುದನ್ನು ಬಿಟ್ಟು ದೇಶದ ಜನರ ಪ್ರಶ್ನೆಗಳಿಗೆ ಉತ್ತರಿಸಿ’ ಎಂದು ಕಾಂಗ್ರೆಸ್ ಆಗ್ರಹಿಸಿದೆ.

1. ನಿಮ್ಮ ದುರ್ಬಲ ನೀತಿಯಿಂದಾಗಿ ಆಹಾರ ಉತ್ಪನ್ನಗಳ ಆಮದು ಹೆಚ್ಚಾಗಿದ್ದು, ರಫ್ತು ಇಳಿಕೆಯಾಗಿದೆ. ಇಂತಹ ಸ್ಥಿತಿಗೆ ಕೃಷಿ, ಕೃಷಿಕರನ್ನು ದೂಡಿದ್ದು ಏಕೆ?

2. ಕರ್ನಾಟಕ ರೈತರ ಸಾಲ ಮನ್ನಾ ಕುರಿತು ಮಾತನಾಡಲು ನಿಮ್ಮ ಪಕ್ಷದ ಅಧ್ಯಕ್ಷ ಅಮಿತ್‍ ಶಾ ನಿರಾಕರಿಸಿದರು. ಆದರೆ, ನಿಮ್ಮ ಆಡಳಿತದ ಅವಧಿಯಲ್ಲಿ ಕಾಳಧನಿಕರ ₹ 2.41 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವುದು ಏಕೆ?

3. ರೈತರ ಬೆಳೆಗೆ ಶೇ 50ರಷ್ಟು ಕನಿಷ್ಠ ಬೆಂಬಲ ಬೆಲೆ ನೀಡುವ ಭರವಸೆ ನೀಡಿದ್ದೀರಿ. ಆದರೆ, ಬೆಂಬಲ ಬೆಲೆಯಲ್ಲಿ ಕೇವಲ ಶೇ 5.19ರಷ್ಟು ಹೆಚ್ಚಿಸಿ ಕೈಗಾರಿಕೋದ್ಯಮಿಗಳ ಪರವಾಗಿ ನಿಂತು ರೈತರಿಗೆ ದ್ರೋಹವೆಸಗಿದ್ದೇಕೆ?

4. ಗುಜರಾತಿನಲ್ಲಿ 12 ಲಕ್ಷ ಟನ್‍ಗೂ ಮೀರಿದ ಶೇಂಗಾ ಬೆಳೆಗೆ ಪ್ರತಿ ಕ್ವಿಂಟಲ್‍ಗೆ ₹ 4,450 ಬೆಂಬಲ ಬೆಲೆ ನೀಡಿ ರೈತರ ನೆರವಿಗೆ ನಿಂತಿದ್ದೀರಿ. ಕರ್ನಾಟಕದ ರೈತರಿಗೆ ನೀವು ಮಲತಾಯಿ ಧೋರಣೆ ತೋರಿದ್ದೇಕೆ?

5. ಕನ್ನಡಿಗರನ್ನು ‘ಹರಾಮಿ’ ಎಂದು ಬೈದ ಗೋವಾ ಜಲಸಂಪನ್ಮೂಲ ಸಚಿವರ ಮೇಲೆ ನಿಮ್ಮ ಕ್ರಮವೇನು? ಮಹದಾಯಿ ವಿವಾದ ಬಗೆಹರಿಸುವಲ್ಲಿ ಮೌನವೇಕೆ?

6. ಕಳೆದ 16 ವರ್ಷಗಳಲ್ಲಿ ಕರ್ನಾಟಕ 13 ವರ್ಷ ಬರ ಕಂಡಿದೆ. ರಾಜಸ್ಥಾನ, ತಮಿಳುನಾಡು, ಮಹಾರಾಷ್ಟ್ರಕ್ಕೆ ಹೋಲಿಸಿದರೆ ರಾಜ್ಯಕ್ಕೆ ಕೇಂದ್ರದಿಂದ ದೊರೆತ ಬರ ಪರಿಹಾರದ ಮೊತ್ತ ಕೇವಲ ₹ 1,527 ಕೋಟಿ. ಮೋದೀಜಿ, ಕರುನಾಡ ರೈತರು ನಿಮಗೆ ಮಲತಾಯಿ ಮಕ್ಕಳೇ?

7. ನೀವು ರೈತಪರ ಎನ್ನುತ್ತೀರಿ! ಆದರೆ, ನಿಮ್ಮ ಆಡಳಿತದಲ್ಲಿ ಭಾರತದ ಕೃಷಿ ಇಳುವರಿ ಪ್ರಮಾಣ ಕುಂಠಿತವಾಗಿದ್ದು ಶೇ 1.9ರಷ್ಟು ಮಾತ್ರ ಇದೆ. ಇದು ನಿಮ್ಮ ಸಾಧನೆಯೇ?

8. ನೀವು ಮಾತಿಗೆ ಮುಂಚೆ ಫಸಲ್ ಬಿಮಾ ಯೋಜನೆ ಕುರಿತು ಪ್ರಸ್ತಾಪಿಸುತ್ತೀರಿ. ಆದರೆ ಈ ಯೋಜನೆಗೆ ಕರ್ನಾಟಕ ಸರ್ಕಾರದ ಕೊಡುಗೆ ಶೇ 50. ಸದಾ ಸುಳ್ಳು ಹೇಳುವಿರೇಕೆ?

9. ಕರ್ನಾಟಕದಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿಸಿದ ಯಡಿಯೂರಪ್ಪನವರನ್ನು ರೈತಬಂಧು ಎಂದು ಸಂಬೋಧಿಸಿ ಕರ್ನಾಟಕದ ರೈತರಿಗೆ ಅಪಮಾನ ಮಾಡಿದ್ದೇಕೆ?

10. ನಿಮ್ಮ ಆಡಳಿತದಲ್ಲಿ ರೈತರಿಗೆ ಕೊಡುಗೆ ಶೂನ್ಯ. ಈಗ 2019ರ ಚುನಾವಣೆಗಾಗಿ ಮತ್ತದೇ ಸುಳ್ಳಿನ ಕಂತೆ ಹೆಣೆಯುತ್ತಿರುವಿರಿ. ಮತ್ತೊಮ್ಮೆ ಸುಳ್ಳಿನ ಕಥೆ ಹೇಳಿ ಭಾರತೀಯರನ್ನು ಮೂರ್ಖರನ್ನಾಗಿಸುವ ಪ್ರಯತ್ನವೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT