ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಂಕಾರದ ಅಂತ್ಯವೇ ‘ಗೊಮ್ಮಟ’

Last Updated 27 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಅಂದು 412 ಮೆಟ್ಟಿಲೇರಿ ಕಲ್ಲುಮಂಟಪ ದಾಟಿ ಕತ್ತೆತ್ತಿದಾಕ್ಷಣ ಕುವೆಂಪು ಅವರಿಗೆ-

‘ಆರೊ ತೆಕ್ಕನೆ ತುಡುಕಿ ಬಾಯ್ ಮುಚ್ಚಿಹಿಡಿದಂತೆ

ಮೌನ ಭಾರದಿ ಮಾತು ಮೂರ್ಛೆ ಹೋಗಿಹುದಿಲ್ಲಿ...

ಬತ್ತಲೆಗೆ ಕಿಲಕಿಲನೆ ನಗುವ ಓ ಲಘು ಹೃದಯಿ

ಎಳ್ಳು ನೀರಹುದಿಲ್ಲ ಹೀನತೆಗೆ ನೀಚತೆಗೆ

ಬೆಳೆನೀರು ಭವ್ಯತೆಗೆ ದಿವ್ಯತೆಗೆ’

ಎಂಬ ರೀತಿ ಮಹಾಸದೃಶವಾಗುತ್ತದೆ. ಇದೇ ಕುವೆಂಪು ಅವರು ಅಲಂಕಾರಶಾಸ್ತ್ರ ಹೇಳುವಾಗ ಉಪಮೆ-ಮಹೋಪಮೆ, ಲಾಲಿತ್ಯ ಹಾಗೂ ಭವ್ಯತೆ
ಕುರಿತು ವಿವರಿಸುತ್ತಾ ಬೇಲೂರು ಶಿಲ್ಪಕಲೆಯನ್ನುಲಾಲಿತ್ಯಕ್ಕೂ ಗೊಮ್ಮಟನನ್ನು ಭವ್ಯತೆಗೂ ಹೋಲಿಸುತ್ತಾರೆ. ಹಾಸನ ಸೀಮೆ ಈ ಎರಡೂ ಸೀಮಾತೀತ ನೋಟಗಳನ್ನು ದೇಶಕ್ಕೆ, ವಿಶ್ವಕ್ಕೆ ತೋರಿಸುತ್ತಿದೆ. ಚಂದ್ರಗುಪ್ತ ಮೌರ್ಯನಂತಹ ಮಹಾ ಸಾಮ್ರಾಟನೇ ಸಪ್ತವರ್ಷಗಳ ಬರಕ್ಕೆ ನೊಂದು ಜೈನರ ಮರಣ ಕಾಶಿ ಎಂದೇ ಹೆಸರಾಗಿದ್ದ ಬೆಳ್ಗುಳಕ್ಕೆ ಅಂತ್ಯ ನೀಗಲು ಬರುತ್ತಾನೆಂಬುದು ಇತಿಹಾಸ. ಅದರಲ್ಲೂ ಆತನ ಗುರು ತಪಸ್ಸಿನಲ್ಲಿದ್ದ ಸ್ಥಳವಿದು. ಯುದ್ಧ-ಮಹಾಯುದ್ಧ ಇವು ಅಶೋಕನಂತಹ ಮಹಾ ಸಾಮ್ರಾಟನನ್ನು ಸಹಾ ಬುದ್ಧನೆಡೆಗೆ ಸಾಗಿಸಿದ ಚಕ್ರಗಳು. ಅಹಂಕಾರ ಮುರಿಯುವ ಅರೆಕೋಲುಗಳು. ಇದೆಲ್ಲದರ ಜನನ– ಮರಣ ತತ್ವ ಇಲ್ಲಿದೆ.

‘ತಾನ್ಹೆತ್ತ ತನ್ನ ಹಸುಗೂಸ ಇಳಿಸುವಂತೆ ಮೇಲೆತ್ತಿದ ಅಣ್ಣನ ಇಳಿಸಿದ...’ ಎಂಬ ಮಾತುಗಳು ಇದೇ ಬೆಳ್ಗುಳದ ಜನಪದರ ನಡುವೆ ಬಾಳುತ್ತಾ ಸಾಹಿತ್ಯ ರಚಿಸುತ್ತಿರುವ ಮೇಟಿಕೆರೆ ಹಿರಿಯಣ್ಣ ಎಂಬ ಸ್ಥಳೀಕನವು. ಭರತ– ಬಾಹುಬಲಿಯ ಸೈನ್ಯ ಕಾದಾಡುವಾಗ ತುಳಿತದಲ್ಲಿ ಹಾಳಾಗುತ್ತಿರುವ ಪೈರನ್ನು ಉಳಿಸಲು ರೈತನೊಬ್ಬ ಬೇಡಿಕೆ ಸಲ್ಲಿಸುತ್ತಾನೆ. ಆಗ ಆ ಅಣ್ಣ-ತಮ್ಮಂದಿರು ಧರ್ಮಯುದ್ಧಕ್ಕೆ ಸಮ್ಮತಿಸಿದರಂತೆ.

ದೇಶದ ಬೆನ್ನೆಲುಬಾದ ರೈತನ ಮಾತನ್ನು ವರ್ತಮಾನದ ರಾಜಕೀಯವು ಈ ರೀತಿ ಆಲಿಸುವಸ್ಥಿತಿಯಲ್ಲಿದೆಯೇ? ವಸೂಲಾಗದ ಸಾಲದ ಮೊತ್ತ ₹ 8 ಲಕ್ಷ ಕೋಟಿಯಿದೆಯಂತೆ. ಅದು, ವರ್ಷದ ಹಿಂದೆ ಮಾಡಿದ ಗಾಂಧಿ ನೋಟುಗಳ ಅಮಾನ್ಯೀಕರಣದ ಅರ್ಧದಷ್ಟು. ಅದರ ಶೇಕಡ 25 ರಷ್ಟನ್ನು ರೈತರ ಸಾಲ ಮನ್ನಾಕ್ಕಾಗಿ ವಿನಿಯೋಗ ಮಾಡಿದರೆ ಜಿರಾಯ್ತುದಾರರೆಲ್ಲರೂ ನೇಣಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಾರೆ.
ಆದರೆ ಯಾರಿಗೂ ಭರತ– ಬಾಹುಬಲಿಯರಂತೆ ಆಲಿಸುವ ಕಿವಿಗಳಿಲ್ಲ. ನೀರವ ಮೋದಿ, ಲಲಿತ ಮೋದಿ, ಮಲ್ಯಾದಿಗಳೆಲ್ಲರೂ ಒಂದು ಕಾಲಿಗೆ ದೇಶದ ಪೌರತ್ವವನ್ನು ಮತ್ತೊಂದು ಕಾಲಿಗೆ ವಿದೇಶಿ ಪೌರತ್ವವನ್ನು ಠಸ್ಸೆ ಹಾಕಿಸಿಕೊಂಡಿರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಎದುರೇ ಕಾಲು ಎತ್ತಿ ಅತ್ತ ದಾಟಿ ಬಿಡುತ್ತಾರೆ. ಇದು ವರ್ತಮಾನದ ರಾಜಕೀಯದ ನೆರಳು.

ಇದೇ ಬೆಳ್ಗುಳ ನೆಲದ ಮಾಜಿ ಪ್ರಧಾನಿಯವರು 412 ಮಟ್ಟಿಲೇರಿ ಈ ಇಳಿವಯಸ್ಸಿನಲ್ಲಿ ಬರಿಗಾಲಿನಲ್ಲಿ ಉರಿಬಿಸಿಲಿನಲ್ಲಿ ಗೊಮ್ಮಟನ ದರ್ಶನ ಪಡೆಯುವುದು ಮೆಚ್ಚುವಂತಹುದು. ಅವರು ವರ್ತಮಾನದ ರಾಜಕೀಯ ಕಣ್ಣಿನಲ್ಲಿ ಕತ್ತೆತ್ತಿ ನೋಡಿದಾಗ ಗೊಮ್ಮಟ ಕಿಲಕಿಲನೆನಗುವ ಲಘು ಹೃದಯಿಯಾಗಿ ಕಂಡನೇ? ಅದು ಅನುಮಾನ. ಸರ್ವಸಂಗ ಪರಿತ್ಯಾಗಿಯಾದ ಅವನ ಎದುರು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿಗಳಾದಿಯಾಗಿ ಬಂದ ಗಣ್ಯರು ಬಂಗಾರದ ಹಾರ– ತುರಾಯಿಗಳನ್ನು ಹಾಕಿಸಿಕೊಂಡಿದ್ದಾರೆ. ಚಿನ್ನದ– ಬೆಳ್ಳಿಯ ಕಳಸಕೊಡಗಳಲ್ಲಿ ವ್ಯಾಪಾರಿಗಳು ದಿನಂಪ್ರತಿ ಕ್ಷೀರ, ಗಂಧ, ಕೇಸರಿ, ಅರಿಸಿನ, ಇಕ್ಷುರಸ, ಚಂದಾದಿಗಳನ್ನು ಆ ಬೈರಾಗಿ ಗೊಮ್ಮಟನ ಮೇಲೆ ಸುರಿದಿದ್ದಾರೆ. ಇದರ ಬದಲು, ಸಾಂಕೇತಿಕವಾಗಿ ಒಂದೆರಡು ದಿನ ಮಾತ್ರಕ್ಕೆ ಈ ಸಂಪ್ರದಾಯವನ್ನು ಮಿತಿಗೊಳಿಸಿಕೊಳ್ಳಬಹುದಿತ್ತು.

ಇದಕ್ಕೆ ಸರ್ಕಾರವು ₹ 250 ಕೋಟಿ ಸುರಿದಿದೆ. ಆಳುವವರ ಅಹಂಕಾರವು ಈ ಸುರಿಯುವ ಕ್ರಿಯೆಯಲ್ಲಿ ತಾ ಮುಂದೆ ನಾ ಮುಂದೆ ಎಂದಿದೆ. ಅಂದು ಮೂರ್ತಿ ಯನ್ನು ತನ್ನ ತಾಯಿಯ ಬಯಕೆಯಂತೆ ಗಂಗರಸರ ಮಂತ್ರಿ ಚಾವುಂಡರಾಯ ಕೆತ್ತಿಸಿದನಂತೆ. ಕೆತ್ತಿದವರು ಶಿಲ್ಪಿಗಳ ಸಮೂಹ. ಈ ಶಿಲ್ಪಿಗಳ ನಾಯಕನು ಇದು ‘ಸಾಮೂಹಿಕ ಕೆಲಸ’ ಎಂಬ ವಿನಯದಿಂದ ಎಲ್ಲೂ ತನ್ನ ಹೆಸರು ಕೆತ್ತಿಸಿಕೊಂಡಿಲ್ಲ. ಮೊದಲ ಅಭಿಷೇಕದ ಹಕ್ಕಿನಲ್ಲಿ
ಅಹಂಕಾರ ಪಟ್ಟ ಚಾವುಂಡರಾಯನ ಗರ್ವವು ಸೋರಿ ಹೋಗಿದ್ದು ಸಾವಿರಾರು ಕೊಡಗಳ ಮಜ್ಜನದಿಂದಲೂ ಮಜ್ಜನವಾಗದಿದ್ದಾಗ. ಗುಳ್ಳಕಾಯಜ್ಜಿಯ ಕುಡಿಕೆಯ ಸಂಪೂರ್ಣ ಮಜ್ಜನವು ಮಂತ್ರಿಯ ಗರ್ವ ಇಳಿಸಿದ ರೂಪಕ. ಅದೇ, ಕಾಯಕವನ್ನು ಮೈಗೂಡಿಸಿಕೊಂಡ ಗ್ರಾಮ ಭಾರತದ ಪ್ರತೀಕ.

ಶ್ರವಣ ಎನ್ನುವ ತತ್ವವೇ ನಗ್ನವಾಗುವುದು, ಇರುವುದನ್ನು ತ್ಯಜಿಸುವುದು. ಅದೇ ಬುದ್ಧನ ಸಂಘತತ್ವ ಕೂಡ. ಅದೊಂದು ಸಾಮೂಹಿಕ ಹೊಣೆಗಾರಿಕೆ. ಕಾಲವಿಂದು ಧರ್ಮ ಎಂಬುದರೊಳಗಿನ ತಿರುಳನ್ನು ವ್ಯಾಪಾರದ ಸೀಸೆಯೊಳಗಿಟ್ಟು ಅನೇಕ ರೀತಿಯ ಲೇಬಲ್‌ಗಳನ್ನು ಅಂಟಿಸಿಕೊಂಡಿದೆ. ಧನಿಕ ಜಗತ್ತು ‘ಭೂಮಿ ಇರುವವರೆಗೂ ಬದುಕಿರುತ್ತೇವೆ’ ಎಂಬ ಭ್ರಮೆಯಲ್ಲಿದೆ. ಭರತನು ಹೀಗಿದ್ದ. ಬಾಹುಬಲಿ ಅದನ್ನು ಮುರಿಯಲು ಅಣ್ಣನೊಡನೆ ಸಮರಗೈದ. ‘ಜಗತ್ತು ಇಷ್ಟೇ ಅಲ್ವೆ’ ಎಂದು ನಿರ್ವಾಣನಾದ. ಅಂದರೆ ಪ್ರಜೆಗಳೆಲ್ಲರೂ ಹೀಗಾಗಬೇಕೆಂದಲ್ಲ. ಪ್ರಜೆಗಳಿಗೆ ಕಾಯಕ ತತ್ವವಿದೆ. ಪ್ರಭು
ಗಳಿಗೆ ಕಾಯುವ ತತ್ವವಿದೆ. ಇದರ ಅರಿವೇ ಗೊಮ್ಮಟ.

ಗೊಮ್ಮಟನೆಂದರೆ ಮನ್ಮಥ. ಮನ್ಮಥತತ್ವ ಪ್ರೀತಿಯದು. ಅದು ಪುಷ್ಪಪರಾಗ ಸಮರ. ಅದರೊಳಗೆ ಜೇನುಗೂಡಿನ ನಿಗೂಢ ಹನಿಗಳಿರುತ್ತವೆ. ನಿಜ, ಸಾವಿರಾರು ವರ್ಷಗಳಿಂದ 12 ವರ್ಷಕ್ಕೊಮ್ಮೆಯಂತೆ ಇಂದು 88ನೆಯದಾಗಿ ಗೊಮ್ಮಟನಿಗೆ ಅಭಿಷೇಕವನ್ನು ಮನುಷ್ಯ ಮಾಡುತ್ತಿದ್ದಾನೆ. ಪ್ರಕೃತಿಯೂ ಪ್ರತಿನಿತ್ಯ ಅಭಿಷೇಕ ಮಾಡುತ್ತಿರುತ್ತದೆ. ಆದರೆ ನಿಸರ್ಗ ನಿಗರ್ವಿ.

ಮಜ್ಜನ, ಅಭಿಷೇಕಗಳೆಲ್ಲವೂ ಸರ್ವಧರ್ಮಗಳ ತಿಳಿವಳಿಕೆಗಳಾಗಬೇಕು. ಅಮೃತದಂತಹ ಆಹಾರವು ಹರಿದುಹೋಗುವುದನ್ನು ನೋಡಿ ಕಿಲಕಿಲನೆ ಗೊಮ್ಮಟ ನಗುವುದಿಲ್ಲ. ಆ ನಗುವೂ ಮೌನ ತಾಳುತ್ತದೆ. ಆ ಮೌನವು ಆ ಧರ್ಮದ ಧನಿಕರಿಗೆ, ನೆರೆಧರ್ಮದ ಧನಿಕರಿಗೆ ‘ಬಡತನದ ಕಡೆ ಅಭಿಷೇಕದ ಕಾಲುವೆ ಮಾಡು’ ಎಂದು ಹೇಳುತ್ತದೆ. ಎಲ್ಲಾ ಲೌಕಿಕ ಸ್ತರಗಳನ್ನು ಮೀರಿ ನಿಂತು ಕಿಲಕಿಲನೆ ನಗುವ ಗೊಮ್ಮಟ ಅಮರ. ಇದರೊಂದಿಗೆ ಅಹಂಕಾರ ತ್ಯಜಿಸು ಎಂಬುದು ಮಾತ್ರ ಸ್ಥಿರತತ್ವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT