ವಿಧಾನ ಪರಿಷತ್‌ ವಿಸರ್ಜಿಸಿ: ದೇವನೂರ

7

ವಿಧಾನ ಪರಿಷತ್‌ ವಿಸರ್ಜಿಸಿ: ದೇವನೂರ

Published:
Updated:
ವಿಧಾನ ಪರಿಷತ್‌ ವಿಸರ್ಜಿಸಿ: ದೇವನೂರ

ಬೆಂಗಳೂರು: ‘ಪ್ರಜಾಪ್ರಭುತ್ವದಲ್ಲಿ ಅವಕಾಶ ವಂಚಿತರಿಗೆ ಮತ್ತು ವಿವಿಧ ಕ್ಷೇತ್ರಗಳ ತಜ್ಞರಿಗೆ ಪ್ರಾತಿನಿಧ್ಯ ಕಲ್ಪಿಸುವಂತೆ ವಿಧಾನ ಪರಿಷತ್‌ ಪುನರ್‌ ರೂಪಿಸಬೇಕು. ಇಲ್ಲದಿದ್ದರೆ ಅದನ್ನು ವಿಸರ್ಜಿಸಬೇಕು’ ಎಂದು ಸಾಹಿತಿ ದೇವನೂರ ಮಹಾದೇವ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಎ.ಕೆ.ಸುಬ್ಬಯ್ಯ ಅಭಿನಂದನಾ ಸಮಾರಂಭದಲ್ಲಿ ಅವರ ಜೀವನ ಚರಿತ್ರೆ ‘ನಿರ್ಭೀತಿಯ ಹೆಜ್ಜೆಗಳು’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

‘ಹೆಚ್ಚುಕಮ್ಮಿ ಕೆಳಮನೆಯಂತೆಯೇ (ವಿಧಾನಸಭೆ) ಮೇಲ್ಮನೆಯೂ (ವಿಧಾನ ಪರಿಷತ್‌) ಇದೆ. ಒಂದೇ ರೀತಿಯ ಎರಡು ಸದನ ಏಕೆ ಬೇಕು? ಯಾವ ಸಮು

ದಾಯಕ್ಕೆ ಪ್ರಜಾಪ್ರಭುತ್ವದಲ್ಲಿ ಅವಕಾಶ ಸಿಕ್ಕಿರುವುದಿಲ್ಲವೋ ಅವರಿಗೆ ಪ್ರಾತಿನಿಧ್ಯ ನೀಡಲು ಮೇಲ್ಮನೆ ಇದ್ದರೆ ಅದನ್ನು ಒಪ್ಪಿಕೊಳ್ಳಬಹುದು’ ಎಂದರು.

‘ಇಂದು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ವಂಚನೆ ಮತ್ತು ದ್ರೋಹ ಜಗತ್ತನ್ನು ಆಳುತ್ತಿವೆ‌. ಬ್ಲಾಕ್‌ಮೇಲ್‌, ಸುಪಾರಿ ಕೊಡುವುದೇ ಇಂದಿನ ರಾಜಕಾರಣವಾಗಿದೆ. ಹೆಚ್ಚುಕಡಿಮೆ ಇದು ಅಂಡರ್‌ವರ್ಲ್ಡ್‌ (ಭೂಗತ ಜಗತ್ತು) ರಾಜಕಾರಣ. ಈ ಮಲೀನ ರಾಜಕಾರಣದಿಂದ ಸ್ವಚ್ಛ ಭಾರತ ಕಟ್ಟಲು ಸಾಧ್ಯವೇ ಇಲ್ಲ. ಉದ್ಯೋಗಕ್ಕಾಗಿ ಯುವಜನರು ಸಂಘಟನೆಯ ಪ್ರಣಾಳಿಕೆಯನ್ನು ಆಳ್ವಿಕೆ ಮಾಡುತ್ತಿರುವವರು ಮತ್ತು ಆಳ್ವಿಕೆ ಮಾಡಲು ಇಚ್ಚಿಸುವವರು ಗಂಭೀರವಾಗಿ ಪರಿಗಣಿಸಬೇಕು. ಹಾಗೆಯೇ ನಾಡುಕಟ್ಟುವ ಕಡೆಗೆ ಗಂಭೀರ ಹೆಜ್ಜೆ ಇಡಬೇಕು’ ಎಂದು ಮನವಿ ಮಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ಇತ್ತೀಚೆಗೆ ತನ್ನ ವಿರೋಧಿಗಳನ್ನು ಕುರಿತು ‘ಅವರೆಲ್ಲ ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಹೇಳಲು ನಾಚಿಕೆಯಾಗುವುದಿಲ್ಲವಾ’ ಎಂದು ಅಭಿನಯಿಸುತ್ತಾ ಆರ್ಭಟಿಸಿದರು. ಮೋದಿ ಮಾತು ಕೇಳಿ ಸುಳ್ಳು ಕೂಡ ನಾಚಿಕೊಳ್ಳುತ್ತಿತ್ತು. ನಿಜವಾಗಿಯೂ ನನಗೆ ಜೀವನದ ಬಗ್ಗೆ ಜಿಗುಪ್ಸೆ ಉಂಟಾಯಿತು. ಇದು ಸುಳ್ಳನ್ನು ಗುತ್ತಿಗೆಪಡೆದಾತ ತನ್ನ ಸುಳ್ಳಿನ ಆಸ್ತಿಯಲ್ಲಿ ಅಲ್ಪಸ್ವಲ್ಪ ಸುಳ್ಳನ್ನು ಬೇರೆಯವರು ಬಳಸಿದರೆ ತನ್ನ ಮಾಲು ಕಳ್ಳತನವಾಯಿತೆಂದು ಕಿರುಚಾಡುವಂತೆ ಇತ್ತು’ ಎಂದು ಲೇವಡಿ ಮಾಡಿದರು.

ಅಭಿನಂದನಾ ಗ್ರಂಥ ‘ದಾರಿ ದೀಪ’ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪ್ರಾಮಾಣಿಕ ರಾಜಕಾರಣಿ ಪ್ರಾಮಾಣಿಕತೆ ಉಳಿಸಿಕೊಂಡು ಬದು

ಕುವುದು ಕಷ್ಟದ ಕೆಲಸ. ನಾನು ಕೂಡ ನೂರಕ್ಕೆ ನೂರಷ್ಟು ಪ್ರಾಮಾಣಿಕ ರಾಜಕಾರಣಿ ಎಂದು ಹೇಳಲು ಸಾಧ್ಯವಿಲ್ಲ. ಈ ಸತ್ಯ ಹೇಳಿದರೆ ಕೆಲವರು ಟೀಕಿಸಬಹುದು. ಆದರೆ, ಇದು ವಾಸ್ತವ’ ಎಂದರು.

ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌, ‘ಸಿದ್ದರಾಮಯ್ಯ ಅವರು ವ್ಯವಸ್ಥೆ ಜತೆಗೆ ರಾಜಿಯಾಗಿದ್ದಾರೆ ಎನ್ನುವುದು ಸತ್ಯ. ಆದರೆ, ವೈಯಕ್ತಿಕ ಕಾರಣಕ್ಕೆ, ಕುಟುಂಬಕ್ಕೆ ಹಾಗೂ ರಾಜಕೀಯ ಅಧಿಕಾರಕ್ಕೆ ರಾಜಿಯಾಗಿಲ್ಲ. ವೈಯಕ್ತಿಕ ಹಿತಾಸಕ್ತಿಗಾಗಿ ಅವರು ಗಳಿಸುವಂತದ್ದೂ ಏನು ಇಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry