ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸವಿರುಚಿ’ ಕ್ಯಾಂಟೀನ್‌ಗೆ ಚಾಲನೆ

Last Updated 27 ಫೆಬ್ರುವರಿ 2018, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಸವಿರುಚಿ’ ಸಂಚಾರಿ ಕ್ಯಾಂಟೀನ್‌ಗಳಲ್ಲಿ ರಿಯಾಯಿತಿ ದರದಲ್ಲಿ ಊಟ ಮತ್ತು ಉಪಹಾರ ಸಿಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದ ಎದುರು ಸಂಚಾರಿ ಕ್ಯಾಂಟೀನ್‌ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರಮಿಕರಿಗೆ ಕಡಿಮೆ ದರದಲ್ಲಿ ಊಟ ಸಿಗಬೇಕು ಎಂಬ ಕಾರಣದಿಂದ ಈ
ಕ್ಯಾಂಟೀನ್ ಆರಂಭಿಸಲಾಗಿದೆ ಎಂದು ಹೇಳಿದರು.

ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಮೂಲಕ ಕ್ಯಾಂಟೀನ್ ಆರಂಭಿಸಲಾಗಿದೆ. ಮಹಿಳಾ ಅಭಿವೃದ್ಧಿ ನಿಗಮದಿಂದ ಪ್ರತಿ ಕ್ಯಾಂಟೀನ್‌ಗೆ ₹ 10 ಲಕ್ಷ ಸಾಲವನ್ನು ಬಡ್ಡಿ ರಹಿತವಾಗಿ ನೀಡಲಾಗಿದೆ ಎಂದು ಹೇಳಿದರು.

ಕಳೆದ ಸಾಲಿನ ಬಜೆಟ್‌ನಲ್ಲಿ ಮಾಡಿದ್ದ ಘೋಷಣೆಯಂತೆ 4,000 ಅಂಗವಿಕಲರಿಗೆ ಸ್ಕೂಟರ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಸಾಂಕೇತಿಕವಾಗಿ 100 ಜನರಿಗೆ ಮಂಗಳವಾರ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ತಪ್ಪಿದ ಅನಾಹುತ

ವಿಧಾನಸೌಧದ ಮೆಟ್ಟಿಲುಗಳ ಬಳಿ ನಿರ್ಮಿಸಿದ್ದ ಪೆಂಡಾಲಿನ ಕಂಬಕ್ಕೆ ಸಂಚಾರಿ ಕ್ಯಾಂಟೀನ್‌ನ ಸೈಡ್ ಡೋರ್ ತಗುಲಿ ಕೆಲಕಾಲ ಆತಂಕ ಸೃಷ್ಟಿಸಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ಜೆ. ಜಾರ್ಜ್, ಉಮಾಶ್ರೀ, ಎಚ್‌.ಎಂ. ರೇವಣ್ಣ ಹಾಗೂ ಅಧಿಕಾರಿಗಳ ಪೆಂಡಾಲಿನ ಒಳಗೆ ಸಂಚಾರಿ ಕ್ಯಾಂಟೀನ್‌ನ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದರು.

ಸಾಲಾಗಿ ಹೊರಟ ವಾಹನಗಳಲ್ಲಿ ಮೊದಲ ವಾಹನದ ಸೈಡ್ ಡೋರ್ ಪೆಂಡಾಲಿನ ಕಂಬಕ್ಕೆ ತಗುಲಿತು. ಅಕ್ಕ–ಪಕ್ಕದಲ್ಲಿದ್ದ ಜನ ಕೂಗಾಡಿದ್ದರಿಂದ ಚಾಲಕ ಗಾಬರಿಗೊಂಡು ವಾಹನವನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ದ. ಪೆಂಡಾಲಿನ ಕಂಬ ವಾಲಿ ಧ್ವನಿವರ್ಧಕದ ಪೆಟ್ಟಿಗೆ ಕೆಳಗೆ ಬಿತ್ತು. ಅಷ್ಟರಲ್ಲಿ ವಾಹನ
ನಿಂತಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿತು. ಇನ್ನೂ ಸ್ವಲ್ಪ ಮುಂದೆ ಹೋಗಿದ್ದರೆ ಪೆಂಡಲ್‌ ಬೀಳುವ ಸಾಧ್ಯತೆ ಇತ್ತು.

ಮಾಧ್ಯಮದವರನ್ನು ತಳ್ಳಿದ ಬೆಂಗಾವಲು ಸಿಬ್ಬಂದಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಗಾವಲು ಸಿಬ್ಬಂದಿ ತಳ್ಳಿದ್ದರಿಂದ ಮಾಧ್ಯಮ ಪ್ರತಿನಿಧಿಯೊಬ್ಬರು ಕೆಳಕ್ಕೆ ಬಿದ್ದು ಕಾಲಿಗೆ ಪೆಟ್ಟಾಯಿತು.

ಸಂಚಾರಿ ಕ್ಯಾಂಟೀನ್‌ಗೆ ಚಾಲನೆ ನೀಡಲು ಬಂದ ಸಿದ್ದರಾಮಯ್ಯ ಅವರಿಗೆ ಮೈಕ್‌ ಹಿಡಿದು ಮಾತನಾಡಿಸಲು ಮಾಧ್ಯಮ ಪ್ರತಿನಿಧಿಗಳು ಮುಂದಾದರು. ಮುಖ್ಯಮಂತ್ರಿ, ಬಿಜೆಪಿ ನಡೆಸುತ್ತಿರುವ ರೈತ ಸಮಾವೇಶದ ಬಗ್ಗೆ ಸಮಾಧಾನದಿಂದ ಉತ್ತರಿಸಿದರು. ಬಸವನಬಾಗೇವಾಡಿ ರೈತರ ಸಮಸ್ಯೆ ಬಗ್ಗೆ ಕೇಳಿದ ಕೂಡಲೇ ಮೈಕ್‌ಗಳನ್ನು ಪಕ್ಕಕ್ಕೆ ಸರಿಸಿ ಮುನ್ನಡೆದರು. ಆ ಸಮಯದಲ್ಲಿ ಬೆಂಗಾವಲು ಸಿಬ್ಬಂದಿ ಎಲ್ಲರನ್ನು ಜೋರಾಗಿ ತಳ್ಳಿದ್ದರಿಂದ ಮಾಧ್ಯಮ ಪ್ರತಿನಿಧಿಯೊಬ್ಬರು ಕೆಳಗೆ ಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT