ಹೆಬ್ಬಾಳ ಪಾರುಪತ್ಯಕ್ಕೆ ಕೈ–ಕಮಲ ಹಣಾಹಣಿ

7
ಗತವೈಭವಕ್ಕೆ ಮರಳಲು ಕಾಂಗ್ರೆಸ್‌ ಶತಪ್ರಯತ್ನ

ಹೆಬ್ಬಾಳ ಪಾರುಪತ್ಯಕ್ಕೆ ಕೈ–ಕಮಲ ಹಣಾಹಣಿ

Published:
Updated:
ಹೆಬ್ಬಾಳ ಪಾರುಪತ್ಯಕ್ಕೆ ಕೈ–ಕಮಲ ಹಣಾಹಣಿ

ಬೆಂಗಳೂರು: ಪುನರ್ವಿಂಗಡಣೆ ಬಳಿಕ ಮೂರು ವಿಧಾನಸಭಾ ಚುನಾವಣೆಗಳನ್ನು ಕಂಡ ನಗರದ ಏಕೈಕ ಕ್ಷೇತ್ರವಿದು. ಈ ಮೂರರಲ್ಲೂ ಬಿಜೆಪಿ ಅಭ್ಯರ್ಥಿಗಳೇ ಇಲ್ಲಿ ಜಯ ಗಳಿಸಿದ್ದಾರೆ. ಒಂದು ಕಾಲದಲ್ಲಿ ಪ್ರಾಬಲ್ಯ ಹೊಂದಿದ್ದ ಈ ಕ್ಷೇತ್ರವನ್ನು ಮತ್ತೆ ‘ಕೈವಶ’ ಮಾಡಿಕೊಳ್ಳಲು ಕಾಂಗ್ರೆಸ್‌ ಪಣತೊಟ್ಟಿದೆ. ಜೆಡಿಎಸ್‌ ಕೂಡಾ ಇಲ್ಲಿ ನೆಲೆಯನ್ನು ಗಟ್ಟಿಮಾಡಿಕೊಳ್ಳುವ ತವಕದಲ್ಲಿದೆ.

ಪುನರ್ವಿಂಗಡಣೆಗೆ ಮುನ್ನ ಇಲ್ಲಿನ ವಾರ್ಡ್‌ಗಳು ಯಲಹಂಕ ಹಾಗೂ ಜಯಮಹಲ್‌ ಕ್ಷೇತ್ರಗಳಲ್ಲಿ ಹಂಚಿಹೋಗಿದ್ದವು. ಈ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಭದ್ರನೆಲೆಯನ್ನು ಹೊಂದಿತ್ತು. 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್‌.ಎಂ.ರೇವಣ್ಣ ಅವರನ್ನು ಬಿಜೆಪಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೋಲಿಸಿದ್ದರು. 2013ರ ಚುನಾವಣೆಯಲ್ಲಿ ಕಟ್ಟಾ ಅವರ ಆಪ್ತ ಜಗದೀಶ್ ಕುಮಾರ್‌ ಕಾಂಗ್ರೆಸ್‌ನ ಸಿ.ಕೆ.ಅಬ್ದುಲ್‌ ರೆಹಮಾನ್‌ ಷರೀಫ್‌ (ಹಿರಿಯ ಮುಖಂಡ ಜಾಫರ್‌ ಷರೀಫ್‌ ಮೊಮ್ಮಗ) ವಿರುದ್ಧ ಜಯಗಳಿಸಿದ್ದರು. ಜಗದೀಶ್‌ ಅಕಾಲಿಕ ನಿಧನದಿಂದಾಗಿ 2016ರಲ್ಲಿ ಉಪಚುನಾವಣೆ ನಡೆದಾಗ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಗೆಲುವಿನ ನಗೆ ಬೀರಿದ್ದರು.

ನಾರಾಯಣಸ್ವಾಮಿ ಎರಡೇ ವರ್ಷ ಶಾಸಕರಾಗಿದ್ದರೂ ಜನರೊಂದಿಗೆ ‘ನೇರ’ ಸಂಪರ್ಕ ಇಟ್ಟುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಈ ಕಿರು ಅವಧಿಯಲ್ಲಿ ಮಾಡಿರುವ ಕೆಲಸ ಗುರುತಿಸಿ ಪಕ್ಷ ಮತ್ತೆ ಟಿಕೆಟ್‌ ನೀಡಲಿದೆ ಎಂಬ ವಿಶ್ವಾಸ ಅವರದು. ಈ ನಿರೀಕ್ಷೆಯಲ್ಲೇ ಅವರು ಚುನಾವಣೆಗೆ ಈಗಲೇ ತಯಾರಿ ನಡೆಸಿದ್ದಾರೆ.

‘ಕಾಂಗ್ರೆಸ್‌ನವರು ಏನೇ ತಂತ್ರಗಾರಿಕೆ ಮಾಡಿದರೂ ಅವರಿಗೆ ಇಲ್ಲಿ ಗೆಲುವು ಒಲಿಯುವುದಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗಿದ್ದರೆ ಅವು ಬಿಜೆಪಿ ಶಾಸಕರಾಗಿದ್ದಾಗ ಮಾತ್ರ’ ಎನ್ನುತ್ತಾರೆ ಅವರು.

ಡಾಕ್ಟರೇಟ್‌ ಪದವೀಧರರಾಗಿರುವ ನಾರಾಯಣಸ್ವಾಮಿ ಇಲ್ಲಿನ ವಿದ್ಯಾವಂತ ಮತದಾರರ ಮೇಲೆ ಹೆಚ್ಚಿನ ಭರವಸೆ ಇಟ್ಟಿದ್ದಾರೆ. ’ರಾಜ್ಯದ ಶಾಸಕರ ಪೈಕಿ ನಾನು ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿರುವವನು. ಕಟ್ಟಾ ಅವರು 4,952 ಮತಗಳಿಂದ ಗೆದ್ದಿದ್ದರೆ, ಜಗದೀಶ ಕುಮಾರ್‌ 5,136 ಮತಗಳಿಂದ ಜಯ ಗಳಿಸಿದ್ದರು. ನಾನು 19,149 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದೆ. ಈ ಬಾರಿ ಗೆಲುವಿನ ಅಂತರ ಮತ್ತಷ್ಟು ಹೆಚ್ಚಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಕಾರ್ಪೊರೇಟರ್‌ಗಳು ಶಾಸಕರ ಜೊತೆ ಮುನಿಸಿಕೊಂಡಿದ್ದಾರೆ. ಶಾಸಕರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ಗೌರವ ಕೊಡುತ್ತಿಲ್ಲ ಎಂಬ ನೋವು ಅವರದು.

ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಇಲ್ಲಿ ಮೊದಲ ಬಾರಿ ‘ಕಮಲ’ ಅರಳುವಂತೆ ಮಾಡಿದ್ದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು. ಭೂಹಗರಣದಿಂದ ಜೈಲು ಸೇರಿದ್ದ ಅವರಿಗೆ ಬಿಜೆಪಿ 2013ರಲ್ಲಿ ಟಿಕೆಟ್‌ ನೀಡಲಿಲ್ಲ. ಎಲ್ಲ ಪ್ರಕರಣಗಳಲ್ಲಿ ಖುಲಾಸೆಗೊಂಡಿರುವ ಅವರನ್ನೇ ಇಲ್ಲಿ ಕಣಕ್ಕಿಳಿಸಬೇಕು ಎಂಬುದು ‘ಕಟ್ಟಾ’ ಬೆಂಬಲಿಗರ ಬಯಕೆ. ಆದರೆ, ಪಕ್ಷದ ಮುಖಂಡರು ಅವರಿಗೆ ಶಿವಾಜಿ ನಗರದಿಂದ ಟಿಕೆಟ್‌ ನೀಡುವ ಬಗ್ಗೆ ಒಲವು ಹೊಂದಿದ್ದಾರೆ.

ಬಿಜೆಪಿ ಇಲ್ಲಿ ವರ್ಷದಿಂದ ವರ್ಷಕ್ಕೆ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿರುವುದು ಕಾಂಗ್ರೆಸ್‌ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ತಮ್ಮದೇ ಸರ್ಕಾರ ಇದ್ದರೂ ಉಪಚುನಾವಣೆ ಗೆಲ್ಲಲಾಗಲಿಲ್ಲವಲ್ಲ ಎಂಬ ಹತಾಶೆ ಪಕ್ಷದ ನಾಯಕರನ್ನು ಕಾಡುತ್ತಿದೆ. ವಿಧಾನ ಪರಿಷತ್ ಸದಸ್ಯ ಬಿ.ಎಸ್‌.ಸುರೇಶ್‌ (ಬೈರತಿ ಸುರೇಶ್‌) ಉಪಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆರ್ಥಿಕವಾಗಿ ಬಲಾಢ್ಯರಾಗಿರುವ ಅವರು ಉಪಚುನಾವಣೆಗೆ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಕೊನೆಯ ಕ್ಷಣದಲ್ಲಿ ಅವರಿಗೆ ಹೈಕಮಾಂಡ್‌ ಟಿಕೆಟ್ ನಿರಾಕರಿಸಿತ್ತು.

ಸುರೇಶ್ ಅವರ ಪರಿಷತ್‌ ಸದಸ್ಯತ್ವದ ಅವಧಿ ಜೂನ್‌ಗೆ ಕೊನೆಗೊಳ್ಳಲಿದೆ. ಈ ಬಾರಿ ಟಿಕೆಟ್‌ ಸಿಗುವ ಖಚಿತ ಭರವಸೆಯಿಂದ ಅವರು ಮತ

ದಾರರ ಮನವೊಲಿಸಿಕೊಳ್ಳಲು ನಾನಾ ತಂತ್ರ ಅನುಸರಿಸುತ್ತಿದ್ದಾರೆ. ಕೊಳವೆಬಾವಿ ಕೊರೆಸಲು ಆರ್ಥಿಕ ನೆರವು ನೀಡುವುದು, ಮನೆಗಳಿಗೆ ಟ್ಯಾಂಕರ್‌ಗಳಲ್ಲಿ ಉಚಿತ ನೀರು ಪೂರೈಸುವುದು, ಡಯಾಲಿಸಿಸ್‌ ಮಾಡಿಸಿಕೊಂಡರೋಗಿಗಳಿಗೆ ಆರ್ಥಿಕ ನೆರವು ನೀಡುವುದು ಅವರ ಬತ್ತಳಿಕೆಯಲ್ಲಿನ ತಂತ್ರಗಳು. ಮಹಿಳಾ ಮತದಾರರನ್ನು ಓಲೈಸಲು, ಮೂರು ವರ್ಷಗಳಿಂದ ಮಾರ್ಚ್‌ 8ರಂದು ಮಹಿಳಾ ದಿನಾಚರಣೆಯನ್ನು ಅದ್ಧೂರಿಯಾಗಿ ಏರ್ಪಡಿಸುತ್ತಿದ್ದಾರೆ.

‘ಕಳೆದ ಬಾರಿ ನನಗೆ ಟಿಕೆಟ್‌ ನಿರಾಕರಿಸಿದರೂ ನಾನು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದೆ. ಪರಿಷತ್‌ ಸದಸ್ಯನಾಗಿ ಮಾಡಿಸಿರುವ ಅಭಿ

ವೃದ್ಧಿ ಕಾರ್ಯವನ್ನು ಜನ ಗುರುತಿಸಿದ್ದಾರೆ. ಟಿಕೆಟ್‌ ನೀಡಿದರೆ ಖಂಡಿತಾ ಗೆಲ್ಲುತ್ತೇನೆ’ ಎಂದು ಸುರೇಶ್‌ ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಕಾರ್ಪೊರೇಟರ್‌ಗಳೂ ಅವರ ಪರ ಒಲವು ಹೊಂದಿದ್ದಾರೆ.

ನಗರದಲ್ಲಿ ಮುಸ್ಲಿಂ ಮತದಾರರು ಅತಿ ಹೆಚ್ಚು ಸಂಖ್ಯೆಯಲ್ಲಿರುವ ಕ್ಷೇತ್ರಗಳ ಪೈಕಿ ಇದೂ ಒಂದು. ಎರಡು ಬಾರಿ ಸೋತಿರುವ ಅಬ್ದುಲ್‌ ರೆಹಮಾನ್‌ ಷರೀಫ್‌, ವಿಧಾನಸಭೆಯ ಮಾಜಿ ಸದಸ್ಯ ನಜೀರ್‌ ಅಹ್ಮದ್‌ ಅವರೂ ಇಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು. ಚಾಮರಾಜಪೇಟೆಯಲ್ಲಿ ಟಿಕೆಟ್‌ ನೀಡದಿದ್ದರೆ, ಹೆಬ್ಬಾಳದಲ್ಲಿ ಟಿಕೆಟ್‌ ನೀಡಬೇಕು ಎಂದು ಜಿ.ಎ.ಬಾವಾ ಪಟ್ಟು ಹಿಡಿದಿದ್ದಾರೆ.

‘ನಾನು ಉಪಚುನಾವಣೆಯಲ್ಲಿ ಸೋಲಲು ಪಕ್ಷದೊಳಗಿನವರ ಅಸಹಕಾರವೂ ಕಾರಣ. ಈ ನಡುವೆಯೂ ನಾನು 2013ರ ಚುನಾ

ವಣೆಗಿಂತ ಹೆಚ್ಚು ಮತ ಪಡೆದಿದ್ದೆ. ಈ ಬಾರಿಯೂ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದೇನೆ’ ಎಂದು ಷರೀಫ್‌ ತಿಳಿಸಿದರು.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಸುರೇಶ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಇಕ್ಬಾಲ್ ಅಹಮದ್‌ ಸರಡಗಿ ಸೋಲಿಗೆ

ಕಾರಣರಾಗಿದ್ದರು. ಉಪಚುನಾವಣೆಯಲ್ಲೂ ಅವರು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಹಕರಿಸಿಲ್ಲ ಎಂಬ ಅಸಮಾಧಾನ ಕೆಲವು ಮುಸ್ಲಿಂ ಮುಖಂಡರಲ್ಲಿದೆ. 

ಪಾಲಿಕೆ ಚುನಾವಣೆಯಲ್ಲಿ ಇಲ್ಲಿನ ಎರಡು ವಾರ್ಡ್‌ಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಭಾರಿ ಅಂತರದಿಂದ ಗೆದ್ದಿದ್ದರು. 2013ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಅಬ್ದುಲ್‌ ಅಜೀಮ್‌ 25,073 ಮತ ಪಡೆದಿದ್ದರು. ಆದರೆ, ಉಪಚುನಾವಣೆಯಲ್ಲಿ ಪಕ್ಷ ಕಳಪೆ ನಿರ್ವಹಣೆ ತೋರಿತ್ತು. ಇಲ್ಲಿ ಒಕ್ಕಲಿಗರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಪರಿಗಣಿಸಿರುವ ಜೆಡಿಎಸ್‌ ಮುಖಂಡರು ಮಾಜಿ ಉಪಮೇಯರ್‌ ಆನಂದ್‌ ಸಹೋದರ ಹನುಮಂತೇಗೌಡರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ ಅವರ ಹೆಸರಿದೆ.

ಮತದಾರರ ಓಲೈಕೆಗೆ ನಾನಾ ತಂತ್ರ

ಇಲ್ಲಿನ ಕಾಂಗ್ರೆಸ್‌ ಹಾಗೂ ಬಿಜೆಪಿ ಮುಖಂಡರು ಆಮಿಷ ಒಡ್ಡುವ ಮೂಲಕ ಮತದಾರರ ಓಲೈಕೆಗೆ ಮುಂದಾಗಿದ್ದಾರೆ. ಕಾಂಗ್ರೆಸ್‌ನವರು ಇತ್ತೀಚೆಗೆ ಇಲ್ಲಿನ ಕೆಲವು ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಕುಕ್ಕರ್‌ ವಿತರಿಸಿದ್ದರು. ಅದರ, ಬೆನ್ನಲ್ಲೇ ಬಿಜೆಪಿಯವರು ಸೀರೆ ವಿತರಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಎರಡೂ ಕಡೆಯವರಿಂದ ‘ಉಡುಗೊರೆ’ ಸ್ವೀಕರಿಸುತ್ತಿರುವ ಹೆಬ್ಬಾಳದ ಮತದಾರರು ಮನದಾಳದಲ್ಲೇನಿದೆ ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಡುತ್ತಿಲ್ಲ.

ಹೆಬ್ಬಾಳ ವಿಧಾನಸಭಾ ಕ್ಷೇತ್ರ

2016ರ ಉಪಚುನಾವಣೆಯ ಚಿತ್ರಣ

1.08 ಲಕ್ಷ

ಚಲಾಯಿತ ಮತಗಳು

20

ಅಭ್ಯರ್ಥಿಗಳು ಕಣದಲ್ಲಿದ್ದರು

ಅಭ್ಯರ್ಥಿ, ಪಕ್ಷ, ಮತ, ಶೇಕಡಾ (ಒಟ್ಟು ಚಲಾಯಿತ ಮತದಲ್ಲಿ)

ವೈ.ಎ.ನಾರಾಯಣಸ್ವಾಮಿ, ಬಿಜೆಪಿ,60367, 55.72

ಸಿ.ಕೆ.ಅಬ್ದುಲ್‌ ರೆಹಮಾನ್‌ ಷರೀಫ್‌, ಕಾಂಗ್ರೆಸ್‌, 41,218,  38.05

ಇಸ್ಮಾಯಿಲ್‌ ಷರೀಫ್‌ ನಾನಾ, ಜೆಡಿಎಸ್‌, 3,666, 3.38

 

2013ರ ಚುನಾವಣೆಯ ಚಿತ್ರಣ

1.15 ಲಕ್ಷ

ಚಲಾಯಿತ ಮತಗಳು

24

ಅಭ್ಯರ್ಥಿಗಳು ಕಣದಲ್ಲಿದ್ದರು

ಅಭ್ಯರ್ಥಿ, ಪಕ್ಷ, ಮತ, ಶೇಕಡಾ (ಒಟ್ಟು ಚಲಾಯಿತ ಮತದಲ್ಲಿ)

ಆರ್‌.ಜಗದೀಶ್‌ ಕುಮಾರ್‌, ಬಿಜೆಪಿ, 38162, 33.03

ಸಿ.ಕೆ.ಅಬ್ದುಲ್‌ ರೆಹಮಾನ್‌ ಷರೀಫ್‌, ಕಾಂಗ್ರೆಸ್‌, 33026, 28.58

ಅಬ್ದುಲ್‌ ಅಜೀಮ್‌, ಜೆಡಿಎಸ್‌, 25073, 21.70

 

2008ರ ಚುನಾವಣೆಯ ಚಿತ್ರಣ

95,548

ಚಲಾಯಿತ ಮತಗಳು

15

ಅಭ್ಯರ್ಥಿಗಳು ಕಣದಲ್ಲಿದ್ದರು

ಅಭ್ಯರ್ಥಿ, ಪಕ್ಷ, ಮತ, ಶೇಕಡಾ (ಒಟ್ಟು ಚಲಾಯಿತ ಮತದಲ್ಲಿ)

ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿಜೆಪಿ, 46715, 48.89

ಎಚ್‌.ಎಂ.ರೇವಣ್ಣ, ಕಾಂಗ್ರೆಸ್‌, 41763, 43.71

ಲೋಕೇಶ್‌ ಗೌಡ, ಜೆಡಿಎಸ್‌, 4149, 4.34

8

ಕ್ಷೇತ್ರದಲ್ಲಿರುವ ವಾರ್ಡ್‌ಗಳು

4

ವಾರ್ಡ್‌ಗಳಲ್ಲಿ ಬಿಜೆಪಿ ಸದಸ್ಯರಿದ್ದಾರೆ

2

ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಸದಸ್ಯರಿದ್ದಾರೆ

2

ವಾರ್ಡ್‌ಗಳಲ್ಲಿ ಜೆಡಿಎಸ್‌ ಸದಸ್ಯರಿದ್ದಾರೆ

ವಾರ್ಡ್‌ಗಳು: ರಾಧಾಕೃಷ್ಣ ದೇವಸ್ಥಾನ, ಸಂಜಯನಗರ, ಗಂಗಾನಗರ, ಹೆಬ್ಬಾಳ, ವಿಶ್ವನಾಥನಾಗೇನಹಳ್ಳಿ, ಮನೋರಾಯನಪಾಳ್ಯ, ಗಂಗೇನಹಳ್ಳಿ, ಜಯಚಾಮರಾಜೇಂದ್ರನಗರ

* ಭಾರತೀಯ ಪಶುವೈದ್ಯ ಸಂಶೋಧನಾ ಸಂಸ್ಥೆ, ಪಶುವೈದ್ಯಕೀಯ ಕಾಲೇಜು, ಬೆಂಗಳೂರು ದೂರದರ್ಶನ ಕೇಂದ್ರ, ಸಿಬಿಐ ಪ್ರಾದೇಶಿಕ ಕಚೇರಿಗಳು ಇಲ್ಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry