ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗಲಾದರೂ ಚಿರಶಾಂತಿಯಿಂದಿರು

ಶ್ರೀದೇವಿ ಅಭಿಮಾನಿಗಳಿಗೆ ಬರೆದ ಪತ್ರದಲ್ಲಿ ರಾಮ್ ಗೋಪಾಲ್ ವರ್ಮಾ ಮನದಾಳ
Last Updated 27 ಫೆಬ್ರುವರಿ 2018, 20:19 IST
ಅಕ್ಷರ ಗಾತ್ರ

ಬೆಂಗಳೂರು: ನಟಿ ಶ್ರೀದೇವಿ ಬದುಕಿನ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಶ್ರೀದೇವಿಯ ಬದುಕಿನ ಕೆಲವು ಮಾಹಿತಿಗಳನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ‘ಮೈ ಲವ್ ಲೆಟರ್‌ ಟು ಶ್ರೀದೇವೀಸ್ ಫ್ಯಾನ್ಸ್‌’ ಎಂಬ ಹೆಸರಿನ ಆ ಬರಹದ ಆಯ್ದ ಭಾಗಗಳು ಈ ಮುಂದಿನಂತಿವೆ.

‘ಶ್ರೀದೇವಿಯ ಸಾವಿನಿಂದ ಆಘಾತ, ದುಃಖ ಎರಡೂ ಆಗುತ್ತಿದೆ. ಅದೇ ಸಂದರ್ಭದಲ್ಲಿ ಬದುಕು ಮತ್ತು ಸಾವು ಎಂಬುದು ಎಷ್ಟು ನಿಗೂಢ, ಕ್ರೂರ ಮತ್ತು ಊಹೆಗೆ ನಿಲುಕದ್ದು ಎಂಬುದು ಮತ್ತೆ ಮನದಟ್ಟಾಗುತ್ತಿದೆ...

‘...ದೇಶದ ಚಿತ್ರೋದ್ಯಮವನ್ನು 20 ವರ್ಷ ಆಳಿದ್ದ ಶ್ರೀದೇವಿಯ ಬದುಕು ಸಂತಸ ಮತ್ತು ಸಂತೃಪ್ತಿಯಿಂದ ಕೂಡಿತ್ತು ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ ಜಗಮಗಿಸುವ ಚಿತ್ರಜಗತ್ತು ಆಕೆಯ ಬದುಕಿನ ಒಂದು ಸಣ್ಣ ಭಾಗವಷ್ಟೆ. ಆಕೆಯ ಬದುಕಿನ ಬೇರೆ ಆಯಾಮಗಳು ಕ್ರೂರವಾಗಿದ್ದವು. ಆಕೆಯನ್ನು ನಾನು ತೀರಾ ಹತ್ತಿರದಿಂದ ಬಲ್ಲೆನಾದ್ದರಿಂದ ಈ ಮಾತು ಹೇಳುತ್ತಿದ್ದೇನೆ...

‘...ಶ್ರೀದೇವಿಯವರ ತಂದೆಯ ಸಾವು ಮತ್ತು ಬೋನಿ ಕಪೂರ್ ಜತೆಗಿನ ಆಕೆಯ ಮದುವೆ, ಸ್ವಚ್ಛಂದ ಹಕ್ಕಿಯಂತಿದ್ದ ಆಕೆಯ ಬದುಕನ್ನು ಪಂಜರದ ಹಕ್ಕಿಯನ್ನಾಗಿಸಿದ್ದವು. ಆ ದಿನಗಳಲ್ಲಿ ಬಹುತೇಕ ಎಲ್ಲಾ ನಟ–ನಟಿಯರಿಗೆ ಸಂಬಳ ಸಂದಾಯವಾಗುತ್ತಿದ್ದದ್ದು ಕಪ್ಪು ಹಣದ ರೂಪದಲ್ಲೇ. ಹೀಗಾಗಿಯೇ ಶ್ರೀದೇವಿಯ ಸಂಪಾದನೆಯನ್ನೆಲ್ಲಾ ಅವರ ತಂದೆ ತಮ್ಮ ಪರಿಚಯಸ್ಥರ ಬಳಿ ಇರಿಸಿದ್ದರು. ತಂದೆಯ ಸಾವಿನ ಬಳಿಕ ಆ ಪರಿಚಯಸ್ಥರೆಲ್ಲಾ ಆಕೆಗೆ ಮೋಸ ಮಾಡಿದರು. ಆಕೆಯ ಸಂಪಾದನೆಯ ಕೆಲವು ಭಾಗವನ್ನು ಆಕೆಯ ತಾಯಿ ಸ್ಥಿರಾಸ್ತಿಗಳ ಮೇಲೆ ಹೂಡಿದ್ದರು. ಅವುಗಳ ದಾಖಲೆ ಸರಿಯಿಲ್ಲದ ಕಾರಣ ಅವೆಲ್ಲವೂ ಶ್ರೀದೇವಿಯ ಕೈಬಿಟ್ಟು ಹೋದವು. ಕೈಯಲ್ಲಿ ನಯಾಪೈಸೆಯೂ ಇಲ್ಲದ ಕಾಲದಲ್ಲೇ ಬೋನಿ ಕಪೂರ್, ಶ್ರೀದೇವಿಯ ಬದುಕು ಪ್ರವೇಶಿಸಿದ್ದ. ದೊಡ್ಡ ಸಾಲಗಾರನಾಗಿದ್ದ ಆತನಿಗೆ ಶ್ರೀದೇವಿಯ ದುಃಖಕ್ಕೆ ಹೆಗಲು ಕೊಡುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿರಲಿಲ್ಲ...

‘...ಮಿದುಳು ಶಸ್ತ್ರಚಿಕಿತ್ಸೆ ಸರಿಯಾಗಿ ಆಗದ ಕಾರಣ ಶ್ರೀದೇವಿಯ ತಾಯಿ ಮಾನಸಿಕ ಅಸ್ವಸ್ಥೆಯಾಗಿದ್ದರು. ಅದೇ ಸಮಯದಲ್ಲಿ ತಂಗಿ ಶ್ರೀಲತಾ ಪಕ್ಕದ ಮನೆಯ ವ್ಯಕ್ತಿಯ ಜತೆ ಓಡಿಹೋಗಿ ಮದುವೆ ಮಾಡಿಕೊಂಡಿದ್ದಳು. ಜತೆಗೆ ‘ಮಾನಸಿಕ ಅಸ್ವಸ್ಥೆಯಾಗಿರುವ ತಾಯಿಯ ಕೈಯಲ್ಲಿ ಸಹಿ ಹಾಕಿಸಿಕೊಂಡು ಆಸ್ತಿ ಲಪಟಾಯಿಸಿದ್ದಾಳೆ’ ಎಂದು ಶ್ರೀದೇವಿ ವಿರುದ್ಧ ಶ್ರೀಲತಾ ಮೊಕದ್ದಮೆ ಹೂಡಿದ್ದಳು. ಬೋನಿಯ ಮೊದಲ ಮದುವೆ ಹದಗೆಡಲು ಶ್ರೀದೇವಿಯೇ ಕಾರಣ ಎಂದು ಆತನ ತಾಯಿ ಪಂಚತಾರಾ ಹೋಟೆಲ್ ಒಂದರಲ್ಲಿ ಸಾರ್ವಜನಿಕವಾಗಿ ಶ್ರೀದೇವಿಯ ಹೊಟ್ಟೆಗೆ ಗುದ್ದಿದ್ದರು. ಇವೆಲ್ಲವೂ ಶ್ರೀದೇವಿಯನ್ನು ತೀರಾ ಘಾಸಿಗೊಳಿಸಿದ್ದವು...

‘...ತನಗೆ ವಯಸ್ಸಾಗುತ್ತಿದೆ ಎಂಬುದು ಆಕೆಯ ಅರಿವಿಗಿತ್ತು. ಹೀಗಾಗಿಯೇ ಆಕೆ ಆಗಾಗ್ಗೆ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದಳು. ಆಕೆ ಮುಖಕ್ಕಷ್ಟೇ  ‘ಮೇಕ್‌ಅಪ್’ ಮಾಡಿಕೊಳ್ಳುತ್ತಿರಲಿಲ್ಲ. ತನ್ನೊಳಗಿನ ನೋವು ಇತರರಿಗೆ ತಿಳಯಬಾರದು ಎಂದು ತನ್ನ ಬದುಕಿಗೇ ‘ಮೇಕ್‌ಅಪ್’ ಮಾಡಿಕೊಂಡಿದ್ದಳು. ಇಂಗ್ಲಿಷ್ ವಿಂಗ್ಲಿಷ್ ಚಿತ್ರದ ಕೆಲ ಸಮಯ ಹೊರತುಪಡಿಸಿದರೆ ಅಕೆಯ ಬದುಕು ಪೂರ್ತಿ ನೋವಿನಿಂದ ಕೂಡಿತ್ತು...

‘...ಸಾಮಾನ್ಯವಾಗಿ ನಾನು ಯಾರ ಸಾವಿನ ಸಂದರ್ಭದಲ್ಲೂ ‘ಚಿರಶಾಂತಿಯಿಂದಿರಿ’ ಎಂದು ಹೇಳುವುದಿಲ್ಲ. ಆದರೆ ಶ್ರೀದೇವಿಗೆ ಮಾತ್ರ ‘ಚಿರಶಾಂತಿಯಿಂದಿರು’ ಎಂದು ಹೇಳುತ್ತೇನೆ. ಆಕೆಗೆ ಇಂತಹ ಶಾಂತಿಯ ಅಗತ್ಯವಿತ್ತು. ಆದರೆ ಆಕೆಯ ಬದುಕಿನಲ್ಲಿ ಇಷ್ಟೆಲ್ಲಾ ಆಟವಾಡಿದ ಸಮಾಜ ಮಾತ್ರ ಶಾಂತಿಯಿಂದ ಇರುವುದಿಲ್ಲ...

...ನಾನು ಇಂತಹ ಅನೇಕ ಬರಹಗಳನ್ನು ಬರೆಯಬಹುದು. ಆದರೆ ನನ್ನ ಕಣ್ಣೀರನ್ನು ಮಾತ್ರ ತಡೆಯಲಾಗುತ್ತಿಲ್ಲ’.

**

ಇನ್ನೂ ಬಯಲಾಗಿಲ್ಲ ತಾರೆಯರ ಸಾವಿನ ರಹಸ್ಯ

ಮುಂಬೈ: ಶ್ರೀದೇವಿ ಅವರು ಚಿಕ್ಕ ವಯಸ್ಸಿನಲ್ಲೇ ಮೃತಪಟ್ಟಿದ್ದಾರೆ ಎಂದು ಬಾಲಿವುಡ್ ಚಿತ್ರೋದ್ಯಮ ಆಘಾತ ವ್ಯಕ್ತಪಡಿಸುತ್ತಿದೆ. ಹಿಂದಿ ಚಿತ್ರೋದ್ಯಮ ಮತ್ತು ಬಾಲಿವುಡ್ ಚಿತ್ರೋದ್ಯಮ ಇದೇ ರೀತಿ ಹಲವು ತಾರೆಯರನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡಿದೆ. ಕೆಲವರ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿವೆ.

ಖ್ಯಾತ ಗಾಯಕರಾದ ಕಿಶೋರ್ ಕುಮಾರ್, ಮೊಹಮ್ಮದ್ ರಫಿ ಮತ್ತು ಮುಕೇಶ್, ಸಂಗೀತ ನಿರ್ದೇಶಕ ಆರ್‌.ಡಿ.ಬರ್ಮನ್, ನಟ ವಿನೋದ್ ಮೆಹ್ರಾ, ನಟಿಯರಾದ ಗೀತಾ ಬಾಲಿ ಮತ್ತು ಸ್ಮಿತಾ ಪಾಟೀಲ್‌ 50ರಿಂದ 60ರೊಳಗಿನ ವಯಸ್ಸಿನಲ್ಲಿ ಮೃತಪಟ್ಟಿದ್ದರು. ಚಿತ್ರ ನಿರ್ದೇಶಕ ಗುರುದತ್, ನಟರಾದ ಸಂಜೀವ್ ಕುಮಾರ್ ಮತ್ತು ಅಮ್ಜದ್ ಖಾನ್, ನಟಿಯರಾದ ಮಧುಬಾಲಾ ಮತ್ತು ಮೀನಾ ಕುಮಾರಿ ಸಹ ಇದೇ ಪಟ್ಟಿಗೆ ಸೇರುತ್ತಾರೆ.

ಗುರುದತ್ ಅವರು ಮುಂಬೈನ ಪೆಡ್ಡರ್ ರೋಡ್‌ನಲ್ಲಿ ತಾವು ಬಾಡಿಗೆಗಿದ್ದ ಫ್ಲ್ಯಾಟ್‌ನಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದರು. ಅವರು ಮದ್ಯದಲ್ಲಿ ನಿದ್ದೆ ಮಾತ್ರೆಗಳನ್ನು ಬೆರೆಸಿ ಸೇವಿಸಿದ್ದರು ಎಂಬ ಸುದ್ದಿ ಹರಡಿತ್ತು. ಆದರೆ ಅವರ ಸಾವು ಆತ್ಮಹತ್ಯೆಯೇ ಅಥವಾ ಆಕಸ್ಮಿಕವೇ ಎಂಬುದು ಸ್ಪಷ್ಟವಾಗಲೇ ಇಲ್ಲ.

ನಟಿ ದಿವ್ಯಾ ಭಾರತಿ ಮುಂಬೈನಲ್ಲಿ ತುಳಸಿ ಆಪಾರ್ಟ್‌ಮೆಂಟ್‌ನ ಐದನೇ ಮಹಡಿಯಲ್ಲಿದ್ದ ತಮ್ಮ ಫ್ಲ್ಯಾಟ್‌ನ ಬಾಲ್ಕನಿಯಿಂದ ಬಿದ್ದು ಮೃತಪಟ್ಟಿದ್ದರು. ಅವರ ತಲೆಗೆ ತೀವ್ರ ಪೆಟ್ಟಾದ ಕಾರಣ ಸಾವು ಸಂಭವಿಸಿತ್ತು ಎಂದು ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅವರು ಆತ್ಮಹತ್ಯೆ ಮಾಡಿಕೊಂಡರೇ? ಆಕಸ್ಮಿಕವಾಗಿ ಜಾರಿ ಬಿದ್ದರೆ ಅಥವಾ ಬೇರೆಯವರು ಅವರನ್ನು ತಳ್ಳಿದರೇ ಎಂಬುದು ಇಂದಿಗೂ ನಿಗೂಢ.

ದಿವ್ಯಾ ಭಾರತಿಯ ಸಾವಿನ ತನಿಖೆಯಲ್ಲಿನ ನ್ಯೂನತೆಗಳನ್ನು ಆಧಾರವಾಗಿಟ್ಟುಕೊಂಡು ದೇವ್ ಆನಂದ್ ‘ಚಾರ್ಜ್‌ಶೀಟ್’ ಸಿನಿಮಾ ನಿರ್ಮಿಸಿದ್ದರು.

**

‘ಕೊಲೆ ಇರಬಹುದು’

‘ನಟಿ ಶ್ರೀದೇವಿಯವರ ಸಾವು ಸಹಜವಲ್ಲ. ಅದು ಕೊಲೆ ಇರಬಹುದು’ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.

‘ಅವರು ಒಂದು ದಿನವೂ ಮದ್ಯವನ್ನು ಮುಟ್ಟಿದವರಲ್ಲ. ಅವರಿಗೆ ಬಲವಂತವಾಗಿ ಮದ್ಯ ಕುಡಿಸಿರಬಹುದು’ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

‘ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಒಂದೇ ರೀತಿಯಲ್ಲಿಲ್ಲ. ತನಿಖೆ ಪೂರ್ಣವಾಗುವವರೆಗೆ ಕಾಯೋಣ. ಆಕೆ ಒಂದು ದಿನವೂ ಮದ್ಯ ಸೇವಿಸಿದವರಲ್ಲ. ಹೀಗಿದ್ದೂ ಮದ್ಯ ಅವರ ದೇಹ ಸೇರಿದ್ದು ಹೇಗೆ? ಹೋಟೆಲ್‌ನ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಗಳು ಏನಾದವು? ಆಕೆ ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತರಾತುರಿಯಲ್ಲಿ ಮಾಧ್ಯಮಗಳ ಮುಂದೆ ಹೇಳಿದ್ದು ಏಕೆ’ ಎಂದು ಸ್ವಾಮಿ ಪ್ರಶ್ನಿಸಿದ್ದಾರೆ.

‘ಬಾಲಿವುಡ್‌ನ ಸಿನಿಮಾ ತಾರೆಯರಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜತೆ ಸಂಪರ್ಕವಿರುತ್ತದೆ. ನಾವು ಈ ನಿಟ್ಟಿನಲ್ಲೂ ಗಮನ ಕೊಡಬೇಕಾಗಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT