ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ವಿದೇಶ ಪ್ರವಾಸದ ವೆಚ್ಚದ ಮಾಹಿತಿ ನೀಡಿ

ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ತಾಕೀತು
Last Updated 27 ಫೆಬ್ರುವರಿ 2018, 20:27 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಧಾನಿಯವರು 2013–2017ರ ಅವಧಿಯಲ್ಲಿ ಕೈಗೊಂಡ ವಿದೇಶ ಪ್ರವಾಸಗಳಿಗಾಗಿ ಬಳಸಿದ ಏರ್‌ ಇಂಡಿಯಾದ ವಿಶೇಷ ವಿಮಾನಗಳ ವೆಚ್ಚದ ಮಾಹಿತಿಯನ್ನು ಬಹಿರಂಗಪಡಿಸಿ’ ಎಂದು ಕೇಂದ್ರ ಮಾಹಿತಿ ಆಯೋಗವು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.

ಪ್ರಧಾನಿಯ ವಿದೇಶ ಪ್ರವಾಸಗಳ ವೆಚ್ಚದ ಮಾಹಿತಿಯನ್ನು ನೀಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಾಕರಿಸಿದ್ದರ ವಿರುದ್ಧ ಲೋಕೇಶ್ ಬಾತ್ರಾ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮುಖ್ಯ ಮಾಹಿತಿ ಆಯುಕ್ತ ಆರ್‌.ಕೆ.ಮಾಥುರ್ ಈ ಆದೇಶ ನೀಡಿದ್ದಾರೆ.

‘ಪ್ರಧಾನಿ ವಿದೇಶ ಪ್ರವಾಸದ ವಿಮಾನಗಳ ಬಿಲ್‌ಗಳ ಮೊತ್ತ ಎಷ್ಟಾಗಿದೆ? ಅವೆಲ್ಲವೂ ಪಾವತಿಯಾಗಿವೆಯೇ? ಯಾವ ಯಾವ ಇಲಾಖೆಗಳಲ್ಲಿ ಆ ಬಿಲ್‌ಗಳು  ಉಳಿದಿವೆ ಎಂಬ ಮಾಹಿತಿಯನ್ನು ಕೇಳಲಾಗಿತ್ತು. ಸಚಿವಾಲಯವು ನೀಡಿರುವ ಮಾಹಿತಿ ಅಪೂರ್ಣವಾಗಿದೆ. ಭದ್ರತೆಯ ಕಾರಣವೊಡ್ಡಿ ಈ ವಿಚಾರದಲ್ಲಿ ಮಾಹಿತಿಯನ್ನು ನಿರಾಕರಿಸುವಂತಿಲ್ಲ.

ಏರ್ ಇಂಡಿಯಾ ಈಗಾಗಲೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಪ್ರಧಾನಿ ವಿದೇಶ ಪ್ರವಾಸಗಳ ವೆಚ್ಚದ ಗಾತ್ರ ತೀರಾ ದೊಡ್ಡದಿರಬಹುದು. ಅದರಲ್ಲಿ ದೊಡ್ಡ ಮೊತ್ತ ಪಾವತಿ ಆಗದೆ ಬಾಕಿ ಇರಬಹುದು. ಅಲ್ಲದೆ ಆ ವೆಚ್ಚವನ್ನು ತೆರಿಗೆದಾರರ ಹಣದಿಂದಲೇ ಪಾವತಿ ಮಾಡಬೇಕು. ಹೀಗಾಗಿ ಈ ಮಾಹಿತಿ ಬಹಿರಂಗಪಡಿಸಲೇಬೇಕು’ ಎಂದು ಬಾತ್ರಾ ಪ್ರತಿಪಾದಿಸಿದರು.

‘ಪಾವತಿಯಾಗದೇ ಉಳಿದಿರುವ ಬಿಲ್‌ಗಳು ಬೇರೆ–ಬೇರೆ ಪ್ರಾಧಿಕಾರಗಳಲ್ಲಿ, ಇಲಾಖೆಗಳಲ್ಲಿ ಇರುತ್ತವೆ. ಅರ್ಜಿದಾರರು ಕೇಳುತ್ತಿರುವ ಮಾಹಿತಿ ನೀಡಲು ಆ ಬಿಲ್‌ಗಳನ್ನೆಲ್ಲಾ ಕಲೆಹಾಕಬೇಕಾಗುತ್ತದೆ. ಇದಕ್ಕಾಗಿ ಭಾರಿ ಪ್ರಮಾಣದ ದಾಖಲೆಗಳು ಮತ್ತು ಕಡತಗಳನ್ನು ಪರಿಶೀಲಿಸಬೇಕಾಗುತ್ತದೆ. ಹಲವು ಸಿಬ್ಬಂದಿ ಕೆಲಸ ಮಾಡಬೇಕಾಗುತ್ತದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಾದ ಮಂಡಿಸಿತು.

ಸಚಿವಾಲಯದ ವಾದವನ್ನು ಮುಖ್ಯ ಮಾಹಿತಿ ಆಯುಕ್ತ ಮಾಥುರ್ ತಳ್ಳಿಹಾಕಿದರು. ಈಗಾಗಲೇ ಪಾವತಿಯಾಗಿರುವ ಬಿಲ್‌ಗಳು ಮತ್ತು ಪಾವತಿಯಾಗಬೇಕಿರುವ ಬಿಲ್‌ಗಳ ಮಾಹಿತಿಯನ್ನು ಅರ್ಜಿದಾರರಿಗೆ ನೀಡಿ ಎಂದು ಅವರು ನಿರ್ದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT