ತ್ರಿಡಿ ತಾರಾಲಯ: ಶಾಸಕರ ಸ್ವಯಂ ಪ್ರಚಾರಕ್ಕೆ ಯೋಗೀಶ್‌ ಭಟ್ ಆಕ್ಷೇಪ

7

ತ್ರಿಡಿ ತಾರಾಲಯ: ಶಾಸಕರ ಸ್ವಯಂ ಪ್ರಚಾರಕ್ಕೆ ಯೋಗೀಶ್‌ ಭಟ್ ಆಕ್ಷೇಪ

Published:
Updated:

ಮಂಗಳೂರು: ಪಿಲಿಕುಳದಲ್ಲಿ ನೂತನವಾಗಿ ಉದ್ಘಾಟನೆಗೆ ಸಿದ್ಧವಾಗಿರುವ ಸ್ವಾಮಿ ವಿವೇಕಾನಂದ ತ್ರಿಡಿ ತಾರಾಲಯಕ್ಕೆ ಅಂದಿನ ಯಡಿಯೂರಪ್ಪ ಸರ್ಕಾರ ಗರಿಷ್ಠ ಪ್ರಮಾಣದ ಅನುದಾನವನ್ನು ಬಿಡುಗಡೆ ಮಾಡಿದ್ದರೂ, ಇಡೀ ಯೋಜನೆ ತನ್ನ ಪ್ರಯತ್ನದ ಫಲವೆಂದು ಶಾಸಕ ಜೆ. ಆರ್‌.ಲೋಬೊ ಬಿಂಬಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಮಾಜಿ ಉಪ ಸ್ಪೀಕರ್ ಎನ್‌. ಯೋಗೀಶ್‌ ಭಟ್‌ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಅನುದಾನ ಬಿಡುಗಡೆ ಮಾಡಿಸಲು ಶ್ರಮಪಟ್ಟಿದ್ದೆ. ಅಂದಿನ ಜಿಲ್ಲಾಧಿಕಾರಿ ಭರತ್‌ಲಾಲ್‌ ಮೀನಾ ಅವರೊಂದಿಗೆ ಈ ತ್ರಿಡಿ ತಾರಾಲಯದ ವಿನ್ಯಾಸದ ಬಗ್ಗೆ ಚರ್ಚೆಗಳು ನಡೆದಾಗ, ಇದು ಸಾಧ್ಯವಿಲ್ಲ ಎಂದು ಹಲವರು ತಮಾಷೆ ಮಾಡಿದ್ದರು. ಅಂದಿನ ಸಿಎಂ ಯಡಿಯೂರಪ್ಪ ಅವರನ್ನು ವಿನಂತಿಸಿ ಬಜೆಟ್‌ನಲ್ಲಿಯೇ ₹ 11 ಕೋಟಿ ಎತ್ತಿಡುವಂತೆ ಮನವಿ ಮಾಡಿದ್ದೆ. ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷದ ಸ್ಮರಣೆ ಪ್ರಯುಕ್ತ ತಾರಾಲಯಕ್ಕೆ ವಿವೇಕಾನಂದರ ಹೆಸರು ಇಡಲು ನಿರ್ಧರಿಸಲಾಗಿತ್ತು. ಇನ್ನೂ ಹೆಚ್ಚಿನ ಅನುದಾನ ಬೇಕು ಎಂಬ ಒತ್ತಾಯದ ಮೇರೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ವಿದೇಶದಲ್ಲಿರುವ ತ್ರಿಡಿ ಮಾದರಿಯ ಅಧ್ಯಯನ ನಡೆಸಿ ₹13.5 ಕೋಟಿ ಹೆಚ್ಚುವರಿ ಬಿಡುಗಡೆ ಮಾಡಿ ಅಂದಿನ ಸಿಎಂ ಬಿಡುಗಡೆ ಮಾಡಿದ್ದರು’ ಎಂದು ವಿವರಿಸಿದರು.

ಒಟ್ಟು 24.5 ಕೋಟಿ ಅನುದಾನ ಬಿಡುಗಡೆ ಮಾಡಿದ್ದಲ್ಲದೆ, ಶಂಕು ಸ್ಥಾಪನೆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಬಂದಿದ್ದರು. ಆದರೆ ಈ ಶಂಕುಸ್ಥಾಪನೆ ಮತ್ತು ಗುತ್ತುಮನೆ ಉದ್ಘಾಟನೆಯ ನಾಮಫಲಕಗಳು ಈಗ ಕಾಣೆಯಾಗಿವೆ ಎಂದು ಅವರು ಹೇಳಿದರು.

ಶಾಸಕ ಜೆ. ಆರ್‌. ಲೋಬೊ ಅವರು ಎಲ್ಲವನ್ನೂ ತಾನೇ ಮಾಡಿದೆ, ತನ್ನ ಸಾಧನೆ ಎಂಬ ಫ್ಲೆಕ್ಸ್‌ಗಳನ್ನು ಬಿಂಬಿಸುತ್ತಿರುವುದು ಸರಿಯಲ್ಲ. ಅಂದಿನ ಬಿಜೆಪಿ ಸರ್ಕಾರ ಅನುದಾನ ಬಿಡುಗಡೆ ಮಾಡಿದರೂ, ಕಾಮಗಾರಿಯಲ್ಲಿ ಐದು ವರ್ಷಗಳ ವಿಳಂಬ, ಅಮೆರಿಕ, ಜಪಾನ್‌, ಚೀನಾ ಮತ್ತು ಸಿಂಗಪುರ ಪ್ರವಾಸದ ಕುರಿತು ವಿವರ ನೀಡಬೇಕು. ಅಲ್ಲದೆ ವಿಳಂಬದಿಂದಾಗಿಯೇ ಟೆಂಡರ್‌ನಲ್ಲಿ ವ್ಯತ್ಯಾಸ ಮಾಡಬೇಕಾಗಿದ್ದು, ಖರ್ಚು ಏರಿಕೆ ಆಗಿತ್ತು ಎಂದು ಅವರು ಹೇಳಿದರು.

ನಾಮಫಲಕಗಳು ಕಾಣೆಯಾಗಿರುವ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿ ಸರಿಪಡಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿ ಜಿಲ್ಲಾ ವಕ್ತಾರ ಜಿತೇಂದ್ರ ಕೊಟ್ಟಾರಿ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವೇದವ್ಯಾಸ ಕಾಮತ್, ಪಾಲಿಕೆ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ರೂಪಾ ಡಿ. ಬಂಗೇರ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ರವಿಚಂದ್ರ, ದಕ್ಷಿಣ ಮಂಡಲ ಪ್ರಧಾನ ಕಾರ್ಯದರ್ಶಿ ಭಾಸ್ಕರಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry