ವಿಶ್ವಾಸ ಉಳಿಸಿಕೊಂಡ ಸ್ತೀಶಕ್ತಿ ಗುಂಪು

7

ವಿಶ್ವಾಸ ಉಳಿಸಿಕೊಂಡ ಸ್ತೀಶಕ್ತಿ ಗುಂಪು

Published:
Updated:
ವಿಶ್ವಾಸ ಉಳಿಸಿಕೊಂಡ ಸ್ತೀಶಕ್ತಿ ಗುಂಪು

ಕನಕಪುರ: ಸಮಾಜದ ಆರ್ಥಿಕ ಪ್ರಗತಿಯಿಂದಾಗಿ ಅಭಿವೃದ್ಧಿ ಮಾನದಂಡ ಬದಲಾವಣೆಯಾಗುತ್ತಿದೆ. ಮಹಿಳೆಯರು ಬದಲಾವಣೆಗೆ ತೆರೆದುಕೊಂಡು ಇಂದಿನ ಪರಿಸ್ಥಿತಿಗೆ ಬದಲಾಗಬೇಕೆಂದು ಕನಕಾಂಬರಿ ಮಹಿಳಾ ಒಕ್ಕೂಟದ ಗೌರವ ಅಧ್ಯಕ್ಷ ಎಚ್‌.ಕೆ.ಶ್ರೀಕಂಠು ಹೇಳಿದರು.

ತಾಲ್ಲೂಕಿನ ಸಾತನೂರು ಹೋಬಳಿ ಹೊನ್ನಿಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ತ್ರೀಶಕ್ತಿ ಗುಂಪುಗಳಿಗೆ ಸಾಲ ವಿತರಣೆ ಕಾರ್ಯಕ್ರಮ ಹಾಗೂ ಕ್ಯಾನ್ಸರ್‌ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಹಿಳೆಯರು ಚೌಕಟ್ಟಿನಾಚೆಗೆ ಹೊರ ಬಂದು, ಸ್ವತಂತ್ರವಾಗಿ ಬದುಕುವುದನ್ನು ಕಲಿತ್ತಿದ್ದಾರೆ. ಶೈಕ್ಷಣಿಕವಾಗಿ ಪ್ರಗತಿ ಹೊಂದಿದ್ದಾರೆ. ಪುರುಷರು ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಗೌರವ ಕೊಡಬೇಕೆಂದು ಹೇಳಿದರು.

ಬ್ಯಾಂಕಿನ ಸರ್ವೆ ಪ್ರಕಾರ ಪುರುಷರಿಗೆ ಕೊಟ್ಟ ಸಾಲ ಮರುಪಾವತಿಯಾಗುವುದು ಕಷ್ಟ. ಆದರೆ, ಮಹಿಳೆಯರಿಗೆ ನೀಡಿದ ಸಾಲ ಶೇಕಡ 99ರಷ್ಟು ಮರುಪಾವತಿಯಾಗುತ್ತದೆ. ಆ ಕಾರಣದಿಂದ ಯಾವುದೇ ಅಡಮಾನವಿಲ್ಲದೆ ಸ್ತ್ರೀ ಶಕ್ತಿ ಗುಂಪುಗಳಿಗೆ ₹20 ಲಕ್ಷದಷ್ಟು ಸಾಲ ಕೊಡಲಾಗುತ್ತಿದೆ ಎಂದರು.

ಇಂದಿರಾ ಗಾಂಧಿ ಅವರು ಗ್ರಾಮೀಣ ಪ್ರದೇಶ ಸೇರಿದಂತೆ ಬಡಜನರಿಗೂ ಸಾಲ ಸೌಲಭ್ಯ ದೊರೆಯಲಿ ಎಂಬ ಉದ್ದೇಶದಿಂದ ಎಲ್ಲಾ ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದರು. ಅದರ ಫಲವಾಗಿ ಮಹಿಳೆಯರು, ಹಳ್ಳಿಯ ಜನರು ಬ್ಯಾಂಕಿನಲ್ಲಿ ಸುಲಭವಾಗಿ ವ್ಯವಹರಿಸಬಹುದಾಗಿದೆ. ಸುಲಭವಾಗಿ ಸಾಲ ಪಡೆಯಬಹುದಾಗಿದೆ ಎಂದು ಹೇಳಿದರು.

ಕನಕಾಂಬರಿ ಮಹಿಳಾ ಒಕ್ಕೂಟ ಕೇವಲ ಆರ್ಥಿಕ ಲಾಭದ ಕೆಲಸ ಮಾಡದೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ, ಸ್ವಂತ ಉದ್ಯೋಗ ಮಾಡಲು ಬೇಕಿರುವ ಕೌಶಲ ತರಬೇತಿ ನೀಡುತ್ತಿದೆ. ಮನೆಯಲ್ಲಿ ಕುಳಿತು ಮಾಡುವ ಉದ್ಯೋಗ ಅದಕ್ಕೆ ಬೇಕಾದ ಸಹಾಯ, ಗೃಹ ಉಪಯೋಗಿ ಮತ್ತು ಸೌಂದರ್ಯ ವರ್ಧಿತ ಅಲಂಕಾರಿಕ ವಸ್ತುಗಳ ತಯಾರಿಕೆ ತರಬೇತಿ ಹಾಗೂ ಸಮಾಜ ಸೇವೆ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.

ಕೆನರಾಬ್ಯಾಂಕ್‌ ನಿವೃತ್ತ ಅಧಿಕಾರಿ ಪನ್ವೀರ್‌ ಸೆಲ್ವಂ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ಕುರುಬಳ್ಳಿ ಶಂಕರ್‌ ಮಾತನಾಡಿ, ಸ್ತ್ರೀ ಶಕ್ತಿ ಸಂಘಗಳ ಉದಯ ಮತ್ತು ಅದರ ವ್ಯಾಪ್ತಿ ಹಾಗೂ ಬ್ಯಾಂಕ್‌ಗಳೊಂದಿಗೆ ಸಂಬಂಧ ವಹಿವಾಟು, ಆರ್ಥಿಕ ಪ್ರಗತಿ, ಮಹಿಳೆಯರಿಗೆ ಸಮಾಜದಲ್ಲಿನ ಜವಾಬ್ದಾರಿ ಬಗ್ಗೆ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಶೇಖರ್‌, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾಗ್ಯಲಕ್ಷ್ಮೀ ಶಿವಸ್ವಾಮಿ, ದೊಡ್ಡೀರೇಗೌಡ, ರವೀಶ್‌, ಮುಖಂಡರಾದ ಮಹದೇವಯ್ಯ, ಪ್ರಕಾಶ್‌, ಶಿವಸ್ವಾಮಿ, ಮಾಯಣ್ಣ, ಕನಕಾಂಬರಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪವಿತ್ರ ಮಹದೇವ್‌, ಕಾರ್ಯದರ್ಶಿ ಕವಿತ ಮಂಜುನಾಥ್‌, ನಿರ್ದೇಶಕರಾದ ಚಿಕ್ಕತಾಯಮ್ಮ, ಚಂದ್ರಕಲಾ, ಜಯಶೀಲ, ಕಾಂತಮ್ಮ, ರೇಣುಕಮ್ಮ, ರತ್ನಮ್ಮ, ಪರಿಮಳ, ಪ್ರೇಮಾ ಸೇರಿದಂತೆ ಒಕ್ಕೂಟದ 1000ಕ್ಕೂ ಹೆಚ್ಚಿನ ಹೊಸ ಸದಸ್ಯರು ಪಾಲ್ಗೊಂಡಿದ್ದರು.

* * 

ಮಹಿಳೆಯರು ವಿಶ್ವಾಸಾರ್ಹವಾಗಿ ಸಾಲ ಮರುಪಾವತಿಸುತ್ತಿದ್ದು ಸ್ತ್ರೀ ಶಕ್ತಿ ಗುಂಪುಗಳಿಗೆ ಹೆಚ್ಚಿನ ಸಾಲ ನೀಡಲಾಗುತ್ತಿದೆ. ಇದರ ಸದ್ಬಳಕೆ ಆಗಲಿ

ಅನಂತ್‌ನಾಗ್‌ ಹೊನ್ನಿಗನಹಳ್ಳಿ, ಕೆನರಾ ಬ್ಯಾಂಕ್‌  ವ್ಯವಸ್ಥಾಪಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry