5 ವರ್ಷ ಸ್ಪಷ್ಟ ಬಹುಮತದ ಸರ್ಕಾರ ಕೊಡಿ

7

5 ವರ್ಷ ಸ್ಪಷ್ಟ ಬಹುಮತದ ಸರ್ಕಾರ ಕೊಡಿ

Published:
Updated:
5 ವರ್ಷ ಸ್ಪಷ್ಟ ಬಹುಮತದ ಸರ್ಕಾರ ಕೊಡಿ

ಕಲಬುರ್ಗಿ: ‘113 ಸ್ಥಾನಗಳಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡು ನಾನು ರಾಜ್ಯ ಸುತ್ತುತ್ತಿದ್ದೇನೆ. ದಯಮಾಡಿ ಜೆಡಿಎಸ್ ಸ್ಥಾನಗಳನ್ನು 40–50ಕ್ಕೆ ನಿಲ್ಲಿಸಬೇಡಿ. 5 ವರ್ಷ ಸ್ಪಷ್ಟ ಬಹುಮತದ ಸರ್ಕಾರ ಕೊಡಿ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ನಗರದ ಜೆಡಿಎಸ್ ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಬದಲಾವಣೆ ಬಯಸುವವರ ಸಂಕಲ್ಪ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘2010ರಲ್ಲಿ ಬಿಜೆಪಿ ಶಾಸಕ ಚಂದ್ರಶೇಖರ ಪಾಟೀಲ ನಿಧನದಿಂದ ಕಲಬುರ್ಗಿ ಉತ್ತರ ಮತಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಆಗ ನಾನು ಅಲ್ಲಿಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದೆ. ಆ ಯುವಕ (ದತ್ತಾತ್ರೇಯ ಪಾಟೀಲ) ಟಿಕೆಟ್‌ಗಾಗಿ ಬಿಜೆಪಿ ಬಳಿ ಹೋದ, ಅವರು ಕೊಡಲಿಲ್ಲ. ಕಾಂಗ್ರೆಸ್ ಬಾಗಿಲು ತಟ್ಟಿದ, ಅವರೂ ನಿರಾಕರಿಸಿದರು. ಬಳಿಕ ನನ್ನ ಬಳಿ ಬಂದ. ನಾನು ಅವರ ತಾಯಿ, ನನ್ನ ಸಹೋದರಿಗೆ ಟಿಕೆಟ್ ಕೊಟ್ಟೆ. ಅಷ್ಟೇ ಅಲ್ಲ 15ದಿನ ಕಲಬುರ್ಗಿಯಲ್ಲೇ ವಾಸ್ತವ್ಯ ಮಾಡಿ ಅವರನ್ನು ಗೆಲ್ಲಿಸಿದೆ. ಆದರೆ ಮುಂದಿನ ಚುನಾವಣೆಯಲ್ಲಿ ಅವರ ಪುತ್ರ, ಆ ಗಿರಾಕಿ ಹೇಳದೆ ಕೇಳದೆ ಬಿಜೆಪಿಗೆ ಪರಾರಿಯಾಯಿತು’ ಎಂದು ವಾಗ್ದಾಳಿ ನಡೆಸಿದರು.

‘ಅಂದು ಗೆಲುವು ಸಾಧಿಸಿದ್ದ ನನ್ನ ಸಹೋದರಿ (ಅರುಣಾ ಚಂದ್ರಶೇಖರ ಪಾಟೀಲ) ಬಗ್ಗೆ ನಾನು ಸಣ್ಣತನದ ಮಾತುಗಳನ್ನು ಆಡುವುದಿಲ್ಲ. ಆದರೆ ಆ ಯುವಕ, ಬಡವರ ಬಂಧು ಇದ್ದಾನಲ್ಲ ಆತ ಯಾರಿಗೆ, ಯಾವಾಗ ಬೇಕಾದರೂ ಟೋಪಿ ಹಾಕಬಹುದು’ ಎಂದು ವ್ಯಂಗ್ಯವಾಡಿದರು.

‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ, ಸ್ವಸಹಾಯ ಸಂಘ ಮತ್ತು ಮಹಿಳಾ ಸಂಘಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತೇನೆ. ಇಸ್ರೇಲ್ ಮಾದರಿ ಕೃಷಿಯನ್ನು ಪರಿಚಯಿಸುತ್ತೇನೆ. ಆದ್ದರಿಂದ ಇದೊಂದು ಬಾರಿ ನಮ್ಮ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತರಬೇಕು. ಕಲಬುರ್ಗಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು’ ಎಂದು ಮನವಿ ಮಾಡಿದರು.

ಜೆಡಿಎಸ್ ಮುಖಂಡರಾದ ನಸ್ಸೀಮ್ ಪಟೇಲ್, ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ, ಪ್ರೊ.ಎಂ.ಬಿ.ಅಂಬಲಗಿ, ಕಲಬುರ್ಗಿ ಉತ್ತರ ಮತ ಕ್ಷೇತ್ರದ ಅಭ್ಯರ್ಥಿ ನಾಸಿರ್ ಹುಸೇನ್ ಉಸ್ತಾದ್, ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ತಡಕಲ್, ಪ್ರಧಾನ ಕಾರ್ಯದರ್ಶಿ ದೇವೇಗೌಡ ತೆಲ್ಲೂರ, ಮನೋಹರ ಪೊದ್ದಾರ ಇದ್ದರು.

ಟಿಕೆಟ್ ಕೊಟ್ಟವರಿಗೇ ಮೋಸ

2010ರ ಸಂಕಷ್ಟದ ಸಮಯದಲ್ಲಿ ಕುಮಾರಸ್ವಾಮಿ ಅವರು ಕಲಬುರ್ಗಿ ದಕ್ಷಿಣ ಕ್ಷೇತ್ರದಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟಿದ್ದರು. ಆದರೆ ಅವರ ಪುತ್ರ ಜೆಡಿಎಸ್‌ಗೆ ಕೈಕೊಟ್ಟು, ಬೇರೆ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಆ ಮೂಲಕ ಕುಮಾರಸ್ವಾಮಿಗೆ ಮೋಸ ಮಾಡಿದರು. ಆದ್ದರಿಂದ ಈ ಬಾರಿ ಬಸವರಾಜ ದಿಗ್ಗಾವಿ ಅವರನ್ನು ಗೆಲ್ಲಿಸಿ, ಮೋಸ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು.

ಕೇದಾರಲಿಂಗಯ್ಯ ಹಿರೇಮಠ, ಜೆಡಿಎಸ್ ಜೇವರ್ಗಿ ಅಭ್ಯರ್ಥಿ 

ನಯಾಪೈಸೆ ಕೊಡದ ಅಮಿತ್ ಶಾ!

ಬೀದರ್‌ ಜಿಲ್ಲೆ ಮಂಗಲಗಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಅವರ ಮನೆಯಲ್ಲಿ ಚಹಾ ಕುಡಿದು, ನಯಾಪೈಸೆ ಸಹಾಯ ಮಾಡದೇ ತೆರಳಿದ್ದಾರೆ. ಕುಮಾರಸ್ವಾಮಿ ಅವರು ಕಲಬುರ್ಗಿ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ 54 ರೈತರ ಕುಟುಂಬಗಳಿಗೆ ತಲಾ ₹50ಸಾವಿರ ವೈಯಕ್ತಿಕ ನೆರವು ನೀಡಿದ್ದಾರೆ.

ಬಂಡೆಪ್ಪ ಕಾಶೆಂಪುರ, ಜೆಡಿಎಸ್ ಮುಖಂಡ

₹1,000 ಕೋಟಿ ಓಡಾಡುವಂತೆ ಮಾಡುತ್ತೇನೆ!

ನೆರೆಯ ಮಹಾರಾಷ್ಟ್ರದಿಂದ ಕಲಬುರ್ಗಿ ಜಿಲ್ಲೆಗೆ ನಿತ್ಯ 80ಸಾವಿರ ಲೀಟರ್ ಹಾಲು ಬರುತ್ತದೆ. ನಾನು ಶಾಸಕನಾಗಿ ಆಯ್ಕೆಯಾದರೆ ಕಲಬುರ್ಗಿ ದಕ್ಷಿಣ ಮತಕ್ಷೇತ್ರದ 28 ಹಳ್ಳಿಗಳ ರೈತರೇ ನಿತ್ಯ 80 ಸಾವಿರ ಲೀಟರ್ ಹಾಲು ಉತ್ಪಾದನೆ ಮಾಡುವ ವ್ಯವಸ್ಥೆ ಕಲ್ಪಿಸುತ್ತೇನೆ. 80 ಲೀಟರ್ ಹಾಲಿಗೆ ವರ್ಷಕ್ಕೆ ₹200 ಕೋಟಿ ಆಗುತ್ತದೆ. ಆ ಮೂಲಕ 5ವರ್ಷಗಳಲ್ಲಿ ರೈತರ ಕೈಯಲ್ಲಿ ₹1,000 ಕೋಟಿ ಹಣ ಓಡಾಡುವಂತೆ ಮಾಡುತ್ತೇನೆ. ಭೀಮಾ ನದಿಗೆ ಸೇರುತ್ತಿರುವ ನಗರದ ಕೊಳಚೆ ನೀರನ್ನು ಸಂಸ್ಕರಿಸಿ, ರೈತರ ಜಮೀನುಗಳಿಗೆ ಬಳಕೆಯಾಗುವಂತೆ ಮಾಡುತ್ತೇನೆ.

ಬಸವರಾಜ ದಿಗ್ಗಾವಿ, ಜೆಡಿಎಸ್ ದಕ್ಷಿಣ ಮತಕ್ಷೇತ್ರದ ಅಭ್ಯರ್ಥಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry