ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ತಿಂಗಳೂ ಕನ್ನಡ ಹಬ್ಬ ಆಚರಣೆ

Last Updated 28 ಫೆಬ್ರುವರಿ 2018, 8:39 IST
ಅಕ್ಷರ ಗಾತ್ರ

ಬಂಗಾರಪೇಟೆ: ಗಡಿ ಭಾಗವಾಗಿದ್ದರೂ ಇಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನವಿದೆ. ಬಂಗಾರಪೇಟೆಯಲ್ಲಿ ಪ್ರತಿ ತಿಂಗಳೂ ಕನ್ನಡದ ಹಬ್ಬ ನಡೆಯುತ್ತದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದ ತಾಲ್ಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಈ ಭಾಗದಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳು ಎಲ್ಲ ಧರ್ಮಗಳ ಸೌಹಾರ್ದತೆಗೆ ಸಾಕ್ಷಿ ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನ ಎಂದರೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನಾಡು, ನುಡಿ, ಸಾಹಿತ್ಯದ ಬಗ್ಗೆ ತಿಳಿಯಬೇಕು. ಆದರೆ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳುವಲ್ಲಿ ಈ ಭಾಗದ ಯುವಕರು, ಹಿರಿಯರು ಇಚ್ಛಾಶಕ್ತಿ ತೋರಿಸದಿರುವುದು ವಿಷಾದದ ಸಂಗತಿ ಎಂದರು.

ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ರತ್ನಗಳು ಜನರನ್ನು ಹುಡುಕಿಕೊಂಡು ಹೋಗದು. ಜನರೇ ರತ್ನಗಳನ್ನು ಹುಡಿಕಿಕೊಂಡು ಹೋಗಬೇಕು. ವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಅವರು ತಾಲ್ಲೂಕಿನಲ್ಲಿ ಹುಟ್ಟಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ರತ್ನ ಎಂದರು.

ಪ್ರಕೃತಿ ಮತ್ತು ಸಂಪನ್ಮೂಲಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಡಾ.ಎಂ.ವೆಂಕಟಸ್ವಾಮಿ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ವೇದಿಕೆಗೆ ಕಳೆ ಮತ್ತು ಕಸಾಪಗೆ ಹೆಮ್ಮೆ ಮೂಡಿದೆ ಎಂದರು. ತಮ್ಮ ಸಾಹಿತ್ಯದ ಕೃಷಿ ಮೂಲಕ ಕೆಟ್ಟ ಸಂಪ್ರದಾಯಗಳನ್ನು ಹೊರಗೆಡವಿ, ವೈಜ್ಞಾನಿಕ ತಳಹದಿಯಲ್ಲಿ ವಿಮರ್ಷೆ ಮಾಡಿರುವ ಅವರು ಬಹುಮುಖ ಪ್ರತಿಭೆ ಅನನ್ಯ ಎಂದರು.

ಕನ್ನಡ ಮತ್ತು ತೆಲುಗು ಭಾಷಿಕರ ಭಾವನೆಗಳಿಗೆ ಧಕ್ಕೆಯಾಗದಂತೆ ಈ ಭಾಗದಲ್ಲಿ ಕನ್ನಡ ಅರುಳುತ್ತಿದೆ. ಎಲ್ಲರನ್ನೂ ತನ್ನೆಡೆಗೆ ಆಕರ್ಷಿಸುವ ಸಕ್ತಿ ಕನ್ನಡಕ್ಕಿದೆ. ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಈ ನಿಟ್ಟಿನಲ್ಲಿ ಮಾ.3 ಮತ್ತು 4ರಂದು ಯುವ ಕವಿಗಳ ಕೌಶಲ ಅಭಿವೃದ್ಧಿಗಾಗಿ ಕಾವ್ಯ ಕಮ್ಮಟ ಆಯೋಜಿಸಲಾಗಿದೆ ಎಂದರು.

ಕಸಾಪ ಜಾತ್ಯತೀತ ಸಂಸ್ಥೆಯಾಗಿದ್ದು, ಪರಿಶಿಷ್ಟ ಜಾತಿಗೆ 2 ಸ್ಥಾನ, ಪರಿಶಿಷ್ಟ ಪಂಗಡಕ್ಕೆ 1 ಸ್ಥಾನ ಮತ್ತು ಮಹಿಳೆಯರಿಗೆ ಮೀಸಲಿಟ್ಟಿದ್ದ 1 ಸ್ಥಾನವನ್ನು 2ಕ್ಕೆ ಏರಿಸಲಾಗಿದೆ. ನಾವು ಕನ್ನಡದವರು. ಕನ್ನಡದಲ್ಲಿ ಜಾತಿ ಹುಡುಕುವ ಕೆಲಸ ಬೇಡ ಎಂದರು.

ನಿಕಟ ಪೂರ್ವ ಅಧ್ಯಕ್ಷೆ ಸರಿತಾಜ್ಞಾನಾನಂದ ಅವರು, ಕುವೆಂಪು ಅವರು ಬರೆದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಸಭಿಕರನ್ನು ಕೆಲ ಸಮಯ ಸಂಗೀತ ಲೋಕಕ್ಕೆ ಕರೆದೊಯ್ದರು. ತಾಲ್ಲೂಕು ಘಟಕ ಅಧ್ಯಕ್ಷ ತೇ.ಸೀ.ಬದರೀನಾಥ್ ಅವರು ಸಮ್ಮೇಳನದ ಆಯೋಜನೆಗೆ ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸಿದರು.

ಡಾ.ಎಂ.ವೆಂಕಟಸ್ವಾಮಿ ಅವರ ‘ನಮ್ಮ ಭೂಮಿಯ ಹಾಡು ಪಾಡು’ ಪುಸ್ತಕವನ್ನು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮತ್ತು ಮಲ್ಲಿಕಾರ್ಜುನ ವಿಜಯಪುರ ಅವರ ‘ನೀಕಳ್ಳಿ ನಗು ಮಳ್ಳಿ’ ಪುಸ್ತಕವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಪಿ.ಕೆಂಪಯ್ಯ ಅವರು ಬಿಡುಗಡೆ ಮಾಡಿದರು. ಹೈಕೋರ್ಟ್‌ ವಕೀಲ ರಾಜಣ್ಣ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ತಹಶೀಲ್ದಾರ್ ವಿಜಯಣ್ಣ ರಾಷ್ಟ್ರಧ್ವಜ ಉದ್ಘಾಟಿಸಿದರು. ಗೃಹರಕ್ಷಕ ದಳದ ಪ್ರಭು ಅವರನ್ನು ಸನ್ಮಾನಿಸಲಾಯಿತು.

ಕಸಾಪ ಕೇಂದ್ರ ದತ್ತಿ ಸಮಿತಿ ಸದಸ್ಯ ಎಂ.ಎಸ್.ರಾಮಪ್ರಸಾದ್, ಕಸಾಪ ಜಿಲ್ಲಾ ಘಟಕ ಕಾರ್ಯದರ್ಶಿ ಅಶ್ವತ್ಥ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ಪಾರ್ವತಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಉಪಾಧ್ಯಕ್ಷೆ ಗಿರಿಜಮ್ಮ, ಸದಸ್ಯರಾದ ಮಾರ್ಕಂಡೇಗೌಡ, ಟಿ.ಮಹದೇವಪ್ಪ, ಬೂದಿಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ಪ್ರಮೀಳಮ್ಮ, ಕ್ಷೇತ್ರ ಸಮನ್ವಯ ಅಧಿಕಾರಿ ರಾಧಮ್ಮ, ಶಿಕ್ಷಕ ಸಂಘದ ಪ್ರಮುಖರಾದ ಎಂ.ಆರ್.ಆಂಜನೇಯಗೌಡ, ವೆಂಕಟೇಶಗೌಡ, ಎಂ.ನಾಗರಾಜಪ್ಪ, ಪ್ರಮುಖರಾದ ಎಲ್.ರಾಮಕೃಷ್ಣ, ಜೆ.ಆರ್.ನಾರಾಯಣಶೆಟ್ಟಿ, ಕೃಷ್ಣಯ್ಯಶೆಟ್ಟಿ ಭಾಗವಹಿಸಿದ್ದರು.

ಮಕ್ಕಳ ಕಲರವ

ಸಮ್ಮೇಳನದಲ್ಲಿ ಶಾಲಾ ಮಕ್ಕಳು ಹೆಚ್ಚಾಗಿ ಭಾಗವಹಿಸಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್‌ನ ಮಕ್ಕಳು ನೀರಿನ ಬಾಟಲಿ ವಿತರಿಸುವಲ್ಲಿ ಸಹಕರಿಸಿ ಗಮನ ಸೆಳೆದರು. ಸಭಿಕರಲ್ಲಿ ಶೇ 50ರಷ್ಟು ಮಂದಿ ವಿದ್ಯಾರ್ಥಿಗಳಾಗಿದ್ದರು.

ಮೆರವಣಿಗೆ

ಸಮ್ಮೇಳನಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಅವರು ಕಾಲ್ನಡಿಗೆ ಮೂಲಕ ಬೂದಿಕೋಟೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಮನ ಸೆಳೆದರು. ರಥದ ಮೂಲಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮಾಡುವುದು ವಾಡಿಕೆಯಾಗಿತ್ತು. ಕರಗ ನೃತ್ಯ, ಮಕ್ಕಳ ಡೊಳ್ಳುಕುಣಿತ, ಕಳಶ ಹೊತ್ತ ಹೆಣ್ಣುಮಕ್ಕಳು ಮೆರವಣಿಗೆಗೆ ಮೆರಗು ನೀಡಿದರು.

ಅಧಿಕಾರಿಗಳ ಗೈರು

ಶಿಕ್ಷಣ ಇಲಾಖೆ ಹೊರತು ಪಡಿಸಿದರೆ ಉಳಿದ ಬಹುತೇಕ ಇಲಾಖಾ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಮ್ಮೇಳನದತ್ತ ಸುಳಿದಿಲ್ಲ. ವೇದಿಕೆಯಲ್ಲಿ ಕುಳಿತಿದ್ದ ಕೆಲ ಜನಪ್ರತಿನಿಧಿಗಳು ಕೂಡ ಸಮ್ಮೇಳನದ ಮಧ್ಯದಲ್ಲಿ ಅನ್ಯ ಕಾರ್ಯ ನಿಮಿತ್ತ ಬೇರಡೆ ತೆರಳಿದ ಶಾಸಕರ ಜತೆ ಹೊರನಡೆದರು.

ಬಂಗಾರಪೇಟೆ: ವಿಶ್ವ ಲಿಪಿಗಳಲ್ಲಿ ಕನ್ನಡ ಲಿಪಿ ರಾಣಿ ಇದ್ದಂತೆ. ವಿಶ್ವ ಲಿಪಿಗಳ ಸೌಂದರ್ಯ ಪೈಪೋಟಿಯಲ್ಲಿ ಕನ್ನಡ ‘ಮುದ್ದಾದ ಲಿಪಿ’ ಎನ್ನುವ ಪಟ್ಟ ಪಡೆದುಕೊಂಡಿದೆ ಎಂದು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಹೇಳಿದರು. ಜಗತ್ತಿನ ಅತಿ ತಾತ್ವಿಕ ಶ್ರೇಷ್ಠ ಭಾಷೆಗಳ ಮೊದಲ 7 ಸ್ಥಾನಗಳಲ್ಲಿ ಕನ್ನಡ ಸೇರಿದೆ. ಎಲ್ಲರ ಮನಸ್ಸನ್ನು ಬೆಸೆಯುವ ಅದ್ಭುತ ಶಕ್ತಿ ಕನ್ನಡ ಭಾಷೆಗಿದೆ ಎಂದರು.

ಕನ್ನಡ ಪದಗಳು ಪ್ರಾಕೃತ ಮತ್ತು ತಮಿಳು ಭಾಷೆಯಲ್ಲಿ ಬಳಕೆಯಲ್ಲಿವೆ. ಇದನ್ನು ಅವಲೋಕಿಸಿದರೆ ಕನ್ನಡದ ಮೂಲ ಮತ್ತು ಗಟ್ಟಿತನದ ಬಗ್ಗೆ ತಿಳಿಯಬಹುದಾಗಿದೆ. ಭೂಮಿ ಮೇಲೆ ಕನ್ನಡ ಭಾಷೆ ಹುಟ್ಟಿದ ಎಷ್ಟೋ ಶತಮಾನಗಳ ನಂತರ ಆಂಗ್ಲ ಭಾಷೆ ಅಂಬೆಗಾಲು ಇಟ್ಟಿದೆ ಎಂದರು.

ಕದಂಬ ಲಿಪಿಯಿಂದ ವಿಕಾಸಗೊಂಡ ಕನ್ನಡಕ್ಕೆ ತನ್ನದೇ ಆದ ಲಿಪಿಯಿದೆ. 2500 ವರ್ಷಗಳ ಪ್ರಾಚೀನವಾದ ಕನ್ನಡ ಭಾಷೆಗೆ 2011 ರಲ್ಲಿ ಶಾಸ್ತ್ರೀಯ ಭಾಷೆ ಎಂದು ಕೇಂದ್ರ ಸರ್ಕಾರ ಘೋಷಿಸಿರುವುದು ಇದಕ್ಕೆ ಪುಷ್ಟಿ ನೀಡಿದೆ ಎಂದರು.

ಧ್ವನಿಯನ್ನು ಅಡಗಿಸಿದರೆ ಭಾಷೆ ಅಳಿಯುತ್ತದೆ ಎನ್ನುವುದನ್ನು ನಾವು ಅರಿಯಬೇಕಿದೆ. ಆಧುನಿಕ ತಂತ್ರಜ್ಞಾನವು ಭಾಷೆ ಸೇರಿದಂತೆ ಎಲ್ಲ ಕಡೆ ವಾಚಾಹೀನತೆ ಹೇರಲಾಗುತ್ತಿದೆ. ಜಗತ್ತಿನ ಜನರನ್ನು ಗ್ರಾಹಕರೆಂದು ಪರಿಗಣಿಸಿರುವ ಬಂಡವಾಳಶಾಹಿ ಸಂಸ್ಥೆಗಳು ಏಕರೂಪದ ಸಂಸ್ಕೃತಿಯನ್ನು ಬಯಸುತ್ತಿವೆ. ಇದರಿಂದ ಸ್ಥಳೀಯ ಭಾಷೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಪ್ರತಿಪಾದಿಸಿದರು.

ಕನ್ನಡಕ್ಕೆ ಕುತ್ತು: ವಿಶ್ವದಲ್ಲಿ ಉಳಿದುಕೊಂಡಿರುವ 6 ಸಾವಿರ ಭಾಷೆಗಳಲ್ಲಿ ತಾಳಿಕೆಯ ದೃಷ್ಟಿಯಿಂದ ಕನ್ನಡ 19ನೇ ಸ್ಥಾನದಲ್ಲಿದೆ. ಎರಡು ವಾರಕ್ಕೆ ಒಂದು ಭಾಷೆ ಭೂಮಿಯಿಂದ ಕಣ್ಮರೆಯಾಗುತ್ತಿದೆ. ಎಚ್ಚೆತ್ತುಕೊಳ್ಳದಿದ್ದರೆ ಕನ್ನಡಕ್ಕೂ ಕುತ್ತು ಬರಲಿದೆ ಎಂದು ಎಚ್ಚರಿಸಿದರು.

ಬೆಂಗಳೂರಿನಲ್ಲಿ ಅನ್ಯಭಾಷೆಗಳ ಪ್ರಭಾವ ಹೆಚ್ಚುತ್ತಿದ್ದು, ಕನ್ನಡದ ಕಲರವ ಕುಗ್ಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಜನರು ತಮ್ಮ ನಾಡು, ನುಡಿ, ನೆಲ, ಜಲ, ಸಂಸ್ಕೃತಿಯನ್ನೂ ಎಂದಿಗೂ ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.

ನಗರ ಪಟ್ಟಣ ಪ್ರದೇಶಗಳಲ್ಲಿ ಅನ್ಯ ಭಾಷೆಗಳ ಪ್ರಭಾವಕ್ಕೆ ಸಿಲುಕಿ ಕನ್ನಡ ನಲುಗುತ್ತಿದೆ. ಬಂಗಾರಪೇಟೆ, ಬೂದಿಕೋಟೆಯಂತ ಹಳ್ಳಿಗಳಲ್ಲಿ ಮಾತ್ರ ಕನ್ನಡ ಗಟ್ಟಿಯಾಗಿದೆ. ಅದನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮಲ್ಲರದ್ದಾಗಿದೆ. ಸಿಬಿಎಸ್ಇ ಮತ್ತು ಐಸಿಎಸ್ಇ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಖಡ್ಡಾಯಗೊಳಿಸಿರುವುದು ಸಂತಸ ತಂದಿದೆ. ಆದರೆ ಆಧುನಿಕ ಸಮಾಜದಲ್ಲಿ ಆಂಗ್ಲ ಭಾಷೆಯನ್ನು ಕಡೆಗಣಿಸುವಂತಿಲ್ಲ ಎಂದರು.

ಬೌದ್ಧಿಕ ಸಂಪತ್ತಿಗೆ ಹೆಸರು: ಬಂಗಾರಪೇಟೆ ತಾಲ್ಲೂಕು ಯಾವಾಗಲೂ ಬರವನ್ನು ತನ್ನ ಎದೆಯ ಮೇಲೆ ಎಳೆದುಕೊಂಡಿದ್ದರೂ ಬೌದ್ಧಿಕವಾಗಿ ಅಪಾರ ಕೀರ್ತಿ ಗಳಿಸಿದೆ. ಇಲ್ಲಿನ ಚಿನ್ನದ ಗಣಿಗಳ ತಂತ್ರಜ್ಞಾನ ದೇಶ, ವಿದೇಶಗಳಲ್ಲಿ ಹರಿಡಿದೆ. ರಾಜಕಾರಣ, ಸಾಹಿತ್ಯ, ಹೈನುಗಾರಿಕೆಯಲ್ಲಿ ಮಂಚೂಣಿಯಲ್ಲಿದೆ ಎಂದರು.

ಇಲ್ಲಿನ ಚಿನ್ನದಿಂದಲೇ ಇಂಗ್ಲ್ಯಾಂಡ್ ಅಭಿವೃದ್ಧಿ ಕಂಡಿದೆ. 1880ರಲ್ಲಿ ಬ್ರಿಟಿಷರು ಇಲ್ಲಿ ಚಿನ್ನದ ಗಣಿ ತೆರೆದಿರುವ ಬಗ್ಗೆ ಮಾಹಿತಿಯಿದೆ. ಆದರೆ 3 ಸಾವಿರ ವರ್ಷದಿಂದಲೇ ಇಲ್ಲಿ ತರೆದ ಗಣಿ ಪದ್ಧತಿಯಿಂದ ಚಿನ್ನ ತೆಗೆಯುತ್ತಿದ್ದರು ಎನ್ನುವುದಕ್ಕೆ ದಾಖಲೆಗಳಿವೆ ಎಂದು ಹೇಳಿದರು.

ನೀರಿನ ನಿರ್ವಹಣೆ: ಅಂತರ್ಜಲ ಅತಿಯಾದ ಬಳಕೆಯಿಂದಾಗಿ ಇಲ್ಲಿ ನೀರಿನ ಅಭಾವ ಸೃಷ್ಟಿಯಾಗುತ್ತಿದೆ. ಅಂದಿನಿಂದಲೂ ಸರಾಸರಿ ಮಳೆಯಾಗುತ್ತಿದ್ದು, ಮಳೆ ನೀರಿನ ಸಂರಕ್ಷಣೆಗೆ ಆದ್ಯತೆ ನೀಡಿಲ್ಲ. ಹಿರಿಯರು ತೋಡಿರುವ ಕೆರೆ, ಕುಂಟೆ, ಕಲ್ಯಾಣಿಗಳನ್ನು ಪುನಚೇತನಗೊಳಿಸಿ, ಸಂರಕ್ಷಿಸಬೇಕಿದೆ ಎಂದರು.

ಇದಕ್ಕೆ ಆದ್ಯತೆ ನೀಡದ ಸರ್ಕಾರ ಕೆ.ಸಿ.ವ್ಯಾಲಿಯ ಕೊಳಚೆ ನೀರನ್ನು ಸಂಸ್ಕರಿಸಿ, ಕೆರೆಗಳಿಗೆ ಹರಿಸುವ ಅಗತ್ಯ ಏನು ಎನ್ನುವ ಬಗ್ಗೆ ನನಗೆ ಅರ್ಥವಾಗುತ್ತಿಲ್ಲ. ಅದಕ್ಕೆ ಬದಲು ಕೆಜಿಎಫ್ ಚಿನ್ನದ ಗಣಿ ನೀರನ್ನೇ ಸಂಸ್ಕರಿಸಿ, ಈ ಭಾಗಕ್ಕೆ ನೀರು ಪೂರೈಕೆ ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT