ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಕಣ್ಣು ತೆರೆಸಿದ ವಸ್ತುಪ್ರದರ್ಶನ

Last Updated 28 ಫೆಬ್ರುವರಿ 2018, 8:43 IST
ಅಕ್ಷರ ಗಾತ್ರ

ಹನುಮಸಾಗರ: ಕೊಪ್ಪಳ ತಾಲ್ಲೂಕಿನ ಬೆಟಗೇರಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಈಚೆಗೆ ಸಮಾಜ ವಿಜ್ಞಾನ ಶಿಕ್ಷಕ ಮಹಾಂತೇಶ ಮಟ್ಟಿ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿದ್ದ ಆಕರ್ಷಕ ವಸ್ತುಪ್ರದರ್ಶನ ಜಿಲ್ಲೆಯಲ್ಲಿಯೆ ಎಲ್ಲರ ಗಮನ ಸೆಳೆಯಿತು.

ವೀಕ್ಷಣೆಗೆ ಭಾರತ ಹೆಬ್ಬಾಗಿಲು ದಾಟಿಯೇ ಬರಬೇಕು: ವಾರಗಟ್ಟಲೆ ಚಿತ್ರಕಲಾ ಶಿಕ್ಷಕ ಸುರೇಶ ಮಾಳಿ ಹಾಗೂ ಶಿಕ್ಷಕ ವೀರೇಶ ಲಕ್ಷ್ಯಾಣಿ ಅವರ ಮಾರ್ಗದರ್ಶನದಲ್ಲಿ ಹತ್ತಾರು ವಿದ್ಯಾರ್ಥಿಗಳು ಭಾರತದ ನಕ್ಷೆಯ ಕಟೌಟ್‌ ತಯಾರಿಸಿ ವಸ್ತು ಪ್ರದರ್ಶನದ ಹೆಬ್ಬಾಗಿಲನ್ನಾಗಿ ತಯಾರಿಸಿದ್ದರು. ವಸ್ತುಪ್ರದರ್ಶನ ವೀಕ್ಷಣೆಗೆ ಬರುವ ಜನರಿಗೆ ಇದು ತುಂಬಾ ಆಕರ್ಷಕವಾಗಿತ್ತು. ಆ ದ್ವಾರವನ್ನು ಪ್ರವೇಶಿಸಿ ಒಳ ಬರುತ್ತಿದ್ದಂತೆ ಭಾರತದೊಳಗಿರುವ ಆಕರ್ಷಕ ಸ್ಮಾರಕಗಳು, ದೇವಾಲಯಗಳು, ನದಿಗಳು, ಹಿಮಾಲಯದಂತಹ ನೈಸರ್ಗಿಕ ಚಿತ್ರಗಳು... ಭಾರತದೊಳಗಿನ ಶ್ರೀಮಂತಿಕೆಯನ್ನು ಪ್ರದರ್ಶಿಸುವಂತಿದ್ದವು.

ಚಲನಾ ಸ್ಥಿತಿಯಲ್ಲಿದ್ದ ವಸ್ತುಗಳು: ವಿವಿಧ ಶಾಲೆಗಳಲ್ಲಿ ಸಾಮಾನ್ಯವಾಗಿ ನಿಶ್ಚಲ ಸ್ಥಿತಿಯಲ್ಲಿರುವ ವಸ್ತುಗಳನ್ನು ಪ್ರದರ್ಶನ ಮಾಡುವುದು ಸಾಮಾನ್ಯ. ಆದರೆ ಈ ಶಾಲೆಯ ವಿದ್ಯಾರ್ಥಿಗಳು ವಿಶೇಷವೆನಿಸುವ ರೀತಿಯಲ್ಲಿ ಬಹುತೇಕ ವಸ್ತುಗಳು ಚಲನಾ ಸ್ಥಿತಿಯಲ್ಲಿ ಇದ್ದುದು ವೀಕ್ಷಣೆಗಾಗಿ ಬಂದಿದ್ದ ಮಕ್ಕಳಿಗೆ ಮನರಂಜನೆ ಜೊತೆಗೆ ಸರಳ ಕಲಿಕೆಯಾಗುವಲ್ಲಿ ಯಶಸ್ಸು ಆಗಿದ್ದು ಮತ್ತೊಂದು ವಿಶೇಷ.

ನಿಶ್ಚಲ ಸ್ಥಿತಿಯಲ್ಲಿರುವ ವಸ್ತುಗಳಿಗೆ ಜೀವಂತಿಕೆ ತುಂಬುವುದಕ್ಕಾಗಿ ವಿದ್ಯಾರ್ಥಿಗಳಾದ ಶರಣಬಸವ, ಲಕ್ಷ್ಮೀ ಮೇಟಿ, ವಿಜಯಕುಮಾರ, ಮಹಾದೇವಪ್ಪ ಅವರು ಹಳೆಯ ಸೈಕಲ್ ರಿಮ್, ಹಳೆಯ ಮೋಟರ್, ಬಾಲ್‌ಗಳನ್ನು ಬಳಸಿ ಸೌರಮಂಡಲ ತಯಾರಿಸಿ ಸೂರ್ಯನ ಸುತ್ತ ಗ್ರಹಗಳು ಸುತ್ತುತ್ತವೆ ಎಂಬ ಪರಿಕಲ್ಪನೆ ಮೂಡಿಸಿದ್ದು ಅಮೋಘವಾಗಿತ್ತು.

ಮೇಘರಾಜ, ಹನುಮೇಶ ಅವರು, ತೊಟ್ಟಿಯಲ್ಲಿ ನೀರು ತುಂಬಿಸಿ ಅದರಲ್ಲಿಯೇ ಬಂದರುಗಳ ಹೆಸರುಳ್ಳ ಫಲಕಗಳನ್ನು ನೆಟ್ಟು ಹಡಗುಗಳನ್ನು ಓಡಿಸಿದರು. ಜೊತೆಗೆ ಆ ತೊಟ್ಟಿಗೆ ವಿವಿಧ ನದಿಗಳ ನೀರು ಬಂದು ಸೇರುತ್ತಿತ್ತು. ಶಾಲಾ ಮೈದಾನದಲ್ಲಿ ಭಾರತದ ನಕ್ಷೆಗಳನ್ನು ರಚಿಸಿ ಪೇಪರ್ ಸಹಾಯದಿಂದ ವಿಮಾನಗಳನ್ನು ನೀಲಿ ಬಣ್ಣದಿಂದ ನದಿಗಳನ್ನು ನಿರ್ಮಿಸಿದ್ದರು.

ಮಳೆ ನೀರಿನ ಕೊಯ್ಲಿನ ಮಹತ್ವ ತಿಳಿಸುವುದಕ್ಕಾಗಿ ಶ್ರೀಧರ, ಗವಿಸಿದ್ದಪ್ಪ ಹಾಗೂ ವಿನಾಯಕ ಎಂಬ ವಿದ್ಯಾರ್ಥಿಗಳು ರಟ್ಟು, ತಗಡಿನ ಪ್ಲೇಟ್, ಹಳೆಯ ವಾಟರ್ ಬಾಟಲ್, ಉಸುಕು, ಕೊಳವೆಗಳನ್ನು ಬಳಸಿ ನೀರಿನ ಸಂಗ್ರ(ನಿರ್ವ)ಹಣೆಯ ಮಹತ್ವದ ಬಗ್ಗೆ ತಿಳುವಳಿಕೆ ನೀಡಿದರು.

ಶಶಿಕುಮಾರ ಹಾಗೂ ಮರಿಯಮ್ಮ ಕಂಬಳಿ ಅಲ್ಪ ನೀರಿನಲ್ಲಿಯೇ ಸಮಗ್ರ ಕೃಷಿ ತಿಳಿಸಿಕೊಡುವುದಕ್ಕಾಗಿ ಶಾಲಾ ಮೈದಾನದಲ್ಲಿ ಪ್ಲಾಸ್ಟಿಕ್ ಹಾಳೆ, ಕೊಳವೆ, ನೀರು, ಮಣ್ಣು ಇತ್ಯಾದಿಗಳನ್ನು ಬಳಸಿ ಸಮರ್ಪಕವಾಗಿ ತಮ್ಮ ಕಲೆಯನ್ನು ಪ್ರದರ್ಶಿಸಿದರು. ಜೊತೆಗ ಮಳೆ ನೀರಿನಿಂದ ಕೆರೆ, ಬಾವಿಗಳನ್ನು ಭರ್ತಿ ಮಾಡುವ ಕ್ರಮ ತಿಳಿಸಿದ್ದು ವಿದ್ಯಾರ್ಥಿಗಳು ಅಷ್ಟೆ ಅಲ್ಲ ಸಾರ್ವಜನಿಕರು ಸಹ ಈ ಪದ್ಧತಿಯನ್ನು ತಿಳಿದುಕೊಂಡರು.

ಚೇತನ್ ಹಾಗೂ ನವೀನ್ ಚಕ್ರಕ್ಕೆ ಮೂಲಭೂತ ಹಕ್ಕುಗಳನ್ನು ಬರೆದು ಅಂಟಿಸಿ ಸಂವಿಧಾನದ ಯಾವ-ಯಾವ ವಿಧಿಗಳಲ್ಲಿ ಅದರ ಬಗ್ಗೆ ಉಲ್ಲೇಖ ಇದೆ ಎಂಬುದರ ಗಾಲಿ ತಿರುಗಿಸುತ್ತಾ ಹೇಳುತ್ತಿದ್ದರು. ನೋಡಲು ಬಂದವರಿಗೆ ಕೊಪ್ಪಳ ಜಿಲ್ಲೆ ನಿಮಗೆಷ್ಟು ಗೊತ್ತು? ಎಂದು ಐಶ್ವರ್ಯ ಬೆಟಗೇರಿ ವಿಡಿಯೊ ಮತ್ತು ನಕ್ಷೆಗಳನ್ನು ಬಳಸಿ ದೇವಾಲಯಗಳು, ಮುಖ್ಯ ಬೆಳೆಗಳು, ಕೋಟೆಗಳು, ಶಾಸನಗಳ ಬಗ್ಗೆ ವಿವರಣೆ ನೀಡುತ್ತಿದ್ದಳು. ಪೂರ್ಣಿಮಾ ಹಾಗೂ ಪೂಜಾ ಹಳೆಯ ಲಗ್ನಪತ್ರಿಕೆಗಳನ್ನು ಬಳಸಿಕೊಂಡು ಕುತುಬ್ ಮಿನಾರ್ ತಯಾರಿಸಿ ಬಣ್ಣದ ಬೆಳಕು ಹಾಯಿಸಿದ್ದರು.

ಇದು ಮಕ್ಕಳ ಜಾತ್ರೆಯೇ ಸರಿ: ಶಾಲೆಯ ಅಂಗಳ, ಎಲ್ಲ ಕೊಠಡಿಗಳು ವಿವಿಧ ವಸ್ತುಗಳಿಂದ ತುಂಬಿದ್ದವು. ಸೊಳ್ಳೆಬತ್ತಿ ತಯಾರಿಸುವ ಕ್ರಮ, ಭಾರತದಲ್ಲಿ ಕಂಡು ಬರುವ ವಿವಿಧ ಮಣ್ಣುಗಳನ್ನು ಸಂಗ್ರಹಣೆ, ಅದರಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ಪರಿಚಯ, ಸಾರಿಗೆ ಸಾಧನಗಳು, ಸಂಪರ್ಕ ಸಾಧನಗಳು, ನಾಣ್ಯ ಪ್ರದರ್ಶನ, ಹಕ್ಕುಗಳು ಉಲ್ಲಂಘನೆಯಾದಾಗ ನಾವು ಯಾವ ರೀತಿ ಸಂವಿಧಾನಿಕವಾಗಿ ರಕ್ಷಣೆ ಪಡೆಯಬಹುದು ಎಂಬುದರ ಬಗ್ಗೆ ಅರಿವು...

ಹೀಗೆ ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಇತಿಹಾಸ, ಭೂಗೋಳ, ರಾಜನೀತಿಶಾಸ್ತ್ರ, ಅರ್ಥ ಶಾಸ್ತ್ರ, ವ್ಯವಹಾರ ಅಧ್ಯಯನ, ಸಮಾಜಶಾಸ್ತ್ರ ಇವುಗಳ ಮೇಲೆ ವಿದ್ಯಾರ್ಥಿಗಳು ಚಿತ್ರಪಟಗಳನ್ನು, ವಾಕ್ಯಗಳನ್ನು, ಪ್ರಶ್ನೋತ್ತರಗಳನ್ನು, ಇತಿಹಾಸಕ್ಕೆ ಸಂಬಂಧಿಸಿದ ಮಾದರಿಗಳನ್ನು ಹತ್ತನೇ ತರಗತಿಯ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದರು. ನೂರಾರು ಮಾದರಿಗಳನ್ನು 125 ವಿದ್ಯಾರ್ಥಿಗಳು ತಯಾರಿಸಿ ಸಾವಿರಾರು ಜನರ ಮುಂದೆ ಪ್ರದರ್ಶಿಸಿಸಲಾಗಿದೆ ಎಂದು ಮುಖ್ಯಶಿಕ್ಷಕ ಜಿ.ರಾಘವೇಂದ್ರ ತಿಳಿಸಿದರು.

ಅಧಿಕ ಖರ್ಚಿಲ್ಲದೆ ವಸ್ತುಪ್ರದರ್ಶನ: ಇಲ್ಲಿ ನಡೆದ ವಸ್ತುಪ್ರದರ್ಶನದಲ್ಲಿ ಅಧಿಕ ಖರ್ಚು ಆಗಿಲ್ಲ. ವಿದ್ಯಾರ್ಥಿಗಳ ಬೌದ್ಧಿಕ ವಿಕಾಸವನ್ನೆ ಮೂಲವಾಗಿಟ್ಟುಕೊಂಡು ಕಡಿಮೆ ಖರ್ಚಿನಲ್ಲಿ, ನಿರುಪಯುಕ್ತ ವಸ್ತುಗಳಿಂದ ಮಾದರಿಗಳನ್ನು ತಯಾರಿಸಲಾಗಿತ್ತು. ‘ಭೂಪಟ ಎಂದ ತಕ್ಷಣ ಕೇವಲ ದೇಶ ಹಾಗೂ ಪ್ರಪಂಚದ ಭೂಪಟಗಳನ್ನು ಅರ್ಥ ಮಾಡಿಕೊಂಡರೆ ಸಾಲದು ಅದರ ಜೊತೆಗೆ ನಮ್ಮ ಸುತ್ತ ಮತ್ತಲಿನ ಶಾಲೆ, ಮನೆ, ಗ್ರಾಮದ ನಕ್ಷೆಯನ್ನು ಅರ್ಥ ಮಾಡಿಕೊಳ್ಳುವಂತಾಗಬೇಕು. ಇಂತಹ ವಿಷಯಗಳ ಮೇಲೆ ಮಕ್ಕಳಿಗೆ ತಿಳುವಳಿಕೆ, ಗ್ರಹಿಕೆ ಮೂಡಿಸುವುದಕ್ಕಾಗಿ ಅವರಿಂದಲೇ ಈ ಎಲ್ಲ ಚಟುವಟಿಕೆಗಳನ್ನು ಮಾಡಿಸಲಾಗಿದೆ ಎಂದು ಸಮಾಜ ವಿಜ್ಞಾನ ಶಿಕ್ಷಕ ಮಹಾಂತೇಶ ಮಟ್ಟಿ ಹೇಳಿದರು.

* * 

ಶೈಕ್ಷಣಿಕ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾಗಿದ್ದ ವಸ್ತುಪ್ರದರ್ಶನವು ವಿದ್ಯಾರ್ಥಿಗಳ ಆಸಕ್ತಿ ಹಾಗೂ ಕಲಿಕೆಗೆ ಪೂರಕವಾಗಿತ್ತು. ಚಲನಾ ಸ್ಥಿತಿಯಲ್ಲಿರುವ ವಸ್ತುಗಳು ಬಳಸಿ ನಿರ್ಮಿಸಿದ್ದ ಪ್ರದರ್ಶನವು ಆಕರ್ಷಣೀಯವಾಗಿತ್ತು.
ಜಿ.ರಾಘವೇಂದ್ರ, ಮುಖ್ಯಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT