ಕನ್ನಡ ಕೀಳಲ್ಲ, ಇಂಗ್ಲಿಷ್‌ ಮೇಲಲ್ಲ

7

ಕನ್ನಡ ಕೀಳಲ್ಲ, ಇಂಗ್ಲಿಷ್‌ ಮೇಲಲ್ಲ

Published:
Updated:

ಹಿರಿಯೂರು: ‘ಇಂಗ್ಲಿಷ್‌ನಲ್ಲಿ ಮಾತನಾಡುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್‌ ಆಗುತ್ತಿದೆ. ಕನ್ನಡದಲ್ಲಿ ಮಾತನಾಡಿದರೆ ಕೀಳು, ಇಂಗ್ಲಿಷ್‌ನಲ್ಲಿ ಮಾತನಾಡಿದರೆ ಮೇಲು ಎಂಬ ಭಾವನೆ ಬೆಳೆಯುತ್ತಿರುವುದು ಸರಿಯಲ್ಲ’ ಎಂದು ಶಾಸಕ ಡಿ.ಸುಧಾಕರ್ ಎಂದು ಹೇಳಿದರು.

ಹಿರಿಯೂರು ತಾಲ್ಲೂಕಿನ ಯರಬಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಐಮಂಗಲ ಹೋಬಳಿಯ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ನಾಡು–ನುಡಿಯ ರಕ್ಷಣೆಯ ಹೊಣೆ ಯುವ ಪೀಳಿಗೆಯ ಮೇಲಿದೆ. ನಾಡಿನ ಭಾಷೆಯ ಬಗ್ಗೆ ಯಾರೇ ಕೀಳಾಗಿ ಮಾತನಾಡಿದರೂ ಖಂಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ಭಾಷೆಯೇ ನಮಗೆ ಮೊದಲು. ಕನ್ನಡದಲ್ಲಿರುವ ಶರಣರ ವಚನಗಳು, ದಾಸರ ಕೀರ್ತನೆಗಳನ್ನು ಪ್ರಪಂಚದ ಬೇರೆ ಯಾವುದೇ ಭಾಷೆಗಳಲ್ಲಿ ಕಾಣಸಿಗದು ಎಂದು ಹೇಳಿದರು.

ಪ್ರಾಂಶುಪಾಲ ಡಾ. ಆರ್.ಮಹೇಶ್ ಮಾತನಾಡಿ, ‘ಯುವ ಪೀಳಿಗೆಯ ಮೇಲೆ ದೊಡ್ಡ ಹೊಣೆಗಾರಿಕೆ ಇದೆ. ಕ್ಷೀಣಿಸುತ್ತಿರುವ ಕೌಟುಂಬಿಕ ಬೆಸುಗೆ, ಅರ್ಥ ಕಳೆದುಕೊಳ್ಳುತ್ತಿರುವ ಮಾನವೀಯ ಮೌಲ್ಯಗಳನ್ನು ಉಳಿಸಬೇಕಿದೆ. ನಾವು ಆಡುವ ಭಾಷೆಗಳು ನಮ್ಮ ಸಂಸ್ಕೃತಿಯ ದ್ಯೋತಕವಾಗಿವೆ’ ಎಂದು ಹೇಳಿದರು.

‘ರಾಜ್ಯದಲ್ಲಿ 300 ಬುಡಕಟ್ಟು ಭಾಷೆಗಳು ಅಳಿವಿನ ಅಂಚಿನಲ್ಲಿವೆ. ಇಂತಹ ಭಾಷೆಗಳನ್ನು ನಿತ್ಯದ ಬದುಕಿನಲ್ಲಿ ಬಳಸಿದರೆ ಮಾತ್ರ ಜೀವಂತವಾಗಿ ಉಳಿಯಬಲ್ಲವು. ಭಾಷೆ ಉಳಿದಲ್ಲಿ ನಮ್ಮ ಸಂಸ್ಕೃತಿಯೂ ಉಳಿಯುತ್ತದೆ. ಈ ನಿಟ್ಟಿನಲ್ಲಿ ಹೊಸ ಚಳವಳಿ ಹುಟ್ಟಿಕೊಳ್ಳಬೇಕಿದೆ’ ಎಂದು ತಿಳಿಸಿದರು.

ಐಮಂಗಲ ಹೋಬಳಿಗೆ ಸೇರಿದ್ದ ಪಿ.ಆರ್.ತಿಪ್ಪೇಸ್ವಾಮಿ, ಹರ್ತಿ ವೀರನಾಯಕ ಅವರು ಕಲೆ, ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಹರ್ತಿಕೋಟೆಯಲ್ಲಿರುವ ಮಾಸ್ತಿಕಲ್ಲು, ವೀರಗಲ್ಲುಗಳ ಬಗ್ಗೆ, ವದ್ದೀಗೆರೆ ಸಿದ್ದಪ್ಪ, ಮಲೆಯ ಮಾದಪ್ಪ, ಕಳವಿಬಾಗಿ ರಂಗಾವಧೂತರ ಬಗ್ಗೆ ಗಂಭೀರ ಅಧ್ಯಯನ ನಡೆಯಬೇಕು ಎಂದು ಮಹೇಶ್ ತಿಳಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಸ್. ಗುರುಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಎಚ್.ಆರ್. ಶಂಕರ್, ಡಾ.ದೊಡ್ಡಮಲ್ಲಯ್ಯ, ರತ್ನಾನಾಯಕಿ ವೀರೇಂದ್ರಸಿಂಹ, ಶಶಿಕಲಾ ಸುರೇಶ್ ಬಾಬು, ಕಂದಿಕೆರೆ ಸುರೇಶ್ ಬಾಬು, ಅಪ್ಪಾಜಿ, ಕೆ.ಎಂ. ಜಗನ್ನಾಥ್, ಎಂ.ಎಸ್. ರಾಘವೇಂದ್ರ, ಸಾದತ್ ಉಲ್ಲಾ, ಡಾ.ರಾಜಶೇಖರ್, ಕೆ.ನಾಗಣ್ಣ, ಸಕ್ಕರ ರಂಗಸ್ವಾಮಿ, ಎಚ್.ಬಿ. ನರಸಿಂಹಮೂರ್ತಿ, ಅನಂತು, ವೈ.ವಿ. ಗೋಪಾಲಕೃಷ್ಣ ಉಪಸ್ಥಿತರಿದ್ದರು.

ಹರ್ತಿಕೋಟೆ ಸ್ವಾಮೀಜಿ ಸ್ವಾಗತಿಸಿದರು. ಜೆ.ನಿಜಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು. ಎಚ್.ಪಾಂಡುರಂಗಪ್ಪ ವಂದಿಸಿದರು. ಸಮ್ಮೇಳನಾಧ್ಯಕ್ಷ ವೀರೇಂದ್ರಸಿಂಹ ಅವರನ್ನು ಅಲಂಕೃತ ರಥದಲ್ಲಿ ಮೆರವಣಿಗೆಯ ಮೂಲಕ ಸಮ್ಮೇಳನ ಸಭಾಂಗಣಕ್ಕೆ ಕರೆ ತರಲಾಯಿತು

‘ಭದ್ರಾ ಯೋಜನೆ ಶೀಘ್ರ ಪೂರ್ಣಗೊಳ್ಳಲಿ’

ಬಯಲು ಸೀಮೆಯ ಜನರ ದಶಕಗಳ ಕನಸಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು. ಜಿಲ್ಲೆಯಲ್ಲಿನ ಎಲ್ಲ ಕೆರೆಗಳ ಹೂಳು ತೆಗೆಸಿ, ಅಗತ್ಯ ಇರುವ ಕಡೆ ಗೋಕಟ್ಟೆ, ಚೆಡ್‌ ಡ್ಯಾಂ ನಿರ್ಮಿಸಿ ಅಂತರ್ಜಲ ಹೆಚ್ಚಿಸುವ ಕೆಲಸ ಆಗಬೇಕು ಎಂದು ಸಾಹಿತ್ಯ ಸಮ್ಮೇಳನಾಧ್ಯಕ್ಷ ಹರ್ತಿಕೋಟೆ ವೀರೇಂದ್ರಸಿಂಹ ಒತ್ತಾಯಿಸಿದರು.

ಫ್ಲೋರೈಡ್‌ಯುಕ್ತ ನೀರು ಕುಡಿಯುತ್ತಿರುವ ಐಮಂಗಲ ಹೋಬಳಿಯ ಹಳ್ಳಿಗಳಿಗೆ ವಾಣಿ ವಿಲಾಸ ಜಲಾಶಯದಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಪ್ರತಿ ಗ್ರಾಮದಲ್ಲೂ ಗ್ರಂಥಾಲಯ, ರಂಗಮಂದಿರ ನಿರ್ಮಿಸಬೇಕು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲು ನೀಡುವ ಬಗ್ಗೆ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry