ಯಾವಾಗ ಚಾರ್ಜ್ ಮಾಡಬೇಕು?

7

ಯಾವಾಗ ಚಾರ್ಜ್ ಮಾಡಬೇಕು?

Published:
Updated:
ಯಾವಾಗ ಚಾರ್ಜ್ ಮಾಡಬೇಕು?

ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹುಟ್ಟಿಕೊಂಡ ವಿದ್ಯುತ್ ಚಾಲಿತ ವಾಹನಗಳ ಭರಾಟೆ ಜೋರಾಗಿಯೇ ಇದೆ. ಈಗ ಎಲ್ಲೆಲ್ಲೂ ಎಲೆಕ್ಟ್ರಿಕ್ ವಾಹನಗಳದ್ದೇ ಚರ್ಚೆ. ನೆನ್ನೆ ಮೊನ್ನೆ ಆದ 2018 ವಾಹನ ಪ್ರದರ್ಶನದಲ್ಲೂ ಎಲೆಕ್ಟ್ರಿಕ್ ವಾಹನಗಳು ಭರ್ಜರಿಯಾಗಿಯೇ ಸದ್ದು ಮಾಡಿವೆ.

ಆದರೆ ಭೂಮಿಯನ್ನು ಮಾಲಿನ್ಯದಿಂದ ದೂರವುಳಿಸುವ ಮಾರ್ಗವಾಗಿ ಕಂಡುಕೊಂಡ ಈ ದಾರಿಯನ್ನು ಸಮರ್ಪಕವಾಗಿ ಯೋಜನೆಗೊಳಿಸದಿದ್ದರೆ ಮಾರಕವಾಗಬಹುದು ಜೋಕೆ ಎಂದು ಎಚ್ಚರಿಸಿದ್ದಾರೆ ಕೆಲವು ತಜ್ಞರು.

ವಿದ್ಯುತ್ ವಾಹನಗಳ ಬೇಡಿಕೆ ಹೆಚ್ಚಾಗಿದೆ ಎಂದು ಖುಷಿ ಪಡುವುದಕ್ಕಿಂತ ಅವುಗಳನ್ನು ಚಾರ್ಜ್ ಮಾಡುವ ವಿಷಯವನ್ನೂ ಈಗಲೇ ಯೋಚಿಸುವ ತುರ್ತಿದೆ ಎಂದೂ ಹೇಳಿದ್ದಾರೆ.

ಲಂಡನ್‌ನ ಬಿಎಂಐ ರಿಸರ್ಚ್‌ನ ಡೇನಿಯಲ್ ಬ್ರೆಂಡೆನ್ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಏಕಾಏಕಿ ವಿದ್ಯುತ್ ಬೇಡಿಕೆ ಹೆಚ್ಚಾದರೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬುದು ಅವರ ಲೆಕ್ಕಾಚಾರ.

‘ವಿದ್ಯುತ್ ಚಾಲಿತ ವಾಹನ ಚಾಲನೆಯಿಂದ ವಾತಾವರಣವನ್ನು ಚೆನ್ನಾಗಿಟ್ಟಿದ್ದೇವೆ ಎಂದು ನೀವು ತಣ್ಣಗೆ ಕೂರುವಂತಿಲ್ಲ. ಅದನ್ನು ಸರಿಯಾದ ಸಮಯಕ್ಕೆ ಚಾರ್ಜ್ ಮಾಡುವುದೂ ಮುಖ್ಯ’ ಎಂದು ಸಲಹೆ ನೀಡಿದ್ದಾರೆ.

ಏಕಕಾಲದಲ್ಲಿ ಹಲವು ಚಾಲಕರು ಚಾರ್ಜ್‌ ಮಾಡಿಕೊಳ್ಳುವುದನ್ನು ತಪ್ಪಿಸುವ ದಾರಿಗಳನ್ನೂ ಕಂಡುಕೊಳ್ಳುವ ಅಗತ್ಯ ಈಗಲೇ ಇದೆ ಎಂಬುದು ಇದರರ್ಥ.

2017ರಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಪ್ಯಾಸೆಂಜರ್ ವಾಹನಗಳ ಮಾರಾಟ ಹತ್ತು ಲಕ್ಷವನ್ನು ಮೀರಿದೆ. ಇದು ಭವಿಷ್ಯದಲ್ಲಿ ಇನ್ನಷ್ಟು ಏರಿಕೆಯಾಗಬಹುದು. 2040ರ ಹೊತ್ತಿಗೆ ನೂರು ಮಿಲಿಯನ್ ದಾಟಲಿದೆ ಎಂಬ ನಿರೀಕ್ಷೆಯೂ ವ್ಯಕ್ತವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಈ ಕುರಿತು ಯೋಚಿಸುವುದೂ ಅರ್ಹವೇ ಹೌದು.

‘ಇದರಿಂದ ಜಾಗತಿಕ ವಿದ್ಯುತ್ ಉತ್ಪಾದನೆಯೂ ಹೆಚ್ಚಬೇಕಿದೆ. ಒಂದೊಂದು ಹೊಸ ವಾಹನ ಬಂದಾಗಲೂ ಇದರ ಪ್ರಮಾಣವೂ ಹೆಚ್ಚಬೇಕಿದೆ’ ಎನ್ನುತ್ತಾರೆ ಬ್ಲೂಮ್‌ಬರ್ಗ್ ನ್ಯೂ ಎನರ್ಜಿ ಫೈನಾನ್ಸ್‌ನ ವಿಶ್ಲೇಷಕ ಕೋಲಿನ್ ಕೆರಾಚರ್.

ಸಾಮಾನ್ಯವಾಗಿ ಕೆಲಸಕ್ಕೆ ಹೋಗುವಾಗ ಅಥವಾ ಕೆಲಸದಿಂದ ಮರಳುವಾಗ ಪೆಟ್ರೋಲ್ ಹಾಕಿಸಿಕೊಳ್ಳುವವರು ಹೆಚ್ಚಿರುವಂತೆ, ಚಾರ್ಜ್ ಮಾಡಿಕೊಳ್ಳುವವರ ಸಂಖ್ಯೆಯೂ ಸಂಜೆ ಹಾಗೂ ಬೆಳಿಗ್ಗೆ ಸಮಯ ಹೆಚ್ಚಿರುತ್ತದೆ. ಅದರ ಮಧ್ಯದ ಅವಧಿ ನಿರರ್ಥಕವಾಗಿರುತ್ತದೆ ಎಂದು ಅಂದಾಜಿಸಲಾಗಿದೆ.

ಆದ್ದರಿಂದ ಎಲ್ಲಾ ದೇಶಗಳಲ್ಲೂ ‘ಆಫ್‌ ಪೀಕ್’ ಸಮಯಗಳಲ್ಲಿ ಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆ ಸೃಷ್ಟಿಯಾಗಬೇಕಿದೆ ಎಂಬುದು ತಜ್ಞರ ಅಭಿಪ್ರಾಯ.

ಸೌರ ಶಕ್ತಿ ಹೆಚ್ಚು ಪ್ರಖರವಾಗಿರುವಂಥ ಮಧ್ಯಾಹ್ನದ ಸಮಯ ಅಥವಾ ಪವನಶಕ್ತಿ ಹೆಚ್ಚು ಲಭ್ಯವಾಗುವಂಥ ರಾತ್ರಿ ಸಮಯವನ್ನು ಚಾರ್ಜಿಂಗ್‌ಗೆ ಬಳಸಿಕೊಳ್ಳುವುದು ವಿದ್ಯುತ್ ಉಳಿಸುವ ಉಪಾಯವಾಗಬಹುದು ಎಂಬುದು ಇದರ ಹಿಂದಿನ ಅಂದಾಜು. ಜೊತೆಗೆ ಚಾಲಕರು ಮೀನಿಯೇಚರ್ ಪವರ್ ಟ್ರೇಡರ್‌ಗಳಂತೆಯೂ ಕಾರನ್ನು ಬಳಸಿಕೊಳ್ಳಬಹುದು. ಟೂ ವೇ ಚಾರ್ಜಸ್ ಮೂಲಕ ಇದು ಸಾಧ್ಯವಾಗುತ್ತದೆ.

ಆದರೆ ಇವೆಲ್ಲವನ್ನೂ ಸಮರ್ಥವಾಗಿ ಬಳಸಿಕೊಂಡಾಗ ಮಾತ್ರ, ನಿರೀಕ್ಷಿತ ಫಲಿತಾಂಶ ದೊರಕುತ್ತದೆ ಎಂಬುದು ತಜ್ಞರ ಅನಿಸಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry