ಬಜಾಜ್ ಅವೆಂಜರ್ ಸ್ಟ್ರೀಟ್ 180

7

ಬಜಾಜ್ ಅವೆಂಜರ್ ಸ್ಟ್ರೀಟ್ 180

Published:
Updated:
ಆಟೊ ಸಂತೆಯಲ್ಲಿ...

ಹೊಸತನದ ಸ್ಟ್ರೀಟ್ 180

ಬಜಾಜ್ ತನ್ನ ಅವೆಂಜರ್ ಸ್ಟ್ರೀಟ್‌ 150ಗೆ ಬದಲಿಯಾಗಿ ‘ಅವೆಂಜರ್ ಸ್ಟ್ರೀಟ್ 180’ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಮಾದರಿಯೊಂದಿಗೆ, ತನ್ನ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆಯನ್ನೂ ಕಂಪನಿ ಹೊಂದಿದೆ.

ವಿನ್ಯಾಸದ ಕುರಿತು ಹೇಳುವುದಾದರೆ, ಈ ಬೈಕ್ ಬಹುಪಾಲು 220ನಂತೆಯೇ ವಿನ್ಯಾಸವನ್ನು ಹೋಲುತ್ತದೆ. ಹೆಡ್‌ಲ್ಯಾಂಪ್‌, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್, ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಗ್ರಾಬ್ ರೇಲ್‌, ಇಂಟೆಗ್ರೇಟೆಡ್ ಟೇಲ್ ಲೈಟ್‌ಗಳು ಇರಲಿವೆ. ಬ್ರೇಕಿಂಗ್‌ಗಾಗಿ 260 ಎಂಎಂ ಫ್ರಂಟ್‌ ಡಿಸ್ಕ್‌, 130 ಎಂಎಂ ರಿಯರ್ ಡ್ರಮ್‌ ಬ್ರೇಕ್ ಇದ್ದು, ಎಬಿಎಸ್‌ ಇಲ್ಲದಿರುವುದು ಕೊರತೆಯೂ ಹೌದು.

13 ಲೀಟರ್‌ನ ಇಂಧನ ಟ್ಯಾಂಕ್ ಸಾಮರ್ಥ್ಯ ಇದಕ್ಕಿದೆ. ಲಾಂಗ್ ರೈಡ್ ಅನ್ನು ಗಮನದಲ್ಲಿಟ್ಟುಕೊಂಡು ಈ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ನೀಡಲಾಗಿದೆ. ಎಬೊನಿ ಬ್ಲಾಕ್ ಮತ್ತು ಸ್ಪೈಸಿ ರೆಡ್‌ ಬಣ್ಣಗಳಲ್ಲಿ ಲಭ್ಯ.

180 ಸಿಸಿ ಸಿಂಗಲ್ ಸಿಲಿಂಡರ್ ಇದ್ದು, 8,500 ಆರ್‌ಪಿಎಂನಲ್ಲಿ 15.28 ಬಿಎಚ್‌ಪಿ ಹಾಗೂ 6,500 ಆರ್‌ಪಿಎಂನಲ್ಲಿ 13.70 ಎನ್‌ಎಂ ಟಾರ್ಕ್ ಶಕ್ತಿ ಉತ್ಪಾದಿಸುತ್ತದೆ. ಇದರೊಂದಿಗೆ 5 ಸ್ಪೀಡ್ ಗಿಯರ್ ಬಾಕ್ಸ್ ಇರಲಿದೆ. ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್, ಮೋನೊಶಾಕ್ ಅಬ್ಸಾರ್ಬರ್ ಇದ್ದು, ಇದರ ಬೆಲೆಯನ್ನು ₹ 84,499 ರೂಪಾಯಿ (ಎಕ್ಸ್‌ಶೋರೂಂ, ನವದೆಹಲಿ)ಗೆ ನಿಗದಿಗೊಳಿಸಲಾಗಿದೆ.

***

ರೋಲ್ಸ್‌ರಾಯ್ಸ್‌ಗೆ ‘ವ್ಯೂಯಿಂಗ್ ಸ್ಯೂಟ್’

ಬೆಟ್ಟಕ್ಕೆ ಹೋಗಿ, ಅಲ್ಲಿಂದ ನಿಂತು ಸೂರ್ಯೋದಯ ನೋಡುವುದು ಎಷ್ಟು ಸುಂದರ ಅನುಭವ. ಅದರಲ್ಲೂ ಕಾರಿನಲ್ಲೇ ಕೂತು ಪ್ರಕೃತಿಯನ್ನು ಆಸ್ವಾದಿಸುವ ಅವಕಾಶ ಸಿಕ್ಕರೆ? ಹೌದು. ರೋಲ್ಸ್ ರಾಯ್ಸ್ ತನ್ನ ಎಸ್‌ಯುವಿ ‘ಕಲಿನಿಯನ್‌’ನಲ್ಲಿ ಇದೇ ಉದ್ದೇಶದಿಂದ, ‘ವ್ಯೂಯಿಂಗ್ ಸ್ಯೂಟ್‌’ ಅನ್ನು ವಿನ್ಯಾಸಗೊಳಿಸಲು ಮುಂದಾಗಿದೆ.

ಸುಂದರ ತಾಣಗಳಿಗೆ ಹೋದಾಗ, ದಾರಿ ಮಧ್ಯೆ ಸುಮ್ಮನೆ ಕುಳಿತು ಹರಟಬೇಕು ಎನ್ನಿಸಿದಾಗ ಕೇವಲ ಒಂದು ಬಟನ್ ಒತ್ತಿದರೆ ಸಾಕು, ಎಸ್‌ಯುವಿಯ ಹಿಂಬದಿಯಲ್ಲಿ ಈ ಸೀಟ್‌ಗಳು ತೆರೆದುಕೊಳ್ಳುತ್ತವೆ. ಈ ವ್ಯೂಯಿಂಗ್ ಸ್ಯೂಟ್‌ನಲ್ಲಿ ಹಿಂಬದಿಯ ಎರಡು ಲೆದರ್‌ ಸೀಟುಗಳು ಹಾಗೂ ಕಾಕ್‌ಟೇಲ್ ಟೇಬಲ್ ಅನ್ನು ಅಳವಡಿಸಲಾಗಿದೆ. ಇಬ್ಬರು ಇಲ್ಲಿ ಹರಟುತ್ತಾ ಕೂರಬಹುದು.

‘ಇದರಿಂದ ಜೀವನದ ಸುಂದರ ಕ್ಷಣವನ್ನು ಆಸ್ವಾದಿಸಬಹುದು. ಇದು ಗ್ರಾಹಕರ ಮೆಚ್ಚುಗೆ ಗಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸ್ಯೂಟ್‌, ಎಸ್‌ಯುವಿಯ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ. ಅತಿ ದೂರದ ಪ್ರದೇಶಗಳಿಗೂ ಪೀಠೋಪಕರಣಗಳನ್ನು ಸುಲಭವಾಗಿ ಒಯ್ಯುವುದು ಎಷ್ಟು ಚೆನ್ನಾಗಿರುತ್ತದೆಯಲ್ಲವೇ’ ಎಂದಿದ್ದಾರೆ ರೋಲ್ಸ್‌ರಾಯ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಾರ್ಸ್‌ಟೆನ್ ಮುಲ್ಲರ್.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry