ಆಹಾ! ಪುಳಿಯೋಗರೆ

7

ಆಹಾ! ಪುಳಿಯೋಗರೆ

Published:
Updated:
ಆಹಾ! ಪುಳಿಯೋಗರೆ

ಬೆಚ್ಚಗೆ ಕಾದ ಎಣ್ಣೆಗೆ ಪುಳಿಯೋಗರೆ ಪುಡಿಯನ್ನು ಹಾಕಿ ಹದವಾಗಿ ಹುರಿಯುತ್ತಿರುವಾಗ ‘ಹುಳಿ, ಇಂಗು, ಕೊಬ್ಬರಿ, ಕರಿಬೇವು, ಕಡಲೆಕಾಯಿಯನ್ನು ಹಾಕಿ ಗೊಜ್ಜು ಸಿದ್ಧಪಡಿಸುತ್ತೇವೆ’ ಎಂದು ಭಟ್ಟರು ಹೇಳುತ್ತಿರುವಾಗಲೇ ಬಾಯಿಯಲ್ಲಿ ನೀರೂರಿತ್ತು.

ಅನ್ನ ಕಲಸಿ ಬಟ್ಟಲೊಂದಕ್ಕೆ ಹಾಕಿ ತಟ್ಟೆಯನ್ನು ನನ್ನ ಮುಂದಿಡುತ್ತಿದ್ದಂತೆ ಚುರುಗುಟ್ಟುತ್ತಿದ್ದ ಹೊಟ್ಟೆಯ ತಾಳ ಮತ್ತಷ್ಟು ಹೆಚ್ಚಾಯಿತು. ಮೊದಲ ತುತ್ತು ಬಾಯಿಗೆ ಇಡುತ್ತಿದ್ದಂತೆ ಮತ್ತೊಂದು, ಇನ್ನೊಂದು ಎಂದು ತಡವಿಲ್ಲದೆ ಪುಳಿಯೋಗರೆ ಹೊಟ್ಟೆ ಸೇರುತ್ತಿತ್ತು.

ಗಾಂಧಿ ಬಜಾರಿನ ಮೂಲೆಯೊಂದರಲ್ಲಿ ಪುಟ್ಟದಾಗಿ ಚೊಕ್ಕವಾಗಿರುವ ‘ಪುಳಿಯೋಗರೆ ಪಾಯಿಂಟ್‌’ ಹೋಟೆಲ್‌ನ ಪುಳಿಯೋಗರೆ ರುಚಿ ನೋಡಿದವರೆಗೆ ನನ್ನ ಈ ಮಾತು ಅತಿಶಯೋಕ್ತಿ ಎನ್ನಿಸದು.

ದೇವಸ್ಥಾನದಲ್ಲಿ ಪುಳಿಯೋಗರೆ ಪ್ರಸಾದ ಅಂದ ದಿವಸ ನಾನು ಎರಡು ಸಲ ಪಾಳಿಯಲ್ಲಿ ನಿಲ್ಲುತ್ತಿದ್ದೆ. ಮೊದಲಿನಿಂದಲೂ ಪುಳಿಯೋಗರೆ ಅಂದ್ರೆ ತುಂಬಾ ಇಷ್ಟ. ಪುಳಿಯೋಗೆರೆ ಸ್ಪೆಷಲ್‌ ಹೋಟೆಲ್‌ ಇದೆ ಎಂದು ಕೇಳಿದ್ದೆ ತಡ, ಅಲ್ಲಿ ಹೋಗಿ ರುಚಿ ನೋಡುವ ಮನಸಾಯಿತು. ‘ಸರಿ ಬೆಳಗ್ಗಿನ ಉಪಹಾರವನ್ನು ಅಲ್ಲೇ ಮುಗಿಸಿದರಾಯಿತು’ ಎಂದು ಗಾಂಧಿ ಬಜಾರಿನ ನಡುವೆ ಹೋಟೆಲ್‌ ಹುಡುಕಿಕೊಂಡು ಹೋದೆ.

ಪುಳಿಯೋಗರೆ ಜೊತೆಗೆ ಮೊಸರು ನೀಡುವುದನ್ನು ನಾನೆಲ್ಲಿಯೂ ನೋಡಿರಲಿಲ್ಲ. ಬಹಳ ಖಾರ ಇರುತ್ತದೆ ಎಂದು ಮೊಸರು ನೀಡಿರಬಹುದು ಎಂದು ಭಾವಿಸಿದ್ದೆ. ಉಪ್ಪು, ಹುಳಿ, ಖಾರ ಹದವಾಗಿ ಮಿಳಿತಗೊಂಡಿದ್ದ ಆ ಅನ್ನಕ್ಕೆ ಮೊಸರು ಸೇರಿಸಿ ತಿಂದಾಗ ಹೊಸ ರುಚಿ ಇಷ್ಟವಾಯಿತು. ಖಾರವನ್ನು ಇಷ್ವಪಡುವವರಿಗೆ ಪುಳಿಯೋಗರೆಯಷ್ಟನ್ನೇ ತಿನ್ನುವುದು ಖುಷಿ ಕೊಡುತ್ತದೆ. ಪ್ರಸಾದವನ್ನೇ ನೆನಪಿಸುವ ರುಚಿ ಇಲ್ಲಿನ ಪುಳಿಯೋಗರೆಗೆ ಇದೆ.

ಪೊಂಗಲ್‌ ಸಹ ಇಲ್ಲಿನ ಮತ್ತೊಂದು ವಿಶೇಷ ಖಾದ್ಯ. ಪೊಂಗಲ್‌ನ ರುಚಿ ಬೇರೆಡೆಯಂತೆಯೇ ಸಾಮಾನ್ಯವಾಗಿದೆ. ಆದರೆ, ಅದರ ಜೊತೆಗೆ ನೀಡುವ ಹುಳಿ, ಸಿಹಿ, ಖಾರದ ಸಮನಾಗಿ ಮಿಳಿತವಾದ ರಸಂನೊಂದಿಗೆ ಪೊಂಗಲ್‌ ಸವಿದರೆ, ಅದರ ಮಜವೇ ಬೇರೆ.

ಅಯ್ಯಂಗಾರ್ ಸಮುದಾಯದ ವೈಜಯಂತಿ ಮಾಲಾ ಅವರು ‘ಪುಳಿಯೋಗೆರೆ ಪಾಯಿಂಟ್‌’ ಅನ್ನು 2009ರಲ್ಲಿ ಆರಂಭಿಸಿದರು. ‘ನಮ್ಮ ಸಮುದಾಯದ ಮುಖ್ಯ ಅಡುಗೆಯೇ ಪುಳಿಯೋಗೆರೆ. ಹೀಗಾಗಿ ಪುಳಿಯೋಗೆರೆ ಹೆಸರನ್ನೇ ಹೋಟೆಲ್‌ಗೆ ಇಟ್ಟೆವು’ ಎಂದು ಹೆಸರಿನ ಹಿಂದಿನ ಕತೆಯನ್ನು ವೈಜಯಂತಿ ಮಾಲಾ ಬಿಚ್ಚಿಟ್ಟರು.

ಕಾಂಚೀಪುರಂನ ದೇವಸ್ಥಾನಗಳಲ್ಲಿ ಪ್ರಸಾದರೂಪದಲ್ಲಿ ನೀಡುವ ಕಾಂಚೀಪುರಂ ಮಸಾಲಾ ಇಡ್ಲಿ ರುಚಿಯನ್ನು ಇಲ್ಲಿ ಸವಿಯಬಹುದು. ಜೀರಿಗೆ, ಮೆಣಸು, ತೆಂಗಿನಕಾಯಿ ಚೂರು, ತುರಿದ ಶುಂಠಿ, ನೆನಸಿದ ಕಡ್ಲೆಕಾಯಿ, ಖಾರದ ಹಸಿಮೆಣಸನ್ನು ಸಣ್ಣದಾಗಿ ಕತ್ತರಿಸಿ, ಹಿಟ್ಟಿಗೆ ಮಿಕ್ಸ್‌ ಮಾಡಿದ ಇಡ್ಲಿ ತಿನ್ನಲು ಮೃದುವಾಗಿ ನಾಲಿಗೆ ಚಪ್ಪರಿಸುವಂತೆ ಮಾಡುತ್ತದೆ.

ಇದಲ್ಲದೇ ಅಡೆದೋಸೆ, ಬೇಳೆದೋಸೆ, ರಾಗಿ ದೋಸೆ, ಬಿಸಿಬೇಳೆಬಾತ್‌, ವಡೆ, ಖಾರಾಬಾತ್‌ ಸಹ ಇಲ್ಲಿ ಲಭ್ಯವಿದೆ. ಮಧ್ಯಾಹ್ನ ಮತ್ತು ರಾತ್ರಿ ಅಯ್ಯಂಗಾರಿ ಶೈಲಿಯ ಊಟ ಇಲ್ಲಿ ಸಿಗುತ್ತವೆ.

ಪುಳಿಯೋಗೆರೆ ಪಾಯಿಂಟ್‌ನಲ್ಲಿ ರುಚಿ ಅಥವಾ ದೋಸೆ, ಇಡ್ಲಿ ಉಬ್ಬು ಬರಲು ಯಾವುದೇ ಕೃತಕ ಬಣ್ಣ, ಅಡುಗೆ ಸೋಡಾ ಬಳಸಲ್ಲ. ‘ಇಲ್ಲಿನ ಅಡುಗೆಯಲ್ಲಿ ಬೆಳ್ಳುಳ್ಳಿ ಬಳಸುವುದೇ ಇಲ್ಲ. ಈರುಳ್ಳಿಯನ್ನು ಅಗತ್ಯಕ್ಕೆ ಮಾತ್ರ ಬಳಸುತ್ತೇವೆ’ ಎನ್ನುತ್ತಾರೆ ವೈಜಯಂತಿ ಮಾಲಾ.

ಥಾಲಿ ಊಟ– ₹70. ಪುಳಿಯೋಗೆರೆ –₹40, ಪೊಂಗಲ್‌– ₹40. 

 

Tags: 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry