ಹೋಳಿಗೆ ಸಿದ್ಧರಾಗಿ

7

ಹೋಳಿಗೆ ಸಿದ್ಧರಾಗಿ

Published:
Updated:
ಹೋಳಿಗೆ ಸಿದ್ಧರಾಗಿ

ಬಣ್ಣಗಳ ಜೊತೆ ಆಡುತ್ತಾ ಸಂಭ್ರಮಿಸುವ ಹಬ್ಬ ಹೋಳಿ. ಈ ಹಬ್ಬ ಬಣ್ಣವಷ್ಟೇ ಅಲ್ಲ, ಭ್ರಾತೃತ್ವ, ಮೋಜು, ಸಂಭ್ರಮ, ಸಹಬಾಳ್ವೆಯ ಸಂಕೇತವೂ ಹೌದು. ಹೋಳಿ ಹಬ್ಬದ ಸಂಭ್ರಮ ಮನಸನ್ನು ಮುದಗೊಳಿಸುವಂತೆ ಬಣ್ಣಗಳ ಮಜ್ಜನದಲ್ಲಿ ಕೊಳಕಾಗುವ ಬಟ್ಟೆ, ಕೂದಲಿನ ಚಿಂತೆಯೂ ತಲೆಕೆಡುವಂತೆ ಮಾಡುತ್ತವೆ. ಹೀಗಾಗಿಯೇ ಅನೇಕರು ಹಳೆಯ, ಬಣ್ಣ ಕಳೆದುಕೊಂಡ ದಿರಿಸುಗಳನ್ನೇ ಆಯ್ದುಕೊಳ್ಳುವುದು ಮಾಮೂಲು.

ಆದರೆ ಈಗ ಕಾಲ ಬದಲಾಗಿದೆ. ಯಾವುದೇ ಖುಷಿಯ ಕ್ಷಣಕ್ಕಾದರೂ ಚೆನ್ನಾಗಿ ತಯಾರಾಗಬೇಕು ಎಂದು ಮನಸು ಬಯಸುತ್ತದೆ. ಬಣ್ಣಕ್ಕೆ ದಿರಿಸು ಹಾಳಾಯಿತು ಎನ್ನುವುದಕ್ಕಿಂತ ಚೆನ್ನಾಗಿಯೇ ಕಾಣಬೇಕು ಎಂಬ ಬಯಕೆ ಮೇಲುಗೈ ಸಾಧಿಸುತ್ತದೆ. ಹೀಗಾಗಿ ದಿರಿಸು ಹಾಳಾಗುತ್ತದೆ ಎನ್ನುವ ಚಿಂತೆ ಬಿಟ್ಟು, ಚಂದವಾಗಿ ಕಾಣುವುದು ಹೇಗೆ ಎಂಬ ಬಗ್ಗೆ ಯೋಚಿಸಿ. ಫ್ಯಾಷನ್‌ ನೆಪದಲ್ಲಿ ದುಬಾರಿ ದಿರಿಸು ತೊಟ್ಟೀರಿ ಜೋಕೆ. ಇರುವ, ಸರಳ ದಿರಿಸುಗಳಲ್ಲಿಯೇ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು. ಹೋಳಿಗಾಗಿ ನಿಮ್ಮ ತಯಾರಿ ಹೇಗಿರಲಿ ಎನ್ನುವ ಮಾಹಿತಿ ಇಲ್ಲಿದೆ.

* ಬಣ್ಣಗಳೇ ಮೇಲುಗೈ ಸಾಧಿಸುವ ಈ ಹಬ್ಬದಲ್ಲಿ ದಿರಿಸಿನೊಂದಿಗೆ ಯಾವ ರೀತಿಯ ಪ್ರಯೋಗ ಮಾಡಿದರೂ ಕಡಿಮೆಯೇ. ಕುರ್ತಾ, ಸೀರೆ, ಜೀನ್ಸ್‌, ಟ್ಯೂನಿಕ್‌, ಟೀಶರ್ಟ್‌ಗಳು, ಉದ್ದದ ಸ್ಕರ್ಟ್‌ ಅದಕ್ಕೊಪ್ಪುವ ಟಾಪ್‌ ಹಬ್ಬಕ್ಕೆ ಹೇಳಿ ಮಾಡಿಸಿದಂತಿರುತ್ತದೆ. ಹೋಳಿ ಹಬ್ಬಕ್ಕೆ ಸಾಂಪ್ರದಾಯಿಕ ದಿರಿಸೇ ಆಗಬೇಕು ಎಂದಾದಲ್ಲಿ ಬಿಳಿಯ ಬಣ್ಣ ಹೆಚ್ಚು ಸೂಕ್ತ. ಬಿಳಿಯ ಬಣ್ಣ ಎಲ್ಲಾ ಬಣ್ಣಗಳ ಜೊತೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಹೀಗಾಗಿ ಕೆಂಪು, ಹಳದಿ, ಹಸಿರು, ಗುಲಾಬಿ ಬಣ್ಣಗಳ ಜೊತೆಗೆ ನಿಮ್ಮ ದಿರಿಸನ್ನು ಜೋಡಿಸಿಕೊಳ್ಳಿ. ಇನ್ನು ಫ್ಲೋರಲ್‌ ದಿರಿಸುಗಳೂ ಹೋಳಿಯ ಚೆಲುವನ್ನು ದುಪ್ಪಟ್ಟು ಮಾಡಬಲ್ಲವು. ಅಂದಹಾಗೆ ಫ್ಯಾಷನ್‌ಗಿಂತ ಹೆಚ್ಚಾಗಿ ನಿಮಗೆ ಆರಾಮದಾಯಕ ಎನ್ನುವ ದಿರಿಸಿನ ಬಗೆಗೇ ಹೆಚ್ಚು ಗಮನ ಕೊಡಿ. ವರ್ಣ ವೈವಿಧ್ಯ ಇರುವ ಕಾಟನ್‌ ಬಟ್ಟೆ ತೊಟ್ಟರೆ ಒಳ್ಳೆಯದು. ಬಾಂದನಿ ಇಲ್ಲವೇ ಕಲಂಕಾರಿ ವಿನ್ಯಾಸ ಇರುವ ದಿರಿಸುಗಳೂ ಹಬ್ಬದ ಖುಷಿ ಹೆಚ್ಚಿಸಬಲ್ಲವು.

* ಆದಷ್ಟೂ ರಾಸಾಯನಿಕಮುಕ್ತ ಬಣ್ಣಗಳಿಗೆ ಆದ್ಯತೆ ನೀಡಿ. ಹತ್ತಾರು ಜನ ಸೇರಿ ಬಣ್ಣದಾಟ ಆಡುವುದರಿಂದ ರಾಸಾಯನಿಕಯುಕ್ತ ಬಣ್ಣಗಳೂ ಇರಬಹುದು ಎನ್ನುವ ಬಗೆಗೆ ಎಚ್ಚರಿಕೆ ಇರಲಿ. ಬಣ್ಣಗಳಿಂದ ಕೂದಲಿಗೆ ಹಾನಿ ತಪ್ಪಿದ್ದಲ್ಲ. ಹೀಗಾಗಿ ಪೋನಿಟೇಲ್‌, ಹೋಳಿಗೆ ಹೇಳಿ ಮಾಡಿಸಿದ ಕೇಶ ವಿನ್ಯಾಸ. ಜಡೆ ಹೆಣೆದುಕೊಳ್ಳುವುದೂ ಒಳಿತು. ಹೋಳಿ ಆಡುವುದಕ್ಕೂ ಮುಂಚೆ ಮರೆಯದೆ ತುಸು ಮಾಯಿಶ್ಚರೈಸರ್ ಅಥವಾ ಕೂದಲ ರಕ್ಷಣೆಗೆ ಸಿಗುವ ಬೇರೆ ಯಾವುದಾದರೂ ಉತ್ಪನ್ನವನ್ನು ಬಳಸಿ. ಕೂದಲಿಗೆ ಬಣ್ಣ ತಾಕುವುದೇ ಬೇಡ ಎಂದಿದ್ದರೆ ಸ್ಕಾರ್ಫ್‌ನಿಂದ ಕೂದಲನ್ನು ಸುತ್ತಿಕೊಳ್ಳಿ. ರಾಸಾಯನಿಕಯುಕ್ತ ಬಣ್ಣ ಕಣ್ಣಿಗೆ ತಾಕದಂತೆ ನೋಡಿಕೊಳ್ಳಲು ಪೂರ್ಣ ಕಣ್ಣನ್ನು ಆವರಿಸುವ ತಂಪು ಕನ್ನಡಕ ಸೂಕ್ತ. ನಿಮ್ಮ ಫ್ಯಾಷನ್‌ ಮಂತ್ರಕ್ಕೂ ಇದು ಇಂಬು ನೀಡಬಲ್ಲುದು.

* ಹೋಳಿಯಲ್ಲಿ ಬಣ್ಣದ್ದೇ ಕಾರುಬಾರು ಎನ್ನುವ ಕಾರಣಕ್ಕೆ ಅನೇಕರು ಮೇಕಪ್‌ ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಆದರೆ ಈ ಯೋಚನೆ ತಪ್ಪು. ವಿವಿಧ ರೀತಿಯ ಬಣ್ಣಗಳಿಗೆ ತ್ವಚೆ ತೆರೆದುಕೊಳ್ಳುವುದರಿಂದ ಮೇಕಪ್‌ ರಕ್ಷಾ ಕವಚವೇ ಆದೀತು. ವಾಟರ್‌ಪ್ರೂಫ್‌ ಮೇಕಪ್‌ ಅನ್ನು ಬೇಸ್‌ ಮೇಕ್‌ಅಪ್‌ ಆಗಿ ಬಳಕೆ ಮಾಡಿ. ಕಣ್ಣಿನ ಮೇಕಪ್‌ ದಟ್ಟವಾಗಿರಲಿ. ಇದರಿಂದ ಬಣ್ಣದಲ್ಲಿ ಮಿಂದೆದ್ದರೂ ನಿಮ್ಮ ಕಣ್ಣಿನ ಮೇಕಪ್‌ ಆಕರ್ಷಕ ಲುಕ್‌ ನೀಡುತ್ತದೆ. ಅಂದಹಾಗೆ ಬಣ್ಣದಾಟ ಆಡುವುದಕ್ಕೂ ಮುಂಚೆ ಸನ್‌ಸ್ಕ್ರೀನ್‌ ಲೋಶನ್‌ ಹಚ್ಚಿಕೊಳ್ಳಿ. ಇದೂ ಬಣ್ಣಗಳಿಂದ ನಿಮ್ಮ ಚರ್ಮಕ್ಕೆ ರಕ್ಷಣೆ ನೀಡಬಲ್ಲುದು.

* ಹೆಂಗಳೆಯ ಚೆಲುವು ಹೆಚ್ಚಿಸುವಲ್ಲಿ ಆಕ್ಸೆಸರೀಸ್‌ಗಳೂ ಮಹತ್ವದ ಪಾತ್ರವಹಿಸುತ್ತವೆ. ಅನೇಕರು ಹೋಳಿ ಸಂದರ್ಭದಲ್ಲಿ ಆಭರಣಗಳನ್ನು ನಿರ್ಲಕ್ಷಿಸುತ್ತಾರೆ. ‘ಗೋಲಿಯೋಂಕಾ ರಾಸಲೀಲಾ ರಾಮಲೀಲಾ’ ಸಿನಿಮಾದಲ್ಲಿ ಹೋಳಿ ಸಂದರ್ಭದ ಹಾಡೊಂದಿದೆ. ‘ಲಾಹು ಮುನ್ಹ ಲಗಾ ಗಯಾ’ ಎನ್ನುವ ಈ ಹಾಡಿನಲ್ಲಿ ಚೆಲುವೆ ದೀಪಿಕಾರನ್ನು ಇನ್ನಷ್ಟು ಆಕರ್ಷಕವಾಗಿ ಕಾಣಿಸಿದ್ದು ಅವರು ತೊಟ್ಟಿದ್ದ ದೊಡ್ಡ ಜುಮುಕಿ. ಸಂದರ್ಭ ಯಾವುದೇ ಇರಲಿ ಆಭರಣಗಳು ಹೆಂಗಳೆಯರ ಚೆಲುವನ್ನು ಹೆಚ್ಚಿಸುತ್ತವೆ. ದುಬಾರಿ ಬೆಲೆಯ, ಅಮೂಲ್ಯವಾದ ಆಭರಣಗಳನ್ನು ತೊಡಬೇಡಿ. ಕಡಿಮೆ ಬೆಲೆಯ ಫಂಕಿ ಆಭರಣಗಳನ್ನು ಆಯ್ದುಕೊಳ್ಳಿ. ಸಾಂಪ್ರದಾಯಿಕ ದಿರಿಸು ತೊಟ್ಟಿದ್ದರೆ ಜುಮುಕಿ ಆಯ್ದುಕೊಳ್ಳಿ. ಪಾಶ್ಚಾತ್ಯ ದಿರಿಸು ತೊಟ್ಟಿದ್ದರೆ ಬ್ರೇಸ್‌ಲೆಟ್‌, ಈಯರ್‌ ಕಫ್‌, ನೆಕ್ಲೆಸ್‌, ರಿಂಗ್‌ ತೊಟ್ಟುಕೊಳ್ಳಿ.

* ಯಾವುದೇ ಕಾರಣಕ್ಕೆ ಹೈಹೀಲ್ಸ್‌ ಚಪ್ಪಲಿ ಧರಿಸಬೇಡಿ. ಆರಾಮದಾಯಕವಾದ ಸ್ಟೈಲಿಶ್‌ ಚಪ್ಪಲಿ ನಿಮ್ಮ ಆಯ್ಕೆ ಆಗಿರಲಿ.

* ಪುರುಷರು ಜೀನ್ಸ್‌, ಶರ್ಟ್‌, ಕುರ್ತಾದಲ್ಲಿಯೂ ಕಾಣಿಸಿಕೊಳ್ಳಬಹುದು. ದುಬಾರಿಯಲ್ಲದ ಬಿಳಿಯ ಅಥವಾ ಯಾವುದೇ ತೆಳು ಬಣ್ಣದ ಕುರ್ತಾಗೆ ಗಾಢ ಬಣ್ಣದ ಪ್ಯಾಂಟ್‌ ಮ್ಯಾಚ್‌ ಮಾಡಿಕೊಂಡರೆ ಬಣ್ಣದ ಹಬ್ಬಕ್ಕೆ ಚೆನ್ನಾಗಿ ಒಪ್ಪುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry