ಸುಸ್ಥಿರ ಅಭಿವೃದ್ಧಿ ಮುನ್ನೋಟದ ಕೊರತೆ

7

ಸುಸ್ಥಿರ ಅಭಿವೃದ್ಧಿ ಮುನ್ನೋಟದ ಕೊರತೆ

Published:
Updated:
ಸುಸ್ಥಿರ ಅಭಿವೃದ್ಧಿ ಮುನ್ನೋಟದ ಕೊರತೆ

ಬೆಂಗಳೂರು: ‘ಪಾಲಿಕೆ ವಾಸ್ತವ ಬಜೆಟ್‌ ಮಂಡಿಸಿಲ್ಲ. ಇದರಲ್ಲಿ ಸುಸ್ಥಿರ ಅಭಿವೃದ್ಧಿಯ ಮುನ್ನೋಟವೂ ಕಾಣಿಸುತ್ತಿಲ್ಲ. ಸ್ವಂತ ಆದಾಯ ಮೂಲ ಕಂಡುಕೊಳ್ಳುವತ್ತಲೂ ಗಮನ ಹರಿಸಿಲ್ಲ’ ಎಂದು ಜನಾಗ್ರಹ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಪಾಲಿಕೆಗೆ ಆಸ್ತಿ ತೆರಿಗೆ ಸಂಗ್ರಹ ದುಪ್ಪಟ್ಟುಗೊಳಿಸಿಕೊಳ್ಳುವ ಸಾಕಷ್ಟು ಅವಕಾಶಗಳಿವೆ. ಆದರೆ, ಆಸ್ತಿ ಗುರುತಿಸಲು ಮತ್ತು ತೆರಿಗೆ ಸಂಗ್ರಹ ಪರಿಣಾಮಕಾರಿಯಾಗಿ ಮಾಡುವಲ್ಲಿ ವಿಫಲವಾಗಿರುವುದನ್ನು ಬಜೆಟ್‌ ಅಂಕಿ ಅಂಶಗಳೇ ಎತ್ತಿತೋರಿಸುತ್ತವೆ. ಪಾಲಿಕೆಯ ಆದಾಯ ಕ್ರೋಡೀಕರಣ ಬೆಳವಣಿಗೆ ದ‌ರವೂ ಕುಂಠಿತಗೊಂಡಿದೆ ಎಂದು ಸಂಸ್ಥೆಯ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥೆ ಸಪ್ನಾ ಕರೀಂ ವಿಶ್ಲೇಷಿಸಿದರು.

ಆದಾಯ ಕ್ರೋಡೀಕರಣದ ಬೆಳವಣಿಗೆ ದರ 2014ರಿಂದ 2017ರ ನಡುವೆ ಶೇ 36ರಿಂದ ಶೇ 25ರ ಆಸುಪಾಸಿನಲ್ಲಿತ್ತು. 2017–18ರಲ್ಲಿ ಶೇ 14ರಷ್ಟಕ್ಕೆ ಕುಸಿದಿದೆ ಎಂದರು.

ಕಳೆದ ವರ್ಷದ ಬಜೆಟ್‌ನಲ್ಲಿ ₹9,997 ಕೋಟಿ ಆದಾಯ ಕ್ರೋಡೀಕರಿಸುವ ಗುರಿ ಹೊಂದಲಾಗಿತ್ತು. ಆದರೆ, ₹7,514 ಕೋಟಿ ಮಾತ್ರ ಸಂಗ್ರಹವಾಗಿದೆ. ಇದರಲ್ಲಿಯೂ ಶೇ 25ರಷ್ಟು ಕೊರತೆ ಕಂಡುಬಂದಿದೆ. ಅಹಮದಾಬಾದ್‌ ಮತ್ತು ಸೂರತ್‌ ಪಾಲಿಕೆಗಳಲ್ಲಿ ಶೇ 10ರಷ್ಟು ಮಾತ್ರ ಕೊರತೆ ಇದೆ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದ ಮೇಲೆಯೇ ಪಾಲಿಕೆ ಹೆಚ್ಚು ಅವಲಂಬಿತವಾಗಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ಶೇ 54ರಷ್ಟು ಪಾಲು ಸರ್ಕಾರಗಳ ಅನುದಾನ ಇತ್ತು. ಈ ವರ್ಷ ಶೇ 39ರಷ್ಟು ಪಾಲು ಇದೆ. ಇದು ಒಳ್ಳೆಯ ಸೂಚಕವಲ್ಲ. ಪುಣೆ ಮತ್ತು ಮುಂಬೈ ಪಾಲಿಕೆಗಳು ಶೇ 60ರಷ್ಟು ಆದಾಯವನ್ನು ಸ್ವಂತ ಮೂಲದಿಂದ ಸೃಷ್ಟಿಸಿಕೊಂಡಿವೆ. ಪಾಲಿಕೆ ಬಲಗೊಳ್ಳಬೇಕಾದರೆ ಸ್ವಂತ ಆದಾಯ ಮೂಲ, ಸಂಪನ್ಮೂಲ ಸೃಷ್ಟಿಸಿಕೊಳ್ಳಬೇಕು ಎಂದು ತಿಳಿಸಿದರು.

‘ಬಜೆಟ್‌ನಲ್ಲಿ ಶೇ 5ರಿಂದ ಶೇ 6ರಷ್ಟು ಮಾತ್ರ ವೇತನಕ್ಕೆ ವೆಚ್ಚ ಮಾಡಲಾಗುತ್ತಿದೆ. ಇದು 2013–14 ಹಾಗೂ 2014–15ರಲ್ಲಿ ಶೇ 14 ಇತ್ತು. ಕ್ರಮೇಣ ನಾಲ್ಕು ವರ್ಷಗಳಿಂದ ಕಡಿಮೆಯಾಗುತ್ತಾ ಬಂದಿದೆ. ಗುಣಮಟ್ಟದ ಮಾನವ ಸಂಪನ್ಮೂಲ ಬಳಕೆಯಾಗುತ್ತಿಲ್ಲ ಎಂಬ ಅನುಮಾನವನ್ನು ಇದು ಹುಟ್ಟುಹಾಕುತ್ತದೆ.’

ಕಳೆದ ಬಜೆಟ್‌ನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ₹7,514 ಕೋಟಿ ಮೀಸಲಿಡಲಾಗಿತ್ತು. 9,821   ಜಾಬ್‌ಕೋಡ್‌ ಸೃಷ್ಟಿಸಲಾಗಿತ್ತು. ಇದಕ್ಕೆ ₹3,689 ಕೋಟಿ ವಿನಿಯೋಗಿಸಲಾಗಿದೆ. ಅಂದರೆ ಸಾಧನೆ ಶೇ 49.1 ಮಾತ್ರ. ಉಳಿದಿರುವ ಒಂದು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಅನುದಾನ ವಿನಿಯೋಗಿಸಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ ಅವರು.

ಕಳೆದ ಸಾಲಿನ ಬಜೆಟ್‌ ಅನುದಾನದಲ್ಲಿ ಚಾಲ್ತಿಯಲ್ಲಿರುವ 1,358 ಕಾಮಗಾರಿಗಳಿಗೆ ₹743 (ಶೇ 19 ರಷ್ಟು) ಕೋಟಿ ಪಾವತಿಸಲಾಗಿದೆ.  ಮುಂದುವರಿದ ಕಾಮಗಾರಿಗಳಿಗೆ ₹ 3,187 ಕೋಟಿ (ಶೇ 81ರಷ್ಟು) ಬಾಕಿ ಪಾವತಿ ಮಾಡಲಾಗಿದೆ. ಇದು ಕೂಡ ಅವೈಜ್ಞಾನಿಕ ನಿರ್ಧಾರ ಎಂದು ಅವರು ಅಭಿಪ್ರಾಯಪಟ್ಟರು.

‘ಬಜೆಟ್‌ನಲ್ಲಿ ಆರ್ಥಿಕ ಶಿಸ್ತು ಇಲ್ಲ’

ಬೆಂಗಳೂರು: ಪಾಲಿಕೆಯ ಕಳೆದ ಬಜೆಟ್‌ನಲ್ಲಿ ಕೂಡ ಭರಪೂರ ಭರವಸೆ ನೀಡಲಾಗಿತ್ತು. ಆದರೆ, ಅವುಗಳನ್ನು ಈಡೇರಿಸಲಿಲ್ಲ. ಈ ಬಾರಿಯ ಬಜೆಟ್‌ ಕೂಡ ಅದೇ ಹಾದಿ ಹಿಡಿಯುವ ಸಾಧ್ಯತೆ ಹೆಚ್ಚಿದೆ ಎಂದು ‘ನಮ್ಮ ಬೆಂಗಳೂರು ಫೌಂಡೇಷನ್‌’ ಸಿಇಒ ಶ್ರೀಧರ್ ಪಬ್ಬಿಶೆಟ್ಟಿ ತಿಳಿಸಿದ್ದಾರೆ.

ಕಳೆದ ಬಜೆಟ್‌ನಲ್ಲಿ ಮೀಸಲಿಟ್ಟ ಹಣದಲ್ಲಿ ಎಷ್ಟು ವೆಚ್ಚವಾಗಿದೆ, ಎಷ್ಟು ಆದಾಯ ಕ್ರೋಡೀಕರಿಸಲಾಗಿದೆ ಎನ್ನುವ ನಿಖರ ಲೆಕ್ಕ ನೀಡಿಲ್ಲ. ಪಾಲಿಕೆಯಲ್ಲಿ ಲೆಕ್ಕ ಪರಿಶೋಧನೆಯೂ ಸರಿಯಾಗಿ ಆಗುತ್ತಿಲ್ಲ. ಇದರಿಂದ ಆಡಳಿತದಲ್ಲಿ ಪಾರದರ್ಶಕತೆ ಕೊರತೆ ಕಾಣಿಸುತ್ತದೆ. ವಾಸ್ತವ ಅಂಕಿ ಅಂಶ ಗಮನಿಸಿದರೆ ಆದಾಯ ಗಳಿಕೆಯಲ್ಲಿ ಪಾಲಿಕೆ ಹಿಂದೆಬಿದ್ದಿದೆ. ಕಳೆದ ಬಾರಿ ನಿಗದಿಪಡಿಸಿದ್ದ ಕಾಲ್ಪನಿಕ ಗುರಿಯಲ್ಲಿ ಶೇ 25ರಷ್ಟು ಆದಾಯ ಕ್ರೋಡೀಕರಿಸಿಲ್ಲ. ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ನಗರದ ಜನತೆಯನ್ನೂ ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

‘ಕೆಂಪೇಗೌಡ ಜಯಂತಿ ಆಚರಿಸಲು ಪ್ರತಿ ವಾರ್ಡ್‌ಗೆ ₹1.50 ಲಕ್ಷ ಮೀಸಲಿಟ್ಟಿದ್ದಾರೆ. ಆದರೆ, ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರ ಮತ್ತು ಕೆರೆಗಳನ್ನು ಉಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಕೆರೆಗಳ ಅಭಿವೃದ್ಧಿಗೆ ₹10 ಕೋಟಿ ಮೀಸಲಿಡಲಾಗಿದೆ. ಇಷ್ಟು ಹಣ ಯಾವ ಮೂಲೆಗೂ ಸಾಕಾಗುವುದಿಲ್ಲ. ವಿನಾಶವಾಗಿರುವ ಕೆರೆಗಳ ಪುನರುಜ್ಜೀವನಗೊಳಿಸುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಇದು ಚುನಾವಣಾ ಬಜೆಟ್‌’

ಚುನಾವಣೆಯನ್ನು ಗುರಿಯಾಗಿ ಇಟ್ಟುಕೊಂಡು ಬಜೆಟ್‌ ಮಂಡಿಸಲಾಗಿದೆ. ಏರ್‌ ಆಂಬುಲೆನ್ಸ್‌, ವೈ–ಫೈ ಸೌಲಭ್ಯದಿಂದ ಯಾವುದೇ ಉಪಯೋಗವಿಲ್ಲ. ನಾಗರಿಕರ ಬದುಕು ಚೆನ್ನಾಗಿರಬೇಕಾದರೆ ವಾಯು, ಜಲಮಾಲಿನ್ಯವನ್ನು ತಡೆಗಟ್ಟಬೇಕು. ಗಿಡ ನೆಟ್ಟು, ಪೋಷಿಸಲು ಮತ್ತಷ್ಟು ಆದ್ಯತೆ ನೀಡಬೇಕಿತ್ತು.

– ರೂಪಾರಾಣಿ, ಇಂಗ್ಲಿಷ್‌ ಉಪನ್ಯಾಸಕಿ

‘ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು’

ಕೆರೆಗಳ ಅಭಿವೃದ್ಧಿಗೆ ಕಡಿಮೆ ಅನುದಾನ ಒದಗಿಸಲಾಗಿದೆ. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದು ಒಳ್ಳೆಯ ನಡೆ. ವಾಹನ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿಗತಿಯಲ್ಲಿ ಪೂರ್ಣಗೊಳಿಸಬೇಕು.

– ಭರತ್‌ ಚಕ್ರವರ್ತಿ, ಉಪನ್ಯಾಸಕ

ಮಳೆನೀರು ಸಂಗ್ರಹಕ್ಕೆ ಒತ್ತು

ವೈಫೈ ಬದಲಿಗೆ ಮೂಲಸೌಕರ್ಯ ಒದಗಿಸಲು ಗಮನ ಹರಿಸಬೇಕಿತ್ತು. ಮಳೆನೀರು ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಆದರೆ, ರಾಜಕಾಲುವೆ ಕಾಮಗಾರಿಗಳಿಗೆ ವೇಗ ನೀಡಬೇಕಿದೆ.

– ಕಿನ್ನರ ಆರಾಧ್ಯ, ಎಂ.ಎ. ವಿದ್ಯಾರ್ಥಿ

 

ಕಂದಾಯ ಜಾಗೃತ ದಳ ಸ್ವಾಗತಾರ್ಹ

ಪಾಲಿಕೆಯ ಸಂಪನ್ಮೂಲ ಪತ್ತೆ ಹಚ್ಚಿ ತೆರಿಗೆ ಹಾಗೂ ತೆರಿಗೆಯೇತರ ಆದಾಯ ಹೆಚ್ಚಿಸಲು ಕಂದಾಯ ಜಾಗೃತದಳ ಸ್ಥಾಪಿಸಿರುವುದು ಸ್ವಾಗತಾರ್ಹ. ಜತೆಗೆ ಜಾಗೃತ ದಳಕ್ಕೆ ತಿಂಗಳವಾರು ನಿರ್ದಿಷ್ಟ ಗುರಿ ನೀಡಿ, ತೆರಿಗೆ ಸಂಗ್ರಹ ಹೆಚ್ಚಿಸಬೇಕು

–ಎಚ್.ಎಸ್.ರಾಘವೇಂದ್ರ, ಬಿ.ಪ್ಯಾಕ್ ಸಂಯೋಜಕ

 

ಕೆರೆಗಳ ಪುನಃಶ್ಚೇತನಕ್ಕೆ ಆದ್ಯತೆ ಸಾಲದು

ಪಾಲಿಕೆ ವ್ಯಾಪ್ತಿಯ 167 ಕೆರೆಗಳ ಪೈಕಿ ಹಲವು ಕೆರೆಗಳು ಉಪಯೋಗಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿವೆ. ಆದರೆ, ಬಜೆಟ್‍ನಲ್ಲಿ ಈ ಕೆರೆಗಳ ಅಭಿವೃದ್ಧಿಗೆ ಬರೀ ₹10 ಕೋಟಿ ಅನುದಾನ ಇಡಲಾಗಿದೆ. ಕೆರೆಗಳ ಪುನಃಶ್ಚೇತನ ಮತ್ತು ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿಲ್ಲ

–ಎಸ್.ಆರ್. ಶರತ್, ಬಿ.ಪ್ಯಾಕ್ ಸದಸ್ಯ

 

ವಿದ್ಯಾರ್ಥಿಗಳಿಗೆ ನಗದು ಬಹುಮಾನ

* ಪಾಲಿಕೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿಮೆ ಬದಲಿಗೆ ಚಿಕಿತ್ಸಾ ವೆಚ್ಚ ಮತ್ತು ಪರಿಹಾರ ಭರಿಸಲು ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ₹2.00 ಕೋಟಿ ಠೇವಣಿ

* ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮೊದಲ 150 ವಿದ್ಯಾರ್ಥಿಗಳಿಗೆ ತಲಾ ₹25 ಸಾವಿರ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೊದಲ 100 ವಿದ್ಯಾರ್ಥಿಗಳಿಗೆ ತಲಾ ₹35 ಸಾವಿರ ಬಹುಮಾನ (ಪಾಲಿಕೆ ಶಾಲೆಗಳ ವಿದ್ಯಾರ್ಥಿಗಳಿಗೆ)

* ಪಾಲಿಕೆಯ ಶಾಲಾ–ಕಾಲೇಜುಗಳಲ್ಲಿ ಕೊಳವೆಬಾವಿಸಹಿತ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ₹5 ಕೋಟಿ

* ಎಸ್ಸೆಸ್ಸೆಲ್ಸಿ, ಪಿಯುಸಿಯ ಬಡ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆಗೆ ₹1 ಕೋಟಿ

* ಶಾಲಾ–ಕಾಲೇಜುಗಳ ವಿದ್ಯಾರ್ಥಿನಿಯರ ಶುಚಿತ್ವಕ್ಕಾಗಿ ಸ್ಯಾನಿಟರಿ ಇನ್ಸಿನರೇಟರ್‌ ಯಂತ್ರ ಒದಗಿಸಲು ₹5 ಲಕ್ಷ

ತಾಯಿ ಮಡಿಲು ಕಿಟ್‌ ವಿತರಣೆ

* ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಕಾಲದಲ್ಲಿ ಆರೋಗ್ಯ ಸೇವೆ ಒದಗಿಸಲು ವಿಮೆ ಸೌಲಭ್ಯ

* ಪಾಲಿಕೆಯ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಕಬ್ಬಿಣ ಅಂಶದ ಬಿಸ್ಕತ್ತುಗಳನ್ನು ಒದಗಿಸಲು ₹25 ಲಕ್ಷ

* ಬಾಣಂತಿಯರಿಗೆ ‘ತಾಯಿ ಮಡಿಲು ಕಿಟ್’ ಒದಗಿಸಲು ₹1.5 ಕೋಟಿ

* ಬಡ ಹೃದ್ರೋಗಿಗಳಿಗೆ ಉಚಿತ ಸ್ಟೆಂಟ್‍ಗಳ ವಿತರಣೆಗೆ ₹4 ಕೋಟಿ

ಎರಡು ಪಶುಶಾಲೆ ನಿರ್ಮಾಣ

* ನಿರಾಶ್ರಿತ ಪಶುಗಳು, ಅಪಘಾತದಲ್ಲಿ ಗಾಯಗೊಂಡ ಜಾನುವಾರುಗಳು ಹಾಗೂ ರೋಗಪೀಡಿತ ಪ್ರಾಣಿಗಳನ್ನು ರಕ್ಷಿಸಲು ದಾಸರಹಳ್ಳಿ ವಲಯದ ಶೆಟ್ಟಿಹಳ್ಳಿ ಮತ್ತು ಬೊಮ್ಮನಹಳ್ಳಿ ವಲಯದ ಬಿಂಗೀಪುರದ ಭೂಭರ್ತಿ ಘಟಕಗಳಲ್ಲಿ ಪಶುಶಾಲೆಗಳ ನಿರ್ಮಿಸಲು ₹1.6 ಕೋಟಿ

* ಮಹದೇವಪುರ ವಲಯದ ಪಣತ್ತೂರು ಮತ್ತು ಪೂರ್ವ ವಲಯದ ಹಲಸೂರು ಪಶುವೈದ್ಯ ಆಸ್ಪತ್ರೆ ಆವರಣದಲ್ಲಿ ಕೆನೆಲ್‌ ನಿರ್ಮಿಸಲು ₹4.5 ಕೋಟಿ

ಧ್ಯಾನ್‍ಚಂದ್‌ ಪುತ್ಥಳಿ ಸ್ಥಾಪನೆ

* ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಕೇಂದ್ರ ಕಚೇರಿ ಮತ್ತು ವಾರ್ಡ್ ಮಟ್ಟದಲ್ಲಿ ಆಚರಿಸಲು ಪ್ರತಿ ವಾರ್ಡ್‌ಗೆ ₹1.5 ಲಕ್ಷ ಮೀಸಲು. ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಗೆ ಪ್ರತಿ ವಾರ್ಡ್‌ಗೆ ₹1.5 ಲಕ್ಷ

* ದಸರಾ ಮಹೋತ್ಸವ, ಬೆಂಗಳೂರು ಕರಗ ಮತ್ತು ಬಸವನಗುಡಿ ಕಡಲೆಕಾಯಿ ಪರಿಷೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಆಚರಿಸಲು ಪ್ರೋತ್ಸಾಹ.

* ಕರ್ನಾಟಕ ರಾಜ್ಯ ಹಾಕಿ ಅಸೋಸಿಯೇಷನ್ ಆವರಣದಲ್ಲಿ ಧ್ಯಾನ್‍ಚಂದ್‌ ಪುತ್ಥಳಿ ಸ್ಥಾಪಿಸಲು ₹1 ಕೋಟಿ

* ಮೇಜರ್ ಸಂದೀಪ್ ಉನ್ನಿಕೃಷ್ಣನ್ ಮತ್ತು ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಪ್ರತಿಮೆಗಳನ್ನು ಮೇಖ್ರಿ ವೃತ್ತದಲ್ಲಿ ಸ್ಥಾಪಿಸಲು ₹1 ಕೋಟಿ

* ಐದು ವಲಯಗಳಲ್ಲಿ ಕಲಾಭವನ ನಿರ್ಮಿಸಲು ₹5 ಕೋಟಿ

* ‘ಆಡೋಣ ಬಾ ಅಂಗಳದಲ್ಲಿ’ ದೇಸಿ ಕ್ರೀಡೆ ಕಾರ್ಯಕ್ರಮಕ್ಕೆ ಪ್ರತಿ ವಾರ್ಡ್‌ಗೆ ₹1 ಲಕ್ಷ

ಮಾಹಿತಿ ಫಲಕ ಅಳವಡಿಕೆ

*

ಶೈಕ್ಷಣಿಕ, ಆರೋಗ್ಯ ಮತ್ತು ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ತಲುಪಿಸಲು ಜಾಹೀರಾತು ಫಲಕ ಅಳವಡಿಕೆ

‌‌

ಸಾವಿರ ಶೌಚಾಲಯಗಳ ನಿರ್ಮಾಣ

* ವಾರ್ಡ್‌ನ ಪ್ರಮುಖ ಸ್ಥಳಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ 1,000 ಸಾರ್ವಜನಿಕ ಶೌಚಾಲಯ, ಇ–ಟಾಯ್ಲೆಟ್‌ ನಿರ್ಮಾಣ

* ಕುಡಿಯುವ ನೀರಿನ ಘಟಕ ಸ್ಥಾಪಿಸಲು ಪ್ರತಿ ವಾರ್ಡ್‌ಗೆ ₹15 ಲಕ್ಷದಂತೆ ಒಟ್ಟು ₹30 ಕೋಟಿ

* ಅಗಸರ ಕಟ್ಟೆ ನಿರ್ಮಾಣಕ್ಕೆ ₹1 ಕೋಟಿ

* ಪಾಲಿಕೆಯ ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣಕ್ಕೆ ₹3 ಕೋಟಿ

* ಶವಸಾಗಿಸಲು ಫ್ರೀಜರ್‌ಸಹಿತ ವಾಹನ ಖರೀದಿಗೆ ₹1.5 ಕೋಟಿ

* ಮೂರು ಆಂಬುಲೆನ್ಸ್ ಖರೀದಿಗೆ  ₹1 ಕೋಟಿ

* ಇಂಧನ ಇಲಾಖೆ ಸಹಯೋಗದಲ್ಲಿ ಪಾಲಿಕೆಯ ಕಚೇರಿ ಕಟ್ಟಡಗಳಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಕೆ

 

* ಕಾನೂನು ಶಾಖೆಯನ್ನು ವಿಚಾರಣಾ ನ್ಯಾಯಾಲಯ, ನ್ಯಾಯಾಲಯ ವಿಭಾಗ ಹಾಗೂ ನಾನ್‌–ಲಿಟಿಗೇಷನ್‌ ವಿಭಾಗಗಳಾಗಿ ವಿಂಗಡಣೆ.


* ಗಾಂಧಿನಗರ, ಶಿವಾಜಿನಗರ, ಎಂ.ಜಿ.ರಸ್ತೆ, ಡಿಸ್ಪೆನ್ಸರಿ ರಸ್ತೆ ಸೇರಿದಂತೆ ಆಯ್ದ ಪ್ರದೇಶಗಳಲ್ಲಿ ಶುಲ್ಕಸಹಿತ ವಾಹನ ನಿಲುಗಡೆ ತಾಣ ಅಭಿವೃದ್ಧಿ

* ವಾರ್ಡ್‌ ಮಟ್ಟದ ಕಾಮಗಾರಿಗಳಿಗಾಗಿ ಹಳೇ ವಾರ್ಡ್‍ಗಳಿಗೆ ತಲಾ ₹2 ಕೋಟಿ ಮತ್ತು ಹೊಸ ವಾರ್ಡ್‍ಗಳಿಗೆ ₹3 ಕೋಟಿ ಅನುದಾನ

* ಕುಡಿಯುವ ನೀರಿನ ನಿರ್ವಹಣೆಗಾಗಿ ಹಳೇ ವಾರ್ಡ್‍ಗೆ ₹15 ಲಕ್ಷ ಮತ್ತು ಹೊಸ ವಾರ್ಡ್‍ಗೆ ₹40 ಲಕ್ಷ ಅನುದಾನ

ಇಂದಿರಾ ಕ್ಯಾಂಟೀನ್‌ಗಳಲ್ಲಿ ಜನೌಷಧ

ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಕಡಿಮೆ ದರಗಳಲ್ಲಿ ಔಷಧ ದೊರೆಯುವಂತೆ ಮಾಡಲು ಪಾಲಿಕೆಯ ಆಸ್ಪತ್ರೆಗಳು ಹಾಗೂ ಇಂದಿರಾ ಕ್ಯಾಂಟೀನ್‌ಗಳಲ್ಲಿ ಜನೌಷಧ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಆಧಾರ್‌ ಜೋಡಣೆ ಕಡ್ಡಾಯ

ವೈದ್ಯಕೀಯ ವೆಚ್ಚದ ಮರುಪಾವತಿಗೆ ನೀಡುತ್ತಿದ್ದ ಅನುದಾನವನ್ನು ₹4 ಲಕ್ಷದಿಂದ ₹6 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ತಪ್ಪಿಸುವ ಉದ್ದೇಶದಿಂದ ಆಧಾರ್‌ ಸಂಖ್ಯೆ ಜೋಡಣೆ ಕಡ್ಡಾಯಗೊಳಿಸಲಾಗಿದೆ.

ಪತ್ರಕರ್ತರಿಗೆ ಸಾಮೂಹಿಕ ವಿಮೆ

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತರಿಗೆ ಆರೋಗ್ಯ ರಕ್ಷಣೆ ಒದಗಿಸುವ ಉದ್ದೇಶದಿಂದ ಸಾಮೂಹಿಕ ವಿಮೆ ನೀಡಲಾಗುತ್ತದೆ. ಪಾಲಿಕೆಯ ಕಾರ್ಯಕ್ರಮ, ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಲು ‘ಮಾಧ್ಯಮ’ ಕೇಂದ್ರ ಸ್ಥಾಪಿಸಲು ₹2 ಕೋಟಿ ಮೀಸಲಿರಿಸಲಾಗಿದೆ.

ಆಸ್ತಿಗಳಿಗೆ ತಂತಿ ಬೇಲಿ

ಪಾಲಿಕೆಯ ಆಸ್ತಿಗಳಿಗೆ ನೋಂದಣಿ ಮಾಡಿಸಿ ಆಸ್ತಿ ಗುರುತಿನ ಸಂಖ್ಯೆ ನೀಡಲಾಗುತ್ತದೆ. ಪಾಲಿಕೆಯ ಆಸ್ತಿಗಳಿಗೆ ತಂತಿ ಬೇಲಿಗಳನ್ನು ನಿರ್ಮಿಸಲು ₹10 ಕೋಟಿ ಮೀಸಲಿರಿಸಲಾಗಿದೆ. ಭೂ ಸ್ವಾಧೀನ ಕಾರ್ಯಗಳಿಗೆ ₹45 ಕೋಟಿ ಮೀಸಲಿರಿಸಲಾಗಿದೆ.

ಮರದ ಸ್ಕೈವಾಕ್‌

ಹಡ್ಸನ್ ವೃತ್ತದಲ್ಲಿ ಇಂಜಿನಿಯರ್ಡ್‌ ವುಡ್‌ ಉಪಯೋಗಿಸಿ ಅತಿ ಹೆಚ್ಚು ಉದ್ದದ 5 ಮಾರ್ಗಗಳನ್ನು ಒಳಗೊಂಡಿರುವ ಸ್ಕೈವಾಕ್ (ಮರದಲ್ಲಿ ನಿರ್ಮಿಸಿದ ಪಾದಚಾರಿ ಮಾರ್ಗ) ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

ಎಂಟು ಹೆಲಿಪ್ಯಾಡ್‌ ನಿರ್ಮಾಣ

ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ರಕ್ಷಿಸಲು ಏರ್ ಆಂಬುಲೆನ್ಸ್ ಸಂಚಾರಕ್ಕೆ ಮತ್ತು ಗಣ್ಯರನ್ನು ನಿಗದಿತ ಸ್ಥಳಕ್ಕೆ ಸಕಾಲದಲ್ಲಿ ತಲುಪಿಸುವ ಉದ್ದೇಶದಿಂದ ಎಂಟು ವಲಯಗಳಲ್ಲಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರಥಮ ಹಂತದಲ್ಲಿ ₹5 ಕೋಟಿ ಅನುದಾನ ಮೀಸಲಿರಿಸಲಾಗಿದೆ.

ಸ್ಮಾರ್ಟ್‌ಸಿಟಿ ಯೋಜನೆಯಡಿ ₹1,000 ಕೋಟಿ

ಸ್ಮಾಟ್ ಸಿಟಿ ಯೋಜನೆಯಡಿ ವಿಶೇಷ ಉದ್ದೇಶ ವಾಹಕದ ಮೂಲಕ ₹1,000 ಕೋಟಿ ಮೊತ್ತದ ಕ್ರಿಯಾಯೋಜನೆ ರೂಪಿಸಲಾಗುತ್ತದೆ. ಟೆಂಡರ್‌ ಶ್ಯೂರ್ ಮಾದರಿಯಲ್ಲಿ 25 ರಸ್ತೆಗಳ ಅಭಿವೃದ್ಧಿ, ಕೆ.ಆರ್.ಮಾರುಕಟ್ಟೆ, ಶಿವಾಜಿನಗರದ ಸಂಯೋಜಿತ ಸಂಚಾರಿ ಕೇಂದ್ರ ಸ್ಥಾಪನೆ, ಕಬ್ಬನ್ ಉದ್ಯಾನ ಅಭಿವೃದ್ಧಿ, ಸ್ವತಂತ್ರಪಾಳ್ಯ ಪ್ರದೇಶದ ಅಭಿವೃದ್ಧಿ, ಕೆ.ಸಿ.ಜನರಲ್ ಆಸ್ಪತ್ರೆಯ ನವೀಕರಣ ಮಾಡಲಾಗುತ್ತದೆ.

ಗಾಂಧಿ ಬಜಾರ್, ಗಾಂಧಿ ನಗರದ ಸುಖ ಸಾಗರ್ ಹೋಟೆಲ್, ಡಿಸ್ಪೆನ್ಸರಿ ರಸ್ತೆ, ರೇಸ್ ಕೋರ್ಸ್, ಶೇಷಾದ್ರಿ ರಸ್ತೆ, ಕೋರಮಂಗಲ 4ನೇ ಬಡಾವಣೆ, ಜಯನಗರ ಕಾಂಪ್ಲೆಕ್ಸ್ ಹಾಗೂ ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ವಾಹನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ.

ನಾಗರಿಕ ಸೇವೆಗಳನ್ನು ಸುಲಭವಾಗಿ ಒದಗಿಸಲು ’ಪಾಸ್‍ಪೋರ್ಟ್ ಸೇವಾ’ ಮಾದರಿಯಲ್ಲಿ ಸ್ವಯಂ ಚಾಲಿತ ಆನ್‍ಲೈನ್ ತಂತ್ರಾಂಶ ಅಭಿವೃದ್ಧಿ ಹಾಗೂ ಬಳಕೆ ಕಡ್ಡಾಯಗೊಳಿಸಲಾಗುತ್ತದೆ.

 

ರಾಜ್ಯ ಸರ್ಕಾರದಿಂದ ₹2,500 ಕೋಟಿ

ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಬೆಂಗಳೂರು ಅಭಿವೃದ್ಧಿಗೆ ₹2,500 ಕೋಟಿ ಒದಗಿಸಿದೆ.

* 150 ಕಿ.ಮೀ ಉದ್ದದ ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿ

* 100 ಕಿ.ಮೀ ಉದ್ದದ ಪ್ರಮುಖ ರಸ್ತೆಗಳ ಸಮಗ್ರ ಅಭಿವೃದ್ಧಿ

* ಎಂಟು ಜಂಕ್ಷನ್‍ಗಳಲ್ಲಿ ಗ್ರೇಡ್ ಸಪರೇಟರ್

* 250 ಕಿ.ಮೀ ಉದ್ದದ ಪಾದಚಾರಿ ಮಾರ್ಗಗಳ ಅಭಿವೃದ್ಧಿ

* ಪಾಲಿಕೆಗೆ ಸೇರ್ಪಡೆಯಾಗಿರುವ 110 ಹಳ್ಳಿಗಳ ರಸ್ತೆ ಅಭಿವೃದ್ಧಿ

* ಐಟಿಪಿಎಲ್‌ಗೆ ಪರ್ಯಾಯ ಸಂಪರ್ಕ ಕಲ್ಪಿಸುವ 14 ರಸ್ತೆಗಳ ಅಭಿವೃದ್ಧಿ

* ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಿಗ್ನಲ್ ಮುಕ್ತ ಕಾರಿಡಾರ್ ಕಾಮಗಾರಿಗೆ ಎನ್‌ಎಎಲ್ ವಿಂಡ್ ಟನಲ್ ರಸ್ತೆ ನಿರ್ಮಾಣ

‘ಪಿಂಕ್‌ ಬೇಬಿ’ಗೆ ₹1.2 ಕೋಟಿ

‘ಪಿಂಕ್ ಬೇಬಿ’ ಕಾರ್ಯಕ್ರಮದ ಪ್ರಯುಕ್ತ ಪಾಲಿಕೆಯ 24 ಹೆರಿಗೆ ಆಸ್ಪತ್ರೆಗಳಲ್ಲಿ ಪ್ರತಿ ವರ್ಷ ಸಹಜ ಹೆರಿಗೆ ಮೂಲಕ ಜನಿಸುವ ಮೊದಲ ಹೆಣ್ಣು ಮಗುವಿನ ಶಿಕ್ಷಣಕ್ಕಾಗಿ ಠೇವಣಿ ಮೂಲಕ ₹5 ಲಕ್ಷ ನೀಡಲು ₹1.2 ಕೋಟಿ ಮೀಸಲಿರಿಸಲಾಗಿದೆ.

2018-19ನೇ ಸಾಲಿನಲ್ಲಿ ಪುಲಕೇಶಿನಗರ, ವಿಜಯನಗರ, ಜಯನಗರ, ಸರ್ವಜ್ಞನಗರ ಮತ್ತು ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆಗೆ ₹15 ಕೋಟಿ ಅನುದಾನ ಒದಗಿಸಲಾಗಿದೆ.

 

ಯಾರು ಏನಂತಾರೆ...

ಹುಸಿಯಾದ ನಿರೀಕ್ಷೆ

ವಿಧಾನಸಭೆ ಚುನಾವಣೆ ಹತ್ತಿರ ಇರುವಾಗ ಪಾಲಿಕೆಯಲ್ಲಿ ಜನಪರ ಬಜೆಟ್‌ ಮಂಡಿಸಬಹುದೆಂದು ಜನ ನಿರೀಕ್ಷೆ ಇಟ್ಟು

ಕೊಂಡಿದ್ದರು. ಆದರೆ, ಜನರ ನಿರೀಕ್ಷೆ ಹುಸಿಯಾಗಿದೆ. ಇದೊಂದು ಜನವಿರೋಧಿ ಮತ್ತು ಕಳಪೆ ಬಜೆಟ್‌ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಟೀಕಿಸಿದ್ದಾರೆ.

‘ಮೇಯರ್‌ ಅನುದಾನವನ್ನು ಏಕಾಏಕಿ ₹381.5 ಕೋಟಿಗೆ ಏರಿಕೆಮಾಡಲಾಗಿದೆ. ಇದೊಂದೇ ಅವರ  ವೈಯಕ್ತಿಕ ಸಾಧನೆ. 198 ವಾರ್ಡ್‌ಗಳಿಗೆ ಸರಿಸಮಾನವಾಗಿ ಅನುದಾನ ಹಂಚಿಕೆ ಮಾಡಿಲ್ಲ. ತಾರತಮ್ಯ ಮಾಡಲಾಗಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಜನರಿಗೆ ದ್ರೋಹ ಬಗೆದಿವೆ. 110 ಹಳ್ಳಿಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬಹುದೆಂಬ ನಿರೀಕ್ಷೆ ಇತ್ತು. ಅದೂ ಹುಸಿಯಾಗಿದೆ. ಬಜೆಟ್‌ನಲ್ಲಿ ನಗರದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಇಲ್ಲ’ ಎಂದು ಹರಿಹಾಯ್ದರು.

ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿ: ಪಾಲಿಕೆಯು ಬಿಲ್ಡರ್‌ಗಳಿಗೆ ₹189 ಕೋಟಿ ತೆರಿಗೆ ಹಣ ಹಿಂತಿರುಗಿಸಬೇಕು ಎಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಪುನರ್‌ ಪರಿಶೀಲಿಸುವಂತೆ ಅರ್ಜಿ ಸಲ್ಲಿಸಲು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಕ್ರಮಕೈಗೊಳ್ಳಬೇಕೆಂದು ಪದ್ಮನಾಭರೆಡ್ಡಿ ಒತ್ತಾಯಿಸಿದ್ದಾರೆ.

ಸಾಮಾಜಿಕ ನ್ಯಾಯ ಕಲ್ಪಿಸಿದ ತೃಪ್ತಿ

ಮೊದಲೇ ಹೇಳಿದಂತೆ ನಮ್ಮ ಬಜೆಟ್‌ನಲ್ಲಿ ಮಹಿಳೆಯರ ಸುರಕ್ಷತೆಗೆ ಮತ್ತು ನಗರದ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ಸಾಮಾಜಿಕ ನ್ಯಾಯ, ಆರೋಗ್ಯ ಸುರಕ್ಷೆ ಕಲ್ಪಿಸಿದ ತೃಪ್ತಿ ಇದೆ. ಬೇರೆ ರಾಜ್ಯಗಳಲ್ಲಿರುವಂತೆಯೇ ನಾವು ಕೂಡ ಮೇಯರ್‌ ಮತ್ತು ಆಯುಕ್ತರಿಗೆ ಪಾಲಿಕೆಯಿಂದ ವಾಸದ ಕಟ್ಟಡ ನಿರ್ಮಿಸುವ ಯೋಜನೆ ಘೋಷಿಸಿದ್ದೇವೆ.

-ಮೇಯರ್‌ ಆರ್‌.ಸಂಪತ್‌ರಾಜ್‌,

ಯೋಜನೆ ಬಾಕಿ ಉಳಿಸಿರುವುದು ಬೇಸರ

ಆದಾಯ ನಿರೀಕ್ಷೆಗೆ ತಕ್ಕಂತೆ ವಾಸ್ತವಿಕ ಬಜೆಟ್‌ ಇದು. ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ಸಿಕ್ಕಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಉಚಿತವಾಗಿ ನೀಡುವ ‘ಬುಕ್‌ ಬ್ಯಾಂಕ್‌’ ಯೋಜನೆ ಉತ್ತಮವಾದುದು. ಆದರೆ, ಕಳೆದ ಬಜೆಟ್‌ನ ಕೆಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಾರದಿರುವುದು ಬೇಸರ ತಂದಿದೆ. ‘ಪಿಂಕ್‌ ಬೇಬಿ’ಗೆ  ₹5 ಲಕ್ಷ ಮೀಸಲಿಡುವ ಬದಲು, ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್‌ಗೆ ಸಕಾಲದಲ್ಲಿ ಚಿಕಿತ್ಸೆ ಒದಗಿಸಲು ‘ಮ್ಯಾಮೊಗ್ರಫಿ’ ಸೌಲಭ್ಯ ಪ್ರಕಟಿಸಬೇಕಿತ್ತು.

-ಜಿ.ಪದ್ಮಾವತಿ, ಪಾಲಿಕೆ ಕಾಂಗ್ರೆಸ್‌ ಸದಸ್ಯೆ

ಒಂಟಿ ಮನೆ ಅನುದಾನ ಹೆಚ್ಚಳ ಉತ್ತಮ ನಿರ್ಧಾರ

ಒಂಟಿ ಮನೆಗಳ ನಿರ್ಮಾಣಕ್ಕೆ ಅನುದಾನವನ್ನು ₹4 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಿರುವುದು ಉತ್ತಮ ನಿರ್ಧಾರ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಷ್ಟೇ ಅಲ್ಲದೆ, ಅಲ್ಪಸಂಖ್ಯಾತರು ಮತ್ತು ಎಲ್ಲ ವರ್ಗದ ಬಡವರಿಗೆ ಈ ಸೌಲಭ್ಯ ವಿಸ್ತರಿಸುವುದು ಮೆಚ್ಚುವ ಸಂಗತಿ. ಸೈನಿಕರ ಕುಟುಂಬದ ಸ್ವಂತ ವಾಸದ ವಸತಿ ಕಟ್ಟಡಕ್ಕೆ ಶೇ 100 ಆಸ್ತಿ ತೆರಿಗೆ ವಿನಾಯಿತಿ ನೀಡುವ ಪ್ರಸ್ತಾಪವೂ ಸ್ವಾಗತಾರ್ಹ.

–ಅಫ್ರೋಜ್‌ ಖಾನ್‌, ಸಣ್ಣ ಕೈಗಾರಿಕೋದ್ಯಮಿ, ನಂದಿನಿ ಲೇಔಟ್‌

 

ಕೆರೆ ಪುನಃಶ್ಚೇತನಕ್ಕೆ ಆದ್ಯತೆ ಸಾಲದು

ಪಾಲಿಕೆ ವ್ಯಾಪ್ತಿಯ 167 ಕೆರೆಗಳ ಪೈಕಿ ಹಲವು ಕೆರೆಗಳು ಉಪಯೋಗಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿವೆ. ಆದರೆ, ಬಜೆಟ್‍ನಲ್ಲಿ ಈ ಕೆರೆಗಳ ಅಭಿವೃದ್ಧಿಗೆ ಬರೀ ₹10 ಕೋಟಿ ಅನುದಾನ ಇಡಲಾಗಿದೆ. ಕೆರೆಗಳ ಪುನಃಶ್ಚೇತನ ಮತ್ತು ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿಲ್ಲ

-ಎಸ್.ಆರ್. ಶರತ್, ಬಿ.ಪ್ಯಾಕ್ ಸದಸ್ಯ

 

ಬಿಬಿಎಂಪಿ ಬಜೆಟ್‌ ಮುಖ್ಯಾಂಶಗಳು

ಆಡಳಿತ ಸುಧಾರಣೆ

* ಮೇಯರ್‌ ನಿವಾಸ ಹಾಗೂ ಆಯುಕ್ತರ ನಿವಾಸ ನಿರ್ಮಿಸಲು ಮೊದಲ ಹಂತದಲ್ಲಿ ₹5 ಕೋಟಿ

* ಪಾಲಿಕೆ ಸದಸ್ಯರಿಗೆ ಟ್ಯಾಬ್‌

* ಪಾಲಿಕೆಗೆ ಭೇಟಿ ನೀಡುವ ವಿದೇಶಿ ಹಾಗೂ ಹೊರ ರಾಜ್ಯಗಳ ಗಣ್ಯರ ಕಾರು ಖರೀದಿಗೆ ₹60 ಲಕ್ಷ

* ಅಧಿಕಾರಿಗಳಿಗೆ ಕೌಶಲ ಹಾಗೂ ಯೋಗ ತರಬೇತಿ

* ಪಿಂಚಣಿ ಸೌಲಭ್ಯಕ್ಕೆ ನಿವೃತ್ತ ಸಿಬ್ಬಂದಿಯ ಆಧಾರ್‌ ಸಂಖ್ಯೆ ಜೋಡಣೆ.

* ಆನ್‌ಲೈನ್‌ ಸೇವೆ ಎಲ್ಲ ಕಚೇರಿಗಳಿಗೆ ವಿಸ್ತರಣೆ

 

ಪಾಲಿಕೆ ಋಣಭಾರ ಕಡಿತ

* ಅವಧಿಗೆ ಮುನ್ನ ಹುಡ್ಕೊ ಸಾಲ ಮರುಪಾವತಿಯಿಂದ ಬಡ್ಡಿ ಹಣ ₹12.5 ಕೋಟಿ ಉಳಿತಾಯ.

* ಅಡವಿಟ್ಟ ಆಸ್ತಿಗಳ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಕನಿಷ್ಠ 2 ಆಸ್ತಿಗಳನ್ನು ಋಣಮುಕ್ತಗೊಳಿಸುವ ಗುರಿ

* ಆರ್ಥಿಕ ಸುಧಾರಣೆ: ಇಕ್ರಾ (ಐಸಿಆರ್‌ಎ) ಶ್ರೇಣಿ ಉತ್ತಮಪಡಿಸಿಕೊಳ್ಳಲು ಕ್ರಮ (ಪ್ರಸ್ತುತ ‘ಎ–’ ಶ್ರೇಣಿ ಇದೆ)

* ಆದಾಯ, ಖರ್ಚು ಮತ್ತು ವೆಚ್ಚಗಳ ನಿಖರ ಮಾಹಿತಿ ಪಡೆಯಲು ನೂತನ ಲೆಕ್ಕಪತ್ರ ನೀತಿ ಜಾರಿ

 

800 ಆಸ್ತಿಗಳ ಟೋಟಲ್‌ ಸ್ಟೇಷನ್‌ ಸರ್ವೆ

* ಕೈತಪ್ಪಿರುವ ಆಸ್ತಿಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಕಠಿಣ ಕ್ರಮ

* ಸಂಪನ್ಮೂಲ ಸೋರಿಕೆ ಪತ್ತೆಗೆ ವಿಶೇಷ ಆಯುಕ್ತರ (ಹಣಕಾಸು) ಮೇಲುಸ್ತುವಾರಿಯಲ್ಲಿ ಕಂದಾಯ ಜಾಗೃತದಳ ಸ್ಥಾಪನೆ. ತೆರಿಗೆ ಮತ್ತು ತೆರಿಗೆಯೇತರ ಆದಾಯ ಹೆಚ್ಚಿಸಲು ಕ್ರಮ.

* 800 ಆಸ್ತಿಗಳ ಟೋಟಲ್‌ ಸ್ಟೇಷನ್‌ ಸರ್ವೆ

* ಸೈನಿಕರ ಕುಟುಂಬಕ್ಕೆ ಶೇ 100 ತೆರಿಗೆ ವಿನಾಯಿತಿ ನೀಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವ.

* ಆಸ್ತಿ ತೆರಿಗೆ ಮತ್ತು ಕರಗಳು ಸೇರಿದಂತೆ ಒಟ್ಟು ₹3,317 ಕೋಟಿ ವರಮಾನ ನಿರೀಕ್ಷೆ

ಜಾಹೀರಾತು ಬೈಲಾ ತಿದ್ದುಪಡಿ

* ಖಾಸಗಿ ಅನಧಿಕೃತ ಜಾಹೀರಾತು ಮತ್ತು ಇತರ ಫಲಕಗಳ ನಿಯಂತ್ರಣಕ್ಕಾಗಿ ಜಾಹೀರಾತು ಬೈಲಾ ತಿದ್ದುಪಡಿ

* ಪಾಲಿಕೆ ಒಡೆತನದ ಎಲ್ಲ ಜಾಹೀರಾತು ಫಲಕಗಳ ನಿರ್ವಹಣೆ ಖಾಸಗಿ ಏಜೆನ್ಸಿಗೆ ವಹಿಸಲು ಟೆಂಡರ್‌

* ಅನಧಿಕೃತ ಜಾಹೀರಾತು ಫಲಕ ಮತ್ತು ಹೋರ್ಡಿಂಗ್‌ಗೆ ದಂಡ ವಿಧಿಸಿ, ತೆರವಿಗೆ ಕ್ರಮ.

* ಜಾಹೀರಾತು ತೆರಿಗೆ ಬಾಕಿ ಸಂಗ್ರಹಕ್ಕೆ ಕ್ರಮ, ವ್ಯಾಜ್ಯ ಇತ್ಯರ್ಥಕ್ಕೆ ನುರಿತ ವಕೀಲರ ನೇಮಕ

* ಜಾಹೀರಾತು ತೆರಿಗೆಯಿಂದ ₹75.25 ಕೋಟಿ ಆದಾಯದ ನಿರೀಕ್ಷೆ.

 

ಸುಧಾರಣಾ ಶುಲ್ಕದಿಂದ ₹300 ಕೋಟಿ ನಿರೀಕ್ಷೆ

* ಭೂ ಪರಿವರ್ತನೆಯಾಗಿರುವ ಸ್ವತ್ತುಗಳಿಂದ ಸುಧಾರಣಾ ಶುಲ್ಕ ಸಂಗ್ರಹ, ಬಾಕಿ ಇರುವ ₹300 ಕೋಟಿ ವಸೂಲಾತಿಗೆ ಕ್ರಮ.

* ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಟ್ಟಡಗಳ ಮೇಲಿನ ಸೇವಾ ಶುಲ್ಕ ಹಾಗೂ ಆಸ್ತಿ ತೆರಿಗೆ

ವಿನಾಯಿತಿ ಹೊಂದಿರುವ ಶಿಕ್ಷಣ ಸಂಸ್ಥೆಗಳಿಂದ ಸೇವಾ ಶುಲ್ಕ ಸಂಗ್ರಹಣೆ– ಪ್ರಸಕ್ತ ಸಾಲಿನಲ್ಲಿ ₹60 ಕೋಟಿ ಆದಾಯ ನಿರೀಕ್ಷೆ.

* ಅಂಗಡಿ ಮತ್ತು ಮಾರುಕಟ್ಟೆಗಳ ಬಾಡಿಗೆಯನ್ನು ಪರಿಷ್ಕರಣೆ.  ಬಾಡಿಗೆ ರೂಪದಲ್ಲಿ ₹90 ಕೋಟಿ ವರಮಾನ ನಿರೀಕ್ಷೆ.

* ವಾಣಿಜ್ಯ ಸಂಕೀರ್ಣಗಳ ವಾಹನ ನಿಲ್ದಾಣಗಳ ಶುಲ್ಕದಿಂದ ₹4.5 ಕೋಟಿ ವರಮಾನ ನಿರೀಕ್ಷೆ.

* ವ್ಯಾಪಾರ ಪರವಾನಗಿಯಿಂದ ₹ 57 ಕೋಟಿ ಆದಾಯ ನಿರೀಕ್ಷೆ


ಕಲ್ಯಾಣ ಕಾರ್ಯಕ್ರಮಗಳು‌

ಪೌರಕಾರ್ಮಿಕರಿಗೆ

* ಪೌರಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‌ ಮೂಲಕ ಬಿಸಿಯೂಟ

* ‘ಸುರಕ್ಷಿತ ಸಾಧನಗಳ ಕಿಟ್’ ವಿತರಣೆ

* ಕಲ್ಯಾಣ ವಿಭಾಗದ ವೈಯಕ್ತಿಕ ಕಾರ್ಯಕ್ರಮಗಳ ಫಲಾನುಭವಿಗಳನ್ನು ಗುರುತಿಸಲು ಮತ್ತು ಅನುದಾನ ದುರುಪಯೋಗ ತಡೆಯಲು ಆಧಾರ್ ಸಂಖ್ಯೆ ಜೋಡಣೆ

* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಂಟಿ ಮನೆಯ ಅನುದಾನವನ್ನು ₹4 ಲಕ್ಷದಿಂದ ₹6 ಲಕ್ಷಕ್ಕೆ ಹೆಚ್ಚಳ. ಇದಕ್ಕಾಗಿ ₹80 ಕೋಟಿ ಮೀಸಲು.

* ಒಂಟಿ ಮನೆಗೆ ವಾರ್ಡ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳು ಸಿಗದಿದ್ದರೆ ಆ ವಿಧಾನಸಭಾ ಕ್ಷೇತ್ರದ ಉಳಿದ ವಾರ್ಡ್‌ನಿಂದ ಫಲಾನುಭವಿ ಆಯ್ಕೆಗೆ ಅವಕಾಶ.

* ಪೌರಕಾರ್ಮಿಕರಿಗಾಗಿ ಪುಲಕೇಶಿನಗರ ವಾರ್ಡ್‍ನಲ್ಲಿ ‘ಅಂಬೇಡ್ಕರ್ ಸಮುದಾಯ ಭವನ’ ನಿರ್ಮಿಸಲು ₹5 ಕೋಟಿ

* ಯಲಹಂಕದ ‘ಬಸವಲಿಂಗಪ್ಪ ಸಮಾಧಿ’ ಅಭಿವೃದ್ಧಿಗೆ ₹50 ಲಕ್ಷ

* ಪರಿಶಿಷ್ಟ ಜಾತಿ ಮತ್ತು ಪಂಗಡದವರು ವಾಸಿಸುತ್ತಿರುವ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ₹110 ಕೋಟಿ

* ಕೌಶಲ ಅಭಿವೃದ್ಧಿ ತರಬೇತಿಗೆ ₹5 ಕೋಟಿ

* ಪರಿಶಿಷ್ಟ ಜಾತಿ ಮತ್ತು ಪಂಗಡದ ಪೌರ ಕಾರ್ಮಿಕರು ಹಾಗೂ ಡಿ ಗ್ರೂಪ್‍ನ ಕಾಯಂ, ಗುತ್ತಿಗೆ ನೌಕರರ ಮಕ್ಕಳ ಶಿಕ್ಷಣದ ನೆರವಿಗೆ  ₹9 ಕೋಟಿ

ಒಂಟಿ ಮನೆ ಅನುದಾನ ಹೆಚ್ಚಳ

ಆರ್ಥಿಕವಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಒಂಟಿ ಮನೆ ಅನುದಾನ ₹ 4 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ. ಇದಕ್ಕಾಗಿ ₹47 ಕೋಟಿ ಮೀಸಲು.ಕೊಳಚೆ ಪ್ರದೇಶದ ನಿವಾಸಿಗಳಿಗೆ ಶಾಶ್ವತ ವಸತಿ ಒದಗಿಸಲು ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ವಸತಿ ಸಮುಚ್ಚಯ ನಿರ್ಮಾಣ

ಅಂಗವಿಕಲರ ಕಲ್ಯಾಣಕ್ಕಾಗಿ ₹63 ಕೋಟಿ

ಪಾಲಿಕೆ ವ್ಯಾಪ್ತಿಯಲ್ಲಿರುವ ಅಂಗವಿಕಲರ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ ₹63 ಕೋಟಿ ಮೀಸಲಿರಿಸಲಾಗಿದೆ. ಸ್ವಯಂ ಉದ್ಯೋಗಕ್ಕಾಗಿ ಆರ್ಥಿಕ ಸಹಾಯ, ಜೈಪುರ ಕಾಲು ಜೋಡಣೆ, ಮೂರು ಚಕ್ರ ವಾಹನಗಳು, ವಾಕರ್‍ಗಳನ್ನು ನೀಡುವುದು, ವೈದ್ಯಕೀಯ ಸಹಾಯ, ಶಿಕ್ಷಣ ಶುಲ್ಕ ಮರುಪಾವತಿ, ಬುದ್ಧಿಮಾಂದ್ಯ ಮಕ್ಕಳಿಗೆ ಪ್ರೋತ್ಸಾಹ, ಕ್ರೀಡಾ ಪ್ರೋತ್ಸಾಹ, ಪಾಲಿಕೆಯ ಎಲ್ಲಾ ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ರ‍್ಯಾಂಪ್‌ ನಿರ್ಮಿಸುವುದು, ವಾಕಿಂಗ್ ಸ್ಟಿಕ್‍ಗಳ ವಿತರಣೆ, ಶ್ರವಣ ಸಾಧನ ಹಾಗೂ ಅಂಧರಿಗೆ ಕನ್ನಡಕಗಳನ್ನು ನೀಡಲಾಗುತ್ತದೆ.ಮಹಿಳಾ ಕಾರ್ಯಕ್ರಮ: ಪ್ರತಿ ವಾರ್ಡ್‌ಗೆ ₹10 ಲಕ್ಷ

* ಮಹಿಳೆಯರ ಕಲ್ಯಾಣ ಕಾರ್ಯಕ್ರಮಗಳ ಅಂಗವಾಗಿ (ಕಾಮಗಾರಿ ಹೊರತುಪಡಿಸಿ) ಆರೋಗ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌, ಮಹಿಳೆಯರಿಗೆ ಹೊಲಿಗೆ ಯಂತ್ರ, ನಿಟ್ಟಿಂಗ್‌ ಮತ್ತು ಎಂಬ್ರಾಯಿಡರಿ ಯಂತ್ರ ನೀಡಲು  ಹಾಗೂ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರತಿ ವಾರ್ಡ್‌ಗೆ ₹10 ಲಕ್ಷ

 

ಹಿರಿಯ ನಾಗರಿಕರ ಕಾರ್ಯಕ್ರಮ:

* ಹಿರಿಯ ನಾಗರಿಕರಿಗಾಗಿ ಲಭ್ಯವಿರುವ ಕಡೆಗಳಲ್ಲಿ ವಿಶ್ರಾಂತಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಕೊಠಡಿಗಳನ್ನು ನಿರ್ಮಿಸಲು ₹3 ಕೋಟಿ

* ಪ್ರತಿ ವಾರ್ಡ್‌ನಲ್ಲಿ 100 ಹಿರಿಯ ನಾಗರಿಕರಿಗೆ ಆಧಾರ್ ಸಂಖ್ಯೆ ಆಧಾರದ ಮೇಲೆ ವಾಕಿಂಗ್‌ ಸ್ಟಿಕ್‌ ವಿತರಣೆ.

* ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವ ಬಡ ಹಿರಿಯ ನಾಗರಿಕರಿಗೆ ಪಾಲಿಕೆಯ ಆಸ್ಪತ್ರೆಗಳಲ್ಲಿ ಮಾತ್ರೆಗಳ ಉಚಿತ  ವಿತರಣೆ

ಲೈಂಗಿಕ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ₹1 ಕೋಟಿ

* ಉಚಿತ ಲಘುವಾಹನ ತರಬೇತಿ, ಸ್ವಯಂ ಉದ್ಯೋಗಕ್ಕಾಗಿ ತಳ್ಳುಗಾಡಿ ವಿತರಣೆ, ಉಚಿತ ಬಸ್ ಪಾಸ್, ಶಿಕ್ಷಣ ಮತ್ತು ಸ್ವಾವಲಂಬನೆಗೆ ಆರ್ಥಿಕ ಸಹಾಯಕ್ಕಾಗಿ ಒಟ್ಟು ₹1 ಕೋಟಿ ಮೀಸಲು.

‌‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry