ಒಡೆದು ಆಳುವುದು ಬೇಡ

7

ಒಡೆದು ಆಳುವುದು ಬೇಡ

Published:
Updated:

1980ರ ದಶಕದಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ಮಾದಿಗ ದಂಡೋರ ಹೋರಾಟಗಳಿಂದ ಸ್ಫೂರ್ತಿ ಪಡೆದು, ಕರ್ನಾಟಕದಲ್ಲಿ ಎಡಗೈ ಮತ್ತು ಬಲಗೈ ಜಾತಿಗಳ ಮಧ್ಯೆ ಹೋರಾಟಗಳು 1990ರ ದಶಕದಲ್ಲಿ ತೀವ್ರಗೊಂಡವು. ‘ಮೀಸಲಾತಿಯ ಲಾಭ ಕೆಲವೇ ಕೆಲವು ಜಾತಿಗಳವರಿಗೆ ಲಭಿಸುತ್ತಿದೆ’ ಎಂದು ಆರೋಪಿಸಿ ಈ ಹೋರಾಟ ಆರಂಭವಾಗಿತ್ತು. ಈ ವಿಚಾರದ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ, ವರದಿ ತಯಾರಿಸುವ ಉದ್ದೇಶದಿಂದ 2004ರ ಜ.7ರಂದು ನಿವೃತ್ತ ನ್ಯಾಯಮೂರ್ತಿ ಎನ್.ವೈ. ಹನುಮಂತಪ್ಪರವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು ಆಯೋಗವನ್ನು ರಚಿಸಿತು.

ಆದರೆ ಹನುಮಂತಪ್ಪನವರು 2004ರ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಗೆದ್ದು, ಆಯೋಗಕ್ಕೆ ರಾಜೀನಾಮೆ ಕೊಟ್ಟರು. ಅದೇ ವರ್ಷ ಆಗಸ್ಟ್‌ 24ರಂದು ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಎಚ್.ಸಿ. ಬಾಲಕೃಷ್ಣ ಅವರನ್ನು ಈ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತು. ಆದರೆ ಅವರು ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನವೇ ನಿಧನಹೊಂದಿದರು.

ಈ ಮಧ್ಯೆ ಎಡಗೈ ಮತ್ತು ಬಲಗೈ ಮಧ್ಯೆ ಮೀಸಲಾತಿ ಸೌಲಭ್ಯಗಳ ತಾರತಮ್ಯದ ವಿಚಾರದಲ್ಲಿ ಆಂಧ್ರಪ್ರದೇಶ ರಾಜ್ಯ ಸರ್ಕಾರ, ನಿವೃತ್ತ ನ್ಯಾಯಮೂರ್ತಿ ಪಿ. ರಾಮಚಂದ್ರ ರಾಜು ಆಯೋಗದ ರಚನೆ ಮಾಡಿರುವುದು ಸಂವಿಧಾನ ಬಾಹಿರವೆಂದೂ, ಸಂವಿಧಾನದ ವಿಧಿ341ರ ಪ್ರಕಾರ, ರಾಜ್ಯ ಸರ್ಕಾರಕ್ಕೆ ಜಾತಿ ವಿಚಾರದಲ್ಲಿ ಆಯೋಗ ರಚನೆ ಮಾಡುವ ಅವಕಾಶವಿಲ್ಲವೆಂದೂ ಇ.ವಿ. ಚಿನ್ನಯ್ಯ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ಕೊಟ್ಟು, ಆಯೋಗದ ರಚನೆಯನ್ನೇ ನಿಯಮಬಾಹಿರವೆಂದು ಘೋಷಿಸಿತ್ತು.

ಈ ವಿಚಾರ ಗೊತ್ತಿದ್ದೂ ಕರ್ನಾಟಕ ಸರ್ಕಾರ ವಿಚಾರಣಾ ಆಯೋಗಗಳ ಕಾನೂನು 1952 ನಿಯಮ 3ರ ಪ್ರಕಾರ, 2005ರ ಸೆ. 24ರಂದು ಮೂಲ ಕಾರ್ಯ ಷರತ್ತು(ಟರ್ಮ್ಸ್‌ ಆಫ್ ರೆಫರೆನ್ಸ್) ತಿದ್ದುಪಡಿ ಮಾಡಿ (ಇ.ವಿ.ಚಿನ್ನಯ್ಯ ಮತ್ತು ಸ್ಟೇಟ್ ಆಫ್ ಆಂಧ್ರಪ್ರದೇಶ ಎಐಆರ್ 2005, ಎಸ್‍ಸಿ 162 ತೀರ್ಪಿಗೆ ಒಳಪಟ್ಟು) ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ರಚಿಸಿತು.

ಈ ಆಯೋಗವು, ‘ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ವಿಚಾರಣೆ ಮಾಡಿ, ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕೊಡಲಾಗಿದೆ’ ಎಂದು ತಿಳಿಸಿದೆ. ಆದರೆ ದಾವಣಗೆರೆ ಜಿಲ್ಲೆಯ ಡಿ. ಬಸವರಾಜಪ್ಪ ಮತ್ತು ಡಾ. ವೈ. ರಾಮಪ್ಪರ ಎಂಬುವರಿಂದ ಭೋವಿ ಸಮುದಾಯದ ಪರವಾಗಿ ಅಹವಾಲನ್ನು ಸ್ವೀಕರಿಸಿ ಹೇಳಿಕೆ ಪಡೆದಿರುವುದನ್ನು ಬಿಟ್ಟರೆ ಬೇರೆ ಯಾವುದೇ ಜಿಲ್ಲೆಯಲ್ಲೂ ಭೋವಿ ಸಮುದಾಯದ ನಾಯಕರನ್ನು ವಿಚಾರಣೆಗೊಳಪಡಿಸಿರುವುದಿಲ್ಲ.

ಗದಗ, ಚಾಮರಾಜನಗರ, ಬಾಗಲಕೋಟೆ ಹಾವೇರಿ, ಕೋಲಾರ, ಹಾಸನ, ಬಳ್ಳಾರಿ, ಕೊಪ್ಪಳ, ಬೆಂಗಳೂರು ನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಭೋವಿ ಸಮುದಾಯದ ನಾಯಕರುಗಳನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಹೇಳಿದ್ದರೂ ಅದಕ್ಕೆ ಸಾಕ್ಷ್ಯಾಧಾರಗಳಿರುವುದಿಲ್ಲ. ಹೀಗಾಗಿ ವರದಿಯು ಎಷ್ಟುಪರಿಪೂರ್ಣ?

ಸದಾಶಿವ ಆಯೋಗವು ಪರಿಶಿಷ್ಟ ಜಾತಿಗಳನ್ನು ನಾಲ್ಕು ಭಾಗಗಳಾಗಿ ಸರ್ಕಾರದ ಉಲ್ಲೇಖದ ವಿರುದ್ಧವಾಗಿ ವರ್ಗೀಕರಿಸಿದೆ. ಇದು ಅವೈಜ್ಞಾನಿಕ. ಗ್ರೂಪ್-1 ಎಡಗೈ, ಗ್ರೂಪ್-2 ಬಲಗೈ, ಗ್ರೂಪ್-3 ಭೋವಿ ಮತ್ತು ಲಂಬಾಣಿ, ಗ್ರೂಪ್ -4 ಪರಿಶಿಷ್ಟ ಜಾತಿ ಮತ್ತು ಇತರೆ ಜಾತಿಗಳೆಂದು ವರ್ಗೀಕರಿಸಿದೆ. ‘2001ರ ಜನಗಣತಿಯ ಆಧಾರದ ಮೇಲೆ 22 ಲಕ್ಷ ನಮೂನೆಗಳನ್ನು ಮುದ್ರಿಸಲಾಗಿದೆ. ವಿಚಾರಣೆಯ ನಂತರ 2010ರಲ್ಲಿ ಅಧಿಕಾರಿಗಳಿಗೆ ತರಬೇತಿ ಕೊಟ್ಟು ಜಿಲ್ಲೆಗಳಲ್ಲಿ ಅವುಗಳನ್ನು ಪ್ರಸರಣ ಮಾಡಲಾಗಿದೆ. ಡಾಟಾ ಎಂಟ್ರಿಯ ಸಲುವಾಗಿ ಕಿಯೋನಿಕ್ಸ್ ಕಂಪನಿಗೆ ಇದನ್ನು ವಹಿಸಲಾಗಿದೆ’ ಎಂದು ತಿಳಿಸಿದೆ. ಈ ವಿಚಾರ ಹಾಸ್ಯಾಸ್ಪದ ಮತ್ತು ದುರದೃಷ್ಟಕರ.

ಶೇ 15ರಷ್ಟು ಮೀಸಲಾತಿ ಪರಿಶಿಷ್ಟ ಜಾತಿಗೆ ಸಂವಿಧಾನಾತ್ಮವಾಗಿ ಬಂದಿರುವ ಹಕ್ಕು. ಗ್ರೂಪ್-1ಕ್ಕೆ ಶೇ 6ರಷ್ಟು, ಗ್ರೂಪ್-2ಕ್ಕೆ ಶೇ 5ರಷ್ಟು, ಗ್ರೂಪ್-3ಕ್ಕೆ ಶೇ 3ರಷ್ಟು ಮತ್ತು ಗ್ರೂಪ್-4ಕ್ಕೆ ಶೇ 1ರಷ್ಟು ಮೀಸಲಾತಿ ಹಂಚಲು ಶಿಫಾರಸು ಮಾಡಲಾಗಿದೆ ಎಂಬ ವಿಚಾರ ಬ್ರಿಟಿಷರ ಒಡೆದಾಳುವ ನೀತಿಯನ್ನು ನೆನಪಿಸುವಂತಿದೆ. ಆಯೋಗದ ವ್ಯಾಪ್ತಿಗೆ ಇದು ಬರುವುದಿಲ್ಲ. 101 ಜಾತಿಗಳಲ್ಲಿ ಎಡಗೈ, ಬಲಗೈ ಜಾತಿಗಳನ್ನು ಬಿಟ್ಟರೆ ಭೋವಿ, ಲಂಬಾಣಿ, ಕೊರಚ ಮತ್ತು ಕೊರಮ ಜಾತಿಗಳು 5 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ರಾಜ್ಯದಲ್ಲಿ ಹೊಂದಿರುವುದರಿಂದ ಮೀಸಲಾತಿ ಪ್ರತ್ಯೇಕತೆ ಅಥವಾ ಜಾತಿ ವರ್ಗೀಕರಣದ ಸೂತ್ರವು ಪರಿಶಿಷ್ಟ ಜಾತಿಯ ಒಳಜಗಳಗಳಿಗೆ ಎಡೆಮಾಡಿಕೊಟ್ಟಂತಾಗಿದೆ. ಗಮನಿಸಬೇಕಾದ ಅಂಶವೆಂದರೆ ಒಳಮೀಸಲಾತಿಯ ಪರಿಕಲ್ಪನೆ ಸಂವಿಧಾನದಲ್ಲಿ ಅಡಕವಾಗಿಲ್ಲ ಎಂಬುದು.

ಸದಾಶಿವ ಆಯೋಗವು ಒಂದು ಜಾತಿಯ ಪರವಾಗಿ ವಿಚಾರಣೆಯನ್ನು ಮಾಡಿದಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆ. ಸಂವಿಧಾನದ ವಿಧಿ 341ರ ಅಡಿಯಲ್ಲಿ ಕ್ಯಾಟಗರಿ- 3 ಜಾತಿಗಳ (ಭೋವಿ, ಲಂಬಾಣಿ) ವಿರುದ್ಧ ಕ್ರಮಕ್ಕೆ ಸಂಸತ್ತಿಗೆ ಮಾತ್ರ ಅವಕಾಶವಿದೆ ಎಂದು ರಾಜ್ಯ ಸರ್ಕಾರಕ್ಕೆ ಕಾನೂನು ಸಲಹೆಯನ್ನು ಕೊಟ್ಟಿರುವುದರಿಂದ ಆಯೋಗದ ಉದ್ದೇಶ ಜಗಜ್ಜಾಹೀರವಾಗಿದೆ.

ಆಯೋಗದ ವರದಿಯು ಪರಿಶಿಷ್ಟ ಜಾತಿಗಳ ವರ್ಗೀಕರಣ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಸಂವಿಧಾನದ ವಿಧಿ 341 (2)ರ ಉಲ್ಲಂಘನೆಯಾಗಿರುತ್ತದೆ. ಆಯೋಗದ ರಚನೆಯೇ ಸರ್ಕಾರದ ವ್ಯಾಪ್ತಿಗೆ ಮೀರಿದ್ದು, ಅದರ ವರದಿ ಎಷ್ಟರ ಮಟ್ಟಿಗೆ ನ್ಯಾಯಸಮ್ಮತ ಎನ್ನುವುದು ಪ್ರಶ್ನಾರ್ಹ. ಅಷ್ಟೇ ಅಲ್ಲದೆ ಸಂವಿಧಾನದ ವಿಧಿ 15 (ಶೈಕ್ಷಣಿಕ) ಮತ್ತು ವಿಧಿ16ರ (ಆರ್ಥಿಕ) ಪ್ರಕಾರ, ಪರಿಶಿಷ್ಟ ಜಾತಿಗಳ ಸ್ಥಿತಿಗತಿಗಳ ಬಗ್ಗೆ ಮಾತ್ರ ಸರ್ಕಾರವು ವರದಿಯನ್ನು ಕೇಳಿದ್ದರೆ, ಅದನ್ನು ಮೀರಿ ಜಾತಿಗಳ ವರ್ಗೀಕರಣ ಮಾಡಿ, ಗ್ರೂಪ್-3 ಜಾತಿಗಳ ವಿರುದ್ಧ ಸೂಕ್ತ ಕ್ರಮಕ್ಕಾಗಿ ಶಿಫಾರಸು ಮಾಡಿರುವುದು ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ.

ಸಂವಿಧಾನ ರಚನೆಯ ಸಂದರ್ಭದಲ್ಲಿ ಒಳ ಮೀಸಲಾತಿಯನ್ನು ವಿರೋಧಿಸಿ, ಆ ಮೂಲಕ ಒಡೆದಾಳುವ ನೀತಿಯಿಂದ ಎಲ್ಲಾ ವರ್ಗದವರನ್ನು ರಕ್ಷಿಸಲಾಗಿದೆ.

ಆದುದರಿಂದ, ರಾಜ್ಯ ಸರ್ಕಾರವು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿ, ಭ್ರಾತೃತ್ವದಿಂದ ಬದುಕಲು ಪರಿಶಿಷ್ಟ ಜಾತಿಗಳಿಗೆ ಅವಕಾಶ ಮಾಡಿಕೊಡಬೇಕು. ಎಡಗೈ ಪಂಗಡದ ಬಂಧುಗಳಿಗೆ ಪ್ರತ್ಯೇಕವಾದ ನಿಗಮವನ್ನು ಮಾಡಿ ವಿಶೇಷ ಸೌಲಭ್ಯಗಳನ್ನು ಕೊಡುವುದರ ಜೊತೆಗೆ ಪರಿಶಿಷ್ಟ ಜಾತಿಗಳಲ್ಲಿ ಒಗ್ಗಟ್ಟನ್ನು ಮೂಡಿಸುವ ಪ್ರಯತ್ನ ಸರ್ಕಾರದ ವತಿಯಿಂದ ಆಗಲಿ.

ಲೇಖಕ: ಹಿರಿಯ ವಕೀಲ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry