ಗಂಡನನ್ನು ಜೈಲಿಗೆ ಕಳುಹಿಸಲು ಠಾಣೆಗೆ ಬೆದರಿಕೆ ಕರೆ!

7

ಗಂಡನನ್ನು ಜೈಲಿಗೆ ಕಳುಹಿಸಲು ಠಾಣೆಗೆ ಬೆದರಿಕೆ ಕರೆ!

Published:
Updated:
ಗಂಡನನ್ನು ಜೈಲಿಗೆ ಕಳುಹಿಸಲು ಠಾಣೆಗೆ ಬೆದರಿಕೆ ಕರೆ!

ಬೆಂಗಳೂರು:‌ ಗಂಡನನ್ನು ಜೈಲಿಗೆ ಕಳುಹಿಸುವ ಸಲುವಾಗಿ ಅವರ ಹೆಸರಿನಲ್ಲಿ ವಿದ್ಯಾರಣ್ಯಪುರ ಠಾಣೆಗೆ ಕರೆ ಮಾಡಿ, ‘ನಕ್ಸಲರು ವಿಧಾನಸೌಧ ಸ್ಫೋಟಿಸಲಿದ್ದಾರೆ’ ಎಂದು ಹೇಳಿದ್ದ ವೀಣಾ (32) ಹಾಗೂ ಆಕೆಯ ಪ್ರಿಯಕರ ಜಿ.ಶ್ರೀಧರ್ (23) ಪೊಲೀಸರ ಅತಿಥಿಗಳಾಗಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿ ಪ್ರಕಾಶ್ ರಾಥೋಡ್ ಪಾಟೀಲ್, ಮೊದಲು ಮಧು ಎಂಬುವರನ್ನು ವಿವಾಹವಾಗಿದ್ದರು. 10 ವರ್ಷಗಳ ಬಳಿಕ ವೀಣಾಳನ್ನು 2ನೇ ಮದುವೆಯಾದರು. ನಂತರ ಪತಿಯ ಆಸ್ತಿ ಹಂಚಿಕೆ ವಿಚಾರಕ್ಕೆ ಮಧು ಹಾಗೂ ವೀಣಾ ನಡುವೆ ಭಿನ್ನಾಭಿಪ್ರಾಯ ಉಂಟಾಗಿ, 2012ರಲ್ಲಿ  ಗಲಾಟೆಯೂ ನಡೆದಿತ್ತು. ಪರಸ್ಪರರ ವಿರುದ್ಧ ವಿದ್ಯಾರಣ್ಯಪುರ ಠಾಣೆಯಲ್ಲಿ ದೂರು–ಪ್ರತಿದೂರು ಸಹ ದಾಖಲಾಗಿತ್ತು.

ಈ ನಡುವೆ ವಂಚನೆ ಪ್ರಕರಣ ಸಂಬಂಧ ದೊಡ್ಡಬಳ್ಳಾಪುರ ಪೊಲೀಸರು ಪ್ರಕಾಶ್ ಅವರನ್ನು ಬಂಧಿಸಿಜೈಲಿಗೆ ಕಳುಹಿಸಿದ್ದರು. ನಂತರ ಪೇಯಿಂಗ್ ಗೆಸ್ಟ್ ವ್ಯವಹಾರ ಪ್ರಾರಂಭಿಸಿದ್ದ ವೀಣಾ, ಆ ಕಟ್ಟಡದಲ್ಲೇ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಶ್ರೀಧರ್‌ ನನ್ನು ಪ್ರೀತಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಇದೇ ಜ.24ರಂದು ಜೈಲಿನಿಂದ ಬಿಡುಗಡೆಯಾದ ಪ್ರಕಾಶ್, ವೀಣಾಳ ಮನೆಗೆ ತೆರಳಿದ್ದರು. ಇದರಿಂದ ಕುಪಿತಗೊಂಡ ಶ್ರೀಧರ್, ‘ನನ್ನನ್ನು ಪ್ರೀತಿಸುವುದಾದರೆ ಗಂಡನಿಂದ ದೂರ ಇರಬೇಕು’ ಎಂದಿದ್ದ. ಅದಕ್ಕೆ ಒಪ್ಪಿದ ಆಕೆ, ‘ಪತಿಯನ್ನು ಹೇಗಾದರೂ ಮಾಡಿ ಪುನಃ ಜೈಲಿಗೆ ಕಳುಹಿಸಬೇಕು. ಹಾಗೆಯೇ, ನನಗೆ ಮೋಸ ಮಾಡಿರುವ ಅವರ ಮೊದಲ ಪತ್ನಿ ಮಧು ಸಹ ಕಾರಾಗೃಹ ಸೇರಬೇಕು. ಅಂಥ ಒಂದು ಸಂಚು ರೂಪಿಸು’ ಎಂದು ಹೇಳಿದ್ದಳು. ನಂತರ ಇಬ್ಬರೂ ಸೇರಿ ಹುಸಿ ಬಾಂಬ್‌ ಕರೆಯ ಉಪಾಯ ಮಾಡಿದ್ದರು.

‘ನಕ್ಸಲರು ಬಂದಿದ್ದಾರೆ’ : ಸ್ನೇಹಿತ ಶರತ್‌ ಎಂಬಾತನ ಹೊಸ ಸಿಮ್‌ನಿಂದ ಜ.24ರಂದು ಠಾಣೆಗೆ ಕರೆ ಮಾಡಿದ್ದ ಶ್ರೀಧರ್, ‘ಸರ್... ನನ್ನ ಹೆಸರು ಪ್ರಕಾಶ್ ರಾಥೋಡ್ ಪಾಟೀಲ್. ನಿಮ್ಮ ಠಾಣೆ ವ್ಯಾಪ್ತಿಯ ವಡೇರಹಳ್ಳಿಯಲ್ಲಿ ನೆಲೆಸಿರುವ ಮಧು ನಕ್ಸಲ್ ಗುಂಪಿಗೆ ಸೇರಿದವಳು. ಆಕೆಯ ಸಹಚರರು ಈ ದಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಜ.26ರಂದು ವಿಧಾನಸೌಧದಲ್ಲಿ ಬಾಂಬ್ ಇಡಲು ಸಂಚು ರೂಪಿಸಿದ್ದಾರೆ’ ಎಂದಿದ್ದ. ಅಲ್ಲದೆ, ಕೇವಲ ಮಧು ಹೆಸರು ಹೇಳಿದರೆ ತಮ್ಮ ಮೇಲೆ ಅನುಮಾನ ಬರಬಹುದೆಂದು ‘ವೀಣಾ ಕೂಡ ಇದರಲ್ಲಿ ಶಾಮೀಲಾಗಿದ್ದಾಳೆ’ ಎಂದು ಹೇಳಿದ್ದ.

ಆ ಕರೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕೂಡಲೇ ವಡೇರಹಳ್ಳಿಗೆ ತೆರಳಿ ವೀಣಾ ಅವರನ್ನು ವಿಚಾರಣೆ ನಡೆಸಿದ್ದರು. ಆಗ, ‘ಪ್ರಕಾಶ್ ರಾಥೋಡ್ ನನ್ನ ಗಂಡ’ ಎಂದು ಅವರು ಪ್ರತಿಕ್ರಿಯಿಸಿದ್ದರು. ಅಂತೆಯೇ ಮಧು ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ‘ನಾನು ಯಾವ ನಕ್ಸಲ್‌ ಗುಂಪಿಗೂ ಸೇರಿದವಳಲ್ಲ. ಪ್ರಕಾಶ್ ರಾಥೋಡ್ ನನ್ನ ಪತಿ’ ಎಂದು ಹೇಳಿದ್ದರು.

ಕೊನೆಗೆ ಪೊಲೀಸರು ಪ್ರಕಾಶ್ ಅವರನ್ನು ವಶಕ್ಕೆ ಪಡೆದಾಗ, ‘ಮಧು ಹಾಗೂ ವೀಣಾ ಇಬ್ಬರೂ ನನ್ನ ಹೆಂಡತಿಯರೇ. ಆರು ತಿಂಗಳಿನಿಂದ ಜೈಲಿನಲ್ಲಿದ್ದ ನಾನು, ಜ.24ರ ಸಂಜೆಯಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾದೆ. ಈ ವಿಚಾರ ತಿಳಿದು ಪರಿಚಿತರೇ, ನನ್ನ ಹೆಸರಿನಲ್ಲಿ ಠಾಣೆಗೆ ಕರೆ ಮಾಡಿರಬಹುದು’ ಎಂದು ಹೇಳಿಕೆ ಕೊಟ್ಟಿದ್ದರು.

ಕರೆ ಮಾಡಿದ್ದವನ ಧ್ವನಿ ಕೂಡ ಪ್ರಕಾಶ್ ಧ್ವನಿಗೆ ಹೋಲಿಕೆಯಾಗಿರಲಿಲ್ಲ. ಹೀಗಾಗಿ ತಪ್ಪು ಮಾಹಿತಿ ನೀಡಿದ (ಐಪಿಸಿ 177) ಹಾಗೂ ಬೆದರಿಕೆ ಕರೆ ಮಾಡಿ ಭಯ ಹುಟ್ಟಿಸಿದ ಆರೋಪಗಳಡಿ (506, 507) ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ಆ ಅನಾಮಿಕನ ಪತ್ತೆ ಕಾರ್ಯ ಶುರು ಮಾಡಿದ್ದರು.

‘ಟವರ್‌ ಡಂಪ್’ ನೆರವು

‘ಬೆದರಿಕೆ ಕರೆ ಬಂದಿದ್ದ ಸಂಖ್ಯೆಯು ವಡೇರಹಳ್ಳಿ ಸಮೀಪದ ಟವರ್‌ನಿಂದಲೇ ಸಂಪರ್ಕ ಪಡೆಯುತ್ತಿತ್ತು. ವೀಣಾ ಅಲ್ಲಿನ ನಿವಾಸಿಯಾಗಿದ್ದರಿಂದ, ಆಕೆಯ ಮೇಲೆಯೇ ಅನುಮಾನ ವ್ಯಕ್ತವಾಯಿತು. ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಆಕೆ ಆರಂಭದಲ್ಲಿ ಒಪ್ಪಿಕೊಳ್ಳಲಿಲ್ಲ’ ಎಂದು ವಿದ್ಯಾರಣ್ಯಪುರ ಪೊಲೀಸರು ತಿಳಿಸಿದರು.

‘ಆಕೆಯ ಮೊಬೈಲ್ ಕರೆ ವಿವರ (ಸಿಡಿಆರ್) ಪರಿಶೀಲಿಸಿದಾಗ, ಜ.24ರಂದು ಶ್ರೀಧರ್‌ಗೆ ಹೆಚ್ಚು ಕರೆಗಳು ಹೋಗಿದ್ದವು. ಆತನನ್ನು ವಶಕ್ಕೆ ಪಡೆದಾಗ, ‘ನಾನು ಹಾಗೂ ವೀಣಾ ಸಂಚು ರೂಪಿಸಿ ಈ ರೀತಿ ಮಾಡಿದೆವು’ ಎಂದು ತಪ್ಪೊಪ್ಪಿಕೊಂಡ. ನಂತರ ವೀಣಾಳನ್ನೂ ಬಂಧಿಸಲಾಯಿತು. ಸಿಮ್‌ ಕಾರ್ಡ್‌ ಕೊಟ್ಟಿದ್ದ ಶರತ್‌ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry