4

ಆರ್ಥಿಕ ಅಪರಾಧಿಗಳ ಆಸ್ತಿ ಮುಟ್ಟುಗೋಲು: ಸ್ವಾಗತಾರ್ಹ

Published:
Updated:
ಆರ್ಥಿಕ ಅಪರಾಧಿಗಳ ಆಸ್ತಿ ಮುಟ್ಟುಗೋಲು: ಸ್ವಾಗತಾರ್ಹ

ಆರ್ಥಿಕ ಅಪರಾಧ ಎಸಗಿ ದೇಶ ಬಿಟ್ಟು ಪರಾರಿಯಾಗುವ ಘೋಷಿತ ಅಪರಾಧಿಗಳು ಮತ್ತು ಸುಸ್ತಿದಾರರ ಆಸ್ತಿಯನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ತ್ವರಿತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕಾನೂನಿನ ಬಲೆಗೆ ಸಿಗದೆ ಪರಾರಿಯಾಗುವ ವಂಚಕರ ವಿರುದ್ಧ  ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕಡೆಗೂ ಮುಂದಾಗಿರುವುದು ಸ್ವಾಗತಾರ್ಹ.

ಬ್ಯಾಂಕ್‌ಗಳಿಗೆ ದೊಡ್ಡ ಪ್ರಮಾಣದಲ್ಲಿ ವಂಚನೆ ಎಸಗಿ ಕ್ರಿಮಿನಲ್‌ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ದೇಶದಿಂದಲೇ ಪಲಾಯನ ಮಾಡುವವರಿಗೆ ಅನ್ವಯಿಸಿ ಕಠಿಣ ಸ್ವರೂಪದ ಕಾಯ್ದೆಯನ್ನು ಆದಷ್ಟು ಬೇಗ ಜಾರಿಗೆ ತರಲು ಕೇಂದ್ರ ಈಗ ಆತುರ ತೋರಿದೆ.  ವಂಚಕರಿಗೆ ಸೇರಿದ ಎಲ್ಲ ಆಸ್ತಿ ಯಾವುದೇ ತೊಡಕು ಇಲ್ಲದೆ  ಕೇಂದ್ರ ಸರ್ಕಾರ ತನ್ನ ವಶಕ್ಕೆ ಪಡೆಯುವ ಮತ್ತು ಇಂತಹ ಆಸ್ತಿಗೆ ಸಂಬಂಧಿಸಿದ ಕಂಪನಿಯ ಪ್ರವರ್ತಕರು, ಷೇರುದಾರರು ಅಥವಾ ಅಧಿಕಾರಿಗಳು ಸರ್ಕಾರದ ಕ್ರಮದ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವಕಾಶ ಇಲ್ಲದಿರುವುದು ಮಸೂದೆಯಲ್ಲಿನ ಒಳ್ಳೆಯ ಅಂಶ.

ಸಂಸತ್‌ನಲ್ಲಿ ಈಗಾಗಲೇ ಮಂಡನೆಯಾಗಿರುವ ‘ಪರಾರಿಯಾದ ಆರ್ಥಿಕ ಅಪರಾಧಿಗಳಿಗೆ ಸಂಬಂಧಿಸಿದ ಮಸೂದೆ –2017’ ಅಂಗೀಕರಿಸಿ ಆದಷ್ಟು ಬೇಗ ಕಾಯ್ದೆಯನ್ನಾಗಿ ಜಾರಿಗೆ ತರಲು ವೇದಿಕೆ ಸಿದ್ಧಗೊಳ್ಳುತ್ತಿದೆ. ಹಣ ವಂಚನೆ, ಸಾಲ ಮರುಪಾವತಿ ಮಾಡದೆ ದೇಶ  ತೊರೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಈ ಮಸೂದೆ ಸಂಪೂರ್ಣ ಅಧಿಕಾರ ನೀಡಲಿದೆ.

₹ 100 ಕೋಟಿಗಿಂತ ಹೆಚ್ಚಿನ ವಂಚನೆ ಆರೋಪ ಪ್ರಕರಣಗಳಿಗೆ ಇದು ಅನ್ವಯ ಆಗಲಿದೆ. ಕಾನೂನಿನಲ್ಲಿ ಕೆಲವು ವಿನಾಯ್ತಿಗಳನ್ನು ನೀಡಲು ಆಲೋಚಿಸಲಾಗುತ್ತಿದೆ ಎನ್ನುವುದು ಚರ್ಚಾಸ್ಪದ. ಇಲ್ಲಿ ವಿನಾಯ್ತಿ ಪ್ರಶ್ನೆಯೇ ಉದ್ಭವಿಸಬಾರದು.

ದೇಶದ ಬ್ಯಾಂಕಿಂಗ್‌ ಮತ್ತು ಹಣಕಾಸು ವ್ಯವಸ್ಥೆಯಲ್ಲಿ ಹರ್ಷದ್ ಮೆಹ್ತಾನಿಂದ ಹಿಡಿದು ನೀರವ್ ಮೋದಿವರೆಗೆ ವಂಚನೆ ಪ್ರಕರಣಗಳ ದೊಡ್ಡ ಇತಿಹಾಸವೇ ಇದೆ.  ದೇಶದ ನೆಲದ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಈಗಾಗಲೇ ಲಲಿತ್ ಮೋದಿ, ವಿಜಯ್ ಮಲ್ಯ ಮತ್ತು ನೀರವ್ ಮೋದಿ ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಂದ ಹಿಡಿದು ಸರ್ಕಾರಿ ಸ್ವಾಮ್ಯದ ದೊಡ್ಡ ದೊಡ್ಡ ಬ್ಯಾಂಕ್‌ಗಳವರೆಗೆ ಈ ವಂಚನೆ, ಭ್ರಷ್ಟತೆ, ಸಾಲ ಮರುಪಾವತಿ ಮಾಡದಿರುವ ಪ್ರವೃತ್ತಿ ಕ್ಯಾನ್ಸರ್‌ನಂತೆ ಹಬ್ಬಿದೆ. ಈ ವಂಚನೆ ಪ್ರಕರಣಗಳು ಮರುಕಳಿಸದಂತೆ ನಿಗಾ ವ್ಯವಸ್ಥೆ ಬಲಪಡಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. 

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ನೀರವ್ ಮೋದಿ ₹ 12,717 ಕೋಟಿಗಳಷ್ಟು ವಂಚನೆ ಎಸಗಿ ವಿದೇಶಕ್ಕೆ ಪಲಾಯನ ಮಾಡಿರುವುದು ಬೆಳಕಿಗೆ ಬಂದ ನಂತರವಷ್ಟೇ ಸರ್ಕಾರ ತಡವಾಗಿ ಎಚ್ಚರಗೊಂಡಂತಾಗಿದೆ. ಈಗಲಾದರೂ ‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ’ ಎನ್ನುವ ಟೀಕೆಗೆ ಆಸ್ಪದ ಸಿಗದಂತೆ ಈ ಮಸೂದೆಯನ್ನು ಗಂಭೀರವಾಗಿ ಪರಿಗಣಿಸಬೇಕು.  ಇದು ಬರೀ ಆಸ್ತಿ ಮುಟ್ಟುಗೋಲಿಗೆ ಸೀಮಿತವಾಗಬಾರದು.

ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದರಿಂದ ವಂಚನೆಯ ಕೆಲ ಮೊತ್ತವನ್ನು ವಸೂಲಿ ಮಾಡಿದಂತಾಗಲಿದೆ ಎನ್ನುವುದು ನಿಜ. ಇನ್ನೊಂದು ಅರ್ಥದಲ್ಲಿ ಅದರಿಂದ ಯಾವ ಪುರುಷಾರ್ಥವನ್ನೂ ಸಾಧಿಸಿದಂತೆ ಆಗುವುದಿಲ್ಲ. ಉದ್ದೇಶಪೂರ್ವಕ ಸುಸ್ತಿದಾರರು ಮತ್ತು ವಂಚಕರನ್ನು ಕಾನೂನಿನ ಕಟಕಟೆಗೆ ಎಳೆದು ತಂದು ಶಿಕ್ಷಿಸಿದರೆ ಮಾತ್ರ ಜನರು ಬ್ಯಾಂಕ್‌ಗಳ ಮೇಲೆ ಇರಿಸಿರುವ ವಿಶ್ವಾಸ ಬಲಗೊಂಡೀತು.

ಆರ್ಥಿಕ ವಂಚಕರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ವಿದೇಶಗಳ ಜತೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಬೇಕು. ವಂಚಕರನ್ನು ವಿದೇಶಗಳಿಂದ ಕರೆತಂದು ನೆಲದ ಕಾನೂನಿನ ಪ್ರಕಾರ ಕಠಿಣವಾಗಿ ಶಿಕ್ಷಿಸಿದರೆ ಮಾತ್ರ ಭವಿಷ್ಯದಲ್ಲಿ ಇಂತಹ ವಂಚನೆಗಳಿಗೆ ಕಡಿವಾಣ ಹಾಕಲು ಸಾಧ್ಯವಾದೀತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry