ಅನಧಿಕೃತ ಒಎಫ್‌ಸಿಗೆ ಹತ್ತು ಪಟ್ಟು ದಂಡ

7

ಅನಧಿಕೃತ ಒಎಫ್‌ಸಿಗೆ ಹತ್ತು ಪಟ್ಟು ದಂಡ

Published:
Updated:
ಅನಧಿಕೃತ ಒಎಫ್‌ಸಿಗೆ ಹತ್ತು ಪಟ್ಟು ದಂಡ

ಒಎಫ್‌ಸಿ ನಿಯಮಾವಳಿಗಳಿಗೆ ತಿದ್ದಪಡಿ ಮಾಡಿ ಶುಲ್ಕ, ದಂಡ ಮತ್ತು ದರಗಳನ್ನು ಪರಿಷ್ಕರಿಸಲು ಬಿಬಿಎಂಪಿ ಮುಂದಾಗಿದೆ.

ಅನಧಿಕೃತವಾಗಿ ನೆಲದ ಮೇಲೆ ಅಥವಾ ನೆಲದಡಿ ಒಎಫ್‌ಸಿ ಅಳವಡಿಸಿರುವುದು ಕಂಡುಬಂದರೆ ಪ್ರತಿ ಮೀಟರ್‌ಗೆ ನಿಗದಿತ ಶುಲ್ಕದ ಹತ್ತು ಪಟ್ಟು ದಂಡ ವಿಧಿಸಲಾಗುತ್ತದೆ. ಒಎಫ್‌ಸಿ ಅಳವಡಿಕೆ ಬಳಿಕ ನಿಗದಿತ ಅವಧಿಯೊಳಗೆ ರಸ್ತೆಯನ್ನು ಮರು ನಿರ್ಮಿಸದಿದ್ದರೆ ದಂಡ ವಿಧಿಸಲಾಗುತ್ತದೆ. ಈ ಪ್ರಸ್ತಾವಕ್ಕೆ ಕೌನ್ಸಿಲ್ ಸಭೆಯ ಅನುಮೋದನೆ ಪಡೆದು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗುತ್ತದೆ. ಆಫ್ಟಿಕಲ್‌ ಕೇಬಲ್ ಶುಲ್ಕ ಮತ್ತು ರಸ್ತೆ ಕತ್ತರಿಸುವಿಕೆಯಿಂದ ಒಟ್ಟಾರೆ ₹200 ಕೋಟಿ ವರಮಾನ ನಿರೀಕ್ಷಿಸಲಾಗಿದೆ.

ಮೊಬೈಲ್‌ ಕಂಪನಿಗಳ ಅನಧಿಕೃತ ಟವರ್‍ ತೆರವುಗೊಳಿಸಲು ನಿರ್ಧರಿಸಲಾಗಿದೆ. ಮೊಬೈಲ್ ಟವರ್ ಶುಲ್ಕ ಪರಿಷ್ಕರಣೆಯಿಂದ ₹50 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ.

ಕಟ್ಟಡ ಪರವಾನಗಿ ಶುಲ್ಕ, ಕಾಂಪೌಂಡಿಂಗ್ ಶುಲ್ಕ, ನೆಲ ಬಾಡಿಗೆ, ಪ್ರಾರಂಭಿಕ ಪ್ರಮಾಣಪತ್ರ ಶುಲ್ಕ ಮತ್ತು ದಂಡ, ರಸ್ತೆ ಕತ್ತರಿಸುವುದು ಮತ್ತು ದುರಸ್ತಿ ಶುಲ್ಕಗಳ ಮೂಲಕ ಒಟ್ಟು ₹768 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

ಅಂಕಿ–ಅಂಶ

₹306.87 ಕೋಟಿ  -2018–19ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ಪಾಲಿಕೆ ನಿರೀಕ್ಷಿಸಿರುವ ಅನುದಾನ

₹3,650.29 ಕೋಟಿ -ರಾಜ್ಯ ಸರ್ಕಾರದಿಂದ ನಿರೀಕ್ಷಿಸಿರುವ ಅನುದಾನ

₹769 ಕೋಟಿ -ಬಜೆಟ್‌ನಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ಒದಗಿಸಿದ ಒಟ್ಟು ಅನುದಾನ

₹98 ಕೋಟಿ -ಆರೋಗ್ಯ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಒಟ್ಟು ಅನುದಾನ

₹58 ಕೋಟಿ -ಶಿಕ್ಷಣ ಕಾರ್ಯಕ್ರಮಗಳಿಗೆ ಒದಗಿಸಿದ ಒಟ್ಟು ಅನುದಾನ

 

ಆಡಳಿತ ಸುಧಾರಣೆ

* ಮೇಯರ್‌ ನಿವಾಸ ಹಾಗೂ ಆಯುಕ್ತರ ನಿವಾಸ ನಿರ್ಮಿಸಲು ಮೊದಲ ಹಂತದಲ್ಲಿ ₹5 ಕೋಟಿ

* ಪಾಲಿಕೆ ಸದಸ್ಯರಿಗೆ ಟ್ಯಾಬ್‌

* ಪಾಲಿಕೆಗೆ ಭೇಟಿ ನೀಡುವ ವಿದೇಶಿ ಹಾಗೂ ಹೊರ ರಾಜ್ಯಗಳ ಗಣ್ಯರ ಕಾರು ಖರೀದಿಗೆ ₹60 ಲಕ್ಷ

* ಅಧಿಕಾರಿಗಳಿಗೆ ಕೌಶಲ ಹಾಗೂ ಯೋಗ ತರಬೇತಿ

* ಪಿಂಚಣಿ ಸೌಲಭ್ಯಕ್ಕೆ ನಿವೃತ್ತ ಸಿಬ್ಬಂದಿಯ ಆಧಾರ್‌ ಸಂಖ್ಯೆ ಜೋಡಣೆ.

* ಆನ್‌ಲೈನ್‌ ಸೇವೆ ಎಲ್ಲ ಕಚೇರಿಗಳಿಗೆ ವಿಸ್ತರಣೆ

 

ಪಾಲಿಕೆ ಋಣಭಾರ ಕಡಿತ

* ಅವಧಿಗೆ ಮುನ್ನ ಹುಡ್ಕೊ ಸಾಲ ಮರುಪಾವತಿಯಿಂದ ಬಡ್ಡಿ ಹಣ ₹12.5 ಕೋಟಿ ಉಳಿತಾಯ.

* ಅಡವಿಟ್ಟ ಆಸ್ತಿಗಳ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಕನಿಷ್ಠ 2 ಆಸ್ತಿಗಳನ್ನು ಋಣಮುಕ್ತಗೊಳಿಸುವ ಗುರಿ

* ಆರ್ಥಿಕ ಸುಧಾರಣೆ: ಇಕ್ರಾ (ಐಸಿಆರ್‌ಎ) ಶ್ರೇಣಿ ಉತ್ತಮಪಡಿಸಿಕೊಳ್ಳಲು ಕ್ರಮ (ಪ್ರಸ್ತುತ ‘ಎ–’ ಶ್ರೇಣಿ ಇದೆ)

* ಆದಾಯ, ಖರ್ಚು ಮತ್ತು ವೆಚ್ಚಗಳ ನಿಖರ ಮಾಹಿತಿ ಪಡೆಯಲು ನೂತನ ಲೆಕ್ಕಪತ್ರ ನೀತಿ ಜಾರಿ

 

800 ಆಸ್ತಿಗಳ ಟೋಟಲ್‌ ಸ್ಟೇಷನ್‌ ಸರ್ವೆ

* ಕೈತಪ್ಪಿರುವ ಆಸ್ತಿಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಕಠಿಣ ಕ್ರಮ

* ಸಂಪನ್ಮೂಲ ಸೋರಿಕೆ ಪತ್ತೆಗೆ ವಿಶೇಷ ಆಯುಕ್ತರ (ಹಣಕಾಸು) ಮೇಲುಸ್ತುವಾರಿಯಲ್ಲಿ ಕಂದಾಯ ಜಾಗೃತದಳ ಸ್ಥಾಪನೆ. ತೆರಿಗೆ ಮತ್ತು ತೆರಿಗೆಯೇತರ ಆದಾಯ ಹೆಚ್ಚಿಸಲು ಕ್ರಮ.

* 800 ಆಸ್ತಿಗಳ ಟೋಟಲ್‌ ಸ್ಟೇಷನ್‌ ಸರ್ವೆ

* ಸೈನಿಕರ ಕುಟುಂಬಕ್ಕೆ ಶೇ 100 ತೆರಿಗೆ ವಿನಾಯಿತಿ ನೀಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವ.

* ಆಸ್ತಿ ತೆರಿಗೆ ಮತ್ತು ಕರಗಳು ಸೇರಿದಂತೆ ಒಟ್ಟು ₹3,317 ಕೋಟಿ ವರಮಾನ ನಿರೀಕ್ಷೆ

ಜಾಹೀರಾತು ಬೈಲಾ ತಿದ್ದುಪಡಿ

* ಖಾಸಗಿ ಅನಧಿಕೃತ ಜಾಹೀರಾತು ಮತ್ತು ಇತರ ಫಲಕಗಳ ನಿಯಂತ್ರಣಕ್ಕಾಗಿ ಜಾಹೀರಾತು ಬೈಲಾ ತಿದ್ದುಪಡಿ

* ಪಾಲಿಕೆ ಒಡೆತನದ ಎಲ್ಲ ಜಾಹೀರಾತು ಫಲಕಗಳ ನಿರ್ವಹಣೆ ಖಾಸಗಿ ಏಜೆನ್ಸಿಗೆ ವಹಿಸಲು ಟೆಂಡರ್‌

* ಅನಧಿಕೃತ ಜಾಹೀರಾತು ಫಲಕ ಮತ್ತು ಹೋರ್ಡಿಂಗ್‌ಗೆ ದಂಡ ವಿಧಿಸಿ, ತೆರವಿಗೆ ಕ್ರಮ.

* ಜಾಹೀರಾತು ತೆರಿಗೆ ಬಾಕಿ ಸಂಗ್ರಹಕ್ಕೆ ಕ್ರಮ, ವ್ಯಾಜ್ಯ ಇತ್ಯರ್ಥಕ್ಕೆ ನುರಿತ ವಕೀಲರ ನೇಮಕ

* ಜಾಹೀರಾತು ತೆರಿಗೆಯಿಂದ ₹75.25 ಕೋಟಿ ಆದಾಯದ ನಿರೀಕ್ಷೆ.

 

ಸುಧಾರಣಾ ಶುಲ್ಕದಿಂದ ₹300 ಕೋಟಿ ನಿರೀಕ್ಷೆ

* ಭೂ ಪರಿವರ್ತನೆಯಾಗಿರುವ ಸ್ವತ್ತುಗಳಿಂದ ಸುಧಾರಣಾ ಶುಲ್ಕ ಸಂಗ್ರಹ, ಬಾಕಿ ಇರುವ ₹300 ಕೋಟಿ ವಸೂಲಾತಿಗೆ ಕ್ರಮ.

* ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಟ್ಟಡಗಳ ಮೇಲಿನ ಸೇವಾ ಶುಲ್ಕ ಹಾಗೂ ಆಸ್ತಿ ತೆರಿಗೆ

ವಿನಾಯಿತಿ ಹೊಂದಿರುವ ಶಿಕ್ಷಣ ಸಂಸ್ಥೆಗಳಿಂದ ಸೇವಾ ಶುಲ್ಕ ಸಂಗ್ರಹಣೆ– ಪ್ರಸಕ್ತ ಸಾಲಿನಲ್ಲಿ ₹60 ಕೋಟಿ ಆದಾಯ ನಿರೀಕ್ಷೆ.

* ಅಂಗಡಿ ಮತ್ತು ಮಾರುಕಟ್ಟೆಗಳ ಬಾಡಿಗೆಯನ್ನು ಪರಿಷ್ಕರಣೆ.  ಬಾಡಿಗೆ ರೂಪದಲ್ಲಿ ₹90 ಕೋಟಿ ವರಮಾನ ನಿರೀಕ್ಷೆ.

* ವಾಣಿಜ್ಯ ಸಂಕೀರ್ಣಗಳ ವಾಹನ ನಿಲ್ದಾಣಗಳ ಶುಲ್ಕದಿಂದ ₹4.5 ಕೋಟಿ ವರಮಾನ ನಿರೀಕ್ಷೆ.

* ವ್ಯಾಪಾರ ಪರವಾನಗಿಯಿಂದ ₹ 57 ಕೋಟಿ ಆದಾಯ ನಿರೀಕ್ಷೆ


ಕಲ್ಯಾಣ ಕಾರ್ಯಕ್ರಮಗಳು‌

ಪೌರಕಾರ್ಮಿಕರಿಗೆ

* ಪೌರಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‌ ಮೂಲಕ ಬಿಸಿಯೂಟ

* ‘ಸುರಕ್ಷಿತ ಸಾಧನಗಳ ಕಿಟ್’ ವಿತರಣೆ

* ಕಲ್ಯಾಣ ವಿಭಾಗದ ವೈಯಕ್ತಿಕ ಕಾರ್ಯಕ್ರಮಗಳ ಫಲಾನುಭವಿಗಳನ್ನು ಗುರುತಿಸಲು ಮತ್ತು ಅನುದಾನ ದುರುಪಯೋಗ ತಡೆಯಲು ಆಧಾರ್ ಸಂಖ್ಯೆ ಜೋಡಣೆ

* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಂಟಿ ಮನೆಯ ಅನುದಾನವನ್ನು ₹4 ಲಕ್ಷದಿಂದ ₹6 ಲಕ್ಷಕ್ಕೆ ಹೆಚ್ಚಳ. ಇದಕ್ಕಾಗಿ ₹80 ಕೋಟಿ ಮೀಸಲು.

* ಒಂಟಿ ಮನೆಗೆ ವಾರ್ಡ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳು ಸಿಗದಿದ್ದರೆ ಆ ವಿಧಾನಸಭಾ ಕ್ಷೇತ್ರದ ಉಳಿದ ವಾರ್ಡ್‌ನಿಂದ ಫಲಾನುಭವಿ ಆಯ್ಕೆಗೆ ಅವಕಾಶ.

* ಪೌರಕಾರ್ಮಿಕರಿಗಾಗಿ ಪುಲಕೇಶಿನಗರ ವಾರ್ಡ್‍ನಲ್ಲಿ ‘ಅಂಬೇಡ್ಕರ್ ಸಮುದಾಯ ಭವನ’ ನಿರ್ಮಿಸಲು ₹5 ಕೋಟಿ

* ಯಲಹಂಕದ ‘ಬಸವಲಿಂಗಪ್ಪ ಸಮಾಧಿ’ ಅಭಿವೃದ್ಧಿಗೆ ₹50 ಲಕ್ಷ

* ಪರಿಶಿಷ್ಟ ಜಾತಿ ಮತ್ತು ಪಂಗಡದವರು ವಾಸಿಸುತ್ತಿರುವ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ₹110 ಕೋಟಿ

* ಕೌಶಲ ಅಭಿವೃದ್ಧಿ ತರಬೇತಿಗೆ ₹5 ಕೋಟಿ

* ಪರಿಶಿಷ್ಟ ಜಾತಿ ಮತ್ತು ಪಂಗಡದ ಪೌರ ಕಾರ್ಮಿಕರು ಹಾಗೂ ಡಿ ಗ್ರೂಪ್‍ನ ಕಾಯಂ, ಗುತ್ತಿಗೆ ನೌಕರರ ಮಕ್ಕಳ ಶಿಕ್ಷಣದ ನೆರವಿಗೆ  ₹9 ಕೋಟಿ

ಒಂಟಿ ಮನೆ ಅನುದಾನ ಹೆಚ್ಚಳ

ಆರ್ಥಿಕವಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಒಂಟಿ ಮನೆ ಅನುದಾನ ₹ 4 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ. ಇದಕ್ಕಾಗಿ ₹47 ಕೋಟಿ ಮೀಸಲು.ಕೊಳಚೆ ಪ್ರದೇಶದ ನಿವಾಸಿಗಳಿಗೆ ಶಾಶ್ವತ ವಸತಿ ಒದಗಿಸಲು ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ವಸತಿ ಸಮುಚ್ಚಯ ನಿರ್ಮಾಣ

ಅಂಗವಿಕಲರ ಕಲ್ಯಾಣಕ್ಕಾಗಿ ₹63 ಕೋಟಿ

ಪಾಲಿಕೆ ವ್ಯಾಪ್ತಿಯಲ್ಲಿರುವ ಅಂಗವಿಕಲರ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ ₹63 ಕೋಟಿ ಮೀಸಲಿರಿಸಲಾಗಿದೆ. ಸ್ವಯಂ ಉದ್ಯೋಗಕ್ಕಾಗಿ ಆರ್ಥಿಕ ಸಹಾಯ, ಜೈಪುರ ಕಾಲು ಜೋಡಣೆ, ಮೂರು ಚಕ್ರ ವಾಹನಗಳು, ವಾಕರ್‍ಗಳನ್ನು ನೀಡುವುದು, ವೈದ್ಯಕೀಯ ಸಹಾಯ, ಶಿಕ್ಷಣ ಶುಲ್ಕ ಮರುಪಾವತಿ, ಬುದ್ಧಿಮಾಂದ್ಯ ಮಕ್ಕಳಿಗೆ ಪ್ರೋತ್ಸಾಹ, ಕ್ರೀಡಾ ಪ್ರೋತ್ಸಾಹ, ಪಾಲಿಕೆಯ ಎಲ್ಲಾ ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ರ‍್ಯಾಂಪ್‌ ನಿರ್ಮಿಸುವುದು, ವಾಕಿಂಗ್ ಸ್ಟಿಕ್‍ಗಳ ವಿತರಣೆ, ಶ್ರವಣ ಸಾಧನ ಹಾಗೂ ಅಂಧರಿಗೆ ಕನ್ನಡಕಗಳನ್ನು ನೀಡಲಾಗುತ್ತದೆ.ಮಹಿಳಾ ಕಾರ್ಯಕ್ರಮ: ಪ್ರತಿ ವಾರ್ಡ್‌ಗೆ ₹10 ಲಕ್ಷ

* ಮಹಿಳೆಯರ ಕಲ್ಯಾಣ ಕಾರ್ಯಕ್ರಮಗಳ ಅಂಗವಾಗಿ (ಕಾಮಗಾರಿ ಹೊರತುಪಡಿಸಿ) ಆರೋಗ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌, ಮಹಿಳೆಯರಿಗೆ ಹೊಲಿಗೆ ಯಂತ್ರ, ನಿಟ್ಟಿಂಗ್‌ ಮತ್ತು ಎಂಬ್ರಾಯಿಡರಿ ಯಂತ್ರ ನೀಡಲು  ಹಾಗೂ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರತಿ ವಾರ್ಡ್‌ಗೆ ₹10 ಲಕ್ಷ

 

ಹಿರಿಯ ನಾಗರಿಕರ ಕಾರ್ಯಕ್ರಮ:

* ಹಿರಿಯ ನಾಗರಿಕರಿಗಾಗಿ ಲಭ್ಯವಿರುವ ಕಡೆಗಳಲ್ಲಿ ವಿಶ್ರಾಂತಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಕೊಠಡಿಗಳನ್ನು ನಿರ್ಮಿಸಲು ₹3 ಕೋಟಿ

* ಪ್ರತಿ ವಾರ್ಡ್‌ನಲ್ಲಿ 100 ಹಿರಿಯ ನಾಗರಿಕರಿಗೆ ಆಧಾರ್ ಸಂಖ್ಯೆ ಆಧಾರದ ಮೇಲೆ ವಾಕಿಂಗ್‌ ಸ್ಟಿಕ್‌ ವಿತರಣೆ.

* ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವ ಬಡ ಹಿರಿಯ ನಾಗರಿಕರಿಗೆ ಪಾಲಿಕೆಯ ಆಸ್ಪತ್ರೆಗಳಲ್ಲಿ ಮಾತ್ರೆಗಳ ಉಚಿತ  ವಿತರಣೆ

ಲೈಂಗಿಕ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ₹1 ಕೋಟಿ

* ಉಚಿತ ಲಘುವಾಹನ ತರಬೇತಿ, ಸ್ವಯಂ ಉದ್ಯೋಗಕ್ಕಾಗಿ ತಳ್ಳುಗಾಡಿ ವಿತರಣೆ, ಉಚಿತ ಬಸ್ ಪಾಸ್, ಶಿಕ್ಷಣ ಮತ್ತು ಸ್ವಾವಲಂಬನೆಗೆ ಆರ್ಥಿಕ ಸಹಾಯಕ್ಕಾಗಿ ಒಟ್ಟು ₹1 ಕೋಟಿ ಮೀಸಲು.

‌‌

ಸಾಮಾನ್ಯ ವರ್ಗದವರ ಕಲ್ಯಾಣ:

* ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರ ಒಂಟಿ ಮನೆ ಅನುದಾನ ₹4 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಳ. ಇದಕ್ಕಾಗಿ ₹8 ಕೋಟಿ ಮೀಸಲು.

* ಶವವನ್ನು ಸಂರಕ್ಷಿಸಲು ಪಾಲಿಕೆಯಿಂದ ಬಾಡಿಗೆರಹಿತ ಫ್ರೀಜರ್ ವ್ಯವಸ್ಥೆ.  ಪ್ರತಿ ವಲಯಕ್ಕೆ 5ರಂತೆ ಒಟ್ಟು 40 ಫ್ರೀಸರ್‌ಗಳನ್ನು ಒದಗಿಸಲು ₹2 ಕೋಟಿ

* ನಿರಾಶ್ರಿತರ ರಾತ್ರಿ ತಂಗುದಾಣ ಕಟ್ಟಡಗಳ ಉನ್ನತೀಕರಣ ಮತ್ತು ನಿರ್ವಹಣೆಗಾಗಿ ₹2.5 ಕೋಟಿ

 

400 ಕಡೆಗಳಲ್ಲಿ ವೈ–ಫೈ

ರಾಜಧಾನಿಯನ್ನು ವೈ–ಫೈ ನೆಟ್‌ವರ್ಕ್‌ ನಗರವನ್ನಾಗಿಸಲು ರಾಜ್ಯ ಸರ್ಕಾರದ ನೆರವಿನಿಂದ ಮೊದಲ ಹಂತದಲ್ಲಿ ಪ್ರಮುಖ ರಸ್ತೆಗಳು, ಪಾಲಿಕೆ ಕಚೇರಿಗಳು, ಬಸ್‌ ನಿಲ್ದಾಣಗಳು ಸೇರಿದಂತೆ 400 ಸ್ಥಳಗಳಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗುತ್ತದೆ.

ಯಾರು ಏನಂತಾರೆ...

ಟ್ಯಾಬ್ ಕೊಡುವುದು ಸಮಂಜಸವಲ್ಲ

ಪಾಲಿಕೆ ವತಿಯಿಂದ ಎಲ್ಲ ಸದಸ್ಯರಿಗೆ ತೆರಿಗೆದಾರರ ಹಣದಿಂದ ಟ್ಯಾಬ್ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸಮಂಜಸ? ಎಲ್ಲ ಸದಸ್ಯರು ಆಂಡ್ರ್ಯಾಯ್ಡ್‌ ಅಥವಾ ಐಫೋನ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಸ್ಮಾರ್ಟ್‌ ಫೋನ್‌ಗಳಲ್ಲೇ ಇ–ಮೇಲ್ ಕೂಡ ಮಾಡುತ್ತಿದ್ದಾರೆ. ಟ್ಯಾಬ್ ನೀಡುವುದು ತೆರಿಗೆದಾರರ ಹಣವನ್ನು ದುರುಪಯೋಗ ಮಾಡಿಕೊಂಡಂತಾಗುತ್ತದೆ.

ಉದಯ್ ಕುಮಾರ್ ಸಿಂಗ್, ವಕೀಲ

‘ಇದು ಚುನಾವಣಾ ಬಜೆಟ್‌’

ಚುನಾವಣೆಯನ್ನು ಗುರಿಯಾಗಿ ಇಟ್ಟುಕೊಂಡು ಬಜೆಟ್‌ ಮಂಡಿಸಲಾಗಿದೆ. ಏರ್‌ ಆಂಬುಲೆನ್ಸ್‌, ವೈ–ಫೈ ಸೌಲಭ್ಯದಿಂದ ಯಾವುದೇ ಉಪಯೋಗವಿಲ್ಲ. ನಾಗರಿಕರ ಬದುಕು ಚೆನ್ನಾಗಿರಬೇಕಾದರೆ ವಾಯು, ಜಲಮಾಲಿನ್ಯವನ್ನು ತಡೆಗಟ್ಟಬೇಕು. ಗಿಡ ನೆಟ್ಟು, ಪೋಷಿಸಲು ಮತ್ತಷ್ಟು ಆದ್ಯತೆ ನೀಡಬೇಕಿತ್ತು.

ರೂಪಾರಾಣಿ, ಇಂಗ್ಲಿಷ್‌ ಉಪನ್ಯಾಸಕಿ

‘ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು’

ಕೆರೆಗಳ ಅಭಿವೃದ್ಧಿಗೆ ಕಡಿಮೆ ಅನುದಾನ ಒದಗಿಸಲಾಗಿದೆ. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದು ಒಳ್ಳೆಯ ನಡೆ. ವಾಹನ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿಗತಿಯಲ್ಲಿ ಪೂರ್ಣಗೊಳಿಸಬೇಕು.

ಭರತ್‌ ಚಕ್ರವರ್ತಿ, ಉಪನ್ಯಾಸಕ

ಮಳೆನೀರು ಸಂಗ್ರಹಕ್ಕೆ ಒತ್ತು

ವೈಫೈ ಬದಲಿಗೆ ಮೂಲಸೌಕರ್ಯ ಒದಗಿಸಲು ಗಮನ ಹರಿಸಬೇಕಿತ್ತು. ಮಳೆನೀರು ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಆದರೆ, ರಾಜಕಾಲುವೆ ಕಾಮಗಾರಿಗಳಿಗೆ ವೇಗ ನೀಡಬೇಕಿದೆ.

ಕಿನ್ನರ ಆರಾಧ್ಯ, ಎಂ.ಎ. ವಿದ್ಯಾರ್ಥಿ

ಕಂದಾಯ ಜಾಗೃತ ದಳ ಸ್ವಾಗತಾರ್ಹ

ಪಾಲಿಕೆಯ ಸಂಪನ್ಮೂಲ ಪತ್ತೆ ಹಚ್ಚಿ ತೆರಿಗೆ ಹಾಗೂ ತೆರಿಗೆಯೇತರ ಆದಾಯ ಹೆಚ್ಚಿಸಲು ಕಂದಾಯ ಜಾಗೃತದಳ ಸ್ಥಾಪಿಸಿರುವುದು ಸ್ವಾಗತಾರ್ಹ. ಜತೆಗೆ ಜಾಗೃತ ದಳಕ್ಕೆ ತಿಂಗಳವಾರು ನಿರ್ದಿಷ್ಟ ಗುರಿ ನೀಡಿ, ತೆರಿಗೆ ಸಂಗ್ರಹ ಹೆಚ್ಚಿಸಬೇಕು

ಎಚ್.ಎಸ್.ರಾಘವೇಂದ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry