‘ಕಚೇರಿ ಮುಂದೆ ಜಲ್ಲಿ ಸುರಿದು ಪ್ರತಿಭಟನೆ’

7

‘ಕಚೇರಿ ಮುಂದೆ ಜಲ್ಲಿ ಸುರಿದು ಪ್ರತಿಭಟನೆ’

Published:
Updated:
‘ಕಚೇರಿ ಮುಂದೆ ಜಲ್ಲಿ ಸುರಿದು ಪ್ರತಿಭಟನೆ’

ಬೆಂಗಳೂರು: ‘ಎರಡು ದಿನಗಳಲ್ಲಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಜಲ್ಲಿ ಕಲ್ಲು ಸುರಿದು ಪ್ರತಿಭಟನೆ ಮಾಡುತ್ತೇವೆ’ ಎಂದು ಕಲ್ಲು ಕ್ವಾರಿ ಹಾಗೂ ಕ್ರಷರ್ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸಂಜೀವ ಹಟ್ಟಿಹೊಳೆ ಎಚ್ಚರಿಕೆ ನೀಡಿದರು.

ಬುಧವಾರ ಬೆಳಿಗ್ಗೆ ನಗರದ ಆನಂದರಾವ್ ವೃತ್ತದಲ್ಲಿ ಜಮಾಯಿಸಿದ್ದ ಒಕ್ಕೂಟದ ಸದಸ್ಯರು, ರಸ್ತೆ ಮಧ್ಯೆ ಜಲ್ಲಿ ರಾಶಿ ಸುರಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಹಟ್ಟಿಹೊಳೆ, ‘ಗುತ್ತಿಗೆ ನವೀಕರಣಕ್ಕೆ ಇರುವ ಕಾನೂನು ತೊಡಕು ಸರಿಪಡಿಸುವಂತೆ ಒತ್ತಾಯಿಸಿ ‌ಒಂದು ವಾರದಿಂದ ಕ್ರಷರ್‌ಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಸರ್ಕಾರ ನಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸದಂತೆ ಕಾಣುತ್ತಿಲ್ಲ. ಹೀಗಾಗಿ, ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ, ‘ಮುಷ್ಕರದಿಂದಾಗಿ ರಾಜ್ಯದಾದ್ಯಂತ ಸುಮಾರು 2 ಲಕ್ಷ ಟಿಪ್ಪರ್‌ಗಳು ಕೆಲಸ ಇಲ್ಲದೆ ನಿಂತಿವೆ. ಲಕ್ಷಾಂತರ ಕಾರ್ಮಿಕರ ಬದುಕು ದುಸ್ತರವಾಗಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ, ಹೆದ್ದಾರಿಗಳ ಮಧ್ಯೆ ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಗುತ್ತಿಗೆದಾರರಿಗೆ ಸಂಕಷ್ಟ

‘ಮುಷ್ಕರದಿಂದಾಗಿ ಜಲ್ಲಿ ಮತ್ತು ಮರಳು ಪೂರೈಕೆಯಾಗದೆ ರಾಜ್ಯದ ಎಲ್ಲ ಸಿವಿಲ್ ಕಾಮಗಾರಿಗಳೂ ಸ್ಥಗಿತಗೊಂಡಿವೆ. ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಪರಿಸ್ಥಿತಿ ಮತ್ತಷ್ಟು ವಿಷಮವಾಗಲಿದೆ. ಗುತ್ತಿಗೆದಾರರ ಸಂಕಷ್ಟ ನಿವಾರಣೆಗೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದೇವೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ರವೀಂದ್ರ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry