30 ಕ್ಷೇತ್ರಗಳಲ್ಲಿ ಕಮಲ ಜಾತ್ರೆ: ಲಿಂಬಾವಳಿ

7

30 ಕ್ಷೇತ್ರಗಳಲ್ಲಿ ಕಮಲ ಜಾತ್ರೆ: ಲಿಂಬಾವಳಿ

Published:
Updated:

ಬೆಂಗಳೂರು: ಗ್ರಾಮೀಣ ಮತದಾರರನ್ನು ಪಕ್ಷದ ಕಡೆಗೆ ಸೆಳೆಯುವ ಉದ್ದೇಶದಿಂದ 30ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ದಿನ ‘ಕಮಲ ಜಾತ್ರೆ’ ನಡೆಸಲು ಬಿಜೆಪಿ ಮುಂದಾಗಿದೆ.

15 ಲಕ್ಷ ಮತದಾರರನ್ನು ನೇರವಾಗಿ ತಲುಪುವ ಆಶಯದಿಂದ ಗ್ರಾಮೀಣ ಪ್ರದೇಶಗಳಲ್ಲಿ ಮಾರ್ಚ್‌ 2ರಿಂದ 4ವರೆಗೆ ಜಾತ್ರೆ ಏರ್ಪಡಿಸಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮಾಧ್ಯಮಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಕ್ರಮಗಳನ್ನು ತಲುಪಿಸುವುದು. ಮನರಂಜನೆಯ ಜತೆ ಮಾಹಿತಿ ಹಂಚಿಕೊಳ್ಳುವುದು ಹಾಗೂ ರಾಜಕೀಯವಾಗಿ ಎಲ್ಲ ಸಮುದಾಯಗಳನ್ನು ತೊಡಗಿಸಿಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಅವರು ವಿವರಿಸಿದರು.

ರಾಷ್ಟ್ರ ನಿರ್ಮಾಣದ ಕುರಿತು ಬಿಜೆಪಿಯ ಸಂಕಲ್ಪ, ಕಾರ್ಯಕ್ರಮಗಳ ಪರಿಚಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಪ್ರದರ್ಶನಕ್ಕಾಗಿ ಸಂಚಾರಿ ಥಿಯೇಟರ್‌, ಪ್ರದರ್ಶನ ಮಳಿಗೆಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಮೋದಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಕಟೌಟ್‌ಗಳ ಪಕ್ಕ ನಿಂತು ಸೆಲ್ಫಿ ತೆಗೆಸಿಕೊಳ್ಳಲು ಸೆಲ್ಫಿ ಝೋನ್ ಇರಲಿದೆ ಎಂದು ಹೇಳಿದರು.

ಮಲ್ಲಕಂಬ ಸ್ಪರ್ಧೆ, ಮ್ಯೂಸಿಕಲ್ ಚೇರ್‌, ಗಾಯನ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಜಾತ್ರೆ ಅಂಗವಾಗಿ ಏರ್ಪಡಿಸಲಾಗುತ್ತದೆ. ಬಿಜೆಪಿ ಬಗ್ಗೆ ಹೆಮ್ಮೆ ಮೂಡಿಸುವಂತೆ ಟ್ಯಾಟೂ ಮತ್ತು ಮೆಹಂದಿ ಹಚ್ಚುವ ಕಾರ್ಯಕ್ರಮ, ಮಕ್ಕಳ ಆಕರ್ಷಣೆಗೆ ಕಿಡ್ಸ್‌ ಝೋನ್‌, ಮೋದಿ ಮತ್ತು ಯಡಿಯೂರಪ್ಪ ಸಾಧನೆಗಳ ಕುರಿತ ಲೇಸರ್ ಶೋ ವ್ಯವಸ್ಥೆ ಮಾಡಲಾಗುತ್ತದೆ ಎಂದು ಲಿಂಬಾವಳಿ ತಿಳಿಸಿದರು.

ಭಾಲ್ಕಿ, ಯಾದಗಿರಿ, ರಾಯಚೂರು ಗ್ರಾಮೀಣ, ಗಂಗಾವತಿ, ಹಗರಿಬೊಮ್ಮನಹಳ್ಳಿ, ನಂಜನಗೂಡು, ತುಮಕೂರು ಗ್ರಾಮೀಣ, ದೊಡ್ಡಬಳ್ಳಾಪುರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈ ಜಾತ್ರೆ ನಡೆಯಲಿದೆ ಎಂದು ಹೇಳಿದರು.

 

ಮಾ.10ಕ್ಕೆ ಐ.ಟಿ ಪರಿಣಿತರ ಸಮಾವೇಶ

ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರದ ಮುಖ್ಯಸ್ಥರು ಹಾಗೂ ತಂತ್ರಜ್ಞರ ಸಮಾವೇಶವನ್ನು ಮಾ. 10ರಂದು ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಲಿಂಬಾವಳಿ ತಿಳಿಸಿದರು.

ಕೇಂದ್ರ ಐ.ಟಿ ಸಚಿವ ರವಿಶಂಕರ ಪ್ರಸಾದ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮೊದಲ ಗೋಷ್ಠಿಯಲ್ಲಿ 250 ಐ.ಟಿ ಕಂಪನಿಗಳ ಸಿಇಒಗಳು ಹಾಗೂ ಎರಡನೇ ಗೋಷ್ಠಿಯಲ್ಲಿ 3,000ಕ್ಕೂ ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರಿಗೆ ಐ.ಟಿ ರಾಜಧಾನಿ ಎಂಬ ಹೆಸರನ್ನು ಉಳಿಸುವುದು ಹಾಗೂ ಐ.ಟಿ ಕ್ಷೇತ್ರದ ಅಭಿವೃದ್ಧಿಗಾಗಿ ರೂಪಿಸಬೇಕಾದ ಯೋಜನೆಗಳ ಬಗ್ಗೆ ಈ ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry