ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ಚಾಲಿತ ವಿದ್ಯುತ್‌ ವಿತರಣಾ ವ್ಯವಸ್ಥೆಗೆ ಚಾಲನೆ

Last Updated 28 ಫೆಬ್ರುವರಿ 2018, 20:24 IST
ಅಕ್ಷರ ಗಾತ್ರ

ಬೆಂಗಳೂರು: ಬೆಸ್ಕಾಂನಲ್ಲಿ ಸ್ಥಾಪಿಸಲಾಗಿರುವ ‘ಸ್ವಯಂ ಚಾಲಿತ ವಿದ್ಯುತ್‌ ವಿತರಣೆ’ ವ್ಯವಸ್ಥೆಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಬುಧವಾರ ಚಾಲನೆ ನೀಡಿದರು.

ವಿದ್ಯುತ್‌ ವಿತರಣಾ ಉಪಕೇಂದ್ರಗಳ ಮೇಲ್ವಿಚಾರಣೆ ಹಾಗೂ ನಿಯಂತ್ರಣ ಸುಧಾರಿಸಲು ಸ್ವಯಂಚಾಲಿತ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಈ ರೀತಿಯ ವ್ಯವಸ್ಥೆ ಹೊಂದಿರುವ ದೇಶದ ಮೊದಲ ನಗರ ಇದಾಗಿದೆ ಎಂದು ಸಚಿವರು ತಿಳಿಸಿದರು.

ಪೋರ್ಚುಗಲ್‌ನ ‘ಎಫಸೆಕ್’ ಸಂಸ್ಥೆಯ ತಂತ್ರಜ್ಞಾನ ಬಳಸಿಕೊಂಡು ಈ ಯೋಜನೆ ರೂಪಿಸಲಾಗಿದೆ. ಜೈಕಾದಿಂದ ಇದಕ್ಕೆ ₹ 563 ಕೋಟಿ ಸಾಲ ದೊರೆತಿದೆ. ಮೊದಲ ಹಂತವಾಗಿ ಎಚ್‌ಎಸ್‌ಆರ್‌ ಬಡಾವಣೆ ವ್ಯಾಪ್ತಿಯಲ್ಲಿ ಈ ವ್ಯವಸ್ಥೆ ಆರಂಭಿಸಲಾಗಿದೆ. ಉಳಿದ 11 ವಿಭಾಗಗಳಲ್ಲಿಯೂ ವಿತರಣಾ ಜಾಲದ ನಕ್ಷೆ ರೂಪುಗೊಂಡಿದೆ. ಶೀಘ್ರದಲ್ಲಿ ಅವುಗಳು ಸ್ವಯಂಚಾಲಿತ ವ್ಯವಸ್ಥೆಗೆ ಒಳಪಡಲಿವೆ ಎಂದು ವಿವರಿಸಿದರು.

‘ದೂರದಿಂದಲೇ ಸಂವಹನ ನಡೆಸುವ 3,130 ಸ್ಥಳಗಳನ್ನು ಗುರುತಿಸಿದ್ದೇವೆ. ಈ ಮೂಲಕ ದೊರೆತ ಮಾಹಿತಿಯು ನಿಯಂತ್ರಣ ಕೇಂದ್ರಕ್ಕೆ ಬರುತ್ತದೆ. ಇಲ್ಲಿ ವಿವಿಧ ಪ್ರಕ್ರಿಯೆಗಳನ್ನು ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ. ಅದನ್ನು ನಮ್ಮ ಸಿಬ್ಬಂದಿ ಮೂಲಕ ಕಾರ್ಯಗತಗೊಳಿಸಲಾಗುವುದು’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ವಿವರಿಸಿದರು.

ಈ ವ್ಯವಸ್ಥೆಯ ಮೂಲಕ ಫೀಡರ್‌ ಜಾಲದಿಂದ ಎಷ್ಟು ವಿದ್ಯುತ್‌ ಸರಬರಾಜಾಗುತ್ತಿದೆ ಎಂಬ ಕ್ಷಣ ಕ್ಷಣದ ಮಾಹಿತಿ ತಿಳಿಯಬಹುದು. ಯಾವ ಉಪಕೇಂದ್ರದಿಂದ, ಯಾವ ದಿಕ್ಕಿನಲ್ಲಿ, ಎಷ್ಟು ವಿದ್ಯುತ್‌ ಪ್ರವಹಿಸುತ್ತಿದೆ ಎನ್ನುವ ಮಾಹಿತಿ ಕುಳಿತಲ್ಲೇ ಸಿಗುತ್ತದೆ ಎಂದರು.

ಈ ವ್ಯವಸ್ಥೆ ಅಳವಡಿಸುವ ಮುನ್ನ, ದೋಷ ಎಲ್ಲಿದೆ ಎಂದು ಹುಡುಕುವುದಕ್ಕೆ ಸಾಕಷ್ಟು ಸಮಯ ವ್ಯರ್ಥವಾಗುತ್ತಿತ್ತು. ಈಗ ಈ ಮಾಹಿತಿ ತಕ್ಷಣಕ್ಕೆ ಸಿಗುತ್ತದೆ. ಇದರಿಂದ ದುರಸ್ತಿ ಸಮಯ ಉಳಿಯುತ್ತದೆ ಎಂದು ತಿಳಿಸಿದರು.

‘ಯಾವುದಾದರೂ ಒಂದು ಟ್ರಾನ್ಸ್‌ಫಾರ್ಮ್‌ನಲ್ಲಿ ತೊಂದರೆ ಉಂಟಾಗಿದ್ದರೆ, ಅದಕ್ಕೆ ಸಂಪರ್ಕಗೊಂಡ ಎಲ್ಲಾ ಜಾಲದಲ್ಲಿಯೂ ವಿದ್ಯುತ್‌ ಕಡಿತವಾಗುತ್ತಿತ್ತು. ಅದನ್ನು ದುರಸ್ತಿ ಮಾಡುವವರೆಗೂ ಆ ಎಲ್ಲ ಪ್ರದೇಶಗಳಲ್ಲೂ ಪೂರೈಕೆ ವ್ಯತ್ಯಯವಾಗುತ್ತಿತ್ತು. ಇನ್ನು ಮುಂದೆ ಹಾಗಾಗದು. ಸಮಸ್ಯೆ ಇರುವ ಟ್ರಾನ್‌ಫಾರ್ಮ್‌ ಅನ್ನು ತಕ್ಷಣ ಗುರುತಿಸಿ, ಅಲ್ಲಿಗೆ ಸಂಪರ್ಕ ಕಡಿತಗೊಳಿಸಿ, ಉಳಿದ ಕಡೆಗಳಿಗೆ ಪೂರೈಕೆ ಮುಂದುವರಿಸಲಾಗುತ್ತದೆ’ ಎಂದು ವಿವರಿಸಿದರು.

ಅಂಕಿಅಂಶ

11 ಕಿಲೋ ವಾಟ್‌

ವಿತರಣಾ ಜಾಲ

120

ಫೀಡರ್‌ಗಳ ಸಂಖ್ಯೆ

5 ಲಕ್ಷ

ಎಚ್‌ಎಸ್‌ಆರ್ ಬಡಾವಣೆಯ ಗ್ರಾಹಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT