ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಮೋಸ ಬಯಲು

Last Updated 28 ಫೆಬ್ರುವರಿ 2018, 20:35 IST
ಅಕ್ಷರ ಗಾತ್ರ

ನವದೆಹಲಿ: ಮತ್ತೊಂದು ಬಹುಕೋಟಿ ಬ್ಯಾಂಕ್‌ ವಂಚನೆ ಪ್ರಕರಣ ಬಯಲಾಗಿದೆ. ಕೋಲ್ಕತ್ತದ ಕಂಪ್ಯೂಟರ್‌ ತಯಾರಿಕಾ ಕಂಪನಿ ಮೆ. ಆರ್‌.ಪಿ. ಇನ್ಫೊ ಸಿಸ್ಟಮ್ಸ್‌ ವಿರುದ್ಧ ಕೆನರಾ ಬ್ಯಾಂಕ್‌ ನೇತೃತ್ವದ ಬ್ಯಾಂಕುಗಳ ಒಕ್ಕೂಟವು ₹515.15 ಕೋಟಿ ವಂಚನೆ ಪ‍್ರಕರಣದ ದಾಖಲಿಸಿದೆ.

ಒಂದು ತಿಂಗಳ ಅವಧಿಯಲ್ಲಿ ದಾಖಲಾದ ಐದನೇ ಬಹುಕೋಟಿ ಬ್ಯಾಂಕ್ ವಂಚನೆ ಹಗರಣ ಇದಾಗಿದೆ. ಮೊದಲಿಗೆ ಆಭರಣ ವ್ಯಾಪಾರಿ ನೀರವ್‌ ಮೋದಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹12,636 ಕೋಟಿ ವಂಚಿಸಿದ ಪ್ರಕರಣ ಬಯಲಾಗಿತ್ತು.

ಹತ್ತು ಬ್ಯಾಂಕುಗಳ ಒಕ್ಕೂಟವು ಈ ಸಾಲ ನೀಡಿತ್ತು. ಆರ್‌.ಪಿ. ಇನ್ಫೊ ಸಿಸ್ಟಮ್ಸ್‌ನ ನಿರ್ದೇಶಕರಾದ ಶಿವಾಜಿ ಪಂಜಾ, ಕೌಸ್ತವ್‌ ರಾಯ್‌ ಮತ್ತು ವಿಜಯ್‌ ಬಾಫ್ನಾ, ಉಪಾಧ್ಯಕ್ಷ ದೇವನಾಥ್‌ ಪಾಲ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಈ ಕಂಪನಿಯು ‘ಚಿರಾಗ್‌’ ಎಂಬ ಬ್ರ್ಯಾಂಡ್‌ನಲ್ಲಿ ಡೆಸ್ಕ್‌ಟಾಪ್‌ ಮತ್ತು ಲ್ಯಾಪ್‌ಟಾಪ್‌ಗಳನ್ನು ತಯಾರಿಸುತ್ತಿತ್ತು. ಕಂಪ್ಯೂಟರ್‌ ದುರಸ್ತಿ, ನೆಟ್‌ವರ್ಕಿಂಗ್‌ ಮುಂತಾದ ಸೇವೆಗಳನ್ನೂ ಒದಗಿಸುತ್ತಿತ್ತು. ದೇಶದ ವಿವಿಧ ಭಾಗಗಳಲ್ಲಿ ಕಂಪನಿಯು ಶಾಖೆಗಳನ್ನು ಹೊಂದಿದೆ. 

ಉತ್ಪ್ರೇಕ್ಷಿತ ಷೇರು ಮೌಲ್ಯ, ಸುಳ್ಳು ದಾಖಲೆಗಳನ್ನು ಬಳಸಿಕೊಂಡು ಕಂಪನಿಯು ಸಾಲ ಪಡೆದುಕೊಂಡಿದೆ ಎಂದು ಕೆನರಾ ಬ್ಯಾಂಕ್‌ ಆರೋಪಿಸಿದೆ.

ಈ ಹಗರಣದಲ್ಲಿ ಕೆಲವು ಬ್ಯಾಂಕ್‌ ಅಧಿಕಾರಿಗಳು ಶಾಮೀಲಾಗಿರಬಹುದು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

2012ರಿಂದ ಈ ಕಂಪನಿಯ ಖಾತೆಯಲ್ಲಿದ್ದ ಹಣದ ಪ್ರಮಾಣ ಕಡಿಮೆಯಾಗುತ್ತಲೇ ಬಂದಿತ್ತು. ಮಾರಾಟ ಮತ್ತಿತರ ವಹಿವಾಟುಗಳಿಂದ ಬಂದ ಮೊತ್ತವನ್ನು ಈ ಕಂಪನಿ ಸಾಲ ಖಾತೆಗೆ ಹಾಕಿಲ್ಲ. ಬೇರೆ ಖಾತೆಯ ಮೂಲಕ ಈ ಹಣ ಪಡೆದು ವಂಚಿಸಿದ್ದಾರೆ. ಕಂಪನಿಗೆ ಬರಬೇಕಿರುವ ಮೊತ್ತವನ್ನು ಉತ್ಪ್ರೇಕಿಸಿ ಹೇಳಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಗೇಲ್‌ ಇಂಡಿಯಾ, ವಿನ್ಸೆಂಟ್‌ ಎಲೆಕ್ಟ್ರಾನಿಕ್ಸ್‌ (ರೂರ್ಕೆಲಾ) ಮತ್ತು ಸಿಯೆಟ್‌ ಲಿ. ಕಂಪನಿಗಳಿಂದ ಹಣ ಬರುವುದಕ್ಕಿದೆ ಎಂದು ಆರ್‌.ಪಿ. ಇನ್ಫೊ ಸಿಸ್ಟಮ್ಸ್‌ ಹೇಳಿತ್ತು. ಆದರೆ, ಆರ್‌.ಪಿ. ಇನ್ಫೊ ಸಿಸ್ಟಮ್ಸ್‌ ಜತೆಗೆ ತಮಗೆ ಯಾವುದೇ ವಹಿವಾಟು ಇಲ್ಲ ಎಂದು ಈ ಕಂಪನಿಗಳು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ ತಿಳಿಸಿದ್ದವು.

ಯಾರಿಗೆ ಎಷ್ಟು ಬಾಕಿ (₹ ಕೋಟಿಗಳಲ್ಲಿ)

ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ– 84.28

ಸ್ಟೇಟ್‌ ಬ್ಯಾಂಕ್‌ ಆಫ್‌ ಬಿಕಾನೆರ್‌ ಮತ್ತು ಜೈಪುರ– 77.41

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌– 73.12

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ– 71.62

ಅಲಹಾಬಾದ್‌ ಬ್ಯಾಂಕ್‌–  47.66

ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌– 42.13

ಕೆನರಾ ಬ್ಯಾಂಕ್‌– 40.50

ಸ್ಟೇಟ್‌ ಬ್ಯಾಂಕ್‌ ಆಫ್‌ ಪಟಿಯಾಲ– 40.13

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ– 28.30

ಫೆಡರಲ್‌ ಬ್ಯಾಂಕ್‌– 10.00

ಮಮತಾ ಬ್ಯಾನರ್ಜಿ ಆಪ್ತ?

ಆರೋಪಿಗಳಲ್ಲಿ ಒಬ್ಬರಾಗಿರುವ ಶಿವಾಜಿ ಪಂಜಾ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಎಂದು ಹೇಳಲಾಗಿದೆ. ಬ್ಯಾಂಕುಗಳಿಗೆ ವಂಚನೆ ಆರೋಪದಲ್ಲಿ ಹಿಂದೆ ಒಮ್ಮೆ ಇವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಮಮತಾ ಅವರು ಮೂರು ದಿನಗಳ ಪ್ರವಾಸಕ್ಕೆ ಹೋಗಿದ್ದಾಗ ಅವರ ಜತೆಗೆ ಪಂಜಾ ಇದ್ದರು. ಹಿಂದಿರುಗುವಾಗ ಪಂಜಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಪಶ್ಚಿಮ ಬಂಗಾಳ ಸರ್ಕಾರದ ವಿವಿಧ ಸಮಿತಿಗಳಿಗೆ ಇವರನ್ನು ನೇಮಿಸಲಾಗಿತ್ತು. ಅಲ್ಲಿನ ಕೈಗಾರಿಕಾ ಉತ್ತೇಜನ ಮಂಡಳಿಗೆ ಇವರು ಸಲಹೆಗಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT