4

ಚಿತ್ರೋತ್ಸವದಲ್ಲಿ ರಾಷ್ಟ್ರಗೀತೆ ಗಲಾಟೆ

Published:
Updated:

ಬೆಂಗಳೂರು: ರಾಷ್ಟ್ರಗೀತೆಗೆ ಗೌರವ ಸಲ್ಲಿಸಲಿಲ್ಲ ಎಂಬ ಕಾರಣಕ್ಕೆ ಗಲಾಟೆ ನಡೆದ ಘಟನೆಗೆ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಬುಧವಾರ ಸಾಕ್ಷಿಯಾಯಿತು.

ಒರಾಯನ್ ಮಾಲ್‌ನ ಹತ್ತನೇ ಪರದೆಯಲ್ಲಿ ಸಂಜೆ 6 ಗಂಟೆಗೆ ‘ದ ಸೀನ್‌ ಆ್ಯಂಡ್‌ ಅನ್‌ಸೀನ್‌’ ಸಿನಿಮಾ ಪ್ರದರ್ಶನ ಕಾಣಬೇಕಿತ್ತು. ಚಿತ್ರಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡಲಾಯಿತು. ಆದರೆ ಚಿತ್ರಮಂದಿರದ ಎಡಭಾಗದ ಸಾಲಿನಲ್ಲಿ ಕೂತಿದ್ದ ಮೂವರು ಎದ್ದುನಿಲ್ಲಲಿಲ್ಲ. ಇದಕ್ಕೆ ಮತ್ತೋರ್ವ ಪ್ರೇಕ್ಷಕ ಆಕ್ಷೇಪ ವ್ಯಕ್ತಪಡಿಸಿದಾಗ ಮಾತಿಗೆ ಮಾತು ಬೆಳೆದಿದೆ. ಎರಡು ಗುಂಪುಗಳಾಗಿ ಜಗಳ ವಿಕೋಪಕ್ಕೆ ಹೋಗಿ, ಕೈ ಕೈ ಮಿಲಾಯಿಸುವ ಹಂತ ತಲುಪಿದ್ದರಿಂದ ಚಿತ್ರಪ್ರದರ್ಶನವನ್ನು ಹತ್ತು ನಿಮಿಷಗಳ ಕಾಲ ಸ್ಥಗಿತಗೊಳಿಸಲಾಗಿತ್ತು.

ಸ್ವಯಂ ಸೇವಕರು ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಂತರ ಮತ್ತೆ ಪ್ರಾರಂಭದಿಂದ ಸಿನಿಮಾ ಪ್ರದರ್ಶನ ಮಾಡಲಾಯಿತು. ಆದರೆ ಚಿತ್ರದುದ್ದಕ್ಕೂ ಪ್ರೇಕ್ಷಕರು ಈ ಕುರಿತು ಮಾತನಾಡುತ್ತಲೇ ಇದ್ದರು. ಇದರಿಂದ ಚಿತ್ರದ ಆಸ್ವಾದನೆಗೂ ತೊಂದರೆಯಾಯಿತು.

ಎಷ್ಟು ಸಲ ಗೌರವ ತೋರಬೇಕು?:

ಚಿತ್ರಪ್ರದರ್ಶನ ಮುಗಿದರೂ ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ಪರ–ವಿರೋಧದ ಮಾತುಗಳು ಕೇಳಿಬರುತ್ತಲೇ ಇದ್ದವು. ಹಿರಿಯ ನಾಗರಿಕರೊಬ್ಬರು ‘ಸುಪ್ರೀಂ ಕೋರ್ಟ್‌ ಈಗಾಗಲೇ ರಾಷ್ಟ್ರಗೀತೆ ಪ್ರಸಾರ ಮಾಡುವುದು ಕಡ್ಡಾಯ ಅಲ್ಲ ಎಂದು ಹೇಳಿದೆ. ಆದರೂ ಪ್ರತಿ ಸಿನಿಮಾ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆ ಹಾಕುತ್ತಾರೆ. ಬೆಳಿಗ್ಗೆಯಿಂದ ಐದು ಸಲ ಎದ್ದುನಿಂತು ರಾಷ್ಟ್ರಗೀತೆಗೆ ಗೌರವ ಸೂಚಿಸಿದ್ದೇನೆ. ಹೀಗೆ ಎಷ್ಟು ಸಲ ಎದ್ದು ನಿಲ್ಲಲು ಸಾಧ್ಯ?’ ಎಂದು ಗೊಣಗಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry