ಮಂಗಳೂರು ವಿವಿ ಉತ್ತಮ ಸಾಧನೆ

7
ಕುಲಪತಿ ಪ್ರೊ. ಭೈರಪ್ಪ ಪ್ರಶಂಸೆ

ಮಂಗಳೂರು ವಿವಿ ಉತ್ತಮ ಸಾಧನೆ

Published:
Updated:
ಮಂಗಳೂರು ವಿವಿ ಉತ್ತಮ ಸಾಧನೆ

ಉಜಿರೆ: ಕ್ರೀಡೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಕುಲಪತಿ ಪ್ರೊ. ಕೆ. ಭೈರಪ್ಪ ಹೇಳಿದರು.

ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ನೆಟ್‌ಬಾಲ್ ಟೂರ್ನಿಯ ಬಹುಮಾನ ವಿತರಿಸಿ ಅವರು ಮಾತನಾಡಿದರು.

2014 ರಲ್ಲಿ ಮಂಗಳೂರು ವಿಶ್ವವಿದ್ಯಾಲಯ ರಾಷ್ಟ್ರಮಟ್ಟದಲ್ಲಿ 31 ಅಂಕ ಗಳಿಸಿದ್ದರೆ 2018ರಲ್ಲಿ 62 ಅಂಕಗಳಿಸಿ ಸಾಧನೆಯ ಪಥದಲ್ಲಿ ಮುನ್ನಡೆಯುತ್ತಿದೆ. ವಿಕಿರಣ ಭೌತ ವಿಜ್ಞಾನ ಪ್ರಯೋಗಾಲಯ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ವಿಶ್ವವಿದ್ಯಾಲಯ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ.

ಮಂಗಳೂರು ವಿಶ್ವವಿದ್ಯಾಲಯ ರೂಪಿಸಿದ ಕ್ರೀಡಾ ನೀತಿಯನ್ನು ಸರ್ಕಾರ ಅಂಗೀಕರಿಸಿದ್ದು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಅನುಷ್ಠಾನಗೊಳಿಸಬೇಕೆಂದು ಆದೇಶ ನೀಡಿದೆ. ಹೊಸ ಕ್ರೀಡಾ ನೀತಿ ಪ್ರಕಾರ ಕ್ರೀಡಾಪಟುಗಳು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಉನ್ನತ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಕೃಪಾಂಕ, ಹಾಜರಾತಿಯಲ್ಲಿ ವಿನಾಯಿತಿ ಹಾಗೂ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಗುವುದು. ವಿಶ್ವವಿದ್ಯಾಲಯಲ್ಲಿ ಒಲಿಂಪಿಯನ್ಸ್, ಅರ್ಜುನ ಪ್ರಶಸ್ತಿ ಪುರಸ್ಕೃತರನ್ನು ನೇಮಿಸಿ ಕ್ರೀಡಾಪಟುಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯ ಸಾಧನೆಯಲ್ಲಿ ಶೇಕಡ 30ರಷ್ಟು ಸಾಧನೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಿಂದಾಗಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಶುಭ ಹಾರೈಸಿದರು. ಟೂರ್ನಿಯಯ ವೀಕ್ಷಕ ಡಾ. ರಾಜೇಶ್ ಪಂದ್ಯದ ಯಶಸ್ಸಿನ ಬಗ್ಗೆ ಎಲ್ಲರ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸಿದರು.

ಮಂಗಳೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ.ಕೆ. ವರದಿ ಸಾದರಪಡಿಸಿದರು. ಎಸ್.ಡಿಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ.ಎನ್. ಕೇಶವ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಪ್ರೊ. ಬಿ.ಎ. ಕುಮಾರ್ ಹೆಗ್ಡೆ ಕೊನೆಯಲ್ಲಿ ಧನ್ಯವಾದವಿತ್ತರು.

**

ವೈಯಕ್ತಿಕ ಪ್ರಶಸ್ತಿ

ಬೆಸ್ಟ್ ಸೆಂಟರ್: ಸಂದೀಪ್ ಸಿಂಗ್, ಪಂಜಾಬಿ ವಿ.ವಿ., ಪಾಟಿಯಾಲ

ಬೆಸ್ಟ್ ಡಿಫೆಂಡರ್: ಕೀರ್ತನ್, ಮಂಗಳೂರು ವಿ.ವಿ.

ಬೆಸ್ಟ್ ಶೂಟರ್: ನಿತಿನ್, ಮಂಗಳೂರು ವಿ.ವಿ. (138 ಶೂಟ್ಸ್ ಮಾಡಿದ್ದಾರೆ)

ಬಹುಮಾನ ವಿತರಣೆ

ಮಂಗಳೂರು ವಿ.ವಿ. ಕುಲಪತಿ ಪ್ರೊ. ಕೆ. ಭೈರಪ್ಪ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ.ಎನ್. ಕೇಶವ ಬಹುಮಾನ ವಿತರಿಸಿದರು.

ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ.ಕೆ. ಹಾಗೂ ಪಂದ್ಯದ ವೀಕ್ಷಕ ಡಾ. ರಾಜೇಶ್ ಉಪಸ್ಥಿತರಿದ್ದರು.

ಮಂಗಳೂರು ವಿ.ವಿ. ಪಂದ್ಯಾಟದಲ್ಲಿ 138 ಅಂಕಗಳನ್ನು ಗಳಿಸಿದೆ. ನಾಲ್ಕು ದಿನ ನಡೆದ ಪಂದ್ಯಾಟದಲ್ಲಿ 46 ವಿ.ವಿ.ಯ ತಂಡಗಳು ಭಾಗವಹಿಸಿವೆ.

ಅನಾರೋಗ್ಯದಲ್ಲೂ ಸಾಧನೆ

ಅನಾರೋಗ್ಯ ಪೀಡಿತನಾಗಿದ್ದರೂ ಮಂಗಳೂರು ವಿ.ವಿ. ತಂಡದ ಕ್ರೀಡಾಪಟು ಹಾಗೂ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿ ನಿತಿನ್ ತನ್ನ ಅಮೋಘವಾದ ಕೌಶಲಪೂರಿತ ಸೆಣಸಾಟದಿಂದ ಮಂಗಳೂರು ವಿ.ವಿ. 138 ಅಂಕಗಳಿಸಿ ಚಾಂಪಿಯನ್ ಆಗಿ ಮೆರೆಯಲು ಸಾಧ್ಯವಾಯಿತು. ನಿತಿನ್ ಸಾಧನೆ ಬಗ್ಗೆ ಎಲ್ಲರೂ ಮುಕ್ತವಾಗಿ ಪ್ರಶಂಸಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry