3
ಕಂಗೊಳಿಸಿದ ಮೆರವಣಿಗೆ, ಮೆರುಗು ನೀಡಿದ ಕಲಾ ತಂಡಗಳು

ಬೆಳವಡಿ ಮಲ್ಲಮ್ಮನ ಉತ್ಸವಕ್ಕೆ ಚಾಲನೆ

Published:
Updated:
ಬೆಳವಡಿ ಮಲ್ಲಮ್ಮನ ಉತ್ಸವಕ್ಕೆ ಚಾಲನೆ

ಬೈಲಹೊಂಗಲ (ರಾಣಿ ಮಲ್ಲಮ್ಮ ವೇದಿಕೆ): ಮಹಿಳಾ ಸೈನ್ಯ ಕಟ್ಟಿ ಕನ್ನಡ, ಮರಾಠಿ ಭಾಷಿಕರಲ್ಲಿ ಭಾಷಾ ಸೌಹಾರ್ದ ಮೆರೆದ ವೀರವನಿತೆ ಬೆಳವಡಿ ಮಲ್ಲಮ್ಮಳ ಉತ್ಸವ ಜನಪದ ಕಲಾಮೇಳ, ಮೆರವಣಿಗೆ ಮೂಲಕ ಆಕರ್ಷಕವಾಗಿ ಬುಧವಾರ ನಡೆಯಿತು.

ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ನಡೆದ ಉತ್ಸವದಲ್ಲಿ ಹಣೆಗೆ ತಿಲಕ, ತಲೆಗೆ ಪೇಟಾ ಧರಿಸಿದ ಅಭಿಮಾನಿಗಳು ಕಲಾವಿದರೊಂದಿಗೆ ಹೆಜ್ಜೆ ಹಾಕಿದರು. ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.

ಶಾಸಕ ಡಾ.ವಿಶ್ವನಾಥ ಪಾಟೀಲ, ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ, ಸಿಇಒ ರಾಮಚಂದ್ರನ್ ಆರ್., ಬೆಳವಡಿ ಮಲ್ಲಮ್ಮ ವೃತ್ತದಲ್ಲಿ ಬೆಳವಡಿ ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಬೆಳವಡಿ ಇತಿಹಾಸ ದೇಶಾಭಿಮಾನದ ಸ್ಫೂರ್ತಿಯಾಗಿದೆ, ಉತ್ಸವ ಸರ್ಕಾರದಿಂದಲೇ ಆಯೋಜಿಸಿದೆ. ಮಲ್ಲಮ್ಮ ಮಹಿಳಾ ಸಮಾಜಕ್ಕೆ ಮಾದರಿ, ಎಲ್ಲರೂ ಭಾಗವಹಿಸಿ ಉತ್ಸವ ಯಶಸ್ವಿಗೊಳಿಸಬೇಕು' ಎಂದರು.

ಉಪವಿಭಾಗಾಧಿಕಾರಿ ಡಾ.ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ, ತಹಶೀಲ್ದಾರ್‌ ಪ್ರಕಾಶ ಗಾಯಕವಾಡ, ಕ್ಷೇತ್ರ ಶಿಕ್ಷಣಾಧಿಕಾರಿ ಪಾರ್ವತಿ ವಸ್ತ್ರದ, ಜಿಲ್ಲಾ ಪಂಚಾಯ್ತಿ ಸದಸ್ಯ ಈರಣ್ಣ ಕರೀಕಟ್ಟಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶೈಲಾ ಸಿದ್ರಾಮನಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಅಮೃತಾ ಕಕ್ಕಯ್ಯನವರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಈರವ್ವ ತಳವಾರ, ಸಿಪಿಐ ರಾಘವೇಂದ್ರ ಹವಾಲ್ದಾರ, ಪಿಎಸ್ಐ ಸುಮಾ ನಾಯ್ಕ ಇದ್ದರು.

ಕಲಾ ತಂಡಗಳ ರಸದೌತಣ: ಜನಪದ ಕಲಾವಾಹಿನಿಯಲ್ಲಿ ರಂಗು, ರಂಗಿನ ಉಡುಪು ತೊಟ್ಟ ಕಲಾವಿದರು ಬೆಳವಡಿ ಗ್ರಾಮದ ತುಂಬ ಹೆಜ್ಜೆ ಹಾಕಿದರು. ಕಲಾ ತಂಡ ನೋಡುಗರಿಗೆ ಕಲಾ ರಸದೌತಣ ಉಣಬಡಿಸಿತು. 20ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದ್ದವು. ಗುಂಡೇನಟ್ಟಿ ಜಗ್ಗಲಗಿ ಮೇಳ, ಹಂದಿಗುಂದ ರಾಮದುರ್ಗದ ಡೊಳ್ಳು ಕುಣಿತ, ಶಹಾಪುರದ ಕರಬಲ್ಲ ಕುಣಿತ, ಚಮಕೇರಿ ಕರಡಿ ಮಜಲು, ಕಲ್ಲೊಳ್ಳಿ ವೀರಭದ್ರ ಕುಣಿತ, ಸಂಭಾಳವಾದನ, ಅಳಗವಾಡಿ ಕುದುರೆ ಕುಣಿತ, ಚಿಂಚಲಿ ಡೋಲು ಪಥಕ, ಹಳಿಯಾಳ ತಾಸೇವಾದನ, ಮೊರಬ ಕರಬಲ್ಲ ಕುಣಿತ, ಹಗಲೂ ವೇಷ ಕಲಾ ತಂಡದ ರಾಮ, ರಾಕ್ಷಸ ಪಾತ್ರಧಾರಿ ನೋಡುಗರ ಕಣ್ಮನ ಸೆಳೆದವು. ಸಚಿವ ರಮೇಶ ಜಾರಕಿಹೊಳಿ, ಶಾಸಕರಾದ ಗಣೇಶ ಹುಕ್ಕೇರಿ, ಅಶೋಕ ಪಟ್ಟಣ, ಡಿ.ಬಿ. ಇನಾಮದಾರ, ಸಂಸದ ಸುರೇಶ ಅಂಗಡಿ ಅನುಪಸ್ಥಿತಿ ಎದ್ದು ಕಾಣಿಸಿತು.

ರವಿ ಬಿ. ಹುಲಕುಂದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry