‘ನಕಲಿ ಕಾಂಗ್ರೆಸ್‌ನಲ್ಲಿ ನಕಲಿ ಜನ’

7
ಆನಂದ್‌ ಸಿಂಗ್‌ ಬಿಜೆಪಿ ನಿಮಗೇನೂ ಅನ್ಯಾಯ ಮಾಡಿತ್ತು; ಶೋಭಾ ಕರಂದ್ಲಾಜೆ ಪ್ರಶ್ನೆ

‘ನಕಲಿ ಕಾಂಗ್ರೆಸ್‌ನಲ್ಲಿ ನಕಲಿ ಜನ’

Published:
Updated:
‘ನಕಲಿ ಕಾಂಗ್ರೆಸ್‌ನಲ್ಲಿ ನಕಲಿ ಜನ’

ಹೊಸಪೇಟೆ: ‘ಎಚ್‌.ಆರ್‌.ಗವಿಯಪ್ಪನವರ ‘ಖಾಂದಾನ್‌’ (ಮನೆತನ) ಕಾಂಗ್ರೆಸ್‌ನದು. ಅವರ ತಾತ, ಅಪ್ಪ ಎಲ್ಲರೂ ಕಾಂಗ್ರೆಸ್ಸಿಗರು. ಅಂದಿನ ಕಾಂಗ್ರೆಸ್ಸೇ ಬೇರೆ ಇಂದಿನ ಕಾಂಗ್ರೆಸ್ಸೇ ಬೇರೆ ರೀತಿ ಇದೆ. ನಕಲಿ ಕಾಂಗ್ರೆಸ್‌ನಲ್ಲಿ ನಕಲಿ ಜನ ಸೇರಿಕೊಂಡಿದ್ದಾರೆ. ಹೀಗಾಗಿಯೇ ಗವಿಯಪ್ಪನವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಬಂದಿದ್ದಾರೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

‘ಗವಿಯಪ್ಪ ಸಜ್ಜನ ರಾಜಕಾರಣಿ. ದುಡ್ಡು, ಭ್ರಷ್ಟಾಚಾರ ಮಾಡುವುದು ಅವರಿಗೆ ಬೇಕಿಲ್ಲ. ಅಭಿವೃದ್ಧಿಗಾಗಿ ಬಿಜೆಪಿಗೆ ಬಂದಿದ್ದಾರೆ. ನಮ್ಮ ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್‌ ಸೇರಿರುವ ಆನಂದ್‌ ಸಿಂಗ್‌ ಅವರಿಗೆ ಕ್ಷೇತ್ರದ ಜನ ಪಾಠ ಕಲಿಸಬೇಕು. ಎರಡು ಬಾರಿ ಆನಂದ್‌ ಸಿಂಗ್‌ ನಮ್ಮ ಪಕ್ಷದಿಂದ ಗೆದ್ದು ಶಾಸಕರಾಗಿದ್ದರು. ಬಿಜೆಪಿ ಅವರಿಗೇನೂ ಮೋಸ, ಅನ್ಯಾಯ ಮಾಡಿತ್ತು. ಅವರೇಕೇ ಕಾಂಗ್ರೆಸ್‌ಗೆ ಹೋದರು. ಅವರು ಜೈಲಿಗೆ ಹೋಗಿದ್ದಾಗ, ಸಂಕಷ್ಟದಲ್ಲಿದ್ದಾಗ ಅವರೊಂದಿಗೆ ಪಕ್ಷ ಇತ್ತು. ಆನಂದ್ ಸಿಂಗ್‌ ವಿಧಾನಸಭೆಗೆ ಬರದಿದ್ದರೂ ಯಡಿಯೂರಪ್ಪ ಅವರು ಅನುದಾನ ಕೊಟ್ಟಿದ್ದರು. ಇಷ್ಟೆಲ್ಲ ಮಾಡಿದ್ದರೂ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ’ ಎಂದು ಹೇಳಿದರು.

‘ಆನಂದ್‌ ಸಿಂಗ್‌ ಅವರು ತಮ್ಮ ಪ್ರಭಾವದಿಂದ ಐ.ಎಸ್‌.ಆರ್‌. ಕಾರ್ಖಾನೆ ಮುಚ್ಚುವಂತೆ ಮಾಡಿ ನೂರಾರು ರೈತರಿಗೆ ಅನ್ಯಾಯ ಮಾಡಿದ್ದಾರೆ. ತಾಲ್ಲೂಕು ಕ್ರೀಡಾಂಗಣದಲ್ಲಿ ಇಂದಿನ ಕಾರ್ಯಕ್ರಮ ಆಯೋಜಿಸಲು ಅಡ್ಡಗಾಲು ಹಾಕಿದ್ದರು. ಅವರಿಗೆ ಬಿಜೆಪಿ ಕಾರ್ಯಕ್ರಮದ ಬಗ್ಗೆ ಭಯವಿತ್ತು ಎನ್ನುವುದು ಇದರಿಂದ ಗೊತ್ತಾಗುತ್ತದೆ’ ಎಂದರು.

ಬಳಿಕ ಮಾತನಾಡಿದ ಸಂಸದ ಬಿ. ಶ್ರೀರಾಮುಲು, ಬಿ.ಎಸ್‌.ಯಡಿಯೂರಪ್ಪ, ಆನಂದ್‌ ಸಿಂಗ್‌ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಅವರನ್ನು ಜನ ಸೋಲಿಸಿ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.

ಸಂಸದ ಕರಡಿ ಸಂಗಣ್ಣ, ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ರಾಣಿ ಸಂಯುಕ್ತಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಕುಮಾರಿ, ನಗರಸಭೆ ಸದಸ್ಯ ಚಂದ್ರಕಾಂತ ಕಾಮತ್‌, ಮುಖಂಡರಾದ ಸೋಮಶೇಖರ್‌ ರೆಡ್ಡಿ, ನೇಮಿರಾಜ್‌ ನಾಯ್ಕ, ಚಂದ್ರ ನಾಯ್ಕ, ಮೃತ್ಯುಂಜಯ ಜಿನಗಾ, ಭರಮನಗೌಡ, ಅಜಯಕುಮಾರ್‌, ಕವಿರಾಜ್‌ ಅರಸ್‌, ಕಿಶೋರ್‌ ಪತ್ತಿಕೊಂಡ, ಅನಂತ ಪದ್ಮನಾಭ, ಶ್ರೀನಿವಾಸರೆಡ್ಡಿ, ವೈ. ಯಮುನೇಶ್‌, ಬಸವರಾಜ ನಾಲತ್ವಾಡ ಇದ್ದರು.

***

‘ಹಂಪಿಯಲ್ಲಿ ವಿಮಾನ ನಿಲ್ದಾಣ’

‘ಪಾರಂಪರಿಕ ತಾಣ ಹಂಪಿಯಲ್ಲಿ ವಿಮಾನ ನಿಲ್ದಾಣ ಮಾಡುವ ಯೋಜನೆ ಇದೆ. ಇದರಿಂದ ದೇಶ–ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಬಂದು ಹೋಗಲು ಅನುಕೂಲವಾಗುತ್ತದೆ. ಪ್ರವಾಸೋದ್ಯಮ ಕ್ಷೇತ್ರ ಬೆಳೆಯಲು ಸಹಕಾರಿಯಾಗುತ್ತದೆ’ ಎಂದು ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

‘ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರವಾಸಿ ತಾಣಗಳ ಜತೆ ಸಂಪರ್ಕ ಬೆಸೆಯಲಾಗುವುದು. ವಿಜಯನಗರ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಲಾಗುವುದು. ತಾಲ್ಲೂಕಿನ ಪಾಪಿನಾಯಕನಹಳ್ಳಿ, ಬೈಲುವದ್ದಿಗೇರಿ, ಕಾಕುಬಾಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ತುಂಗಭದ್ರಾದಿಂದ ನೀರು ಹರಿಸಲು ಕ್ರಮ ಜರುಗಿಸಲಾಗುವುದು. ಜತೆಗೆ ಮಾರ್ಚ್‌ನಲ್ಲಿ ಹೊಸಪೇಟೆ–ಕೊಟ್ಟೂರು ನಡುವೆ ಪ್ರಯಾಣಿಕರು ರೈಲು ಓಡಿಸಲಾಗುವುದು’ ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry