ಪ್ರಾಂಶುಪಾಲ, ವಾರ್ಡನ್‌ ವರ್ಗಾವಣೆಗೆ ಶಿಫಾರಸು

ಗುರುವಾರ , ಮಾರ್ಚ್ 21, 2019
26 °C
ಏಕಲವ್ಯ ಶಾಲೆಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಭೇಟಿ

ಪ್ರಾಂಶುಪಾಲ, ವಾರ್ಡನ್‌ ವರ್ಗಾವಣೆಗೆ ಶಿಫಾರಸು

Published:
Updated:
ಪ್ರಾಂಶುಪಾಲ, ವಾರ್ಡನ್‌ ವರ್ಗಾವಣೆಗೆ ಶಿಫಾರಸು

ಹನೂರು: ‘ಏಕಲವ್ಯ ಶಾಲೆಯಲ್ಲಿ ಪ್ರಾಂಶುಪಾಲರು ಹಾಗೂ ನಿಲಯಪಾಲಕರ ಕಿತ್ತಾಟದಿಂದ ಸಮಸ್ಯೆಯಾಗಿದೆ. ಈ ಸಂಬಂಧ ಶೀಘ್ರದಲ್ಲಿಯೇ ಇಬ್ಬರನ್ನು ವರ್ಗಾಯಿಸಲಾಗುವುದು’ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೃಷ್ಣಪ್ಪ ಹೇಳಿದರು.

ಶಾಲೆಯಲ್ಲಿ ಅವ್ಯವಸ್ಥೆ ಹಾಗೂ ಮಕ್ಕಳಿಗೆ ಸಮರ್ಪಕ ಊಟ ನೀಡದಿರುವ ಬಗ್ಗೆ 'ಪ್ರಾಂಶುಪಾಲ-ವಾರ್ಡನ್ ಕಿತ್ತಾಟ: ಮಕ್ಕಳ ಪರದಾಟ' ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಬುಧವಾರ ವಿಸ್ತೃತ ವರದಿ ಪ್ರಕಟಗೊಂಡಿತ್ತು.

ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಬಿ. ರಾಮು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ಹರೀಶ್‌ಕುಮಾರ್‌ ಅವರು ಶಾಲೆಗೆ ಭೇಟಿ ನೀಡಿ ವಾಸ್ತವವನ್ನು ಪರಿಶೀಲಿಸಿ ವರದಿ ನೀಡುವಂತೆ ಆದೇಶಿಸಿದ್ದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೃಷ್ಣಪ್ಪ ಅವರು ಬುಧವಾರ ಶಾಲೆಗೆ ಭೇಟಿ ನೀಡಿ ಪ್ರಾಂಶುಪಾಲ ಲೋಕೇಶ್‌ ಹಾಗೂ ವಾರ್ಡನ್ ಮಹದೇವಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.

‘ನಿಮ್ಮ ನಿರ್ಲಕ್ಷ್ಯದಿಂದಾಗಿ ಶಾಲೆಗೆ ಕೆಟ್ಟ ಹೆಸರು ಬಂದಿದೆ. ವೈಯಕ್ತಿಕ ವಿಚಾರಗಳನ್ನು ನಿಮ್ಮ ಮನೆಗಳಲ್ಲಿ ಇಟ್ಟುಕೊಳ್ಳಿ. ಅದನ್ನು ವಿದ್ಯಾರ್ಥಿಗಳ ಮುಂದೆ ತಂದು, ಮಕ್ಕಳಿಗೆ ಶಿಕ್ಷಣಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಪ್ರಕರಣದಲ್ಲಿ ಇಬ್ಬರ ಪಾತ್ರವೂ ಇರುವುದರಿಂದ ಕೂಡಲೇ ನಿಮ್ಮ ವರ್ಗಾವಣೆಗೆ ಶಿಫಾರಸು ಮಾಡಲಾಗುವುದು’ ಎಂದು ಹೇಳಿದರು.

ಬಳಿಕ ವಿದ್ಯಾರ್ಥಿಗಳೊಂದಿಗೆ ಸಮಾ ಲೋಚನೆ ನಡೆಸಿದ ಅವರು, ನಿಗದಿತ ವೇಳೆಗೆ ಚಾರ್ಟ್‌ನಲ್ಲಿರುವಂತೆ ಊಟ ನೀಡದಿದ್ದರೆ ಕೂಡಲೇ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು.

‘ಅಡುಗೆ ಸಿಬ್ಬಂದಿ ಮಕ್ಕಳಿಗೆ ಬಿಸಿನೀರು ಕೊಡುತ್ತಿಲ್ಲ. ಸಂಜೆಯ ಉಪಾಹಾರಕ್ಕೆ ಕೇವಲ ಕಡ್ಲೇಪುರಿ ನೀಡುತ್ತಾರೆ. ಜತೆಗೆ ಇಲ್ಲಿನ ಶಿಕ್ಷಕರು ಸಹ ಮಕ್ಕಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಪೋಷಕರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣಪ್ಪ, ಮುಂದಿನ ಶೈಕ್ಷಣಿಕ ವರ್ಷದಿಂದ ವಸತಿ ಶಾಲೆಯಲ್ಲಿರುವ ಎಲ್ಲ ಸಿಬ್ಬಂದಿಯನ್ನು ಬದಲಾವಣೆ ಮಾಡಲಾಗುವುದು. ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ವಿದ್ಯಾರ್ಥಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ದೂರುಗಳು ಪುನರಾವರ್ತಿತವಾದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗಂಗಾಧರ್, ಪ್ರಾಂಶುಪಾಲ ಲೋಕೇಶ್, ಪೋಷಕರಾದ ಷಣ್ಮುಗ, ಚಿಕ್ಕಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry