ನಗರದ ಸಮಗ್ರ ಅಭಿವೃದ್ಧಿಗೆ ವಿಶೇಷ ಒತ್ತು

ಗುರುವಾರ , ಮಾರ್ಚ್ 21, 2019
32 °C
ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ಖಾತೆ ವಿಚಾರ, ₨7.50 ಕೋಟಿ ವೆಚ್ಚದ ಹೊಸ ಕ್ರಿಯಾಯೋಜನೆ ರೂಪಿಸಲು ಅನುಮೋದನೆ

ನಗರದ ಸಮಗ್ರ ಅಭಿವೃದ್ಧಿಗೆ ವಿಶೇಷ ಒತ್ತು

Published:
Updated:
ನಗರದ ಸಮಗ್ರ ಅಭಿವೃದ್ಧಿಗೆ ವಿಶೇಷ ಒತ್ತು

ಚಿಕ್ಕಬಳ್ಳಾಪುರ: ನಗರಸಭೆ ಅಧ್ಯಕ್ಷ ಮುನಿಕೃಷ್ಣಪ್ಪ ಅವರು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ₹ 31.03 ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಯಿತು.

ಆರ್ಥಿಕ ವರ್ಷದಲ್ಲಿ ನಗರಸಭೆಗೆ ವಿವಿಧ ಮೂಲಗಳಿಂದ ₹ 41.25 ಕೋಟಿ ಆದಾಯವನ್ನು ನಿರೀಕ್ಷೆ ಮಾಡಲಾಗಿದೆ. ₹ 40.94 ಕೋಟಿ ಖರ್ಚು ಅಂದಾಜು ಮಾಡಲಾಗಿದೆ. ನಗರಸಭೆಯಲ್ಲಿ ಕಳೆದ ಬಾರಿ ₹ 7.65 ಕೋಟಿ ಉಳಿತಾಯ ಬಜೆಟ್ ಮಂಡಿಸಲಾಗಿತ್ತು.

ಬಜೆಟ್‌ ಮಂಡನಾ ಸಭೆಗೂ ಮುನ್ನ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭೆಯಲ್ಲಿ ಖಾತೆ ಮಾಡಿಕೊಡದೇ ಇರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುವ ಜತೆಗೆ ಆದಾಯ ಕೂಡ ಕುಂಠಿತಗೊಳ್ಳುತ್ತಿದೆ ಎನ್ನುವ ವಿಚಾರ ಪ್ರತಿಧ್ವನಿಸಿತು.

ಈ ವೇಳೆ ನಗರಸಭೆ ಆಯುಕ್ತ ಉಮಾಕಾಂತ್, ‘ನಗರಾಭಿವೃದ್ಧಿ ಇಲಾಖೆಯು ನಗರ ಸ್ಥಳೀಯ ಸಂಸ್ಥೆಗಳು ಇನ್ನು ಮುಂದೆ ಸಕ್ಷಮ ಪ್ರಾಧಿಕಾರಗಳಿಂದ ವಿನ್ಯಾಸ ಅನುಮೋದನೆ ಪಡೆಯದೇ ಇರುವ ನಿವೇಶನಗಳಿಗೆ ಖಾತೆ ನೀಡಬಾರದೆಂದು ಕಟ್ಟಿನಿಟ್ಟಿನ ಆದೇಶ ಹೊರಡಿಸಿದೆ. ಹೀಗಾಗಿ ವಿನ್ಯಾಸ ಅನುಮೋದನೆ ಪಡೆಯದ ನಿವೇಶನಗಳಿಗೆ ಖಾತೆ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಹಾಗಿದ್ದರೆ ಹಳೆ ಊರಿನ ಜನ ಏನು ಮಾಡಬೇಕು’ ಎಂದು ಕೆಲವರು ಪ್ರಶ್ನಿಸಿದರೆ, ಅದಕ್ಕೆ ಉಮಾಕಾಂತ್, ‘ನಗರಾಭಿವೃದ್ಧಿ ಇಲಾಖೆ ಸುತ್ತೋಲೆಯಲ್ಲಿ ಆ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ ಹೀಗಾಗಿ ನಾನು ಏನೂ ಮಾಡಲು ಸಾಧ್ಯವಿಲ್ಲ. ಕಾನೂನು ರೀತಿ ಪರವಾನಗಿ ಹೊಂದಿರುವವರಿಗೆ ಕಟ್ಟಡ ಪರವಾನಗಿ ನೀಡುತ್ತೇವೆ. ಜತೆಗೆ ಖಾತೆ ಮಾಡಿಕೊಡುತ್ತೇವೆ’ ಎಂದರು.

ಇದೇ ವೇಳೆ ಕೆಲ ಸದಸ್ಯರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ರಾಜಕೀಯ ಒತ್ತಡಗಳಿಗೆ ಮಣಿದು ತಮಗೆ ಬೇಕಾದವರ ನಿವೇಶನಗಳಿಗೆ ಪರವಾನಗಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಮಾತನಾಡಿದ ಸದಸ್ಯ ಮಹಾಕಾಳಿ ಬಾಬು, ‘ಪ್ರಾಧಿಕಾರದಲ್ಲಿ ಶ್ರೀಮಂತರಿಗೆ, ರಾಜಕೀಯವಾಗಿ ಒತ್ತಡ ಹೇರುವವರಿಗೆ ಮಾತ್ರ ನಗರ ವ್ಯಾಪ್ತಿಯಲ್ಲಿನ ಕಟ್ಟಡ, ನಿವೇಶನಗಳಿಗೆ ಪರವಾನಗಿ ನೀಡಲಾಗುತ್ತಿದೆಯೇ ಹೊರತು ನ್ಯಾಯ ಸಮ್ಮತವಾಗಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ’ ಎನ್ನುತ್ತಿದ್ದಂತೆ ಅನೇಕ ಅವರ ಮಾತಿಗೆ ಧ್ವನಿಗೂಡಿಸಿದರು.

ಸದಸ್ಯ ಎಸ್.ಎಂ. ರಫೀಕ್ ಮಾತನಾಡಿ, ಪ್ರಾಧಿಕಾರದ ಲೋಪದಿಂದಾಗಿ ನಗರದಲ್ಲಿ ಅನುಮತಿ ಇಲ್ಲದೆ ಸುಮಾರು 12 ಸಾವಿರ ಮನೆಗಳು ನಿರ್ಮಾಣಗೊಂಡಿವೆ. ದಾಖಲೆಗಳು ಸರಿಯಿದ್ದರೂ ಅಧಿಕಾರಿಗಳು ಅನುಮತಿ ನೀಡಲು ನಿರಾಕರಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಿ.ಬಿ. ರಸ್ತೆಯಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ವಾಣಿಜ್ಯ ಮಳಿಗೆಗೆಗಳಿಗೆ ನೋಟೀಸ್ ಜಾರಿ ಮಾಡಲಾಗುವುದು’ ಎಂದು ಉಮಾಕಾಂತ್ ಅವರು ಸಭೆಗೆ ಮಾಹಿತಿ ನೀಡುತ್ತಿದ್ದಂತೆ, ಕೆಲ ಸದಸ್ಯರು ಅಂತಹ ಕಟ್ಟಡಗಳಿಗೆ ಬೀಗ ಜಡಿಯಬೇಕು ಎಂದು ಆಗ್ರಹಿಸಿದರು. ರಸ್ತೆ ಅತಿಕ್ರಮಿಸಿ ನಿರ್ಮಿಸಿದ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂಬ ನಿರ್ಣಯ ತೆಗೆದುಕೊಳ್ಳಲಾಯಿತು.

ಮುನ್ಸಿಫಲ್ ಲೇಔಟ್ ಮತ್ತು ಐಡಿಎಸ್‌ಎಂಟಿ (ಸಣ್ಣ ಮತ್ತು ಮಧ್ಯಮ ನಗರ ಅಭಿವೃದ್ಧಿ ಯೋಜನೆ) ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ನಡೆಸಬೇಕು. ಪ್ರತಿಯೊಬ್ಬರ ಬಳಿ ಇರುವ ದಾಖಲೆಗಳನ್ನು ಪರಿಶೀಲನೆ ಮಾಡಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡವರನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಹಂಚಿಕೆಯಾಗದೆ ಉಳಿದ ನಿವೇಶನಗಳನ್ನು ಲಾಟರಿ ಮೂಲಕ ಹಂಚಿಕೆ ಮಾಡಬೇಕು ಎಂದು ಕೆಲ ಸದಸ್ಯರು ಆಗ್ರಹಿಸಿದಾಗ ಅದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು.

ಸರ್ಕಾರದಿಂದ ನಗರಸಭೆ ನೂತನ ಕಚೇರಿ ನಿರ್ಮಿಸಲು ಮಂಜೂರಾಗಿರುವ ಅನುದಾನದಲ್ಲಿ ಗೌರಿಬಿದನೂರು ರಸ್ತೆಯ ನಿಮ್ಮಾಕಲಕುಂಟೆ ಬಳಿಯ ಡಿವೈನ್ ಸಿಟಿ ಲೇಔಟ್‌ನಲ್ಲಿರುವ ನಗರಸಭೆಗೆ ಸೇರಿದ ಜಾಗದಲ್ಲಿ ಹೊಸದಾಗಿ ನಗರಸಭೆ ಕಟ್ಟಡ ನಿರ್ಮಿಸುವ ವಿಚಾರ ಕೆಲ ಹೊತ್ತು ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಅಂತಿಮವಾಗಿ ಸದಸ್ಯರು ನೂತನ ಕಟ್ಟಡದ ನೀಲನಕ್ಷೆ ತಯಾರಿಗೆ ಒಪ್ಪಿಗೆ ಸೂಚಿಸಿದರು.

ಅಧ್ಯಕ್ಷ ಮುನಿಕೃಷ್ಣ, ಉಪಾಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗಂಗಾಧರಸ್ವಾಮಿ, ಸದಸ್ಯರು ಉಪಸ್ಥಿತರಿದ್ದರು.

***

ವಿವಿಧ ಪ್ರಸ್ತಾವಕ್ಕೆ ಅನುಮೋದನೆ

ವಿವಿಧ ಯೋಜನೆಗಳ ಕಾಮಗಾರಿಗಳಿಗಾಗಿ ₹ 7.50 ಕೋಟಿ ವೆಚ್ಚದ ಹೊಸ ಕ್ರಿಯಾ ಯೋಜನೆ ರೂಪಿಸಲು, ಬೀದಿದೀಪ ನಿರ್ವಹಣೆಗೆ ಹೊಸ ಟೆಂಡರ್ ಕರೆಯುವ ಪ್ರಸ್ತಾವಗಳಿಗೆ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು. ಜಕ್ಕಲಮಡಗು ಕುಡಿಯುವ ನೀರನ್ನು ನಗರಕ್ಕೆ 24X7 ಸರಬರಾಜು ಮಾಡುವ ಯೋಜನೆ ಕ್ರೀಯಾಯೋಜನೆ ರೂಪಿಸಲು ಪೂರ್ವಭಾವಿಯಾಗಿ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್‌) ಸಂಸ್ಥೆ ಮೂಲಕ ಸಮಿಕ್ಷೆ ನಡೆಸಿ, ವಿಸ್ತ್ರತ ವರದಿ ಪಡೆದು ಯೋಜನಾ ವರದಿ ತಯಾರಿಸುವ ಪ್ರಸ್ತಾವಕ್ಕೆ ಕೂಡ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

***

ಇದು ನನ್ನ ಮೊದಲ ಬಜೆಟ್. ಮುಂದಿನ ಒಂದು ವರ್ಷದಲ್ಲಿ ಬಜೆಟ್ ಆಶಯಕ್ಕೆ ಪೂರಕವಾಗಿ ಕೆಲಸ ಮಾಡಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು.

ಮುನಿಕೃಷ್ಣಪ್ಪ, ನಗರಸಭೆ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry