ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗರ್ ಹುಕುಂ ಸಾಗುವಳಿ ಚೀಟಿ ವಿತರಣೆಗೆ ಆಗ್ರಹ

ಜಿ.ವಿ.ಶ್ರೀರಾಮರೆಡ್ಡಿ ನೇತೃತ್ವದಲ್ಲಿ ಪ್ರಾಂತ ರೈತ ಸಂಘ ಪ್ರತಿಭಟನೆ; ಸರ್ಕಾರದ ವಿರುದ್ಧ ಆಕ್ರೋಶ
Last Updated 1 ಮಾರ್ಚ್ 2018, 9:57 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ಅರ್ಹ ಫಲಾನುಭವಿಗಳಿಗೆ ಬಗರ್‌ಹುಕಂ ಸಾಗುವಳಿ ಚೀಟಿ ವಿತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಸಮಿತಿಯ ಕಾರ್ಯಕರ್ತರು ಸಂಘದ ರಾಜ್ಯ ಉಪಾಧ್ಯಕ್ಷ ಜಿ.ವಿ.ಶ್ರೀರಾಮರೆಡ್ಡಿ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟಿಸಿದರು.

ಪಟ್ಟಣದ ಡಾ.ಎಚ್.ಎನ್.ವೃತ್ತದಿಂದ ಹೊರಟ ನೂರಾರು ರೈತರು ಬಗರ್‌ಹುಕಂ ಸಾಗುವಳಿ ಚೀಟಿ ಹಾಗೂ ಪಡಿತರ ಚೀಟಿ ಸಮರ್ಪಕವಾಗಿ ವಿತರಿಸದ ತಾಲ್ಲೂಕು ಆಡಳಿತ ವಿರುದ್ಧ ಧಿಕ್ಕಾರ ಕೂಗಿದರು.

ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ‘ಬಡವರು, ದಲಿತರು ಬಗರ್‌ಹುಕಂ ಸಾಗುವಳಿ ಚೀಟಿ ಮಂಜೂರಾತಿಗೆ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದಿವೆ. ಆದರೂ ಚೀಟಿ ವಿತರಿಸಿಲ್ಲ. ಭೂಮಿ ಮಂಜೂರು ಮಾಡುವಂತೆ ಸರ್ಕಾರ ಆದೇಶ ಮಾಡಿದ್ದರೂ ತಾಲ್ಲೂಕು ಆಡಳಿತ ನಿರಾಸಕ್ತಿ ತೋರುತ್ತಿದೆ’ ಎಂದು ದೂರಿದರು.

ತಾಲ್ಲೂಕಿನಲ್ಲಿ ಸಾವಿರಾರು ಬಡವರು ಮನೆ-ನಿವೇಶನಗಳಿಗೆ ಅರ್ಜಿ ಸಲ್ಲಿಸಿದ್ದರೂ ಅವರಿಗೆ ಮನೆ, ನಿವೇಶನ ಹಂಚಿಲ್ಲ. ಶಾಸಕರು ಹಾಗೂ ಕಾಂಗ್ರೆಸ್ ನಾಯಕರು ಜನರನ್ನು ಮರಳು ಮಾಡುತ್ತಿದ್ದಾರೆ. ಅಧಿಕಾರಿಗಳು ಏನೂ ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸ್ಥಳಕ್ಕೆ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕು ಆಹಾರ ನಿರೀಕ್ಷಕರು ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.

ತಾಲ್ಲೂಕು ಆಹಾರ ನಿರೀಕ್ಷಕ ನರಸಿಂಹಮೂರ್ತಿ, ಅನಿಲ ಭಾಗ್ಯ ಯೋಜನೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಶಾಸಕರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದರು. ಶ್ರೀರಾಮರೆಡ್ಡಿ ಏರುಧ್ವನಿಯಲ್ಲಿ ಸಮರ್ಪಕವಾಗಿ ಉತ್ತರ ನೀಡುತ್ತಿಲ್ಲ ಎಂದು ಅಧಿಕಾರಿಯ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ತಕ್ಷಣವೇ ತಹಶೀಲ್ದಾರ್ ಮಹಮದ್ ಅಸ್ಲಂ ಸ್ಥಳಕ್ಕೆ ಬಂದರು. ಅನಿಲಭಾಗ್ಯ ಯೋಜನೆಯ ಅರ್ಜಿ ಪಡೆಯುವ ಬಗ್ಗೆ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಸಮರ್ಪಕವಾದ ಮಾಹಿತಿ ಪಡೆದು, ಸರ್ಕಾರದ ಆದೇಶದ ರೀತಿಯಂತೆ ಅನಿಲ ಸಂಪರ್ಕದ ಅರ್ಜಿ ಪಡೆಯಲಾಗುವುದು. ಕಚೇರಿಯಲ್ಲಿ ಮುಖಂಡರ ಸಭೆ ಕರೆದಿದ್ದೇನೆ. ಚರ್ಚಿಸಲು ಬನ್ನಿ ಎಂದು ಆಹ್ವಾನಿಸಿದರು.

ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಹಮದ್ ಅಸ್ಲಂ ಮಾತನಾಡಿ, ಬೇಡಿಕೆಗಳನ್ನು ಈಡೇರಿಸಲು ಕ್ರಮ ಜರುಗಿಸುವೆ ಎಂದರು. ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.

ಪ್ರಾಂತ ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎನ್.ಶ್ರೀರಾಮಪ್ಪ, ಕಾರ್ಯದರ್ಶಿ ಮಂಜುನಾಥರೆಡ್ಡಿ, ಮಾಜಿ ಅಧ್ಯಕ್ಷ ಚಂದ್ರಶೇಖರರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಚನ್ನರಾಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀರಾಮನಾಯಕ್, ಮುಖಂಡರಾದ ಗೋವರ್ಧನಚಾರಿ, ವಾಲ್ಮೀಕಿ ಅಶ್ವತ್ಥಪ್ಪ, ಜಿ.ಕೃಷ್ಣಪ್ಪ, ಶಂಕರ, ಹೇಮಚಂದ್ರ, ಜೈನಾಭಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT