ಕಾಂಗ್ರೆಸ್ ಸರ್ಕಾರದಿಂದ ಮಠಗಳಿಗೆ ನೆರವು

7
ಕುಂಚಿಟಿಗ ಸಮಾವೇಶ, ವಿಜಯರಾಯ ಸಂಗಮೇಶ್ವರ ಜಯಂತಿ ಆಚರಣೆಯಲ್ಲಿ ಸಚಿವ ಟಿ.ಬಿ.ಜಯಚಂದ್ರ

ಕಾಂಗ್ರೆಸ್ ಸರ್ಕಾರದಿಂದ ಮಠಗಳಿಗೆ ನೆರವು

Published:
Updated:
ಕಾಂಗ್ರೆಸ್ ಸರ್ಕಾರದಿಂದ ಮಠಗಳಿಗೆ ನೆರವು

ಹೊಳಲ್ಕೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಠಗಳಿಗೆ ಸಾಕಷ್ಟು ಅನುದಾನ ನೀಡಿದೆ ಎಂದು ಕಾನೂನು ಹಾಗೂ ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಬಯಲು ರಂಗಮಂದಿರದಲ್ಲಿ ಬುಧವಾರ ನಡೆದ ವಿಜಯರಾಯ ಸಂಗಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ಸಮುದಾಯದ ಮಠಗಳಿಗೆ ಜಮೀನು, ಅನುದಾನ ನೀಡುವ ಮೂಲಕ ಆರ್ಥಿಕ ಶಕ್ತಿ ನೀಡಿದ್ದಾರೆ. ಕುಂಚಿಟಿಗ ಸಂಸ್ಥಾನದ ಶಾಂತವೀರ ಸ್ವಾಮೀಜಿ ಚಿಕ್ಕ ವಯಸ್ಸಿನಲ್ಲೇ ಸಮಾಜದ ಜನರನ್ನು ಸಂಘಟಿಸುವ ಕೆಲಸ ಮಾಡಿದರು. ಕೆಲವೊಮ್ಮೆ ಭಿನ್ನಾಭಿಪ್ರಾಯ ಬಂದರೂ ಸಮರ್ಥವಾಗಿ ನಿಭಾಯಿಸಿ ಜನರನ್ನು ಒಗ್ಗೂಡಿಸಿದರು. ಸರ್ಕಾರದಿಂದ 28 ಮಹನೀಯರ ಜಯಂತಿ ನಡೆಸಲಾಗುತ್ತಿದೆ. ನಮ್ಮ ಪೂರ್ವಜರ ಪರಂಪರೆಗೆ ಸಂಸ್ಕೃತಿ ಉಳಿಸುವುದು, ಸಾಂಸ್ಕೃತಿಕ ವೀರರನ್ನು ಸ್ಮರಿಸುವ ಉದ್ದೇಶವಿದೆ’ ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನೀರಾವರಿ ಯೋಜನೆಗಳು ಚುರುಕುಗೊಂಡಿವೆ. ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚು ಹಣ ನೀಡಲಾಗಿದ್ದು, ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ. ಇನ್ನು ಒಂದು ವರ್ಷದ ಒಳಗೆ ಮಾರಿಕಣಿವೆ ಜಲಾಶಯಕ್ಕೆ ನೀರು ಹರಿಸಲಾಗುವುದು ಎಂದು ಜಯಚಂದ್ರ ಭರವಸೆ ನೀಡಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ‘ಶಾಂತವೀರ ಸ್ವಾಮೀಜಿ ಮೋಟರ್ ಬೈಕ್‌ನಲ್ಲಿ ಸಂಚರಿಸಿ ಸಮಾಜದ ಜನರನ್ನು ಸಂಘಟಿಸಿದ್ದಾರೆ. ಕಷ್ಟಪಟ್ಟು ದಾಳಿಂಬೆ ಬೆಳೆದು ಮಠ ಕಟ್ಟಿದ್ದಾರೆ. ಕೃಷಿಯಲ್ಲಿ ಮಾಡಿದ ಸಾಧನೆಗೆ ಗೌರವ ಡಾಕ್ಟರೇಟ್ ಪಡೆಯುವ ಮೂಲಕ ಭಕ್ತರಿಗೂ ಗೌರವ ತಂದುಕೊಟ್ಟಿದ್ದಾರೆ’ ಎಂದರು.

ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮಾತನಾಡಿ, ‘ಹೊಳಲ್ಕೆರೆಯಲ್ಲಿ ಕುಂಚಿಟಿಗರ ಭವನ ನಿರ್ಮಾಣಕ್ಕೆ ₹ 2ಕೋಟಿ ಹಣ ಮಂಜೂರು ಮಾಡಿಸಿದ್ದೇನೆ. ಭವನ ನಿರ್ಮಾಣದ ಅನುದಾನದಲ್ಲಿ ₹ 50 ಲಕ್ಷದ ಚೆಕ್ ತಂದಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುಂಚಿಟಿಗ ಮಠಕ್ಕೆ ಬೆಂಗಳೂರಿನ ನೈಸ್ ರಸ್ತೆಯ ಪಕ್ಕದಲ್ಲಿ 1.5 ಎಕರೆ ಜಮೀನು ನೀಡಿದ್ದಾರೆ. ರಾಜ್ಯದ ಎಲ್ಲಾ ಮಠಗಳಿಗೂ ಅನುದಾನ ಕೊಡಿಸಿದ್ದೇನೆ. ಉಪ್ಪಾರ ಅಭಿವೃದ್ಧಿ ನಿಗಮವನ್ನೂ ಸ್ಥಾಪಿಸಿದ್ದೇವೆ. ತಾಲ್ಲೂಕಿನಲ್ಲಿ ಎಲ್ಲಾ ಸಮುದಾಯದವರಿಗೆ ಭವನಗಳನ್ನು ನಿರ್ಮಿಸಿದ್ದೇವೆ. ಕುಂಚಿಟಿಗ ಸಮುದಾಯದ ಕುಲಶಾಸ್ತ್ರ ಅಧ್ಯಯನ ಮಾಡಿಸುತ್ತಿದ್ದು, ವರದಿ ಬಂದ ನಂತರ ಒಬಿಸಿಗೆ ಸೇರಿಸುವ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ಹೇಳಿದರು.

ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ‘ಚಿತ್ರದುರ್ಗ ಜಿಲ್ಲೆ ಮಠಗಳಿಗೆ ಹೆಸರಾಗಿದೆ. ಇಲ್ಲಿರುವಷ್ಟು ಮಠಗಳು ಬೇರೆ ಯಾವ ಜಿಲ್ಲೆಯಲ್ಲೂ ಇಲ್ಲ. ಅದರಲ್ಲೂ ಕಳಂಕ ರಹಿತವಾಗಿರುವುದು ನಮ್ಮೆಲ್ಲರ ಹೆಮ್ಮೆ’ ಎಂದರು.

ಪಟ್ಟಣದ ಪ್ರಮುಖ ರಸ್ತೆಯಲ್ಲಿ ಶಾಂತವೀರ ಸ್ವಾಮೀಜಿ ಅವರ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನಾಸಿಕ್

ಡೋಲು, ವೀರಗಾಸೆ ಮತ್ತಿತರ ಕಲಾತಂಡಗಳು ಭಾಗವಹಿಸಿದ್ದವು. ಕುಂಚಿಟಿಗ ಸಮುದಾಯದ ಜನ ಕೇಸರಿ ಪೇಟ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

***

‘ಸರ್ಕಾರ ಸಂಗಮೇಶ್ವರ ಜಯಂತಿ ಆಚರಿಸಲಿ’

ಕುಂಚಿಟಿಗರ ಮಹಾಪುರುಷ ವಿಜಯರಾಯ ಸಂಗಮೇಶ್ವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕು ಎಂದು ಶಾಂತವೀರ ಸ್ವಾಮೀಜಿ ಒತ್ತಾಯಿಸಿದರು.

ಸರ್ಕಾರ ದೊಡ್ಡ ಸಮುದಾಯದ ದಾರ್ಶನಿಕರ ಜಯಂತಿ ಆಚರಿಸುತ್ತದೆ. ಇದರಿಂದ ಶೋಷಿತ, ಅಸಹಾಯಕ ಸಮುದಾಯಗಳಿಗೆ ನೋವಾಗುತ್ತದೆ. ದನಿ ಇಲ್ಲದ ಸಮುದಾಯಗಳಿಗೂ ಬದುಕು, ಭಾವನೆ,ಆತ್ಮ, ತುಡಿತಗಳಿವೆ. ಹೊಟ್ಟೆ ತುಂಬಿದವರಿಗೆ ಅನ್ನ ಹಾಕುವ ಬದಲು ಹಸಿದವರಿಗೆ ಊಟ ಬಡಿಸಬೇಕು. ಎಲ್ಲರಿಗೂ ಸಮಾನತೆ ಸಿಗಬೇಕು. ಇಲ್ಲವಾದಲ್ಲಿ ಎಲ್ಲಾ ಜಯಂತಿಗಳನ್ನೂ ರದ್ದು ಮಾಡಿ ಎಂದು ಆಗ್ರಹಿಸಿದರು.

‘ಕುಂಚಿಟಿಗರು ಜಾಗೃತರಾಗಬೇಕು. ಕ್ರಿಯಾಶೀಲರಾಗಬೇಕು. ದುಡಿದ ಅಲ್ಪಭಾಗವನ್ನು ಮಠಗಳಿಗೆ, ಸಮಾಜ ಸೇವೆಗೆ ಬಳಸಬೇಕು. ಸಂಘಟನೆ ಮತ್ತೊಬ್ಬರಿಗೆ ನೋವು ಕೊಡಬಾರದು. ಸಂಘರ್ಷಕ್ಕೆ ಎಡೆ ಮಾಡಿಕೊಡಬಾರದು. ಸರ್ಕಾರ ಮಠಗಳಿಗೆ ಕೊಡುವ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸುತ್ತೇವೆಯೇ ವಿನಾ ಸ್ವಂತ ಖರ್ಚಿಗೆ ಬಳಸುವುದಿಲ್ಲ’ ಎಂದು ಶ್ರೀಗಳು ಹೇಳಿದರು.

***

‘ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗಲಿ’

‘ಕೃಷಿ ಈ ನಾಡಿನ ಜೀವನಾಡಿ. ಕೃಷಿಕರಿಗೆ ವಿಶೇಷ ಮನ್ನಣೆ ಸಿಗಬೇಕಾಗಿತ್ತು. ಸರ್ಕಾರಗಳು ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನ ಮಾಡುತ್ತಿಲ್ಲ. ರೈತನಿಗೆ ನೀರು, ಗೊಬ್ಬರ ಪೂರೈಕೆಯಾಗಬೇಕು. ತಾವು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು. ಆದರೆ, ಪ್ರಸ್ತುತ, ಕುಡಿಯಲು ನೀರು ಸಿಗುವುದೇ ಕಷ್ಟವಾಗಿದೆ’

ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ವಿಶ್ಲೇಷಿಸಿದರು.

‘ರಾಜ್ಯದ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಬೇಗ ಆಗಬೇಕು. ಆಯಾ ತಾಲ್ಲೂಕಿನಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಿದರೆ ಅಂತರ್ಜಲ ಹೆಚ್ಚುತ್ತದೆ. ಕೃಷಿಕ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. ಸರ್ಕಾರಗಳು ಬೇರೆ ಬೇರೆ ಯೋಜನೆಗಳಿಗೆ ನೀಡುವ ಹಣವನ್ನು ತುಸು ಮಿತಿಗೊಳಿಸಿ, ನೀರಾವರಿಗೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry