ಪಟ್ಟಾ ವಿತರಣೆ: ಮುಂದುವರಿದ ಧರಣಿ

7
ಬಗೆಹರಿಯದ ಸಮಸ್ಯೆ; ಬಿಕ್ಕಟ್ಟು ಪರಿಹರಿಸಲು ಗ್ರಾಮ ಪಂಚಾಯ್ತಿ ಸದಸ್ಯರ ಆಗ್ರಹ

ಪಟ್ಟಾ ವಿತರಣೆ: ಮುಂದುವರಿದ ಧರಣಿ

Published:
Updated:
ಪಟ್ಟಾ ವಿತರಣೆ: ಮುಂದುವರಿದ ಧರಣಿ

ಗಜೇಂದ್ರಗಡ: ಬಸವ ವಸತಿ ಯೋಜನೆ ಯಡಿ ಈ ಹಿಂದೆ ಮಂಜೂರಾದ ನಿವೇಶನಗಳಿಗೆ ಪಟ್ಟಾ ವಿತರಿಸುವಂತೆ ಒತ್ತಾಯಿಸಿ ಫಲಾನುಭವಿಗಳು ಇಲ್ಲಿಗೆ ಸಮೀಪದ ರಾಜೂರು ಗ್ರಾಮ ಪಂಚಾಯ್ತಿ ಎದುರು ಮಂಗಳ ವಾರದಿಂದ ನಡೆಯುತ್ತಿರುವ ಧರಣಿ ಬುಧವಾರವೂ ಮುಂದುವರಿಯಿತು.

ಈ ಕುರಿತು ಗ್ರಾಮ ಪಂಚಾಯ್ತಿಯಲ್ಲಿ ವಿಶೇಷ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸುರೇಶಗೌಡ ಪಾಟೀಲ ಮಾತನಾಡಿ, 300 ಜನ ಫಲಾನುಭವಿಗಳಲ್ಲಿ ಜಮೀನಿನ ಸುತ್ತ ಬರುವ 112 ಜನರಿಗೆ 20X30 ಅಳತೆಯ, 192 ಜನರಿಗೆ 30X40 ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಿ ಪಟ್ಟಾ ತಯಾರಿಸಲಾಗಿದ್ದು, ಈಗ ಪಟ್ಟಾ ಹಂಚಿದರೆ ನಾಳೆ ಇತರರೂ 30X40 ಅಳತೆಯ ನಿವೇಶನ ನೀಡುವಂತೆ ಪ್ರತಿಭಟನೆ ಮಾಡಬಹುದು ಎಂದರು.

ಸದಸ್ಯ ಶರಣಪ್ಪ ಇಟಗಿ ಮಾತನಾಡಿ, ಎಲ್ಲ ಫಲಾನುಭವಿಗಳ ಒಪ್ಪಿಗೆ ಇದ್ದರೆ ಅವರ ಒಪ್ಪಿಗೆ ಪತ್ರ ಪಡೆದು ಪಟ್ಟಾ ವಿತರಿಸಿ ಎಂದರು.

ಸದಸ್ಯೆ ಸಂಗವ್ವ ಪಾಟೀಲ ಮಾತನಾಡಿ, ಈ ಯೋಜನೆಯಲ್ಲಿ ಎರಡು ವರ್ಷದಲ್ಲಿ ಇನ್ನೂ 200 ಜನ ಫಲಾನುಭವಿಗಳನ್ನು ಸೇರಿಸಲಾಗಿದೆ. ಈ ಸಮಸ್ಯೆ ಬಗೆಹರಿಸಿ ಪಟ್ಟಾ ವಿತರಿಸಿ ಎಂದರು.

ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಶಿವಕುಮಾರ ಜಾಧವ ಮಾತನಾಡಿ, ಈ ಜಮೀನಿನಲ್ಲಿ ಸುತ್ತಲೂ ಬರುವ 112 ನಿವೇಶನಗಳು 20X30 ಅಳತೆ ಇದ್ದು ಅದರ ಮುಂದೆ 30 ಅಡಿ ರಸ್ತೆ ಬಿಡಲಾಗಿದ್ದು, ಒಳಗೆ ಬರುವ 192 ನಿವೇಶನಗಳು 30X40 ಅಳತೆ ಇದ್ದು ಅದರ ಮುಂದೆ 20 ಅಡಿ ರಸ್ತೆ ಬಿಡಲಾಗಿದೆ. ಜಮೀನಿನ ಸುತ್ತಲೂ ಬರುವ ನಿವೇಶನಗಳಲ್ಲಿ ‘ನಮಗೆ ಜಾಗ ಕಡಿಮೆ ಬಂದರೂ ಚಿಂತೆಯಿಲ್ಲ ನಾವು ಅಂಗಡಿ ಮಾಡಿಕೊಳ್ಳುತ್ತೇವೆ’ ಎಂದು ಫಲಾನುಭವಿಗಳು ಒಪ್ಪಿಕೊಂಡ ಮೇಲೆ ಹಂಚಿಕೆ ಮಾಡಿ ಪಟ್ಟಾ ತಯಾರಿಸಲಾಗಿತ್ತು ಎಂದರು.

ಪಿ.ಡಿ.ಒ ಶಿವಪ್ಪ ತಳವಾರ ಮಾರ್ಚ್‌ 10 ರ ಒಳಗಾಗಿ ಠರಾವು ಪಾಸ್ ಮಾಡಿ ಪಟ್ಟಾ ಹಂಚಲಾಗುವುದು ಎಂದು ಲಿಖಿತ ರೂಪದಲ್ಲಿ ಕೊಡಲು ಮುಂದಾದರು. ಕೆಲ ಸದಸ್ಯರು ಇಲ್ಲದ ಕಾರಣ ಒಮ್ಮತದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ನಂತರ ಸಾಂಕೇತಿಕವಾಗಿ ಕೆಲವು ಫಲಾನುಭವಿಗಳಿಗೆ ಪಟ್ಟಾ ಹಂಚುವಂತೆ ಪ್ರತಿಭಟನಾ ನಿರತರು ಪಟ್ಟು ಹಿಡಿದರು.

ಆಗ ತಳವಾರ ಅವರು, ಇಂದಿನ ಸಭೆಯಲ್ಲಿ ಕೋರಂ ಭರ್ತಿಯಾಗಿಲ್ಲ ನಾಳೆ ಸಭೆ ಕರೆದು ಸಭೆ ನಿರ್ಧಾರದಂತೆ ಮೇಲಧಿಕಾರಿಗಳನ್ನು ಕರೆಸಿ ಪಟ್ಟಾ ಹಂಚಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಆಗ ಪ್ರತಿಭಟನಾ ನಿರತರು ಕೋರಂ ಭರ್ತಿಯಾಗಿಲ್ಲ ಎಂಬುದನ್ನು ಮೊದಲೇ ಏಕೆ ತಿಳಿಸಲಿಲ್ಲ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೇ ಪ್ರತಿಭಟನೆಯನ್ನು ಗುರುವಾರವೂ ಮುಂದುವರಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದರು.

ಪಿ.ಎಸ್.ಐ ಆರ್.ವೈ.ಜಲಗೇರಿ ಸೂಕ್ತ ಭದ್ರತೆ ವಹಿಸಿದ್ದರು. ಪ್ರತಿಭಟನೆಯಲ್ಲಿ ಫಲಾನುಭವಿಗಳು ಗ್ರಾಮ ಪಂಚಾಯ್ತಿ ಸದಸ್ಯರ ಮತ್ತು ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿರುವುದು ಕಂಡು ಬಂತು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಲಿತಾ ಮಳಗಿ, ಸದಸ್ಯರಾದ ರೇಣವ್ವ ಕಮಾಟ್ರ, ಶರಣಪ್ಪ ಹಾದಿಮನಿ, ಮೇರುಬಿ ಮುಜಾವರ, ಕೇಶಪ್ಪ ರಾಠೋಡ, ಶ್ರೀದೇವಿ ಭಜಂತ್ರಿ, ದಾಕ್ಷಾಯಣಿ ಜೋಗಿನ, ಕಳಕಪ್ಪ ಹೂಗಾರ, ಶಿವಕುಮಾರ ಜಾಧವ, ಸುಗೀರೇಶ ಕಾಜಗಾರ, ಮಹೇಶ ಮಕ್ತಲಿ, ಪರಶುರಾಮ ಶಂಕ್ರಿ ಈ ವೇಳೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry