ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2.19 ಕೋಟಿಯ ಮಿಗತೆ ಬಜೆಟ್‌

ಕಾನೂನು ಬಾಹಿರವಾಗಿ ಖಾಲಿ ಜಾಗ ಹರಾಜು, ಹಾವೇರಿ ನಗರಸಭೆ ಅಧ್ಯಕ್ಷರ ವಿರುದ್ಧ ಆರೋಪ
Last Updated 1 ಮಾರ್ಚ್ 2018, 10:51 IST
ಅಕ್ಷರ ಗಾತ್ರ

ಹಾವೇರಿ: ₹2.19 ಲಕ್ಷ ಉಳಿತಾಯದ 2018–19ನೇ ಸಾಲಿನ ಬಜೆಟ್‌ ಅನ್ನು ನಗರಸಭೆಯಲ್ಲಿ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ ಬುಧವಾರ ಮಂಡಿಸಿದರು.

ಉದ್ದೇಶಿತ ಸಾಲಿನಲ್ಲಿ ₹39.24 ಕೋಟಿ ಆದಾಯ ನಿರೀಕ್ಷಿಸಿದ್ದು, ₹ 39.22 ವೆಚ್ಚ ಅಂದಾಜಿಸಲಾದ ಬಜೆಟ್‌ ಅನ್ನು ಅವರು ಸಭೆಯ ಮುಂದಿಟ್ಟರು.

ಆರಂಭದಲ್ಲಿಯೇ ಪ್ರಶ್ನಿಸಿದ ಕಾಂಗ್ರೆಸ್ ಸದಸ್ಯ ಐ.ಯು. ಪಠಾಣ್, ‘ಯಾವ ಸದಸ್ಯರ ಜೊತೆ ಚರ್ಚಿಸಿ ಬಜೆಟ್‌ ಮಂಡಿಸಿದ್ದೀರಿ? ವಿಷಯಗಳ ಯೋಜನಾ ವರದಿ ಸಿದ್ಧವಾಗಿದೆಯೇ? ಯಾವ ಯೋಜನೆಗೆ ಯಾವ ಅನುದಾನ ವನ್ನು ಮೀಸಲಿಟ್ಟಿದ್ದೀರಿ? ಎಂದರು.

‘ಸದಸ್ಯರ ಜೊತೆ ಚರ್ಚಿಸುವ ಸಲುವಾಗಿಯೇ ಬಜೆಟ್‌ ಅನ್ನು ಸಭೆಯಲ್ಲಿ ಮಂಡಿಸಲಾಗಿದೆ’ ಎಂದು ಅಧ್ಯಕ್ಷರು ಉತ್ತರಿಸಿದರು.

‘ಬಜೆಟ್‌ ಬಗ್ಗೆ ಸದಸ್ಯರಿಗೇ ತಿಳಿಸದಿದ್ದರೆ ಹೇಗೆ?’ ಎಂಬ ಐ.ಯು.ಪಠಾಣ್ ಮರುಪ್ರಶ್ನೆಗೆ ಕಾಂಗ್ರೆಸ್‌ನ ರಮೇಶ ಕಡಕೋಳ ಮತ್ತಿತರರು ಬೆಂಬಲ ಸೂಚಿಸಿದರು.

ಸದಸ್ಯ ನಿರಂಜನ ಹೇರೂರ ಮಾತನಾಡಿ, ‘ನಗರದ ಕಾವೇರಿ ಹೋಟೆಲ್‌ ಪಕ್ಕದ ಐ.ಟಿ.ಎಸ್‌.ಎಂ.ಟಿ. ಮಳಿಗೆಗಳ ಮಧ್ಯದಲ್ಲಿನ ಖಾಲಿ ಜಾಗವನ್ನು ಕಾನೂನು ಬಾಹಿರವಾಗಿ ಬಾಡಿಗೆ ನೀಡಿದ್ದೀರಿ’ ಎಂದು ಅಧ್ಯಕ್ಷರ ವಿರುದ್ಧ ಆರೋಪಿಸಿದರು.

‘ಎಲ್ಲ ಸದಸ್ಯರ ಒಪ್ಪಿಗೆ ಪಡೆಯ ಲಾಗಿದೆ’ ಎಂದು ಸಮಜಾಯಿಷಿ ನೀಡಿ ದರು. ‘ಹಾಗಿದ್ದರೆ, ಠರಾವು ತೋರಿಸಿ’ ಎಂದು ಹೇರೂರ ಸುಮಾರು ಅರ್ಧ ತಾಸು ಪಟ್ಟು ಹಿಡಿದು ಒತ್ತಾಯಿಸಿದರು. ಅಲ್ಲದೇ, ‘ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ, ಬಾಡಿಗೆ ನೀಡಲಾಗಿದೆ. ಈ ಬಗ್ಗೆ ಎಲ್ಲರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದೂ ದೂರಿದರು.

ಸದಸ್ಯ ಶಿವಬಸವ ವನ್ನಳ್ಳಿ ಮಾತ ನಾಡಿ, ರಾಷ್ಟ್ರೀಯ ಬಸವದಳಕ್ಕೆ ಮಂಜೂರು ಮಾಡಲು ನಿಗದಿ ಪಡಿಸಿದ ಜಾಗದಲ್ಲಿ ಸಮುದಾಯ ಭವನ ವೊಂದರ ಕಾಮಗಾರಿ ನಡೆಯುತ್ತಿದೆ’ ಎಂದರು. ‘ಬೇರೆ ಜಾಗವನ್ನಾದರೂ ಗುರುತಿಸಿ ನೀಡಿ’ ಎಂದು ಸದಸ್ಯ ಗಣೇಶ ಬಿಷ್ಟಣ್ಣನವರ ಸಲಹೆ ನೀಡಿದರು.

ಕುಡಿಯುವ ನೀರು: ‘ಬೇಸಿಗೆಯಲ್ಲಿ 10ರಿಂದ 12 ದಿನಕ್ಕೊಮ್ಮೆ ನೀರು ನೀಡ ಲಾಗು ತ್ತಿದೆ’ ಎಂದು ಸದಸ್ಯ ಗಣೇಶ ಬಿಷ್ಟಣ್ಣ ನವರ ದೂರಿದರು.

‘24X7 ಕುಡಿಯುವ ನೀರಿನ ಯೋಜನೆ ಯನ್ನು ಕೆ.ಯು.ಐ.ಡಿ.ಎಫ್‌.ಸಿ.ಗೆ ಹಸ್ತಾಂತರಿಸಿದರೆ 2ರಿಂದ 3 ದಿನಕ್ಕೊಮ್ಮೆ ನೀರು ನೀಡಬಹುದು’ ಎಂದು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಗಂಗಾಧರ ಪ್ರತಿಕ್ರಿಯಿಸಿದರು.

‘ಅವರು, ಮೊಬೈಲ್‌ ಸ್ವಿಚ್‌ ಆಫ್ ಮಾಡಿ 15 ದಿನಗಳು ಕಳೆದಿವೆ. ಇನ್ನು ಬೇಸಿಗೆಯಲ್ಲಿ 2ರಿಂದ 3 ದಿನಗಳ ಒಳಗೆ ನೀರು ಹೇಗೆ ನೀಡುತ್ತಾರೆ’ ಎಂದು ಬಿಷ್ಟಣ್ಣನವರ ಮಾರ್ಮಿಕವಾಗಿ ಪ್ರಶ್ನಿಸಿದರು.

ಉಪಾಧ್ಯಕ್ಷ ಇರ್ಫಾನ್‌ ಪಠಾಣ ಹಾಗೂ ಪೌರಾಯುಕ್ತ ಶಿವಕುಮಾರಯ್ಯ ಇದ್ದರು.
***
ಶ್ರೀಮಂತ ವ್ಯಕ್ತಿ ಯಾರು?

ವಾರ್ಡ್‌ –4ರ ಮುಖ್ಯ ರಸ್ತೆಯ ಮೇಲೆಯೇ ಶ್ರೀಮಂತ ವ್ಯಕ್ತಿಯೊಬ್ಬ 2 ರಿಂದ 3 ಮನೆಗಳನ್ನು ಕಟ್ಟಿ ಬಾಡಿಗೆ ನೀಡಿದ್ದಾನೆ. ಅದನ್ನು ತೆರವುಗೊಳಿಸಬೇಕು ಎಂದು ನಡಾವಳಿಯಲ್ಲಿ 66 ನೇ ವಿಷಯ ನಮೂದಿಸಲಾಗಿತ್ತು. ಆದರೆ, ಆ ‘ಶ್ರೀಮಂತ’ ವ್ಯಕ್ತಿ ಯಾರು? ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದರೂ, ಹೆಸರನ್ನು ಯಾರೂ ಹೇಳಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT