ಬಂಡಾಯ ನಿಯಂತ್ರಣಕ್ಕೆ ಬಿಜೆಪಿ ‘ವಿಪ್‌’ ಜಾರಿ

4
ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ

ಬಂಡಾಯ ನಿಯಂತ್ರಣಕ್ಕೆ ಬಿಜೆಪಿ ‘ವಿಪ್‌’ ಜಾರಿ

Published:
Updated:
ಬಂಡಾಯ ನಿಯಂತ್ರಣಕ್ಕೆ ಬಿಜೆಪಿ ‘ವಿಪ್‌’ ಜಾರಿ

ಹುಬ್ಬಳ್ಳಿ: ಮಹಾನಗರ ಪಾಲಿಕೆ ಮೇಯರ್‌, ಉಪ ಮೇಯರ್‌ ಸ್ಥಾನಕ್ಕೆ ಮಾರ್ಚ್‌ 3ರಂದು ಮಧ್ಯಾಹ್ನ 1ಕ್ಕೆ ನಡೆಯಲಿರುವ ಚುನಾವಣೆಗೆ ಎರಡು ದಿನ ಬಾಕಿ ಇರುವಾಗಲೇ ತೆರೆಮರೆಯ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ.

ಆಡಳಿತರೂಢ ಬಿಜೆಪಿಯಲ್ಲಿ ಮೇಯರ್‌ ಸ್ಥಾನ ಆಕಾಂಕ್ಷಿಗಳ ಸಂಖ್ಯೆ ಈಗಾಗಲೇ 10ರ ಗಡಿ ತಲುಪಿದೆ. ಜೊತೆಗೆ ಉಪಮೇಯರ್‌ ಸ್ಥಾನಕ್ಕೆ ನಾಲ್ಕು ಆಕಾಂಕ್ಷಿಗಳು ತೀವ್ರ ಕಸರತ್ತು ನಡೆಸಿದ್ದಾರೆ.

ಕೊನೆಯ ಅವಧಿ ಇದಾಗಿರುವುದರಿಂದ ಸಹಜವಾಗಿ ಆಕಾಂಕ್ಷಿಗಳು ತೀವ್ರ ಲಾಭಿ ನಡೆಸಿದ್ದಾರೆ. ಈಗಾಗಲೇ ಕೆಲವು ಆಕಾಂಕ್ಷಿಗಳು ಮೇಯರ್‌ ಸ್ಥಾನಕ್ಕೆ ಬಹಿರಂಗವಾಗಿ ಬೇಡಿಕೆ ಇಟ್ಟಿದ್ದಾರೆ. ಅವಕಾಶ ವಂಚಿತರು ಬಂಡಾಯ ಏಳಬಹುದು ಎಂಬ ಸಂಶಯದಿಂದ ಬಿಜೆಪಿಯು ತನ್ನ ಎಲ್ಲ 35 ಸದಸ್ಯರಿಗೆ ‘ವಿಪ್‌’ ಜಾರಿಗೊಳಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹುಬ್ಬಳ್ಳಿ–ಧಾರವಾಡ ಮಹಾನಗರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ‘ಮೇಯರ್‌, ಉಪಮೇಯರ್‌ ಸ್ಥಾನಕ್ಕೆ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಚುನಾವಣೆ ದಿನ ಪಕ್ಷದ ಅಧಿಕೃತ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಸೂಚಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಆದೇಶದಂತೆ ಈಗಾಗಲೇ ವಿಪ್‌ ಜಾರಿ ಮಾಡಲಾಗಿದೆ’ ಎಂದು ತಿಳಿಸಿದರು.

‘ಮೇಯರ್‌, ಉಪಮೇಯರ್‌ ಆಯ್ಕೆ ಸಂಬಂಧ ಮಾ. 2ರಂದು ಬಿಜೆಪಿ ಜಿಲ್ಲಾ ಕೋರ್‌ ಕಮಿಟಿ ಸಭೆ ಕರೆಯಲಾಗಿದೆ. ಅಂದು ಪಾಲಿಕೆ ಸದಸ್ಯರ ಅಭಿಪ್ರಾಯ ಪಡೆದುಕೊಳ್ಳಲಾಗುವುದು. ಚುನಾವಣೆ ದಿನ ಬೆಳಿಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಸಂಸದ ಪ್ರಹ್ಲಾದ ಜೋಶಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಸೇರಿದಂತೆ ಪ್ರಮುಖರನ್ನು ಒಳಗೊಂಡಿರುವ ಕೋರ್‌ ಕಮಿಟಿಯು, ಅರ್ಹರನ್ನು ಮೇಯರ್‌, ಉಪ ಮೇಯರ್‌ ಸ್ಥಾನಕ್ಕೆ ಆಯ್ಕೆ ಮಾಡಲಿದೆ’ ಎಂದರು.

ಮೇಯರ್‌ ಆಕಾಂಕ್ಷಿಗಳು: ಸದಸ್ಯರಾದ ಸುಧೀರ್‌ ಸರಾಫ್‌, ಶಿವಾನಂದ ಮುತ್ತಣ್ಣವರ, ರಾಮಣ್ಣ ಬಡಿಗೇರ, ಸತೀಶ ಹಾನಗಲ್‌, ಬೀರಪ್ಪ ಖಂಡೇಕರ, ಸಂಜಯ ಕಪಾಟಕರ, ಉಮೇಶ ಕೌಜಗೇರಿ, ವಿಜಯಾನಂದ ಶೆಟ್ಟಿ, ಲಕ್ಷ್ಮಣ ಗಂಡಗಾಳೇಕರ, ಶಂಕರ ಶೇಳಕೆ, ಶಿವಪ್ಪ ಫಕೀರಪ್ಪ ಬಡವಣ್ಣವರ, ಮಲ್ಲಿಕಾರ್ಜುನ ಹೊರಕೇರಿ ಮತ್ತು ಮೇನಕಾ ಹುರುಳಿ ಅವರು ಮೇಯರ್‌ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಮೇಯರ್‌ ಸ್ಥಾನ ಒಂದು ವೇಳೆ ಲಭಿಸದೇ ಇದ್ದರೆ, ಉಪ ಮೇಯರ್‌ ಸ್ಥಾನವನ್ನಾದರೂ ನೀಡಲೇಬೇಕು ಎಂದು ಸದಸ್ಯರಾದ ಬೀರಪ್ಪ ಖಂಡೇಕರ, ಮೇನಕಾ ಹುರಳಿ, ಉಮೇಶಗೌಡ ಕೌಜಗೇರಿ, ಶಿವಪ್ಪ ಫಕೀರಪ್ಪ ಬಡವಣ್ಣವರ ಬೇಡಿಕೆ ಇಟ್ಟಿದ್ದಾರೆ.

‘ಮುಂಬರುವ ವಿಧಾನಸಭೆ, ಲೋಕಸಭೆ ಮತ್ತು ಪಾಲಿಕೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಮರ್ಥರ ಆಯ್ಕೆ ನಡೆಯಲಿದೆ’ ಎಂದು ನಾಗೇಶ ಕಲಬುರ್ಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry