ಪ್ರೀತಿಗೆ ಸುಕೃತಾ ರಾಯಭಾರಿ

7

ಪ್ರೀತಿಗೆ ಸುಕೃತಾ ರಾಯಭಾರಿ

Published:
Updated:
ಪ್ರೀತಿಗೆ ಸುಕೃತಾ ರಾಯಭಾರಿ

ಟಿ.ವಿ. ನಿರೂಪಕಿಯಾಗಿ ಮೊದಲು ಪರದೆಯ ಮೇಲೆ ಕಾಣಿಸಿಕೊಂಡ ಸುಕೃತಾ ದೇಶಪಾಂಡೆ ಈಗ ತಮ್ಮ ಸಿನಿಮಾ ಜೀವನದ ಮೂರನೆಯ ಸಿನಿಮಾ ತೆರೆಗೆ ಬರುತ್ತಿರುವ ಖುಷಿಯಲ್ಲಿ ಇದ್ದಾರೆ. ಅವರು ನಾಯಕಿಯಾಗಿ ಅಭಿನಯಿಸಿರುವ ‘ಪ್ರೀತಿಯ ರಾಯಭಾರಿ’ ಚಿತ್ರ ಶುಕ್ರವಾರ ತೆರೆಗೆ ಬರುತ್ತಿದೆ.

ಸುಕೃತಾ ಅವರು ತೆಲುಗಿನ ಒಂದು ಚಿತ್ರದಲ್ಲಿ, ಕನ್ನಡದ ಒಂದು ಚಿತ್ರದಲ್ಲಿ (ತರ್ಲೆ ನನ್ನ ಮಕ್ಳು) ಕಾಣಿಸಿಕೊಂಡಿದ್ದಾರೆ. ‘ಪ್ರೀತಿಯ ರಾಯಭಾರಿ’ ಚಿತ್ರ ಅವರಿಗೆ ಕನ್ನಡದಲ್ಲಿ ಎರಡನೆಯದು. ‘ಕಪಿಚೇಷ್ಟೆ’ ಎಂಬ ಇನ್ನೊಂದು ಸಿನಿಮಾದಲ್ಲಿಯೂ ಇವರು ಬಣ್ಣ ಹೆಚ್ಚಿದ್ದಾರೆ. ಸಿನಿಮಾ ಬಿಡುಗಡೆಗೆ ಮೊದಲು ಅವರು ‘ಚಂದನವನ’ದ ಜೊತೆ ಮಾತಿಗೆ ಸಿಕ್ಕರು. ಸಿನಿಮಾದ ಸುದ್ದಿಗೋಷ್ಠಿ ಮುಗಿಸಿದ ನಂತರವೂ, ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಆಸಕ್ತಿ ಅವರಲ್ಲಿ ಇತ್ತು.

‘ಪ್ರೀತಿಯ ರಾಯಭಾರಿ ಚಿತ್ರದಲ್ಲಿ ಮೊದಲ ಒಂದಿಷ್ಟು ದೃಶ್ಯಗಳಲ್ಲಿ ನಾನು ಬಬ್ಲಿ ಹುಡುಗಿಯಾಗಿ, ಎಲ್ಲರೂ ಇಷ್ಟಪಡುವಂತಹ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತೇನೆ. ಈ ಸಿನಿಮಾದಲ್ಲಿ ತಿರುವುಗಳು ಸಾಕಷ್ಟು ಇವೆ. ಇದು ಜನರನ್ನು ತನ್ನೊಳಗೆ ಸೆಳೆದುಕೊಳ್ಳುವ ಸಿನಿಮಾ. ಪಾತ್ರಗಳು ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತವೆ, ಅದರಿಂದ ಹೊರಬರಲು ಅವರಿಗೆ ಆಗುವುದಿಲ್ಲ. ಹೀಗೆ ಎಲ್ಲರಲ್ಲೂ ಖುಷಿ ಮೂಡಿಸುವಂತಹ ಹುಡುಗಿಗೂ ಹೀಗೆ ಆಗುತ್ತಾ ಅನ್ನುವಂತಹ ತಿರುವು ಸಿನಿಮಾದಲ್ಲಿ ಇದೆ. ನನಗೆ ಅಭಿನಯಕ್ಕೆ ಅವಕಾಶ ನೀಡಿದ ಸಿನಿಮಾ ಇದು. ಹೆಣ್ಣಿನ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯ ಇದರಲ್ಲಿ ಇದೆ’ ಎಂದರು ಸುಕೃತಾ.

ಸುಕೃತಾ ಅವರು ಹೇಳುವಂತೆ, ಈ ಸಿನಿಮಾ ಸೂಕ್ಷ್ಮವಾದ ಕಥಾವಸ್ತುವನ್ನು ಹೊಂದಿದೆ. ‘ತರ್ಲೆ ನನ್ ಮಕ್ಳು ಸಿನಿಮಾದಲ್ಲಿ ನನ್ನ ಅಭಿನಯಕ್ಕೆ ಅಷ್ಟೊಂದು ಅವಕಾಶ ಇರಲಿಲ್ಲ. ಒಂದೆರಡು ಹಸಿಬಿಸಿ ಹಾಡುಗಳು ಅದರಲ್ಲಿ ಇದ್ದವು. ಆ ಸಿನಿಮಾ ಆದ ನಂತರ ನಾನು ಕೊಂಚ ವಿರಾಮ ತೆಗೆದುಕೊಂಡೆ. ಸಿನಿಮಾ ಕ್ಷೇತ್ರದಲ್ಲಿ ಜನ ನನ್ನನ್ನು ಗುರುತಿಸುವಂತೆ ಆಗಬೇಕು ಎಂಬ ಆಸೆ ಎಲ್ಲರಲ್ಲೂ ಇರುತ್ತದೆ. ಅದಕ್ಕೆ ಅಭಿನಯಕ್ಕೆ ಅವಕಾಶ ಇರುವ ಪಾತ್ರ ಬೇಕು. ಪ್ರೀತಿಯ ರಾಯಭಾರಿ ಸಿನಿಮಾದಲ್ಲಿ ನಾನು ಬಯಸಿದಂತಹ ಪಾತ್ರ ಸಿಕ್ಕಿದೆ. ಅಭಿನಯಕ್ಕೆ ಅವಕಾಶ ಇರುವ ಕಥಾವಸ್ತು ಕಂಡಾಗ ಅದರಲ್ಲಿ ನಾನೂ ಅಭಿನಯಿಸಬೇಕು ಎಂದು ಅನಿಸುತ್ತದೆ. ವರ್ಸಟೈಲ್ ಆಗಿರುವ ಪಾತ್ರಗಳು ನನಗೆ ಬೇಕು. ಒಂದೇ ಬಗೆಯ ಪಾತ್ರಗಳಿಗೆ ನನ್ನನ್ನು ಸೀಮಿತ ಮಾಡಿಕೊಳ್ಳಲು ಇಷ್ಟವಿಲ್ಲ’ ಎಂದು ಒಂದೇ ಉಸಿರಿಗೆ ಹೇಳಿದರು ಸುಕೃತಾ.

ಸಿನಿಮಾ ರಂಗಕ್ಕೆ ಬರುತ್ತಿರುವ ಹೊಸಬರು ಅಭಿನಯದ ಬಗ್ಗೆ ತರಬೇತಿ ಪಡೆಯುವುದು ಹೊಸದೇನೂ ಅಲ್ಲ. ಆದರೆ, ಈ ವಿಚಾರದಲ್ಲಿ ಸುಕೃತಾ ತಮ್ಮದೇ ಆದ ನಿಲುವು ಹೊಂದಿದ್ದಾರೆ. ಅವರು ಅಭಿನಯದ ತರಬೇತಿಯನ್ನೇನೂ ಪಡೆದವರಲ್ಲ. ‘ಸಿನಿಮಾ ಕ್ಷೇತ್ರದಲ್ಲಿ ಬೆಳೆಯುತ್ತ ಬಂದಂತೆ ಅಭಿನಯ ಅಂದರೆ ಏನು ಎಂಬುದು ಗೊತ್ತಾಗುತ್ತ ಹೋಗುತ್ತದೆ’ ಎನ್ನುತ್ತಾರೆ ಅವರು.

ಸಿನಿಮಾ ಹಿನ್ನೆಲೆ ಇಲ್ಲದೆ ಸಿನಿಮಾ ಕ್ಷೇತ್ರಕ್ಕೆ ಬರುವ ಹೆಣ್ಣುಮಕ್ಕಳಿಗೆ ಸುಕೃತಾ ಅವರಿಂದ ಒಂದು ಕಿವಿಮಾತು ಇದೆ. ‘ಹೆಣ್ಣುಮಕ್ಕಳಿಗೆ ಅವರ ಪೋಷಕರು ಕೊಡುವ ಬೆಂಬಲ, ಹಣಕಾಸಿನ ನೆರವು ಬಹಳ ಪ್ರಮುಖವಾಗುತ್ತದೆ. ಸಿನಿಮಾ ಯೋಜನೆ ಕೆಲವೊಮ್ಮೆ ವಿಳಂಬ ಆಗುವುದೂ ಇರುತ್ತದೆ. ಆಗೆಲ್ಲ ಪೋಷಕರ ಬೆಂಬಲ ಬೇಕಾಗುತ್ತದೆ. ಹಾಗೆಯೇ, ಹೊಸದಾಗಿ ಬರುವವರು ಯಾವ ಸಂದರ್ಭದಲ್ಲೂ ಭರವಸೆ ಕಳೆದುಕೊಳ್ಳಬಾರದು. ದಕ್ಕುವ ಎಲ್ಲ ಅನುಭವಗಳನ್ನೂ ಸಿನಿಮಾ ಅಭಿನಯದಲ್ಲಿ ಬಳಸಿಕೊಳ್ಳಬೇಕು. ಅದು ಒಳ್ಳೆಯ ಫಲ ನೀಡುತ್ತದೆ’ ಎನ್ನುವುದು ಅವರ ಹಿತನುಡಿ.

ಅಂದಹಾಗೆ, ಸುಕೃತಾ ಅವರಿಗೆ ಎಲ್ಲ ಮುಂಚೂಣಿ ನಾಯಕ ನಟರ ಜೊತೆ, ನಿರ್ದೇಶಕರ ಜೊತೆ ಕೆಲಸ ಮಾಡುವ ಆಸೆ ಇದೆಯಂತೆ. ‘ಇಂಥವರ ಜೊತೆಯೇ ಕೆಲಸ ಮಾಡಬೇಕು ಎಂದು ನಿರ್ದಿಷ್ಟವಾಗಿ ಹೇಳಲಾರೆ’ ಎಂದು ನಗು ಬೀರುತ್ತಾರೆ. ‘ಇಂದಿನ ಕಾಲದಲ್ಲಿ, ಸಿನಿಮಾ ರಂಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಕಷ್ಟಪಡುತ್ತಿರುವ ಹೆಣ್ಣುಮಕ್ಕಳಿಗೆ ಸಹಾಯ ಮಾಡುವ ಸಾಮರ್ಥ್ಯ ಇರುವವರು ಸಹಾಯಹಸ್ತ ಚಾಚಬೇಕು. ಇದು ಆ ಹೆಣ್ಣುಮಕ್ಕಳಿಗೆ ಒಳ್ಳೆಯದು ಮಾಡುತ್ತದೆ’ ಎಂದೂ ಅವರು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry