ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಡೇರಿದ ಚಂದನ್ ಕನಸು

Last Updated 1 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಪುನರ್‌ವಿವಾಹ’ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟು ಆದಿತ್ಯ ಪಾತ್ರದ ಮೂಲಕ ಸೈ ಎನಿಸಿಕೊಂಡವರು ಯುವನಟ ಚಂದನ್ ವಿಜಯ್.

ಆಕರ್ಷಕ ನಿಲುವು, ಚೆಲುವಿನಿಂದ ಮೊದಲ ಧಾರಾವಾಹಿಯಲ್ಲೇ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಖಾಕಿ, ತಲೆಗೊಂದು ಟೋಪಿ, ಕೈಯಲ್ಲಿ ಲಾಠಿ ಹಿಡಿದು ಪೊಲೀಸ್‌ ಖದರ್‌ ತೋರುತ್ತಿರುವ ಎತ್ತರದ ನಿಲುವು. ಇದು ಜೀ ಕನ್ನಡ ವಾಹಿನಿಯ ‘ಪತ್ತೆದಾರಿ ಪ್ರತಿಭಾ’ ಧಾರಾವಾಹಿಯ ಸಬ್ಇನ್‌ಸ್ಪೆಕ್ಟರ್‌ ಅಜಯ್‌ ಪಾತ್ರಧಾರಿಯಾದ ಚಂದನ್ ಅವರ ಬಾಹ್ಯ ಝಲಕ್.

ಭವಿಷ್ಯದಲ್ಲಿ ದೊಡ್ಡ ನಟನಾಗಬೇಕೆಂಬ ಕನಸು ಕಂಡರು. ಆ ಕನಸು ಈಗ ‘ಪತ್ತೆದಾರಿ ಪ್ರತಿಭಾ’ದಲ್ಲಿ ಸಾಕಾರಗೊಂಡಿದೆ. ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಬಿ.ಬಿ.ಎಂ. ಪದವಿ ಪಡೆದಿದ್ದಾರೆ.

ಅವರ ತಂದೆ ಗೆಜ್ಜೆನಾದ ವಿಜಯಕುಮಾರ. ಮೊದಲಿಗೆ ನಟನೆ ಬಗೆಗೆ ಹೆಚ್ಚಿನ ಒಲವಿರದ ಅವರಿಗೆ ನೃ‌ತ್ಯವೇ ಪ್ರಪಂಚವಾಗಿತ್ತು. ಖಾಸಗಿ ಕಂಪನಿಗಳಲ್ಲಿ ವೃತ್ತಿ ಬದುಕು ಕಂಡುಕೊಂಡಿದ್ದರೂ ಆ ಕೆಲಸ ಅವರಿಗೆ ತೃಪ್ತಿ ಕೊಡಲಿಲ್ಲವಂತೆ. ಖುಷಿಯ ಜತೆಗೆ ತೃಪ್ತಿ ಇರುವ ಕೆಲಸ ಮಾಡಬೇಕು ಎನ್ನುವ ತುಡಿತದಿಂದಲೇ ನಟನಾ ರಂಗದತ್ತ ಮುಖ ಮಾಡಿದರು.

ತಂದೆಯ ಸಿನಿಮಾ ಒಡನಾಟದಿಂದ ಆಗಾಗ ಚಿತ್ರೀಕರಣದ ಸ್ಥಳಕ್ಕೆ ಹೋಗುತ್ತಿದ್ದರಂತೆ. ‘ನಟನೆ ಅಷ್ಟು ಸುಲಭದ್ದಲ್ಲ. ಎಲ್ಲರಿಗೂ ನಟನೆ ಒಲಿಯುವಂಥದ್ದಲ್ಲ ಎಂಬುದು ಅರಿವಿಗೆ ಬಂತು. ಹಾಗಾಗಿ ನನಗೂ ಅದರಲ್ಲಿ ಆಸಕ್ತಿ ಹೆಚ್ಚಾಗಿ ನಟನಾ ಬದುಕಿಗೆ ನನ್ನನ್ನು ಅರ್ಪಿಸಿಕೊಳ್ಳುವ ದೃಢ ನಿರ್ಧಾರ ಮಾಡಿದೆ’ ಎನ್ನುತ್ತಾರೆ ಅವರು.

ನಟನಾಗಲು ಮರುಜನ್ಮ ಇದೆಯೋ ಇಲ್ಲವೊ ಗೊತ್ತಿಲ್ಲ. ಈ ಜನ್ಮದಲ್ಲೇ ಡಾಕ್ಟರ್‌, ಎಂಜಿನಿಯರ್‌, ಪೊಲೀಸ್‌ ಹೀಗೆ ವಿಭಿನ್ನ ಪಾತ್ರಗಳನ್ನು ನಟನಾ ರಂಗದಲ್ಲಿ ಮಾತ್ರ ಕಂಡುಕೊಳ್ಳಬಹುದು. ಅಂದುಕೊಂಡ ಎಲ್ಲ ವೃತ್ತಿಗಳನ್ನು ಪಾತ್ರಗಳ ಮೂಲಕ ಅನುಭವಿಸುವ ಅವಕಾಶ ಮತ್ತು ಬದುಕಿನ ಕಲಿಕೆ ಇದರಿಂದ ಸಾಧ್ಯ ಎನ್ನುವ ನಿಲುವು ಅವರದ್ದು.

ನಟನೆಯಲ್ಲಿ ಪರಿಪೂರ್ಣತೆ ಸಿಗುವುದು ಸುಲಭದ ಮಾತಲ್ಲ. ಪ್ರತಿ ಸನ್ನಿವೇಶವೂ ನಮಗೆ ಹೊಸದನ್ನು ಕಲಿಸುತ್ತದೆ. ಜೀವನಪೂರ್ತಿ ಕಲಿತರೂ ಅದು ಮುಗಿಯದ ಅಧ್ಯಾಯ ಎನ್ನುತ್ತಾರೆ ಅವರು.

ತಂದೆಯ ಸಲಹೆ ಮೇರೆಗೆ ಮುಂಬೈನ ‘ರೋಷನ್‌ ತನಿಜಾ ಆ್ಯಕ್ಟಿಂಗ್‌ ಸ್ಕೂಲ್‌’ನಲ್ಲಿ 4 ತಿಂಗಳ ನಟನಾ ತರಬೇತಿ ಪಡೆದು ಬೆಂಗಳೂರಿಗೆ ಬಂದ ತಕ್ಷಣ ನಟಿಸಲು ಅವಕಾಶಗಳು ಒದಗಿಬಂದವು. ಆಗ ನನ್ನ ಕೈಹಿಡಿದಿದ್ದೆ ಶ್ರುತಿ ನಾಯ್ಡು ಅವರ ಪುನರ್‌ವಿವಾಹ ಧಾರಾವಾಹಿ. ಇಲ್ಲಿ ಪೋಲಿ ಹುಡುಗ, ಮಂಗಳಮುಖಿ, ಪೊಲೀಸ್, ವಿದ್ಯಾರ್ಥಿ, ಆಟೊ ಡ್ರೈವರ್‌ ಹೀಗೆ ಹತ್ತಾರು ಬಗೆಯ ಪಾತ್ರಗಳಲ್ಲಿ ಅಭಿನಯಿಸಿದ ಅನುಭವ ನಿಜಕ್ಕೂ ಅನನ್ಯ ಎಂದು ಸ್ಮರಿಸುತ್ತಾರೆ.

ಸಿನಿಮಾದಲ್ಲಿ ನಟನೆಗೆ ಅವಕಾಶ ಸಿಕ್ಕಿತ್ತು. ಆದರೆ, ನಟನೆಯ ಆಳ–ಅಗಲ ತಿಳಿಯದೆ ಸಿನಿಮಾ ರಂಗಕ್ಕೆ ಕಾಲಿಡುವುದು ಸರಿಯಲ್ಲ. ಧಾರಾವಾಹಿಯಲ್ಲೇ ನಟನೆಯ ಪ್ರಾಥಮಿಕ ಜ್ಞಾನ ಪಡೆದು ನೀನು ಹೆಚ್ಚೆಚ್ಚು ಪಳಗಬೇಕು ಎಂಬುದು ಅಪ್ಪನ ಸಲಹೆಯಾಗಿತ್ತು. ಹಾಗಾಗಿ, ಈ ಅವಕಾಶವನ್ನು ತಿರಸ್ಕರಿಸಿದೆ ಎನ್ನುತ್ತಾರೆ ಅವರು.

‘ಪತ್ತೆದಾರಿ ಪ್ರತಿಭಾ’ ಧಾರಾವಾಹಿಯಲ್ಲಿ ಪೊಲೀಸ್‌ ಪಾತ್ರ ಮಾಡುವಾಗ ಅಲ್ಲಿನ ಶಿಸ್ತು, ಕಟ್ಟುನಿಟ್ಟುಗಳು, ಆ ಪಾತ್ರದ ಚೌಕಟ್ಟು ಮೀರುವಂತಿಲ್ಲ. ಮನಬಂದಂತೆ ನಟಿಸಲು ಆಗಲ್ಲ. ನಾಯಕಿ ಪ್ರತಿಭಾ ಅವರಲ್ಲಿನ ಪತ್ತೆದಾರಿತ್ವದ ಕಲೆಯನ್ನು ಹೊರತರುವ ಮತ್ತು ಬೆಂಬಲಿಸುವ ಜವಾಬ್ದಾರಿಯುತವಾದ ಪಾತ್ರ ಅಜಯ್‌ನದ್ದಾಗಿದೆ ಎಂದು ವಿವರಿಸುತ್ತಾರೆ.

ಪೊಲೀಸ್‌ ಪಾತ್ರದಲ್ಲಿ ನಟಿಸಲು ತುಂಬಾ ಕಷ್ಟ ಎನ್ನುವ ಅವರಿಗೆ ನಿಜ ಜೀವನದಲ್ಲಿ ಪೊಲೀಸ್‌ ಅಧಿಕಾರಿಯಾಗಲು ಇಷ್ಟವಿಲ್ಲವಂತೆ.

ಅಭಿನಯಕ್ಕೆ ಹೆಚ್ಚು ಅವಕಾಶವಿರುವ ವಿಲನ್ ಪಾತ್ರ ಮಾಡುವ ಆಸೆಯಿದೆ. ಸಿನಿಮಾದಲ್ಲಿ ನಟಿಸಲು ನೈಜ ಕಥೆ ಮತ್ತು ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೇನೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT