7

ಬಬ್ಲಿ ಹುಡುಗಿಯ ‘ಜೋ ಜೋ ಲಾಲಿ’

Published:
Updated:
ಬಬ್ಲಿ ಹುಡುಗಿಯ ‘ಜೋ ಜೋ ಲಾಲಿ’

ನಿಜ ಜೀವನದಲ್ಲಿ ನಾನು ಬಬ್ಲಿ ಹುಡುಗಿ. ರಂಗಭೂಮಿಯ ಹಿನ್ನೆಲೆಯಿಂದ ಬಂದಿರುವ ಕಾರಣ ಎಂತಹ ಪ್ರೌಢ ಪಾತ್ರಗಳನ್ನಾದರೂ ನಿಭಾಯಿಸಬಲ್ಲೆ...’

ಇದು ಉದಯ ವಾಹಿನಿಯಲ್ಲಿ ಪ್ರಸಾರವಾಗುವ ‘ಜೋ ಜೋ ಲಾಲಿ’ ಧಾರಾವಾಹಿಯ ರಾಧಾ ಪಾತ್ರಧಾರಿ ನಯನಾ ಶೆಟ್ಟಿ ಅವರ ಆತ್ಮವಿಶ್ವಾಸದ ನುಡಿ.

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ‘ಪಂಚರಂಗಿ ಪೋಂ ಫೋಂ’ ಮತ್ತು ‘ಪ್ರೀತಿ ಎಂದರೇನು’ ಧಾರಾವಾಹಿಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ತೀರ್ಥಹಳ್ಳಿಯ ಈ ಬೆಡಗಿ ‘ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಪೋಷಕ ಪಾತ್ರಗಳಲ್ಲಿಯಾದರೂ ಸರಿ ನಟಿಸುತ್ತೇನೆ. ಆದರೆ, ಆ ಪಾತ್ರಗಳಿಗೆ ಮೌಲ್ಯ ಇರಬೇಕು’ ಎನ್ನುತ್ತಾರೆ.

ತ್ರಿಶೂಲ್ ನಿರ್ದೇಶನದ ‘ಜೋ ಜೋ ಲಾಲಿ’ಯಲ್ಲಿ ತಾಯಿ ಹಾಗೂ ಅಣ್ಣನಿಗೆ ಆಸರೆಯಾಗಲು ಬಾಡಿಗೆ ತಾಯಿಯಾಗುವ ಹೆಣ್ಣುಮಗಳೊಬ್ಬಳ ಪಾತ್ರ ಮಾಡುತ್ತಿದ್ದೇನೆ. ನಿಜಕ್ಕೂ ಆ ಪಾತ್ರ ನನಗೆ ತುಂಬಾ ಖುಷಿಕೊಟ್ಟಿದೆ. ಈವರೆಗೆ ನಾನು ಹಾಸ್ಯ, ಖಳನಟಿ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಇಂತಹ ಪಕ್ವತೆಯ ಪಾತ್ರ ನಿರ್ವಹಿಸುವಾಗ ಆರಂಭದಲ್ಲಿ ಸವಾಲು ಎದುರಾಗಿತ್ತು. ನಾನು ಸಿಕ್ಕಾಪಟ್ಟೆ ಸಿನಿಮಾ ನೋಡುತ್ತೇನೆ. ಅದು ನನ್ನ ಸಹಾಯಕ್ಕೆ ಬಂತು. ರಂಗಭೂಮಿಯ ನಂಟು ಕೂಡ ನೆರವಿಗೆ ಬಂತು ಎಂದು ಅವರು ತಮ್ಮ ಪಾತ್ರದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಬೆಂಗಳೂರಿನ ಎ.ಎಸ್‌.ಸಿ. ಪದವಿ ಕಾಲೇಜಿನಲ್ಲಿ ಬಿ.ಬಿ.ಎಂ. ಮುಗಿಸಿರುವ ನಯನಾ, ನಾಗರಾಜಮೂರ್ತಿ ಅವರ ‘ಪ್ರಯೋಗ ರಂಗ’ದ ಮೂಲಕ ರಂಗಭೂಮಿ ಪ್ರವೇಶಿಸಿದರು. ಇದೇ ಮುಂದೆ ಅವರು ಧಾರಾವಾಹಿ ಕ್ಷೇತ್ರಕ್ಕೆ ಕಾಲಿಡಲು ಪ್ರೇರಣೆಯಾಯಿತಂತೆ.

‘ಪ್ರಯೋಗ ರಂಗದ ದಾನಪ್ಪ ಅವರು ನನ್ನನ್ನು ಪೃಥ್ವಿರಾಜ್ ಕುಲಕರ್ಣಿ ಅವರ ಪಂಚರಂಗಿ ಪೋಂ ಪೋಂ ಧಾರಾವಾಹಿಗೆ ಸೇರಿಸಿದರು. ಅಲ್ಲಿಂದ ನಾನು ಪೂರ್ಣವಾಗಿ ಧಾರಾವಾಹಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದೆ ಕೆ.ಎಂ. ಚೈತನ್ಯ ಅವರು ‘ಪ್ರೀತಿ ಎಂದರೇನು’ ಧಾರಾವಾಹಿಯಲ್ಲಿ ಅವಕಾಶ ಕೊಟ್ಟರು. ಅದರಲ್ಲಿ ಖಳನಟಿ ಪಾತ್ರ ಮಾಡಿದ್ದೇನೆ’ ಎಂದು ತಮ್ಮ ಕಿರುತೆರೆ ಪಯಣದ ಬಗ್ಗೆ ವಿವರಿಸುತ್ತಾರೆ.

ಗ್ಲಾಮರ್ ಪಾತ್ರ ಒಲ್ಲೆ ಎನ್ನುವ ನಯನಾ, ‘ಧಾರಾವಾಹಿಯಲ್ಲಿ ನಟಿಸುವುದನ್ನು ಕೂಡ ನಾನು ಇತರೇ ವೃತ್ತಿಗಳಂತೆಯೇ ಸ್ವೀಕರಿಸಿದ್ದೇನೆ. ಕೇವಲ ಹಣ ಗಳಿಕೆಯ ಉದ್ದೇಶ ಇಟ್ಟುಕೊಂಡು ಇಲ್ಲಿಗೆ ಬರಬಾರದು. ಅಭಿನಯವನ್ನು ಪ್ರೀತಿಸಬೇಕು’ ಎನ್ನುತ್ತಾರೆ.

ಇಷ್ಟದ ಆಹಾರ ಯಾವುದು ಎಂದು ಕೇಳಿದರೆ, ‘ಚಿಕನ್ ಬಿರಿಯಾನಿ’ ಎಂದು ಥಟ್ಟನೆ ಉತ್ತರಿಸುವ ಅವರು, ಕನಸಿನ ಹುಡುಗನ ಬಗ್ಗೆ ಕೇಳಿದರೆ ‘ಸದ್ಯಕ್ಕೆ ಅಂತಹ ಯಾವುದೇ ಯೋಚನೆ ಇಲ್ಲ’ ಎಂದು ಖಡಕ್‌ ಆಗಿ ನುಡಿಯುತ್ತಾರೆ.

‘ಬಿಡುವಿನ ವೇಳೆಯಲ್ಲಿ ಕಲಾತ್ಮಕ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತೇನೆ’ ಎನ್ನುವ ನಯನಾ, ‘ಸಮಯ ಸಿಕ್ಕಾಗ ಗಡದ್ದಾಗಿ ನಿದ್ದೆ ಹೊಡೆಯುತ್ತೇನೆ’ ಎಂದು ನಗುತ್ತಲೇ ಹೇಳುತ್ತಾರೆ. ಕನ್ನಡ ಅಲ್ಲದೆ ಇತರೆ ಭಾಷೆಗಳ ಧಾರಾವಾಹಿ, ಸಿನಿಮಾಗಳಲ್ಲಿ ಅವಕಾಶ ಸಿಕ್ಕರೆ ನಟಿಸಲು ಅವರು ಸಿದ್ಧರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry