ಕಣ್ಸೆಳೆಯುವ ಟಸೆಲ್ ಕಿವಿಯೋಲೆ

7

ಕಣ್ಸೆಳೆಯುವ ಟಸೆಲ್ ಕಿವಿಯೋಲೆ

Published:
Updated:
ಕಣ್ಸೆಳೆಯುವ ಟಸೆಲ್ ಕಿವಿಯೋಲೆ

ಇತ್ತೀಚಿಗೆ ಹ್ಯಾಂಗಿಂಗ್ಸ್‌, ದೊಡ್ಡ ದೊಡ್ಡ ಕಿವಿಯೋಲೆಗಳದ್ದೇ ಟ್ರೆಂಡ್‌.  ಬ್ಲಾಕ್ ಮೆಟಲ್, ಪ್ಲಾಸ್ಟಿಕ್, ಟೆರಕೋಟಾದ ವೈವಿಧ್ಯಮಯ ಕಿವಿಯೋಲೆಗಳ ಮಧ್ಯೆ ಕಾಲೇಜು ಬೆಡಗಿಯರು, ಫ್ಯಾಷನ್‌ ಪ್ರಿಯರ ಮನಗೆದ್ದಿರುವುದು ಟಸೆಲ್‌ ಕಿವಿಯೋಲೆಗಳು.

ಟಸೆಲ್‌ ಅಂದರೆ ಕುಚ್ಚು. ಈ ಹಿಂದೆ ಕುಚ್ಚು ಅಂದಾಗ ಸೀರೆ ಕುಚ್ಚು, ಚೂಡಿದಾರದ ದುಪಟ್ಟಾಗಳ ತುದಿಗಳಿಗೆ ಕುಚ್ಚು ವಿನ್ಯಾಸ ಮಾಡುತ್ತಿದ್ದರು. ಆದರೆ ಈಗ ಕುಚ್ಚಿನ ವ್ಯಾಪ್ತಿ ಹಿಗ್ಗಿದ್ದು, ಫ್ಯಾಷನ್‌ ಆಭರಣಗಳ ಸಾಲಿಗೆ ಕುಚ್ಚು ಅಥವಾ ಟಸೆಲ್‌ ಆಭರಣಗಳು ಸೇರ್ಪಡೆಯಾಗಿವೆ. ರೇಷ್ಮೆದಾರಗಳನ್ನು ಸಮನಾಗಿ ಕತ್ತರಿಸಿ, ಅದನ್ನು ಕಿವಿಯಿಂದ ಇಳಿಬೀಳುವಂತೆ ಧರಿಸುವುದು ಈಗ ಟ್ರೆಂಡ್.

ಈ ಕಿವಿಯೋಲೆಗಳನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು. ರೇಷ್ಮೆದಾರ ಅಥವಾ ಉಣ್ಣೆಯ ದಾರವನ್ನು ಕತ್ತರಿಸಿಕೊಂಡು ಅದನ್ನು ಮುಖದ ಆಕಾರಕ್ಕೆ ತಕ್ಕಂತೆ ವಿನ್ಯಾಸ ಮಾಡಿಕೊಂಡರಾಯಿತು. ಇದರಲ್ಲಿ ಶ್ರೀಮಂತಿಕೆ ಅಥವಾ ಹೆಚ್ಚು ವಿನ್ಯಾಸ ಇಷ್ಟಪಡುವವರು ಮಣಿ ಅಥವಾ ಸ್ಟಡ್‌ ಕಿವಿಯೋಲೆಗಳನ್ನು ಪ್ರಯೋಗ ಮಾಡಬಹುದು.

ಟಸೆಲ್‌ ಕಿವಿಯೋಲೆಗಳನ್ನು ನಮ್ಮ ಬಟ್ಟೆಗೆ ತಕ್ಕಂತೆ ವಿನ್ಯಾಸ ಮಾಡಿಕೊಳ್ಳಬಹುದು. ಇವುಗಳಲ್ಲಿಯೂ ಹ್ಯಾಂಗಿಂಗ್ಸ್‌, ಸ್ಟಡ್‌, ಡಾಂಗಲ್‌ ಕಿವಿಯೋಲೆಗಳು ಲಭ್ಯ. ಸ್ಟಡ್‌ ಕಿವಿಯೋಲೆಗಳಿಗೆ ಬಟ್ಟೆ ಬಣ್ಣಕ್ಕೆ ತಕ್ಕಂತೆ ರೇಷ್ಮೆದಾರಗಳಿಂದ ಅಲಂಕರಿಸಿಕೊಳ್ಳಬಹುದು. ಈ ಕಿವಿಯೋಲೆಗಳು ವಯಸ್ಸಿನ ಭೇದವಿಲ್ಲದೇ ಎಲ್ಲರಿಗೂ ಹೊಂದುತ್ತದೆ. ಈ ಕಿವಿಯೋಲೆ ವಿನ್ಯಾಸವೂ ವೈವಿಧ್ಯಕ್ಕೆ ತೆರೆದುಕೊಳ್ಳುತ್ತಾ ಹೋಗುವುದರಿಂದ ಬಹುರೂಪಗಳಲ್ಲಿ, ಕಣ್ಸೆಳೆಯುವ ವಿನ್ಯಾಸಗಳಲ್ಲಿ ಲಭ್ಯವಿವೆ.

ಹೈಸ್ಕೂಲು ಮೆಟ್ಟಿಲೇರಿದ ಬಾಲಕಿಯರಿಂದ ಹಿಡಿದು, ಕಾಲೇಜು ಲಲನೆಯರಿಗೆ, ಉದ್ಯೋಗಸ್ಥ ಮಹಿಳೆ ಎಲ್ಲರಿಗೂ ಈ ಆಭರಣಗಳು ಪ್ರಿಯವಾಗುತ್ತವೆ. ಫ್ಯಾಷನೆಬಲ್‌ ಆಗಿ ಕಾಣಿಸುವ ಈ ಆಭರಣಗಳನ್ನು ಧರಿಸುವುದು ಆರಾಮದಾಯಕ. ಸಭೆ ಅಥವಾ ಅದ್ದೂರಿ ಕಾರ್ಯಕ್ರಮಕ್ಕೆ ತೊಟ್ಟುಕೊಂಡು ಹೋಗಬಹುದು. ಹೊರಜಗತ್ತಿಗೆ ಫ್ಯಾಷನೆಬಲ್‌ ಆಗಿಯೂ ಕಾಣಿಸುವ, ದಿರಿಸಿಗೆ ಮ್ಯಾಚ್‌ ಆಗುವ ಈ ಆಭರಣಗಳೇ ಬೆಸ್ಟ್ ಎಂದು ಫ್ಯಾಷನ್‌ ಪ್ರಿಯರು ಹೇಳುತ್ತಾರೆ.

ಇದು ಬಟ್ಟೆಯಿಂದ ತಯಾರಾದ ಆಭರಣಗಳಾಗಿದ್ದರಿಂದ ಹೆಚ್ಚು ಭಾರ ಇರುವುದಿಲ್ಲ. ವಿನ್ಯಾಸಗಳಿಗೆ ಹೆಚ್ಚೆಂದರೆ ಸಣ್ಣ ಮಣಿಗಳನ್ನು ಹೆಚ್ಚಾಗಿ ಬಳಸುತ್ತಾರೆ. ಹೀಗಾಗಿ ತೊಡಲೂ ಆರಾಮದಾಯಕ. ಭುಜದ ತನಕ ಇಳಿಬೀಳುವ ಕಿವಿಯೋಲೆ ಹಾಕಿಕೊಂಡರೂ ಕಿವಿ ತೂತು ದೊಡ್ಡದಾಗುವ ಭಯ ಬೇಕಾಗಿಲ್ಲ. ಇದರಲ್ಲಿ ಸಾಕಷ್ಟು ಕಲರ್‌ ಕಾಂಬಿನೇಶನ್‌ ಮಾಡಲು ಅವಕಾಶ ಇರುವ ಕಾರಣ ಡ್ರೆಸ್‌ಗೆ ಮ್ಯಾಚ್‌ ಮಾಡಿ, ಕಾಂಟ್ರಾಸ್ಟ್‌ ಕಲರ್‌ ಟಸೆಲ್‌ ಹ್ಯಾಂಗಿಂಗ್‌ ಧರಿಸಿದರೆ ಲುಕ್‌ ಅದ್ಭುತವಾಗಿರುತ್ತದೆ.

ಈ ಕಿವಿಯೋಲೆಗಳನ್ನು ಸೀರೆ, ಲೆಹೆಂಗಾ, ಕುರ್ತಾ, ಸಲ್ವಾರ್‌ ಕಮೀಜ್‌ನಂತಹ ಸಾಂಪ್ರದಾಯಿಕ ಬಟ್ಟೆ ಜೊತೆ ಸ್ಕರ್ಟ್‌, ಮಿಡಿ, ಜೀನ್ಸ್‌ ಜೊತೆಯೂ ಹಾಕಿಕೊಳ್ಳಬಹುದು. ಎರಡೂ ಬಗೆಯ ವಿನ್ಯಾಸಗಳಿಗೆ ಹೊಂದಿಕೊಳ್ಳುವುದು ಈ ಕಿವಿಯೋಲೆ ವೈಶಿಷ್ಟ್ಯ. ಆದರೆ ಕಿವಿಯೋಲೆ ಆಯ್ಕೆ ಮಾಡುವಾಗ ಯಾವ ಬಟ್ಟೆಗೆ ವಿನ್ಯಾಸ ಹೇಗಿರಬೇಕು ಎಂದು ಅರಿತಿರುವುದು ಮುಖ್ಯ. ಕೂದಲು ಇಳಿಬಿಟ್ಟಾಗ ಉದ್ದದ ಟಸೆಲ್‌ ಕಿವಿಯೋಲೆ ಧರಿಸಿದರೆ, ಪೋನಿಟೇಲ್‌ ಅಥವಾ ಜಡೆ ಹಾಕಿದ್ದಾಗ ಸ್ಟಡ್ಸ್‌ ಟಸೆಲ್‌ ತೊಟ್ಟರೆ ಚಂದ ಕಾಣುತ್ತದೆ. ಅನೇಕರು ಸಾಂಪ್ರದಾಯಿಕ ದಿರಿಸು ತೊಟ್ಟಾಗ ಟಸೆಲ್‌ ಕಿವಿಯೋಲೆ ಧರಿಸಿ, ಅಂತಹದೇ ಟಸೆಲ್‌ ನೆಕ್ಲೇಸ್‌ ಧರಿಸುತ್ತಾರೆ. ಇದು ಸೌಂದರ್ಯವನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.

ಧರಿಸುವ ಬಟ್ಟೆಯಂತೆ ಕಿವಿಯೋಲೆ ಕೂಡ  ದೇಹದ ಬಣ್ಣ, ಆಕಾರ, ಕೂದಲ ವಿನ್ಯಾಸಕ್ಕೆ ಹೊಂದಿಕೊಳ್ಳುವಂತಿರಬೇಕು. ಅದೇ ಕಾರಣಕ್ಕೆ ಟಸೆಲ್‌ ಕಿವಿಯೋಲೆ ಆಯ್ಕೆ ಮಾಡಿಕೊಳ್ಳುವಾಗ  ಒಂದಿಷ್ಟು ಗಮನ ಹರಿಸಲೇಬೇಕು. ವೈವಿಧ್ಯ ವಿನ್ಯಾಸ, ನಾನಾ ಗಾತ್ರದ ಯಾವುದೋ ಓಲೆ ಇಷ್ಟವಾಗಿ ಬಿಡುತ್ತದೆ. ಆದರೆ ಅದು ನಿಮಗೆ ಹೊಂದಿಕೊಳ್ಳುತ್ತದೆಯೇ ಅನ್ನೋದನ್ನು ನೋಡಿಕೊಳ್ಳಬೇಕು.

ಹರಳು, ಬಣ್ಣದ ಮಣಿಗಳಿಂದ ಟಸೆಲ್‌ ಅಲಂಕಾರ ಮಾಡಬಹುದು.  ಶ್ರೀಮಂತ ನೋಟ ಪಡೆಯುತ್ತಿರುವ ಈ ಆಭರಣಗಳು ಕಾಲೇಜು ಹುಡುಗಿಯರು, ಉದ್ಯೋಗಸ್ಥ ಮಹಿಳೆಯರ ‌ಅಚ್ಚುಮೆಚ್ಚಿನದ್ದಾಗಿದೆ.

***

ಇತ್ತೀಚೆಗೆ ಟಸೆಲ್‌ ಕಿವಿಯೋಲೆಗೆ ಕಾಲೇಜು ಯುವತಿಯರಿಂದ ಹೆಚ್ಚು ಬೇಡಿಕೆಯಿದೆ. ನಮ್ಮಲ್ಲಿಗೆ ಬರುವ ಮಹಿಳೆಯರಿಗೆ ಫ್ಯಾಷನೆಬಲ್‌ ಆಗಿ ಕಾಣಿಸಲು ಬಯಸುವವರಿಗೆ ಟಸೆಲ್‌ ಕಿವಿಯೋಲೆಗಳನ್ನೇ ಧರಿಸಲು ಸಲಹೆ ನೀಡುತ್ತೇವೆ. ಉದ್ದುದ್ದ ಕಿವಿಯೋಲೆ ಧರಿಸಲು ಇಷ್ಟಪಡುವವರಿಗೆ ಈ ಕಿವಿಯೋಲೆ ಸೂಕ್ತ

– ಭಾಗ್ಯ ಶ್ರೀ ಅರವಿಂದ ದಿರಾದರ್‌,ಆಭರಣ ವಿನ್ಯಾಸಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry