ಕಲಿಕೆಗೆ ಸಿನಿಮೋತ್ಸವ ವೇದಿಕೆ: ಅರುಣ್‌ ಸಾಗರ್‌

7

ಕಲಿಕೆಗೆ ಸಿನಿಮೋತ್ಸವ ವೇದಿಕೆ: ಅರುಣ್‌ ಸಾಗರ್‌

Published:
Updated:
ಕಲಿಕೆಗೆ ಸಿನಿಮೋತ್ಸವ ವೇದಿಕೆ: ಅರುಣ್‌ ಸಾಗರ್‌

‘ಬೆಂಗಳೂರಿನಲ್ಲಿ ಇಲ್ಲಿಯವರೆಗೆ ನಡೆದಿರುವ ಎಲ್ಲ ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಭಾಗವಹಿಸಿದ್ದೇನೆ. ಇದು ನನಗೆ ಸಂತಸದ ವಿಚಾರ. ಪ್ರತಿವರ್ಷವೂ ಸಿನಿಮೋತ್ಸವ ಬೆಳೆಯುತ್ತಿದೆ. ಇದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ. ಒಳ್ಳೆಯ ಸಿನಿಮಾಗಳನ್ನು ನೋಡಲು ಇದೊಂದು ಸುವರ್ಣಾವಕಾಶ. ಜೊತೆಗೆ, ನಾವು ಬೆಳೆಯಲು ಇದು ಪೂರಕವಾಗಿದೆ’

ಹೀಗೆಂದು ಸಿನಿಮೋತ್ಸವ ಕುರಿತು ಅನುಭವ ಹಂಚಿಕೊಂಡರು ನಟ ಹಾಗೂ ಕಲಾ ವಿನ್ಯಾಸಕ ಅರುಣ್‌ ಸಾಗರ್.

‘ಸಿನಿಮೋತ್ಸವಕ್ಕೆ ನಿರ್ದಿಷ್ಟ ಸಮಯ ನಿಗದಿಪಡಿಸಬೇಕೆಂಬ ಮಾತು ಸಹಜ. ಪ್ರತಿವರ್ಷವೂ ಈ ಮಾತು ಕೇಳಿಬರುತ್ತದೆ. ಸಿನಿಪ್ರಿಯರ ಈ ಅಪೇಕ್ಷೆಗೆ ಯಾವುದೇ ಆಕ್ಷೇಪವಿಲ್ಲ. ಆದರೆ, ಅಂತರರಾಷ್ಟ್ರೀಯಮಟ್ಟದ ಸಿನಿಮೋತ್ಸವ ಸಂಘಟಿಸುವಾಗ ಹಲವು ಎಡರು ತೊಡರು ಎದುರಾಗುತ್ತವೆ. ವಿದೇಶಿ ಸಿನಿಮಾಗಳನ್ನು ಗುಡ್ಡೆ ಹಾಕಿಕೊಂಡು ಅವುಗಳ ಪ್ರದರ್ಶನಕ್ಕೆ ವೇಳಾಪಟ್ಟಿ ನಿಗದಿ‍ಪಡಿಸುವುದು ಕೂಡ ಸುಲಭವಲ್ಲ’ ಎಂದು ಚಿತ್ರೋತ್ಸವದ ಹಿಂದಿರುವ ಸವಾಲನ್ನು ಬಿಡಿಸಿಟ್ಟರು.

ವಿದೇಶಿ ಸಿನಿಮಾಗಳನ್ನು ಸ್ಥಳೀಯವಾಗಿ ‍ಪ್ರದರ್ಶನ ಮಾಡುವುದು ಸುಲಭವಲ್ಲ. ವಿಮಾನ ನಿಲ್ದಾಣಗಳಲ್ಲಿ ಕಸ್ಟಮ್ಸ್‌ ಅಧಿಕಾರಿಗಳಿಂದ ಆ ಸಿನಿಮಾಗಳನ್ನು ಬಿಡಿಸಿಕೊಂಡು ಬರಲು ಹರಸಾಹಸಪಡಬೇಕಿದೆ. ಯಾವುದೋ ದೇಶದ ಒಂದು ಮೂಲೆಯಲ್ಲಿ ನಿರ್ಮಾಣವಾದ ಸಿನಿಮಾ ನೋಡುವುದಕ್ಕೆ ಸಿನಿಮೋತ್ಸವ ವೇದಿಕೆ ಕಲ್ಪಿಸುತ್ತದೆ ಎಂದು ಹೇಳಿದರು.

ವರ್ಷದಲ್ಲಿ ನಾವು ಸಾಕಷ್ಟು ಸಿನಿಮಾ ನೋಡುತ್ತೇವೆ. ಸಿನಿಮಾ ಪ್ರದರ್ಶನಕ್ಕೆ ಎದುರಾಗುವ ತೊಂದರೆ ‍ಪೂರ್ವಯೋಜಿತವಲ್ಲ. ಆ ಸಮಸ್ಯೆ ತನ್ನಿಂದ ತಾನೆ ಆಗುತ್ತದೆ. ಅದನ್ನು ಮೀರಿ ಸಿನಿಮಾ ನೋಡಲು ಪ್ರೇಕ್ಷಕರು ಮುಂದಾಗಬೇಕು ಎಂಬುದು ಅವರ ಸಲಹೆ.

‘ಸಿನಿಮಾ ನೋಡುವ ನನ್ನ ಅಭಿರುಚಿಗೆ ಚೌಕಟ್ಟಿಲ್ಲ. ನಾನು ಎಲ್ಲ ಭಾಷೆಗಳ ಸಿನಿಮಾಗಳನ್ನು ನೋಡುತ್ತೇನೆ. ಪರ್ಷಿಯನ್‌, ಇರಾನ್, ಫ್ರೆಂಚ್‌ ಸೇರಿದಂತೆ ಮೂಕಿ ಚಿತ್ರಗಳನ್ನು ಇಷ್ಟಪಟ್ಟು ನೋಡುತ್ತೇನೆ’ ಎಂದರು ಅರುಣ್‌ ಸಾಗರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry