ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗುಗುಂಡಿ ನಿರ್ಮಾಣ ಸ್ವಾಗತಾರ್ಹ ಬಿಬಿಎಂಪಿಗೆ ಬೇಕಿದೆ ಆರ್ಥಿಕ ಶಿಸ್ತು

Last Updated 1 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಆಡಳಿತದ ಹೊಣೆ ಹೊತ್ತಿರುವ ಬಿಬಿಎಂಪಿ 2018–19ನೇ ಸಾಲಿಗೆ ಮಂಡಿಸಿರುವ ಬಜೆಟ್‌ ಮೇಲೆ, ಹೊಸ್ತಿಲಲ್ಲೇ ಇರುವ ರಾಜ್ಯ ವಿಧಾನಸಭೆ ಚುನಾವಣೆಯ ಪ್ರಭಾವ ದಟ್ಟವಾಗಿದ್ದರೂ ಮಳೆ ನೀರಿನ ನಿರ್ವಹಣೆಯತ್ತ ಲಕ್ಷ್ಯ ಹರಿಸಿರುವುದು ಗಮನ ಸೆಳೆದಿದೆ. ಇನ್ನು ಮುಂದೆ ಕೈಗೊಳ್ಳುವ ಪ್ರತೀ ಚರಂಡಿ ಕಾಮಗಾರಿಯಲ್ಲಿ ಶೇ 10ರಷ್ಟು ಮೊತ್ತವನ್ನು ಇಂಗುಗುಂಡಿಗಳ ನಿರ್ಮಾಣಕ್ಕಾಗಿ ಮೀಸಲಿಡಲಾಗುವುದು ಎಂದು ಘೋಷಿಸಲಾಗಿದೆ.

ಬೆಂಗಳೂರಿನ ಯಾವುದೇ ವೃತ್ತದಲ್ಲಿ ನಿಂತು, ಎತ್ತ ಕಣ್ಣು ಹಾಯಿಸಿದರೂ ಕಾಣುವ ಮೇಲ್ಮೈ ಎಲ್ಲಾ ಟಾರು ಇಲ್ಲವೆ ಕಾಂಕ್ರೀಟ್‌ ನೆಲಹಾಸು. ಹುಡುಕಿದರೂ ಮಣ್ಣಿನ ನೆಲ ಸಿಗುವುದಿಲ್ಲ. ಹೀಗಾಗಿ ಬಿದ್ದ ಮಳೆನೀರು ಸಾವಧಾನ ತೋರದೆ ನಾಗಾಲೋಟದಿಂದ ಸಿಕ್ಕಸಿಕ್ಕಲ್ಲಿ ನುಗ್ಗುವುದರಿಂದ ಪ್ರವಾಹಗಳು ರಾಜಧಾನಿಗೆ ಈಗೀಗ ಮಾಮೂಲು ಆಗಿಬಿಟ್ಟಿವೆ

ಪ್ರವಾಹದ ಭೀತಿಯನ್ನು ದೂರ ಮಾಡುವುದರ ಜೊತೆ ಜೊತೆಗೆ ಅಂತರ್ಜಲ ಮಟ್ಟವನ್ನೂ ಹೆಚ್ಚಿಸಲು 842 ಕಿ.ಮೀ. ಉದ್ದದ ರಾಜಕಾಲುವೆಗಳಲ್ಲಿ ಸುಮಾರು ಮೂವತ್ತು ಸಾವಿರ ಇಂಗುಗುಂಡಿಗಳನ್ನು ನಿರ್ಮಾಣ ಮಾಡಬೇಕು ಎಂಬ ಸಲಹೆ ಜಲತಜ್ಞರಿಂದ ಈ ಹಿಂದೆಯೇ ಕೇಳಿಬಂದಿತ್ತು. ಆ ನಿಟ್ಟಿನಲ್ಲಿ ತಡವಾಗಿಯಾದರೂ ಹೆಜ್ಜೆ ಇಟ್ಟಿರುವುದು ಸಮಾಧಾನದ ಸಂಗತಿ.

ಬಿಬಿಎಂಪಿ ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆಗಳು ಎಷ್ಟರಮಟ್ಟಿಗೆ ಅನುಷ್ಠಾನಕ್ಕೆ ಬಂದಿವೆ ಎಂಬುದನ್ನೊಮ್ಮೆ ಅವಲೋಕಿಸಿದರೆ ನಕಾರಾತ್ಮಕ ಅಂಶಗಳೇ ಕಣ್ಣಿಗೆ ರಾಚುತ್ತವೆ. ಕಾಮಗಾರಿಗಳ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ವ್ಯಯವಾದರೂ ಹೂಳಿನಿಂದ ತುಂಬಿಕೊಂಡು ಇನ್ನೂ ಹದಗೆಟ್ಟ ಸ್ಥಿತಿಯಲ್ಲೇ ಇರುವ ರಾಜಕಾಲುವೆಗಳು ಹಗರಣಗಳ ಕಥೆಗಳನ್ನು ಮುಚ್ಚುಮರೆ ಇಲ್ಲದಂತೆ ಹೇಳುತ್ತವೆ. ಕಾಲುವೆಯ ಹೂಳನ್ನೇ ಇದುವರೆಗೆ ತೆಗೆಯಲಾಗದ ಬಿಬಿಎಂಪಿಗೆ ಅದರ ಆಳದಲ್ಲಿ ಇಂಗುಗುಂಡಿ ನಿರ್ಮಾಣ ಮಾಡಲು ಸಾಧ್ಯವಾದೀತೇ ಎಂಬ ಪ್ರಶ್ನೆ ಕಾಡದಿರದು.

ಸ್ಥಳೀಯ ಆಡಳಿತದಿಂದ ನಾಗರಿಕರು ಮುಖ್ಯವಾಗಿ ಬಯಸುವುದು ಮೂರೇ ಮೂರು ಸಂಗತಿಗಳನ್ನು. ಸರಾಗವಾಗಿ ಓಡಾಡಲು ಗುಣಮಟ್ಟದ ರಸ್ತೆ, ಮಾಲಿನ್ಯ ಹಾಗೂ ಪ್ರವಾಹಮುಕ್ತ ವಾತಾವರಣ ಕಲ್ಪಿಸುವಂತಹ ಚರಂಡಿ ವ್ಯವಸ್ಥೆ ಹಾಗೂ ಶುದ್ಧನೀರಿನ ಸಮರ್ಪಕ ಪೂರೈಕೆ. ನೀರು ಪೂರೈಕೆಯ ಹೊಣೆಯನ್ನು ಯಾವಾಗಲೋ ಜಲ ಮಂಡಳಿಗೆ ದಾಟಿಸಿರುವ ಬಿಬಿಎಂಪಿ, ಮಿಕ್ಕ ಎರಡು ಜವಾಬ್ದಾರಿಗಳ ನಿರ್ವಹಣೆಯಲ್ಲೂ ಸಂಪೂರ್ಣವಾಗಿ ಎಡವಿದೆ.

ಚುನಾವಣಾ ಸಂದರ್ಭದ ಬಜೆಟ್‌ ಇದಾಗಿದ್ದರಿಂದ ಮೂಲಸೌಕರ್ಯ ಸೃಷ್ಟಿಯ ಪ್ರಶ್ನೆ ಹಿಂದಿನ ಸೀಟಿಗೆ ಸರಿದಿದ್ದು, ಜನಪ್ರಿಯ ಯೋಜನೆಗಳೇ ಆ ಸ್ಥಾನವನ್ನು ಆಕ್ರಮಿಸಿಬಿಟ್ಟಿವೆ. ಉಚಿತ ವೈ–ಫೈ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಎರಡು ವರ್ಷಗಳ ಹಿಂದೆಯೇ ಘೋಷಣೆ ಮಾಡಲಾಗಿತ್ತು. ಇದುವರೆಗೆ ಅನುಷ್ಠಾನಕ್ಕೆ ತರಲು ಸಾಧ್ಯವಾಗಿರಲಿಲ್ಲ. ಈಗ ಹಳೇ ಯೋಜನೆಯನ್ನು ಮತ್ತೆ ಹೊಸದಾಗಿ ಪ್ರಕಟಿಸಲಾಗಿದೆ.

ನಾಡಪ್ರಭು ಕೆಂಪೇಗೌಡರ ಜನ್ಮ ದಿನಾಚರಣೆಗಾಗಿ ಪ್ರತೀ ವಾರ್ಡ್‌ಗೆ ಅನುದಾನ ಒದಗಿಸಿರುವುದು ಸಮರ್ಥನೀಯವಲ್ಲ. ಹೇಗೂ ಕೇಂದ್ರ ಕಚೇರಿಯಿಂದ ದೊಡ್ಡ ಮಟ್ಟದಲ್ಲೇ ಈ ಕಾರ್ಯಕ್ರಮ ನಡೆಯುತ್ತದೆ. ವಾರ್ಡ್‌ಮಟ್ಟದ ಸಮಾರಂಭಕ್ಕೆ ಅನುದಾನ ಒದಗಿಸುವ ಬದಲು ಕೆಂಪೇಗೌಡರು ಕಟ್ಟಿಸಿದ ಕೆರೆಗಳ ಸಂರಕ್ಷಣೆಗೆ ಆ ಹಣ ಬಳಕೆ ಮಾಡಿದ್ದರೆ ಚೆನ್ನಾಗಿತ್ತು.

ಹೆಲಿಪ್ಯಾಡ್‌ಗಳು ಬೇಡ ಎಂದು ಯಾರೂ ಹೇಳುವುದಿಲ್ಲ. ಆದರೆ, ಮೊದಲು ರಸ್ತೆಗಳನ್ನು ಗುಂಡಿಮುಕ್ತ ಮಾಡಬೇಕಿದೆ. ಬೆಂಗಳೂರಿನಲ್ಲಿ ವಾಸವಾಗಿರುವ ಜನಪ್ರತಿನಿಧಿಯೇ ಮೇಯರ್‌ ಆಗುವುದು. ಅವರಿಗೊಂದು ಪ್ರತ್ಯೇಕ ನಿವಾಸ ಕಟ್ಟುವ ಅಗತ್ಯವಿದೆಯೇ? ಆಡಳಿತ ನಡೆಸುವವರು ತಮ್ಮನ್ನು ಆರಿಸಿ ಕಳುಹಿಸಿದ ಜನರ ಆದ್ಯತೆಗಳನ್ನೇ ಸರಿಯಾಗಿ ಗುರುತಿಸಿದಂತಿಲ್ಲ. ಲಾಗಾಯ್ತಿನಿಂದಲೂ ಬಿಬಿಎಂಪಿಯು ಆರ್ಥಿಕ ಅಶಿಸ್ತಿಗೆ ಕುಖ್ಯಾತಿ ಗಳಿಸಿದೆ.

ವರಮಾನ ಗಳಿಕೆಯಲ್ಲಿ ಬಜೆಟ್‌ನ ಗುರಿಯ ಹತ್ತಿರಕ್ಕೂ ಬರಲು ಸಾಧ್ಯವಾಗಿಲ್ಲ. ಆಸ್ತಿತೆರಿಗೆ ಸಂಗ್ರಹದಲ್ಲೂ ಹಿಂದೆ ಬಿದ್ದಿದೆ. ಹಾಕಿಕೊಂಡ ಬಹುತೇಕ ಯೋಜನೆಗಳಿಗೆ ಹಣವಿಲ್ಲದೆ ಬಜೆಟ್‌ಗಳೇ ಅವಾಸ್ತವಿಕ ಎನಿಸಿದ್ದಿದೆ. ಆರ್ಥಿಕ ಶಿಸ್ತು ಸಾಧಿಸುವ ಜತೆಗೆ ನಾಗರಿಕ ಸಮುದಾಯದ ಆದ್ಯತೆಗಳನ್ನು ಸರಿಯಾಗಿ ಗುರುತಿಸಲು ಕಲಿತರೆ ಸಾಕು, ಬಿಬಿಎಂಪಿ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಅದರಲ್ಲೇ ಪರಿಹಾರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT