ಬಿಎಫ್‌ಸಿಗೆ ಅಮೋಘ ಜಯ

7
ಲೀಗ್‌ ಹಂತಕ್ಕೆ ವೈಭವದ ತೆರೆ: ಪ್ರಶಸ್ತಿಯ ಮೇಲೆ ಕಣ್ಣು

ಬಿಎಫ್‌ಸಿಗೆ ಅಮೋಘ ಜಯ

Published:
Updated:
ಬಿಎಫ್‌ಸಿಗೆ ಅಮೋಘ ಜಯ

ಬೆಂಗಳೂರು: ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡ, ಕೊನೆಯ ಕ್ಷಣದಲ್ಲಿ ಕೇರಳ ಬ್ಲಾಸ್ಟರ್ಸ್‌ಗೆ 2-0 ಗೋಲುಗಳ ಅಂತರದಲ್ಲಿ ಆಘಾತ ನೀಡಿ ಗೆಲುವಿನೊಂದಿಗೆ ಹೀರೊ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನಲ್ಲಿ ಲೀಗ್ ಹಂತಕ್ಕೆ ತೆರೆ ಎಳೆಯಿತು.

ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗೆ ತೀವ್ರ ಪೈಪೋಟಿ ನಡೆಸಿದವು. ಪಂದ್ಯ ಮುಗಿಯಲು ಕೆಲವೇ ಕ್ಷಣಗಳಿರುವಾಗ ಬಿಎಫ್‌ಸಿಗೆ ಯಶಸ್ಸು ತಂದ ಸ್ಟಾರ್ ಸ್ಟ್ರೈಕರ್ ಮಿಕು, 90ನೇ ನಿಮಿಷದಲ್ಲಿ ಗೋಲು ಬಾರಿಸಿ ಬಿಎಫ್‌ಸಿಯ ಜಯದ ರೂವಾರಿಯಾಗಿ ಮಿಂಚಿದರು. ಇದರೊಂದಿಗೆ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ತವರು ಪ್ರೇಕ್ಷಕರ ಸಂಭ್ರಮಕ್ಕೆ ಕಾರಣರಾದರು. ಅಲ್ಲದೆ ಲೀಗ್‌ನಲ್ಲಿ ತಮ್ಮ ವೈಯಕ್ತಿಕ ಗೋಲು ಗಳಿಕೆಯನ್ನು 14ಕ್ಕೆ ಏರಿಸಿಕೊಂಡರು.

ಮಿಕು ಗೋಲು ಬಾರಿಸಿದ ಮರು ಕ್ಷಣವೇ ಉದಾಂತ ಸಿಂಗ್ (90ನೇ ನಿಮಿಷ) ಗೋಲು ಬಾರಿಸಿ ಗೆಲುವಿನ ಅಂತರವನ್ನು 2-0ಗೆ ವಿಸ್ತರಿಸಿದರು.

ಈ ಮೂಲಕ ಆಡಿದ 18 ಲೀಗ್ ಪಂದ್ಯಗಳಲ್ಲಿ 13 ಗೆಲುವು, 1 ಡ್ರಾ ಹಾಗೂ 4 ಸೋಲುಗಳ ಸಹಿತ ಒಟ್ಟು 40 ಅಂಕ ಸಂಪಾದಿಸಿದ ಸುನಿಲ್ ಛೆಟ್ರಿ ನಾಯಕತ್ವದ ಬೆಂಗಳೂರು ಬಳಗ, ಅಗ್ರಸ್ಥಾನದೊಂದಿಗೆ ಪ್ಲೇ ಆಫ್ ಕದನಕ್ಕೆ ಸಜ್ಜಾಯಿತು.

ಇದೇ ಮೊದಲ ಬಾರಿ ಐಎಸ್‌ಎಲ್‌ನಲ್ಲಿ ಆಡುತ್ತಿರುವ ಬೆಂಗಳೂರು ಎಫ್‌ಸಿ, ಲೀಗ್‌ನಲ್ಲಿ 13 ಗೆಲುವುಗಳನ್ನು ದಾಖಲಿಸಿದ ಏಕೈಕ ತಂಡವಾಗಿದೆ. 9 ಗೆಲುವುಗಳನ್ನು ಕಂಡಿರುವ ಎಫ್‌ಸಿ ಪುಣೆ ಸಿಟಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

3 ತಂಡಗಳು ಪ್ಲೇ ಆಫ್‌ಗೆ

ಬೆಂಗಳೂರು ಎಫ್‌ಸಿ ಜೊತೆಗೆ ಎಫ್‌ಸಿ ಪುಣೆ ಸಿಟಿ (17 ಪಂದ್ಯಗಳಿಂದ 29 ಅಂಕ) ಮತ್ತು ಚೆನ್ನೈಯಿನ್ ಎಫ್‌ಸಿ (17 ಪಂದ್ಯಗಳಿಂದ 29 ಅಂಕ) ತಂಡಗಳು ಪ್ಲೇ ಆಫ್‌ಗೆ ಲಗ್ಗೆಯಿಟ್ಟಿವೆ. ಮತ್ತೊಂದು ಸ್ಥಾನಕ್ಕಾಗಿ ಎಫ್‌ಸಿ ಗೋವಾ (17 ಪಂದ್ಯಗಳಿಂದ 27 ಅಂಕ) ಮತ್ತು ಜೆಮ್ಶೆಡ್‌ಪುರ್ (17 ಪಂದ್ಯಗಳಿಂದ 26 ಅಂಕ) ತಂಡಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಮಾರ್ಚ್ 4ರಂದು ಜೆಮ್ಶೆಡ್‌ಪುರ್‌ನಲ್ಲಿ ಈ ಎರಡು ತಂಡಗಳು ನಿರ್ಣಾಯಕ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಗೆಲ್ಲುವ ತಂಡ ಮುಂದಿನ ಹಂತಕ್ಕೇರಿದರೆ, ಸೋತ ತಂಡ ಹೊರ ಬೀಳಲಿದೆ. ಒಂದು ವೇಳೆ ಪಂದ್ಯ ಡ್ರಾಗೊಂಡರೆ ಎಫ್‌ಸಿ ಗೋವಾ 28 ಅಂಕಗಳೊಂದಿಗೆ ಪ್ಲೇ ಆಫ್‌ಗೆ ಅರ್ಹತೆ ಪಡೆಯಲಿದೆ.

ಬುಧವಾರದ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡ, ಎಟಿಕೆ ವಿರುದ್ಧ 5-1ರ ಗೋಲುಗಳ ಭರ್ಜರಿ ಗೆಲುವು ದಾಖಲಿಸಿದ ಕಾರಣ, ಕೇರಳ ಬ್ಲಾಸ್ಟರ್ಸ್ ತಂಡ ಪ್ಲೇ ಆಫ್ ರೇಸ್‌ನಿಂದ ಹೊರ ಬಿದ್ದಿತ್ತು. ಹೀಗಾಗಿ ಈ ಪಂದ್ಯ ಬೆಂಗಳೂರು ಹಾಗೂ ಕೇರಳ ಪಾಲಿಗೆ ಔಪಚಾರಿಕವಾಗಿತ್ತು.

25 ಸಾವಿರಕ್ಕೂ ಹೆಚ್ಚು ತವರು ಪ್ರೇಕ್ಷಕರ ಅಭೂತಪೂರ್ವ ಬೆಂಬಲದೊಂದಿಗೆ ಅಖಾಡಕ್ಕಿಳಿದ ಖಾತೆ ತೆರೆಯಲು ಇನ್ನಿಲ್ಲದ ಪ್ರಯತ್ನ ನಡೆಸಿತು. ನಾಯಕ ಸುನಿಲ್ ಛೆಟ್ರಿ, ಸ್ಟಾರ್ ಸ್ಟ್ರೈಕರ್ ಮಿಕು ಸೇರಿದಂತೆ ಪ್ರಮುಖ ಆಟಗಾರರು ಕೇರಳ ಬ್ಲಾಸ್ಟರ್ಸ್‌ನ ರಕ್ಷಣೆಯನ್ನು ಭೇದಿಸಲು ಪದೇ ಪದೇ ಪ್ರಯತ್ನ ನಡೆಸಿದರು. ಆದರೆ ಗೋಲು ಗಳಿಸುವ ಪ್ರಯತ್ನಗಳಿಗೆ ಯಶಸ್ಸು ಸಿಗಲಿಲ್ಲ. ಹೀಗಾಗಿ ಪಂದ್ಯದ ಪ್ರಥಮಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ.

44ನೇ ನಿಮಿಷದಲ್ಲಿ ಬೆಂಗಳೂರು ಎಫ್‌ಸಿಯ ರಾಹುಲ್ ಭೆಕೆ ಚೆಂಡನ್ನು ಗೋಲಿನತ್ತ ಮುನ್ನಡೆಸುವ ಯತ್ನದಲ್ಲಿ ಮುನ್ನುಗ್ಗುತ್ತಿದ್ದಾಗ, ಹಿಂದಿನಿಂದ ಬಂದ ಕೇರಳ ಬ್ಲಾಸ್ಟರ್ಸ್ ಆಟಗಾರ ರಾಹುಲ್ ಓಟಕ್ಕೆ ತಡೆಯೊಡ್ಡಿದರು. ಈ ವೇಳೆ ನೆಲಕ್ಕೆ ಬಿದ್ದ ರಾಹುಲ್ ಪೆನಾಲ್ಟಿಗಾಗಿ ರೆಫರಿ ಬಳಿ ಮನವಿ ಮಾಡಿದರಾದರೂ, ರೆಫರಿ ನಿರಾಕರಿಸಿದರು.

*-ಸುನಿಲ್ ಚೆಟ್ರಿ ಚೆಂಡಿಗಾಗಿ ಜಿಗಿದರು.

*-ಬಿಎಫ್‌ಸಿ ತಂಡದ ನಿಶು ಕುಮಾರ್ (ಕೆಳಗೆ ಇರುವವರು) ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಳ್ಳಲು ಮುಂದಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry