ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗದಲ್ಲಿ ಈಶ್ವರಪ್ಪಗೆ ಟಿಕೆಟ್

Last Updated 1 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ.

‘ಯಾವುದೇ ಗೊಂದಲ ಇಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳಿ’ ಎಂದು ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಈಶ್ವರಪ್ಪಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಈಶ್ವರಪ್ಪಗೆ ಈ ಬಾರಿ ಟಿಕೆಟ್ ನೀಡುವುದು ಬೇಡ. ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ, ಹಾಲಿ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಗೌಡಗೆ ಟಿಕೆಟ್ ನೀಡಬೇಕು. ಈಶ್ವರಪ್ಪ ಸ್ಪರ್ಧಿಸಿದರೆ ಠೇವಣಿ ಕೂಡ ಉಳಿಯುವುದಿಲ್ಲ’ ಎಂದು ರುದ್ರೇಗೌಡ ಬೆಂಬಲಿಗರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪಗೆ ಮನವಿ ಮಾಡಿದ್ದರು.

ಈ ದಿಢೀರ್ ಬೆಳವಣಿಗೆ ಪಕ್ಷದೊಳಗೆ ಅಂತಃಕಲಹಕ್ಕೆ ಕಾರಣವಾಗಿತ್ತು. ಈಶ್ವರಪ್ಪಗೆ ಟಿಕೆಟ್ ನೀಡಲೇಬೇಕು ಎಂದು ರಾಯಣ್ಣ ಬ್ರಿಗೇಡ್ ಪ್ರಮುಖರು ಆಗ್ರಹಿಸಿದ್ದರು. ಬ್ರಿಗೇಡ್ ಪ್ರಮುಖರನ್ನು ಕರೆಸಿ ಸಂಧಾನ ನಡೆಸಿದ್ದ ರಾಜ್ಯ ಉಸ್ತುವಾರಿ ಮುರಳೀಧರರಾವ್ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದರು.

2013ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ತೊರೆದಿದ್ದ ಯಡಿಯೂರಪ್ಪ ತಮ್ಮದೇ ಆದ ಕೆಜೆಪಿ ಕಟ್ಟಿದ್ದರು. ಇದರಿಂದಾಗಿ ಕೆಜೆಪಿ–ಬಿಜೆಪಿ ಮತಗಳು ಒಡೆದಿದ್ದವು. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರು.

ಯಡಿಯೂರಪ್ಪ ಬಿಜೆಪಿಗೆ ಮರಳಿದ ಬಳಿಕ, ಅವರ ಜತೆ ಕೆಜೆಪಿಯಲ್ಲಿದ್ದವರೆಲ್ಲ ಪಕ್ಷಕ್ಕೆ ಸೇರಿದ್ದರು. ಈಶ್ವರಪ್ಪನವರ ವಿರೋಧದ ಮಧ್ಯೆಯೂ ರುದ್ರೇಗೌಡರನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಯಡಿಯೂರಪ್ಪ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಈಶ್ವರಪ್ಪ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸ್ಥಾಪಿಸಿದ್ದರು. ಅಲ್ಲದೇ ಯಡಿಯೂರಪ್ಪ ವಿರುದ್ಧ ವರಿಷ್ಠರಿಗೆ ದೂರು ನೀಡಿದ್ದರು.

ಯಡಿಯೂರಪ್ಪ, ಈಶ್ವರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ಅಮಿತ್‌ ಶಾ, ಇಬ್ಬರ ಮಧ್ಯೆ ಸಂಧಾನ ನಡೆಸಿದ್ದರು. ಒಂದಾಗಿ ಹೋಗುವಂತೆ ಸೂಚಿಸಿದ್ದರು. ಆ ಬಳಿಕ ಪರಿಸ್ಥಿತಿ ತಿಳಿಗೊಂಡಿತ್ತಾದರೂ ಇಬ್ಬರ ಮಧ್ಯದ ವೈಮನಸ್ಸು ಮಾತ್ರ ಕೊನೆಯಾಗಿರಲಿಲ್ಲ.

ಕೂಡಲಸಂಗಮದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶ

ರಾಯಚೂರು: ‘ಬಾಗಲಕೋಟೆಯ ಕೂಡಲಸಂಗಮದಲ್ಲಿ ಮಾರ್ಚ್ 10ರಂದು ಹಾಗೂ ಹಾವೇರಿಯ ಕಾಗಿನೆಲೆಯಲ್ಲಿ 25ರಂದು ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶವನ್ನು ಏರ್ಪಡಿಸಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪಾಲ್ಗೊಳ್ಳುವರು’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ಹೈದರಾಬಾದ್‌ ಕರ್ನಾಟಕ ಭಾಗದ ಆರು ಜಿಲ್ಲೆಗಳು, ವಿಜಯಪುರ, ಬಾಗಲಕೋಟೆ, ಬೆಳಗಾವಿ ಹಾಗೂ ಹುಬ್ಬಳ್ಳಿ–ಧಾರವಾಡ ಜಿಲ್ಲೆಗಳಿಂದ ಲಕ್ಷಾಂತರ ಜನರು ಕೂಡಲಸಂಗಮದ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಇನ್ನುಳಿದ ಜಿಲ್ಲೆಗಳಿಂದ ಹಿಂದುಳಿದ ವರ್ಗಗಳ ಜನರು ಕಾಗಿನೆಲೆಯಲ್ಲಿ ನಡೆಯುವ ಸಮಾವೇಶಕ್ಕೆ ಬರಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT