ಪಿಎನ್‌ಬಿ ವಂಚನೆ ಸಂಚಿನ ದಾಖಲೆ ಪತ್ತೆ

7
ಮುಂಬೈನ ವಡಾಲಾದಲ್ಲಿರುವ ಚಾಳ ಒಂದರಿಂದ ದಾಖಲೆಪತ್ರಗಳನ್ನು ವಶಕ್ಕೆ ಪಡೆದ ಸಿಬಿಐ

ಪಿಎನ್‌ಬಿ ವಂಚನೆ ಸಂಚಿನ ದಾಖಲೆ ಪತ್ತೆ

Published:
Updated:
ಪಿಎನ್‌ಬಿ ವಂಚನೆ ಸಂಚಿನ ದಾಖಲೆ ಪತ್ತೆ

ನವದೆಹಲಿ: ‘ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ (ಪಿಎನ್‌ಬಿ) ಖಾತರಿ ಪತ್ರ ಪಡೆಯಲು ನೀರವ್ ಮೋದಿಯ ಕಂಪನಿಗಳು ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದ ಕೆಲವು ಮಹತ್ತರ ದಾಖಲೆಗಳನ್ನು ಮುಂಬೈನ ಚಾಳ ಒಂದರಿಂದ ವಶಕ್ಕೆ ಪಡೆಯಲಾಗಿದೆ’ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಪ್ರಕರಣದಲ್ಲಿ ಈಗಾಗಲೇ ಬಂಧನದಲ್ಲಿರುವವರು ನೀಡಿದ ಮಾಹಿತಿ ಮೇರೆಗೆ ಮುಂಬೈನ ವಡಾಲಾದಲ್ಲಿರುವ ಚಾಳ ಒಂದರಲ್ಲಿ ಬುಧವಾರ ರಾತ್ರಿಯಿಂದಲೇ ಶೋಧ ಆರಂಭಿಸಲಾಯಿತು. ಆ ಚಾಳದ ಒಂದು ಸಣ್ಣ ಕೊಠಡಿಯಲ್ಲಿ ಆ ದಾಖಲೆಗಳನ್ನು ಅಡಗಿಸಿ ಇಡಲಾಗಿತ್ತು. ಆ ಚಾಳ ನೀರವ್ ಮೋದಿಯದ್ದೇ ಆಗಿರುವ ಸಾಧ್ಯತೆ ಇದೆ. ಆದರೆ ಅದು ನೀರವ್ ಅಥವಾ ಆತನ ಯಾವ ಕಂಪನಿಗಳ ಹೆಸರಿನಲ್ಲೂ ನೋಂದಣಿಯಾಗಿಲ್ಲ’ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಖಾತರಿ ಪತ್ರಗಳನ್ನು ಪಡೆದುಕೊಳ್ಳಲು ಆರೋಪಿಗಳು ನಡೆಸಿದ ಸಂಚಿನ ಬಗ್ಗೆ ಆ ದಾಖಲೆಗಳಲ್ಲಿ ಮಾಹಿತಿ ಇದೆ’ ಎಂದು ಅವರು ಹೇಳಿದ್ದಾರೆ.

ಪ್ರಕರಣದಲ್ಲಿ ಬಂಧಿತರಾಗಿರುವ ಪಿಎನ್‌ಬಿಯ ಮುಖ್ಯ ಆಂತರಿಕ ಲೆಕ್ಕಪರಿಶೋಧಕ ಎಂ.ಕೆ.ಶರ್ಮಾ ಅವರನ್ನು ಸಿಬಿಐ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ನ್ಯಾಯಾಲಯವು ಶರ್ಮಾರನ್ನು ಮಾರ್ಚ್ 14ರವರೆಗೆ ಸಿಬಿಐ ವಶಕ್ಕೆ ಒಪ್ಪಿಸಿತು. ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಬ್ರಾಡಿ ಹೌಸ್ ಶಾಖೆಯ ಲೆಕ್ಕಪರಿಶೋಧನೆಯ ಜವಾಬ್ದಾರಿ ಶರ್ಮಾ ವ್ಯಾಪ್ತಿಗೆ ಬರುತ್ತದೆ. ಬ್ಯಾಂಕ್‌ನ ಇದೇ ಶಾಖೆಯಿಂದ ನೀರವ್ ಮೋದಿಯ ಕಂಪನಿಗಳಿಗೆ ಖಾತರಿ ಪತ್ರಗಳನ್ನು ವಿತರಿಸಲಾಗಿತ್ತು.

ಪ್ರಕರಣದಲ್ಲಿ ಈವರೆಗೆ 13 ಜನರನ್ನು ಬಂಧಿಸಲಾಗಿದ್ದು, ಅವರಲ್ಲಿ ಪಿಎನ್‌ಬಿಯ ಏಳು ಅಧಿಕಾರಿಗಳೂ ಸೇರಿದ್ದಾರೆ.

ಸಿಬಿಐ ಹೇಳಿದ್ದು

ಬಂಧಿತರು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ

ಚಾಳದ ಸಣ್ಣ ಕೋಣೆಯಲ್ಲಿ ದಾಖಲೆಗಳನ್ನು ಅಡಗಿಸಿ ಇಡಲಾಗಿತ್ತು

ಚಾಳ ನೀರವ್ ಮೋದಿಯದ್ದಾಗಿರಬಹುದು, ಆದರೆ ಆತನ ಹೆಸರಿನಲ್ಲಿ ನೋಂದಣಿಯಾಗಿಲ್ಲ

ವಜ್ರ ಕಂಪನಿಯಿಂದ ಮತ್ತೊಂದು ವಂಚನೆ

ಪ್ರಜಾವಾಣಿ ವಾರ್ತೆ

ನವದೆಹಲಿ: ಬ್ಯಾಂಕ್‌ಗಳಿಗೆ ಸಾಲ ವಂಚನೆಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮೆ. ಡೈಮಂಡ್‌ ಹಟ್ಸ್‌ ಪ್ರೈ.ಲಿ ಎಂಬ ಕಂಪನಿಯ ಪ್ರವರ್ತಕರ ವಿರುದ್ಧ ಸಾಲ ವಂಚನೆಯ ಆರೋಪ ಕೇಳಿ ಬಂದಿದೆ. ಕೆನರಾ ಬ್ಯಾಂಕ್‌ ನೀಡಿದ ದೂರಿನ ಮೇರೆಗೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಈ ಕಂಪನಿಯು ಬ್ಯಾಂಕುಗಳ ಒಕ್ಕೂಟಕ್ಕೆ ₹16.65 ಕೋಟಿ ವಂಚನೆ ಮಾಡಿದೆ ಎಂದು ಆರೋಪಿಸಲಾಗಿದೆ.

ಕಂಪನಿಯ ನಿರ್ದೇಶಕರಾದ ಸುರೇಶ್‌ ವರ್ಮಾ, ಅಶೋಕ್‌ ವರ್ಮಾ ಮತ್ತು ಬ್ಯಾಂಕ್‌ನ ಕೆಲವು ಅಧಿಕಾರಿಗಳ ಹೆಸರು ಎಫ್‌ಐಆರ್‌ನಲ್ಲಿ ಸೇರಿದೆ. ಕಳೆದ ಮಾರ್ಚ್‌ನಲ್ಲಿಯೇ ಪ್ರಾಥಮಿಕ ತನಿಖೆ ಆರಂಭಿಸಲಾಗಿತ್ತು.

2012ರಲ್ಲಿಯೇ ಕಂಪನಿಯು ಸಾಲಕ್ಕೆ ಅರ್ಜಿ ಹಾಕಿತ್ತು. ಆದರೆ ಆ ಸಂದರ್ಭದಲ್ಲಿ ಬ್ಯಾಂಕಿನ ಸಾಲ ಮರುಪಾವತಿ ಶ್ರೇಣಿಯನ್ನು ಬಾಹ್ಯ ರ‍್ಯಾಂಕಿಂಗ್‌ ಸಂಸ್ಥೆಯು ಬಿಯಿಂದ ಬಿಬಿ+ಗೆ ಇಳಿಸಿತ್ತು. ಹಾಗಾಗಿ 2012ರ ಲೆಕ್ಕಪರಿಶೋಧನೆ ವರದಿಯೊಂದಿಗೆ ಹೊಸ ಅರ್ಜಿ ಸಲ್ಲಿಸುವಂತೆ ಬ್ಯಾಂಕ್‌ ಸೂಚಿಸಿತ್ತು.

ಒಂದೂವರೆ ವರ್ಷ ಬಳಿಕ ಕಂಪನಿಯು ₹25 ಕೋಟಿ ಸಾಲಕ್ಕಾಗಿ ಅರ್ಜಿ ಹಾಕಿತು.

ಕಂಪನಿಯ ವಿರುದ್ಧ ₹10.63 ಕೋಟಿಯ ತೆರಿಗೆ ವಿವಾದ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇತ್ತು. ಅಲ್ಲದೆ, ನಿರ್ದೇಶಕರು ತಮ್ಮ ಆದಾಯ ತೆರಿಗೆ ರಿಟರ್ನ್ಸ್‌ಗಳನ್ನೂ ಸಲ್ಲಿಸಿರಲಿಲ್ಲ. ಸಾಲಕ್ಕೆ ಭದ್ರತೆಯಾಗಿ ನೀಡಲು ಕಂಪನಿಯು ಉದ್ದೇಶಿಸಿದ್ದ ಮೂರು ಆಸ್ತಿಗಳು ಗುತ್ತಿಗೆಗೆ ಪಡೆದುಕೊಂಡದ್ದಾಗಿತ್ತು. ಈ ಗುತ್ತಿಗೆ ಅವಧಿಯೂ ಮುಗಿದಿತ್ತು.

ಹೀಗಿದ್ದರೂ ಬ್ಯಾಂಕುಗಳ ಒಕ್ಕೂಟವೊಂದರ ಜತೆ ಸೇರಿಕೊಂಡ ಕೆನರಾ ಬ್ಯಾಂಕ್‌, ಕಂಪನಿಗೆ ₹15 ಕೋಟಿ ಸಾಲ ನೀಡಿತು.

2014ರ ಮೇಯಲ್ಲಿ ವಸೂಲಾಗದ ಸಾಲ ಎಂದು ಘೋಷಿಸಲಾಯಿತು. 2014ರ ಮಾರ್ಚ್‌ ವರೆಗೆ ತನ್ನಲ್ಲಿದ್ದ ₹271 ಕೋಟಿ ಮೌಲ್ಯದ ಷೇರುಗಳ ಮಾಹಿತಿಯನ್ನು ಕಂಪನಿಯು ಬ್ಯಾಂಕ್‌ಗೆ ನೀಡಿತ್ತು. ಬ್ಯಾಂಕ್‌ಗೆ ಒತ್ತೆ ಇರಿಸಲಾಗಿದ್ದ ಷೇರುಗಳನ್ನು ಕಂಪನಿಯು ಅಕ್ರಮವಾಗಿ ಮಾರಾಟ ಮಾಡಿತ್ತು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry