ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌ ದಂತಕತೆ ಕ್ವೀನಿಗೆ ಅಂತಿಮ ನಮನ

Last Updated 1 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮ್ಯಾಡ್ರಿಡ್‌: ಸ್ಪೇನ್‌ನ ಫುಟ್‌ಬಾಲ್‌ ದಂತಕತೆ ಎನ್ರಿಕ್‌ ಕ್ಯಾಸ್ಟ್ರೊ ಗೊಂಜಾಲೆಸ್‌ ಅವರ ಅಂತ್ಯಸಂಸ್ಕಾರವು ಬುಧವಾರ ಸ್ಪೋರ್ಟಿಂಗ್‌ ಗಿಜೊನ್‌ ಕ್ರೀಡಾಂಗಣದಲ್ಲಿ ನೆರವೇರಿತು.

ಫುಟ್‌ಬಾಲ್‌ ಲೋಕದಲ್ಲಿ ‘ಕ್ವೀನಿ’ ಎಂದೇ ಗುರುತಿಸಿಕೊಂಡಿದ್ದ 68 ವರ್ಷದ ಎನ್ರಿಕ್‌ ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದರು.

1970 ಅಕ್ಟೋಬರ್‌ 28ರಂದು ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿದ್ದ ಕ್ವೀನಿ, ಸ್ಪೇನ್‌ ಪರ 35 ಪಂದ್ಯಗಳನ್ನು ಆಡಿ 8 ಗೋಲು ದಾಖಲಿಸಿದ್ದರು.

ಎನ್ಸಿಡೇಸಾ, ಸ್ಪೋರ್ಟಿಂಗ್‌ ಗಿಜೊನ್‌ ಮತ್ತು ಎಫ್‌ಸಿ ಬಾರ್ಸಿಲೋನಾ ಕ್ಲಬ್‌ಗಳ ಪರವೂ ಕಣಕ್ಕಿಳಿದಿದ್ದ ಅವರು 567 ಪಂದ್ಯಗಳಿಂದ 302 ಗೋಲು ಗಳಿಸಿದ್ದರು. ಸ್ಪೇನ್ ಪರ ಎರಡು ಬಾರಿ ಫಿಫಾ ವಿಶ್ವಕಪ್‌ನಲ್ಲಿ ಆಡಿದ ಹಿರಿಮೆಯೂ ಅವರದ್ದಾಗಿತ್ತು.

1968ರಲ್ಲಿ ಸ್ಪೋರ್ಟಿಂಗ್‌ ಡಿ ಗಿಜೊನ್‌ ಕ್ಲಬ್‌ ಸೇರಿದ್ದ  ಕ್ವೀನಿ, 1970–71ರಲ್ಲಿ ನಡೆದಿದ್ದ ಲಾ ಲಿಗಾ ಟೂರ್ನಿಯಲ್ಲಿ 30 ಪಂದ್ಯಗಳಿಂದ 13 ಗೋಲು ಗಳಿಸಿ ಗಮನ ಸೆಳೆದಿದ್ದರು.

1980ರಲ್ಲಿ ಎಫ್‌ಸಿ ಬಾರ್ಸಿಲೋನಾ ಕ್ಲಬ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದ ಅವರು 1981ರಲ್ಲಿ ತಂಡ ಕೋಪಾ ಡೆಲ್‌ ರೇ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

1981–82ರ ಯುರೋಪಿಯನ್‌ ಕಪ್‌ ಟೂರ್ನಿಯಲ್ಲಿ ಬಾರ್ಸಿಲೋನಾ ಪ್ರಶಸ್ತಿ ಜಯಿಸಿತ್ತು. ಆಗಲೂ ಕ್ವೀನಿ ಮೋಡಿ ಮಾಡಿದ್ದರು. 1984ರ ವರೆಗೂ ಬಾರ್ಸಿಲೋನಾ ತಂಡದಲ್ಲಿದ್ದ ಅವರು ಐದು ವರ್ಷಗಳ ಅವಧಿಯಲ್ಲಿ 100 ಪಂದ್ಯಗಳನ್ನು ಆಡಿ 54 ಗೋಲು ದಾಖಲಿಸಿದ್ದರು. 1985ರಲ್ಲಿ ಮತ್ತೆ ಸ್ಪೋರ್ಟಿಂಗ್‌ ತಂಡ ಸೇರಿಕೊಂಡ ಕ್ವೀನಿ, 1987ರವರೆಗೂ ಈ ಕ್ಲಬ್‌ ಪರ ಕಣಕ್ಕಿಳಿದಿದ್ದರು. ಈ ಅವಧಿಯಲ್ಲಿ 62 ಪಂದ್ಯಗಳಿಂದ 17 ಗೋಲು ಬಾರಿಸಿದ್ದರು.

1981ರ ಮಾರ್ಚ್‌ 1ರಂದು ನಡೆದಿದ್ದ ಹರ್ಕ್ಯುಲೆಸ್‌ ಎಫ್‌ಸಿ ಎದುರಿನ ಪಂದ್ಯದಲ್ಲಿ ಬಾರ್ಸಿಲೋನಾ ಪರ ಆಡಿದ್ದ ಕ್ವೀನಿ ಎರಡು ಗೋಲು ಗಳಿಸಿದ್ದರು. ಆ ಪಂದ್ಯದ ಬಳಿಕ ಅವರನ್ನು ದುಷ್ಕರ್ಮಿಗಳು ಅಪಹರಣ ಮಾಡಿದ್ದರು. 25 ದಿನಗಳ ಕಾಲ ಅವರನ್ನು ಬಂಧನದಲ್ಲಿಟ್ಟುಕೊಂಡಿದ್ದ ಅಪಹರಣಾಕಾರರು ಬೇಡಿಕೆ ಈಡೇರಿದ ನಂತರ ಬಿಡುಗಡೆ ಮಾಡಿದ್ದರು.

‘ಕ್ವೀನಿ ದಿಗ್ಗಜ ಆಟಗಾರ. ನಾವಿಬ್ಬರೂ ಈ ಹಿಂದೆ ಎಫ್‌ಸಿ ಬಾರ್ಸಿಲೋನಾ ಕ್ಲಬ್‌ ಪರ ಆಡಿದ್ದೆವು. ನಾನು ಮೊದಲು ಬಾರ್ಸಿಲೋನಾ ಕ್ಲಬ್‌ ಸೇರಿದಾಗ, ಕ್ವೀನಿ  ತುಂಬಾ ಸಹಾಯ ಮಾಡಿದ್ದರು. ಅಭ್ಯಾಸದ ವೇಳೆಯಲ್ಲಿ ನಾವು ಹೆಚ್ಚು ಹೊತ್ತು ಟೆನಿಸ್‌ ಆಡುತ್ತಿದ್ದೆವು. ಈಗ ಅವರು ನಮ್ಮನ್ನು ಅಗಲಿರುವುದು ನೋವು ತಂದಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ’ ಎಂದು ಡಿಗೊ ಮರಡೋನಾ ಹೇಳಿದ್ದಾರೆ.

*


–ಕ್ವೀನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT