ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕತೆ ಬೆಳೆಸಲು ಎಲ್ಲ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರ

Last Updated 1 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ದೃಷ್ಟಿಯಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎಂ.ಆರ್.ಸೀತಾರಾಂ ಹೇಳಿದರು.

ಮಂಡ್ಯ, ಕೋಲಾರ, ಚಿತ್ರದುರ್ಗ ಮತ್ತು ರಾಮನಗರಗಳ ಹೊರತಾಗಿ ಇತರ ಎಲ್ಲ ಕಡೆಗಳಲ್ಲಿ ವಿಜ್ಞಾನ ಕೇಂದ್ರದ ಕೆಲಸ ಪ್ರಗತಿಯಲ್ಲಿದೆ. ಈ ನಾಲ್ಕು ಕಡೆಯಲ್ಲೂ ಸದ್ಯವೇ ವಿಜ್ಞಾನ ಕೇಂದ್ರ ತೆರೆಯುವ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಗುರುವಾರ ನಗರದ ಹೊರವಲಯದ ಪಿಲಿಕುಳದಲ್ಲಿ ದೇಶದ ಪ್ರಥಮ ತ್ರಿಡಿ ತಾರಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸ್ವಾಮಿ ವಿವೇಕಾನಂದ ತ್ರಿಡಿ 8ಕೆ ಹೈಬ್ರಿಡ್‌ ತಾರಾಲಯ ಉದ್ಘಾಟಿಸಿದ ಬಳಿಕ ಪತ್ರಕರ್ತರಿಗೆ ತಿಳಿಸಿದರು.

ಮಂಗಳೂರು, ಧಾರವಾಡಗಳಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ಆರಂಭಿಸಲಾಗಿದೆ. ಮೈಸೂರು ಕೇಂದ್ರದ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ಬೀದರ್‌, ಬಳ್ಳಾರಿ, ರಾಯಚೂರು ಮತ್ತು ಕಾರವಾರಗಳಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳು ಕಾರ್ಯಾರಂಭ ಮಾಡಿವೆ. ಅದೇ ಮಾದರಿಯಲ್ಲಿ ಚಿಕ್ಕಬಳ್ಳಾಪುರ, ಕೊಪ್ಪಳ, ಹಾವೇರಿ, ಬಾಗಲಕೋಟೆ, ದಾವಣಗೆರೆ, ಮಡಿಕೇರಿ ಮತ್ತು ಗದಗದಲ್ಲಿಯೂ ಪ್ರಾದೇಶಿಕ ವಿಜ್ಞಾನ ಕೇಂದ್ರಗಳ ನಿರ್ಮಾಣ ಕೆಲಸ ನಡೆಯುತ್ತಿದೆ. ಮೂಡನಂಬಿಕೆಗಳನ್ನು ಹೋಗಲಾಡಿಸಿ ಹೊಸತಲೆಮಾರಿನಲ್ಲಿ ವಿಜ್ಞಾನ ಮತ್ತು ಸಂಶೋಧನೆಯ ಮನೋಭಾವನೆಯನ್ನು ಬೆಳೆಸುವ ಉದ್ದೇಶದಿಂದ ಇನ್ನೆರಡು ವರ್ಷಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿಯೂ ವಿಜ್ಞಾನ ಕೇಂದ್ರಗಳು ಕೆಲಸ ನಿರ್ವಹಿಸುವಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

₹ 22 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿಯಲ್ಲಿ ತಾರಾಲಯ ಕೆಲಸ ಈಗಾಗಲೇ ಮುಕ್ತಾಯದ ಹಂತಕ್ಕೆ ಬಂದಿದ್ದು ಮುಂದಿನ ವರ್ಷ ಕಾರ್ಯಾರಂಭ ಮಾಡಲಿದೆ. ಬೆಳಗಾವಿಯಲ್ಲಿಯೂ ತಾರಾಲಯ ನಿರ್ಮಾಣವಾಗಲಿದ್ದು, ಬಜೆಟ್‌ನಲ್ಲಿ ₹ 3 ಕೋಟಿ ಮೊತ್ತ ತೆಗೆದಿಡಲಾಗಿದೆ. ಈಗಾಗಲೇ 5 ಸಂಚಾರ ತಾರಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಶಾಲಾ ಮಕ್ಕಳಿಗೆ ಖಗೋಳ ವಿಸ್ಮಯವನ್ನು ಪರಿಚಯಿಸುತ್ತಿವೆ. ಮುಂದಿನ ದಿನಗಳಲ್ಲಿ ಇನ್ನೂ ಏಳು ಸಂಚಾರ ತಾರಾಲಯಗಳನ್ನು ಆರಂಭಿಸಿ ಸರ್ಕಾರಿ ಶಾಲೆ, ಪದವಿಪೂರ್ವ ಕಾಲೇಜು ಮತ್ತು ಅನುದಾನಿತ ಶಾಲೆಯ ಮಕ್ಕಳಿಗೂ ಆಕಾಶ ಕಾಯಗಳ ಬಗ್ಗೆ ಪರಿಚಯ ಮಾಡಿಕೊಡಲಾಗುವುದು ಎಂದರು.

ಶಾಸಕರಾದ ಜೆ.ಆರ್‌. ಲೋಬೊ, ಅಭಯಚಂದ್ರ ಜೈನ್‌, ಮೊಯಿದ್ದೀನ್‌ ಬಾವಾ, ಇಲಾಖೆ ಕಾರ್ಯದರ್ಶಿ ಡಾ. ಹೊನ್ನೇಗೌಡ ಇದ್ದರು.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಮತ್ತೊಂದು ಸೇರ್ಪಡೆ

ದಿನಕ್ಕೆ ಐದು ಪ್ರದರ್ಶನ, ಖಗೋಳ ವಿಸ್ಮಯದ ಪರಿಚಯ

ಧಾರವಾಡದಲ್ಲಿ ರಾಜ್ಯದ ಎರಡನೇ ತ್ರಿಡಿ ತಾರಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT