ಕನ್ನಡ ಚುನಾವಣೆ ವಿಷಯ ಆಗಬೇಕು ಎಂದು ಬಯಸುವುದು ಮರುಳೇ, ಮೂರ್ಖತನವೇ?

7

ಕನ್ನಡ ಚುನಾವಣೆ ವಿಷಯ ಆಗಬೇಕು ಎಂದು ಬಯಸುವುದು ಮರುಳೇ, ಮೂರ್ಖತನವೇ?

Published:
Updated:
ಕನ್ನಡ ಚುನಾವಣೆ ವಿಷಯ ಆಗಬೇಕು ಎಂದು ಬಯಸುವುದು ಮರುಳೇ, ಮೂರ್ಖತನವೇ?

ಅದು 36 ವರ್ಷಗಳ ಹಿಂದಿನ ಮಾತು. ಆಗ ರಾಜ್ಯದಲ್ಲಿ ಆರ್.ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವಿತ್ತು. ಪ್ರೌಢ ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯಾಗಿ ಕಲಿಸಲು ಅವಕಾಶ ಇರಬೇಕು ಎಂದು ಚಳವಳಿ ನಡೆದುದು ಆಗ. ಅದಕ್ಕಿಂತ ಮುಂಚೆ ಬಹುಪಾಲು ವಿದ್ಯಾರ್ಥಿಗಳು ಸಂಸ್ಕೃತವನ್ನು ಮೊದಲ ಭಾಷೆಯಾಗಿ ಕಲಿಯುತ್ತಿದ್ದರು. ಆ ವಿದ್ಯಾರ್ಥಿಗಳಿಗೆ ಸಂಸ್ಕೃತದ ಪ್ರಶ್ನೆಗಳಿಗೆ ಕನ್ನಡ ಅಥವಾ ಇಂಗ್ಲಿಷ್‌ ಭಾಷೆಯಲ್ಲಿ ಉತ್ತರ ಬರೆಯಲು ಅವಕಾಶವಿತ್ತು. ಮತ್ತು ಅವರು ಬರೆದ ಉತ್ತರಗಳಿಗೆ ನೂರಕ್ಕೆ ನೂರರಷ್ಟು ಅಂಕಗಳು ಸಿಗುತ್ತಿದ್ದುವು.

ಕನ್ನಡ ಭಾಷೆಯನ್ನು ಪ್ರಥಮ ಭಾಷೆಯಾಗಿ ಕಲಿಯುವ ಮಕ್ಕಳಿಗೆ ಇಷ್ಟು ಅಂಕಗಳು ಸಿಗುತ್ತಿರಲಿಲ್ಲ. ಅದಕ್ಕೆ ಅಂಕ ಕೊಡುವ ವಿಚಾರದಲ್ಲಿ, 'ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಕೊಡುವುದು ಉಂಟೇ' ಎಂಬ ಅಧ್ಯಾಪಕರ ಜಿಪುಣತನ ಅಥವಾ ಕೃಪಣತನ ಕಾರಣವಾಗಿತ್ತು. ಇದರ ಪರಿಣಾಮವೇನಾಯಿತು ಎಂದರೆ, ಆಗಿನ ಕಾಲದಲ್ಲಿ ಸಂಸ್ಕೃತವನ್ನು ಮೊದಲ ಭಾಷೆಯಾಗಿ ಕಲಿತ ವಿದ್ಯಾರ್ಥಿಗಳು ಒಟ್ಟಾರೆಯಾಗಿ ಹೆಚ್ಚು ಅಂಕಗಳನ್ನು ಗಳಿಸಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‍ನಂಥ ವೃತ್ತಿ ಶಿಕ್ಷಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶ ಪಡೆಯತೊಡಗಿದರು. ಇದು ತಪ್ಪಬೇಕಾದರೆ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಯಲು ಅವಕಾಶ ಇರಬೇಕು ಎಂದು ಸಾಹಿತಿಗಳು, ಕಲಾವಿದರು ಹೋರಾಟ ನಡೆಸಿದರು.

ಅದರ ಫಲವಾಗಿ ಗುಂಡೂರಾವ್ ಸರ್ಕಾರ ನಿವೃತ್ತ ಕುಲಪತಿ ಡಾ. ವಿ.ಕೆ.ಗೋಕಾಕ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ಕೇಳಿತು. ಗೋಕಾಕರು ಬ್ರಾಹ್ಮಣರಾದ ಕಾರಣ ಸಂಸ್ಕೃತದ ಪರವಾಗಿ ವರದಿ ನೀಡಬಹುದು ಎಂಬ ಗುಮಾನಿಯಿಂದ 'ಗೋಕಾಕ್‌ ಗೋ ಬ್ಯಾಕ್‌' ಎಂಬ ಚಳವಳಿ ಆರಂಭವಾಯಿತು. ಆದರೆ, ಗೋಕಾಕರು ಕನ್ನಡವನ್ನು ಪ್ರಥಮ ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕು ಎಂದು 1981ರ ಜನವರಿಯಲ್ಲಿ ವರದಿ ನೀಡಿದರು. ಸರ್ಕಾರ ಅದರ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳಲಿಲ್ಲ.

ಮೊದಲು 'ಗೋಕಾಕ್‌ ಗೋ ಬ್ಯಾಕ್‌' ಎಂದು ಚಳವಳಿ ಮಾಡಿದ ಸಾಹಿತಿಗಳೇ ಈಗ 'ಗೋಕಾಕ್‌ ವರದಿ ಜಾರಿಯಾಗಲಿ' ಎಂದು ಚಳವಳಿ ಮಾಡಿದರು. ಈ ಚಳವಳಿಯನ್ನು ಆರಂಭದಲ್ಲಿ ಸಾಹಿತಿಗಳು ಹಾಗೂ ಕಲಾವಿದರೇ ನಡೆಸಿದರು. ಕನ್ನಡದ ಪ್ರಸಿದ್ಧ ನಟ ರಾಜ್‍ಕುಮಾರ್‌ ಅವರು ಚಳವಳಿಯನ್ನು ಪ್ರವೇಶಿಸುವವರೆಗೆ ಅದು ಉಗ್ರರೂಪ ತಾಳಿರಲಿಲ್ಲ. ರಾಜ್‍ಕುಮಾರ್‌ ಅವರು ಚಳವಳಿ ಪ್ರವೇಶಿಸುತ್ತಿದ್ದಂತೆಯೇ ಅದು ಇಡೀ ರಾಜ್ಯದಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿತು. ಮತ್ತು ಜನರು ಸಾಮೂಹಿಕವಾಗಿ ಅದರಲ್ಲಿ ಪಾಲುಗೊಂಡರು. ಅದು ಎಷ್ಟು ಪ್ರಬಲವಾಗಿತ್ತು ಎಂದರೆ ಈ ವರದಿ ಜಾರಿಯ ವಿರುದ್ಧವಾಗಿದ್ದ ಸಾಹಿತಿ ಯು.ಆರ್‌.ಅನಂತಮೂರ್ತಿಯವರು ಇದನ್ನು 'ಸಮೂಹ ಸನ್ನಿ' ಎಂದು ಕರೆದಿದ್ದರು.

(ವಿ.ಕೃ. ಗೋಕಾಕ್‌)

ಕುತೂಹಲಕಾರಿ ಸಂಗತಿ ಎಂದರೆ, ಆಗಿನ ಹಾಗೂ ಈಗಿನ ಕನ್ನಡ ಚಳವಳಿಯ 'ಅಗ್ರ ನಾಯಕ' ವಾಟಾಳ್ ನಾಗರಾಜ್‌ ಅವರು ಗೋಕಾಕ್‌ ಚಳವಳಿಯಲ್ಲಿ ಭಾಗವಹಿಸಿರಲಿಲ್ಲ. ಅದಕ್ಕೆ ಕಾರಣ ನಿಗೂಢವಾಗಿತ್ತು. ಅನಂತಮೂರ್ತಿಯವರ ಹಾಗೆ ಇನ್ನೂ ಅನೇಕ ಸಾಹಿತಿಗಳೂ ಚಳವಳಿಯ ಪರವಾಗಿ ಇರಲಿಲ್ಲ. ಅವರಲ್ಲಿ ಹಲವರದಾದರೂ ತಾತ್ವಿಕ ವಿರೋಧವಾಗಿತ್ತು.

ಕನ್ನಡಕ್ಕೆ ಅಗ್ರಮಣೆ ಹಾಕುವ ವಿಚಾರ ಮುಂದೆ ಹೇಗೆ ನ್ಯಾಯಾಂಗದ ಮೆಟ್ಟಿಲು ಏರಿತು ಮತ್ತು ಅಂತಿಮವಾಗಿ ಅದು ಕನ್ನಡಕ್ಕೇ ಹೇಗೆ ಮಾರಕವಾಯಿತು ಎಂಬುದೆಲ್ಲ ಈಚಿನ ಕಣ್ಣ ಮುಂದಿನ ಇತಿಹಾಸ. ಕಲಿಕೆಯ ಪ್ರಧಾನ ಭಾಷೆಯಾಗಿ ಕನ್ನಡಕ್ಕೆ ಸಿಗಬೇಕಿದ್ದ ಮಾನ್ಯತೆ ಹೊರಟು ಹೋಗಿ, ಕಲಿಕೆಯ ಮಾಧ್ಯಮವಾಗಿಯೂ ಅದು ಈಗ ಸಂಪೂರ್ಣ ಹಿನ್ನಡೆ ಅನುಭವಿಸಿದೆ. ಈಗ, 'ಕಲಿಕೆಯ ಮಾಧ್ಯಮದ ಆಯ್ಕೆ ಪೋಷಕರ ಹಕ್ಕು' ಎನ್ನುವಂತೆ ಆಗಿದೆ. ಈ ದಿಸೆಯಲ್ಲಿ ಸುಪ್ರೀಂ ಕೋರ್ಟು ಅತ್ಯಂತ ಮಹತ್ವದ ತೀರ್ಪನ್ನು ಕೆಲವು ವರ್ಷಗಳ ಹಿಂದೆ ನೀಡಿದೆ.

ಈಗ ರಾಜ್ಯದಲ್ಲಿ ಮತ್ತೆ ಚುನಾವಣೆ ಬಂದಿದೆ. 'ಕನ್ನಡ ಭಾಷೆಗೆ ಅಗ್ರಸ್ಥಾನ ಕಲ್ಪಿಸುವುದು ಚುನಾವಣೆ ವಿಷಯವೇ ಅಲ್ಲವೇ' ಎನ್ನುವುದು ಕೂಡ ಚರ್ಚೆಯ ವಿಷಯವಾಗಿದೆ.

1983ರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಿತು. ಆಗಷ್ಟೇ ಗೋಕಾಕ್‌ ಚಳವಳಿ ತಣ್ಣಗೆ ಆಗಿತ್ತು. ಏಕೆಂದರೆ ಚಳವಳಿಗಾರರ ಹೋರಾಟಕ್ಕೆ ಸರ್ಕಾರ ಮಣಿದು ಕನ್ನಡದ ಪರವಾಗಿಯೇ ಆದೇಶ ಹೊರಡಿಸಿತ್ತು. ಹಾಗೆ ಆದೇಶ ಹೊರಡಿಸುವುದಕ್ಕಿಂತ ಮುಂಚೆ ಬಹಳ ಹಗ್ಗ ಜಗ್ಗಾಟ ನಡೆದಿತ್ತು. ಕುತೂಹಲದ ಸಂಗತಿ ಎಂದರೆ ಗೋಕಾಕ್‌ ಚಳವಳಿಯಲ್ಲಿ ಯಾವ ರಾಜಕೀಯ ಪಕ್ಷಗಳೂ ಭಾಗವಹಿಸಿರಲಿಲ್ಲ. ಸಿಪಿಎಂ ಮಾತ್ರ ವರದಿಯನ್ನು ಜಾರಿಗೊಳಿಸಿದ ರೀತಿಯನ್ನು ವಿರೋಧಿಸಿ, 'ಇದು ಅಲ್ಪಸಂಖ್ಯಾತರ ಹಕ್ಕುಗಳ ವಿರೋಧಿ' ಎಂದು ಟೀಕಿಸಿತ್ತು.

'ಕನ್ನಡಕ್ಕೆ ಮೊದಲ ಭಾಷೆಯ ಪಟ್ಟ ಕಟ್ಟುವುದು ಉಳಿದ ಭಾಷಿಕರ, ಅದರಲ್ಲಿಯೂ ಉರ್ದು ಮಾತೃಭಾಷೆಯಾಗಿರುವ ಮುಸ್ಲಿಂ ಸಮುದಾಯದ ಜನರ ಮೂಲಭೂತ ಹಕ್ಕಿಗೆ ವಿರುದ್ಧವಾದುದು' ಎಂಬ ಅಭಿಪ್ರಾಯ ಗೋಕಾಕ್‌ ವರದಿ ಜಾರಿಯನ್ನು ವಿರೋಧಿಸುವವರ ಮುಖ್ಯ ಭೂಮಿಕೆಯಾಗಿತ್ತು. ಆದರೆ, ಮುಸಲ್ಮಾನರೇ ಆಗಲಿ ಅಥವಾ ಇತರ ಯಾವುದೇ ಭಾಷಿಕ ಅಲ್ಪಸಂಖ್ಯಾತರೇ ಆಗಲೀ ಗೋಕಾಕ್ ವರದಿ ಜಾರಿ ವಿರುದ್ಧ ಯಾವುದೇ ಚಳವಳಿ ಮಾಡಲಿಲ್ಲ. ಕನ್ನಡ ಭಾಷೆಯ ಪರವಾಗಿ ಇರುವ ಜನರು ಎಷ್ಟು ಉಗ್ರರಾಗಿದ್ದರು ಎಂಬುದು ಅವರಿಗೆ ಮನವರಿಕೆಯಾಗಿತ್ತು. ಅದು ಮತೀಯ ಗಲಭೆಯ ಸ್ವರೂಪ ತೆಗೆದುಕೊಳ್ಳುವ ಎಲ್ಲ ಸಾಧ್ಯತೆ ಇತ್ತು. ಬೆಂಗಳೂರು ದೂರದರ್ಶನದಿಂದ ಉರ್ದು ಭಾಷೆಯಲ್ಲಿ ವಾರ್ತೆ ಪ್ರಕಟಿಸಲು ಮುಂದೆ ಕೆಲವೇ ವರ್ಷಗಳಲ್ಲಿ ಆರಂಭಿಸಿದಾಗ ಅದು ಕೋಮುಗಲಭೆಗೆ ಎಡೆ ಮಾಡಿಕೊಟ್ಟಿತು. ಅಂದರೆ ಗೋಕಾಕ್‌ ಚಳವಳಿಯಲ್ಲಿಯೂ ಕೋಮುಗಲಭೆಗೆ ಎಡೆ ಮಾಡಿಕೊಡುವ ಒಂದು ಕಿಡಿ ಇತ್ತು ಎಂದು ಅರ್ಥ.

'ಕನ್ನಡ ಭಾಷೆಗೆ ಮೊದಲ ಭಾಷೆಯ ಸ್ಥಾನ ಕಲ್ಪಿಸಿದರೆ ಅದು ಭಾಷಿಕ ಅಲ್ಪಸಂಖ್ಯಾತರ ಹಿತಕ್ಕೆ ಧಕ್ಕೆಯಾಗುತ್ತದೆ' ಎಂಬ ಕಾರಣಕ್ಕಾಗಿಯೇ ಗುಂಡೂರಾವ್ ಸರ್ಕಾರ, ಗೋಕಾಕ್‌ ವರದಿಯನ್ನು ಜಾರಿಗೆ ತರಲು ಹಿಂದೇಟು ಹಾಕಿತು ಎಂದು ಕಾಣುತ್ತದೆ. ಸರ್ಕಾರ 1982ರ ಏಪ್ರಿಲ್‍ನಲ್ಲಿ ಹೊರಡಿಸಿದ ಆದೇಶದಲ್ಲಿ ಈ ಆತಂಕ ಅಥವಾ ಎಚ್ಚರ ಕಾಣುತ್ತದೆ. ಆ ಆದೇಶದಲ್ಲಿ, 'ಕನ್ನಡ ಅಥವಾ ಮಾತೃಭಾಷೆಯನ್ನು ಮೊದಲ ಭಾಷೆಯಾಗಿ ಕಲಿಯಬೇಕು' ಎಂದು ಅದು ಸ್ಪಷ್ಟವಾಗಿ ಹೇಳುತ್ತದೆ. ಆದರೆ, ಈ ಆದೇಶದಿಂದ ಸಮಾಧಾನಗೊಳ್ಳದ ಚಳವಳಿಗಾರರು ಮತ್ತೆ ಚಳವಳಿಯನ್ನು ಚುರುಕುಗೊಳಿಸಿದಾಗ ಅದು ತನ್ನ ಆದೇಶವನ್ನು ಬದಲಿಸಿ, ಕನ್ನಡವನ್ನೇ 125 ಅಂಕಗಳ ಪ್ರಥಮ ಭಾಷೆಯಾಗಿ ಕಡ್ಡಾಯವಾಗಿ ಕಲಿಯಬೇಕು ಎಂದು ಆದೇಶಿಸುತ್ತದೆ.

'ಕನ್ನಡ ಮಾತೃಭಾಷೆಯಲ್ಲದ ವಿದ್ಯಾರ್ಥಿಗಳಿಗೆ ಇದು ಮಾರಕವಾದ ಆದೇಶ, ಇದು ಅವರ ಮೂಲಭೂತ ಹಕ್ಕಿಗೆ ವಿರುದ್ಧವಾದುದು ಹಾಗೂ ಇದು ಸಂವಿಧಾನ ಕೊಟ್ಟ ಸಮಾನತೆಯ ಹಕ್ಕಿನ ಉಲ್ಲಂಘನೆ' ಎಂಬೆಲ್ಲ ಕಾರಣ ಕೊಟ್ಟು, ಅಲ್ಪಸಂಖ್ಯಾತರು ಹಾಗೂ ಅವರು ನಡೆಸುವ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಿಲು ಏರಿದುವು. ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶ ಎಂದರೆ, ಕನ್ನಡ ಪರವಿದ್ದವರು ಚಳವಳಿಯ ದಾರಿ ಹಿಡಿದರೆ ಭಾಷಿಕ ಅಲ್ಪಸಂಖ್ಯಾತರು ನ್ಯಾಯಾಲಯದ ಮೊರೆ ಹೋಗುವ ದಾರಿ ಹಿಡಿದಿದ್ದರು! ಅಂತಿಮವಾಗಿ ನ್ಯಾಯಾಲಯದಲ್ಲಿ ಭಾಷಿಕ ಅಲ್ಪಸಂಖ್ಯಾತರ ವಾದಕ್ಕೇ ಗೆಲುವು ಸಿಕ್ಕಿತು. ಕನ್ನಡಕ್ಕೆ ಮೊದಲ ಭಾಷೆಯ ಸ್ಥಾನ ಹೋಗಿ ಮಾತೃಭಾಷೆಗೆ ಮೊದಲ ಸ್ಥಾನ ಇರಬೇಕು ಎಂಬ ಆದೇಶ ಬಂತು. ಹಾಗೆ ನೋಡಿದರೆ ಗುಂಡೂರಾವ್ ಸರ್ಕಾರ 1982ರ ಏಪ್ರಿಲ್‌ನಲ್ಲಿ ಹೊರಡಿಸಿದ ಮೊದಲ ಆದೇಶವನ್ನು ಇದು ಎತ್ತಿ ಹಿಡಿದಂತೆ ಆಯಿತು.

(ಗುಂಡೂರಾವ್‌)

ಗೋಕಾಕ್‌ ಚಳವಳಿಗೆ ರಾಜಕೀಯ ಬೆಂಬಲ ಏಕೆ ಸಿಗಲಿಲ್ಲ ಎಂಬುದಕ್ಕೆ ಹಾಗೂ ಕನ್ನಡ ಏಕೆ ಒಂದು ಚುನಾವಣೆ ವಿಷಯವಲ್ಲ ಎಂಬುದಕ್ಕೆ ಮೇಲಿನ ಇತಿಹಾಸದಲ್ಲಿ ಸುಳಿವು ಇದೆ. 1983ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರವಾಗಿ ಜನತಾ ಪಕ್ಷ ಅಧಿಕಾರಕ್ಕೆ ಬಂತು. ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಸೋಲಲು ಅನೇಕ ಕಾರಣಗಳು ಇದ್ದುವು. ಮುಖ್ಯವಾಗಿ ಅದು ಚಳವಳಿಗಳ ಪರಿಣಾಮವಾಗಿ ಸೋತ ಇದುವರೆಗಿನ ಏಕೈಕ ಸರ್ಕಾರ. ಆಗ ರಾಜ್ಯದಲ್ಲಿ ಗೋಕಾಕ್‌ ಚಳವಳಿಯಷ್ಟೇ ಉಗ್ರವಾಗಿ ರೈತ ಚಳವಳಿಯೂ ಇತ್ತು. ಎರಡೂ ಚಳವಳಿಗಳನ್ನು ದಮನ ಮಾಡಲು ಗುಂಡೂರಾವ್ ಸರ್ಕಾರ ಪೊಲೀಸ್‌ ಬಲವನ್ನು ಎಗ್ಗಿಲ್ಲದೆ ಬಳಸಿತ್ತು. ಸೇಡಿನ ರೀತಿಯಲ್ಲಿ ಎರಡೂ ಚಳವಳಿಗಳು ಗುಂಡೂರಾವ್ ಸರ್ಕಾರವನ್ನು ಬಲಿ ತೆಗೆದುಕೊಂಡುವು.

ಆ ಸಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಪ್ರಮುಖ ಎದುರಾಳಿಯಾಗಿದ್ದ ಜನತಾ ಪಕ್ಷದ ಪ್ರಣಾಳಿಕೆ ತೆಗೆದು ನೋಡಿದರೆ, 'ಕನ್ನಡ ಭಾಷೆಗೆ ಕಲಿಕೆಯಲ್ಲಿ ಅಗ್ರಸ್ಥಾನ ಕೊಡುತ್ತೇವೆ' ಎಂಬ ಅಂಶವೇ ಇಲ್ಲ ಎಂಬುದು ಗಮನಿಸಬೇಕಾದ ಸಂಗತಿ! 'ಶಿಶುವಿಹಾರದಿಂದ ಎಲ್ಲ ಹಂತದವರೆಗೆ ಕನ್ನಡದಲ್ಲಿ ಓದುವ ಮಕ್ಕಳಿಗೆ ಪ್ರೋತ್ಸಾಹ... ಹಾಗೂ ಉರ್ದು, ತಮಿಳು, ತೆಲುಗು, ಮರಾಠಿ, ಹಿಂದಿ ಮೊದಲಾದ ಮಾತೃಭಾಷೆಯನ್ನು ಆಡುವವರಿಗೆ ಎಲ್ಲ ರೀತಿಯ ಪ್ರೋತ್ಸಾಹ... ಭಾಷಾ ಅಲ್ಪಸಂಖ್ಯಾತರಿಗೆ ರಕ್ಷಣೆ...' ಎಂಬ ಬಹಳ ಎಚ್ಚರಿಕೆಯ ಅಥವಾ ಜಾಣ್ಮೆಯ ಭರವಸೆ ಪ್ರಣಾಳಿಕೆಯಲ್ಲಿ ಇದೆ. ಗೋಕಾಕ್‌ ಚಳವಳಿ ಅತ್ಯಂತ ಉಗ್ರವಾಗಿದ್ದ ಕಾಲದಲ್ಲಿ ಹಾಗೂ ಅದು ಆಗಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಜನಾಭಿಪ್ರಾಯ ಮೂಡಿಸಿದ ಕಾಲದಲ್ಲಿ ಜನತಾ ಪಕ್ಷ ಕೂಡ 'ಮತ ಬ್ಯಾಂಕ್' ಬಗೆಗೆ ಎಷ್ಟು ಎಚ್ಚರಿಕೆಯಿಂದ ಇತ್ತು ಎಂಬುದಕ್ಕೆ ಇದು ಒಂದು ಅಪ್ಪಟ ನಿದರ್ಶನ.

ಮುಂದೆ ರಾಮಕೃಷ್ಣ ಹೆಗಡೆಯವರು ಜನತಾ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಎಲ್ಲ ಚಳವಳಿಗಳನ್ನು ಮುರಿದು ಹಾಕಿದರು. ರೈತ ಚಳವಳಿಯಲ್ಲಿ ಅವರೇ ಮೊದಲು ಒಡಕಿನ ಬೀಜ ಬಿತ್ತಿದರು. ಗೋಕಾಕ್‌ ಚಳವಳಿಯಲ್ಲಿ ಭಾಗವಹಿಸಿದ ಮುಂಚೂಣಿ ಹೋರಾಟಗಾರರಲ್ಲಿ ಹಲವರು ಹೆಗಡೆಯವರಿಗೆ ಆಪ್ತರಾದರು; ಕೆಲವರು ಅನುಕೂಲ ಪಡೆದರು. ಹೀಗೆ ಒಡೆದು ಆಳುವುದರಲ್ಲಿ ಹೆಗಡೆಯವರು ನಿಸ್ಸೀಮರಾಗಿದ್ದರು. ಅತ್ತ ಕನ್ನಡಕ್ಕೆ ಸಿಕ್ಕಿದ್ದ ಅಗ್ರಪಟ್ಟ ನ್ಯಾಯಾಲಯದ ಕಟಕಟೆಯಲ್ಲಿ ಅಗ್ನಿಪರೀಕ್ಷೆಗೆ ಒಳಪಟ್ಟಿತ್ತು. ಅಂತಿಮವಾಗಿ ಅದು ಸೋತೂ ಹೋಯಿತು.

ಗೋಕಾಕ್‌ ಚಳವಳಿ ಆರಂಭಕ್ಕಿಂತ ಮುಂಚೆ ಇದ್ದ ಸಂಸ್ಕೃತದ ಸ್ಥಾನವನ್ನು ಈಗ ಇಂಗ್ಲಿಷ್‌ ಆಕ್ರಮಿಸಿಕೊಂಡಿದೆ. ಹಾಗೆ ನೋಡಿದರೆ ಇನ್ನೂ ಅಪಾಯಕಾರಿಯಾಗಿ ಆಕ್ರಮಿಸಿದೆ. ಏಕೆಂದರೆ ಸಂಸ್ಕೃತವನ್ನು ಆಗ ಒಂದು ಭಾಷೆಯಾಗಿ ಮಾತ್ರ ಕಲಿಯುತ್ತಿದ್ದರೆ ಈಗ ಇಂಗ್ಲಿಷ್‌ ಭಾಷೆಯು ಕಲಿಕೆಯ ಮಾಧ್ಯಮವಾಗಿದೆ. 'ಒಂದು ಭಾಷೆಯ ಕಲಿಕೆ' ಹಾಗೂ 'ಕಲಿಕೆಯ ಮಾಧ್ಯಮವಾಗಿ ಒಂದು ಭಾಷೆ' ಈ ಎರಡರ ನಡುವಿನ ಗೊಂದಲವನ್ನು ಕನ್ನಡಿಗರು ಎದುರಿಸಿದಷ್ಟು ಬೇರೆ ಯಾರಾದರೂ ಎದುರಿಸಿದ್ದಾರೆಯೋ ತಿಳಿಯದು. ರಾಷ್ಟ್ರಕವಿ ಕುವೆಂಪು ಅವರು ಕಲಿಕೆಯ ಭಾಷೆಯಾಗಿ ಕನ್ನಡ ಇರಬೇಕು ಎಂಬುದರ ಬಗೆಗೆ ಬರೆದಷ್ಟು, ಮಾತನಾಡಿದಷ್ಟು ಬೇರೆ ಯಾರೂ ಮಾತನಾಡಿರಲಾರರು. ಆದರೆ, ಈಗಲೂ ಕನ್ನಡಕ್ಕೆ ಆ ಸ್ಥಾನ ಸಿಕ್ಕಿಲ್ಲ. ಈಗ ಸುಪ್ರೀಂ ಕೋರ್ಟ್‌ ಆದೇಶವೇ ಅದನ್ನು ತಳ್ಳಿಹಾಕಿಬಿಟ್ಟಿದೆ. ಸುಪ್ರೀಂ ಕೋರ್ಟ್‌ ಆದೇಶ ಒತ್ತಟ್ಟಿಗೆ ಇರಲಿ, ಜನರಿಗಾದರೂ ಕನ್ನಡ ಭಾಷೆ ಮಾಧ್ಯಮವಾಗಿ ಬೇಕೇ ಎಂದರೆ ಅದಕ್ಕೆ 'ಹೌದು' ಎಂದು ಹೇಳಲು ಧೈರ್ಯ ಸಾಲುವುದಿಲ್ಲ. ಅದಕ್ಕೆ ನಮ್ಮ ಕಣ್ಣ ಮುಂದೆ ಎದ್ದು ನಿಂತಿರುವ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಸಾಕ್ಷ್ಯ ಹೇಳುತ್ತಿವೆ.

ಹಿಂದಿ ಎಂಬ ಬಾಣಲೆ ವಿರುದ್ಧ ಧ್ವನಿ ಎತ್ತಿದ ದಕ್ಷಿಣದ ರಾಜ್ಯಗಳು ತಮ್ಮ ಪ್ರಾದೇಶಿಕ ಭಾಷೆಗೆ ಆದ್ಯತೆ ದೊರಕಿಸುವಲ್ಲಿ ಸೋತು, ಇಂಗ್ಲಿಷ್‌ ಎಂಬ ಬೆಂಕಿಗೆ ಬಿದ್ದ ದುರಂತ ಕಥೆ ಇದು. 'ಇಂಗ್ಲಿಷ್ ಭಾಷೆ ಕಲಿತರೆ ಒಳ್ಳೆಯದಾಗುತ್ತದೆ' ಎಂಬುದನ್ನು 'ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತರೆ ಉದ್ಧಾರವಾಗುತ್ತೇವೆ' ಎಂದು ತಪ್ಪಾಗಿ ಅರ್ಥ ಮಾಡಿಕೊಂಡು, ನಾವೆಲ್ಲ ನಮ್ಮ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮದ ಶಾಲೆಗಳಿಗೆ ಕಳಿಸಿದ್ದೇವೆ. ಹಾಗೂ ಸರ್ಕಾರದ ಆದೇಶವನ್ನು ದುರುಪಯೋಗ ಮಾಡಿಕೊಂಡು 'ನಮ್ಮ ಮಾತೃಭಾಷೆ ಇಂಗ್ಲಿಷ್‌' ಎಂದು ನಿಸ್ಸಂಕೋಚವಾಗಿ ಅಥವಾ ನಿರ್ಲಜ್ಜವಾಗಿ ಬರೆದುಕೊಟ್ಟಿದ್ದೇವೆ.

ಸೋಜಿಗವೋ ಅಥವಾ ಇದು ಒಂದು ವ್ಯವಸ್ಥಿತ ಹುನ್ನಾರವೋ ತಿಳಿಯುವುದಿಲ್ಲ : 'ಮಾತೃಭಾಷೆಯ ಮಾಧ್ಯಮದಲ್ಲಿ ಕಲಿತರೆ ಒಳ್ಳೆಯದು' ಎಂಬ ನಂಬಿಕೆಗೆ ವಿರುದ್ಧವಾಗಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳನ್ನು ಗಮನಿಸಿದರೆ, ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಕಡಿಮೆ ಸಂಖ್ಯೆಯಲ್ಲಿ ಪಾಸಾಗುತ್ತಾರೆ ಮತ್ತು ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುತ್ತಾರೆ. ಇದು ಈಚಿನ ವಿದ್ಯಮಾನವೇನೂ ಅಲ್ಲ. ಅಂದರೆ ಏನರ್ಥ? ಇಂಗ್ಲಿಷ್‌ ಮಾಧ್ಯಮದಲ್ಲಿ ಓದುವುದು ತಪ್ಪು ಹಾಗೂ ಕಷ್ಟ ಎಂದೇನೂ ಅಲ್ಲವಲ್ಲ? ಆದರೆ, ಆ ಮಕ್ಕಳಿಗೆ ವಿಷಯದ ಆಳವಾದ ಜ್ಞಾನ ಸಿಕ್ಕಿದೆಯೇ ಇಲ್ಲವೇ ಎಂಬುದು ಬೇರೆ ಮಾತು. ಫಲಿತಾಂಶ ಮಾತ್ರ ಮಾತೃಭಾಷೆಯಲ್ಲಿ ಕಲಿಯಬೇಕು ಎಂಬುದರ ಪರವಾಗಿ ಇಲ್ಲ.

ಶ್ರೇಣೀಕರಣದ ಒಂದು ಸಾಮಾಜಿಕ ವ್ಯವಸ್ಥೆಯಲ್ಲಿ ಇಂಥವೆಲ್ಲ ಮಾದರಿಗಳಾಗಿ ಪರಿಣಮಿಸುತ್ತವೆ. 'ಕನ್ನಡ ಕಲಿತು ಉದ್ಧಾರವಾದಂತೆಯೇ' ಎಂದು ಈಗ ಹಾಲು ಮಾರುವವರು, ಮನೆಕೆಲಸಕ್ಕೆ ಬರುವವರು ಹಾಗೂ ತರಕಾರಿ ಮಾರುವವರು ಕೂಡ ಹೇಳುವುದರಲ್ಲಿ ಶ್ರೇಣೀಕರಣ ವ್ಯವಸ್ಥೆಯ ಮೇಲು ಮಟ್ಟದವರು ಹಾಕಿದ ದಾರಿ ಇದೆ. 'ಅವರ ಮಕ್ಕಳೆಲ್ಲ ಇಂಗ್ಲಿಷ್‌ನಲ್ಲಿ ಓದಿ ಮುಂದೆ ಬಂದಿದ್ದಾರೆ. ಅಮೆರಿಕ, ಇಂಗ್ಲೆಂಡ್‌ಗೆ ಹೋಗಿ ಅಪಾರವಾಗಿ ದುಡ್ಡು ಮಾಡಿದ್ದಾರೆ' ಎಂಬ ಕನಸುಗಳು ಕೆಳಗಿನ ಹಂತದಲ್ಲಿಯೂ ಮೂಡಿದ್ದರೆ ಅದನ್ನು ತಪ್ಪು ಎಂದು ಹೇಗೆ ಹೇಳುವುದು?

ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿ ಇರುವ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ಸಮುದಾಯಗಳು ಇಂಗ್ಲಿಷ್‌ ಮಾಧ್ಯಮದ ಪರವಾಗಿ ಇವೆ. ಇವುಗಳನ್ನು 'ಅಹಿಂದ' ಎಂದು ನೀವು ಕೂಡಿಸಿ ಓದಿದರೆ ನಿಮಗೆ ವಿಶೇಷ ಅರ್ಥ ಹೊಳೆಯುತ್ತದೆ. ಆ ಸಮುದಾಯದ ಧುರೀಣರು, ಸಾಹಿತಿಗಳು ಹಾಗೂ ಕಲಾವಿದರೆಲ್ಲರೂ ಇಂಗ್ಲಿಷ್‌ ಮಾಧ್ಯಮದ ಪರವಾಗಿ ಇದ್ದಾರೆ. ಅದನ್ನು ಅವರು ಬಹಿರಂಗವಾಗಿಯೇ ಹೇಳಿದ್ದಾರೆ.

ರಾಜಕೀಯ ಪಕ್ಷಗಳ ಕಷ್ಟ ಇರುವುದು ಇಲ್ಲಿ. ಜನರಿಗೆ ಏನು ಬೇಕು ಎಂದು ರಾಜಕೀಯ ನಾಯಕರಿಗೆ ಗೊತ್ತಿರುವಷ್ಟು ಬೇರೆ ಯಾರಿಗೂ ಗೊತ್ತಿರುವುದಿಲ್ಲ. ರಾಜ್ಯ ಭಾಷೆಯಲ್ಲಿ ಶಿಕ್ಷಣ ಕೊಡುವುದರ ವಿರುದ್ಧ ಸುಪ್ರೀಂ ಕೋರ್ಟಿನ ಆದೇಶ ಬಂದು ಮೂರು ವರ್ಷಗಳು ಕಳೆದು ಹೋಗಿವೆ. ರಾಜ್ಯ ಸರ್ಕಾರ ಕೇಂದ್ರದ ಕಡೆ ಬೆರಳು ಮಾಡುವುದರ ಹೊರತು ಬೇರೆ ಏನು ಮಾಡಿದೆ? ಕೇಂದ್ರದ ಭಾಷೆ ಹಿಂದಿ. ಕನ್ನಡವಲ್ಲ. ಕನ್ನಡ ಅಥವಾ ತಮಿಳು ಅದಕ್ಕೆ ಮುಖ್ಯವಾಗಿ ಕಾಣುವುದಿಲ್ಲ. ಕನ್ನಡದ ಪರವಾಗಿ ರಾಜ್ಯ ಸರ್ಕಾರವೇ ಮುಂದೆ ನಿಲ್ಲಬೇಕು. ಆ ದಿಸೆಯಲ್ಲಿ ಗಟ್ಟಿಮುಟ್ಟಾದ ಯಾವ ಪ್ರಯತ್ನವೂ ನಡೆದಂತೆ ಇದುವರೆಗೆ ಕಾಣಿಸಿಲ್ಲ.

ನಮ್ಮ ತಲೆಮಾರಿನವರು ಅತ್ಯಂತ ಪ್ರೀತಿಯಿಂದ ಕಲಿತ ಕನ್ನಡ ಶಾಲೆಗಳು ಈಗ ಇದ್ದಲ್ಲಿಯೇ ನಾಶವಾಗುವ ಹಂತಕ್ಕೆ ತಲುಪಿ, ನಮ್ಮ ನಾಡಿನ ಅಸಮಾನ ಶಿಕ್ಷಣ ವ್ಯವಸ್ಥೆಯ ರೂಪಕಗಳಾಗಿ ನಿಂತುಕೊಂಡಿವೆ... ಸರ್ಕಾರದ ಮಾದರಿ ಕನ್ನಡ ಮಾಧ್ಯಮ ಶಾಲೆಗಳೂ ಒಂದೊಂದಾಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಾಗಿ ಪರಿವರ್ತನೆ ಆಗುತ್ತಿವೆ... ಗೋಕಾಕ್‌ ಚಳವಳಿಯಲ್ಲಿ ಭಾಗವಹಿಸಿದ್ದ ಅನೇಕ ಸಾಹಿತಿಗಳ ಅಥವಾ ಆ ತಲೆಮಾರಿನ ಲೇಖಕರ ಮಕ್ಕಳು ಹಾಗೂ ಮೊಮ್ಮಕ್ಕಳು ಅವರ ತಂದೆ ತಾಯಿಯರು ಬರೆದ ಒಂದು ಕಥೆ ಅಥವಾ ಒಂದು ಕವಿತೆಯನ್ನು ಓದಲಾಗದಷ್ಟು ಕನ್ನಡ ಅಕ್ಷರಗಳ ಶತ್ರುಗಳಾಗಿದ್ದಾರೆ... ಬೆಂಗಳೂರಿನಲ್ಲಿ ಸನ್ನಿ ಲಿಯೋನ್‌ ಬಂದು ಹೊಸ ವರ್ಷದ ಮೊದಲ ದಿನ ಕುಣಿಯಬಾರದು ಎಂದು ಕನ್ನಡ ಚಳವಳಿಗಾರರು ಹೋರಾಟ ಮಾಡುತ್ತಿದ್ದಾರೆ ಮತ್ತು ಅದರಲ್ಲಿ ಸಫಲರಾಗಿ ಮೀಸೆ ತಿರುವುತ್ತಿದ್ದಾರೆ...

ಇಂಥ ಸನ್ನಿವೇಶದಲ್ಲಿ 'ಕನ್ನಡ'ವು ಚುನಾವಣೆ ವಿಷಯ ಆಗಬೇಕು ಎಂದು ಬಯಸುವುದು ಮರುಳೇ ಅಥವಾ ಮೂರ್ಖತನವೇ?

ಬಹುಪ್ರೀತಿಯ ಹಳವಂಡ!

ಈಗ ಗೋಕಾಕ್‌ ಚಳವಳಿ ಎನ್ನುವುದು ಒಂದು ಬಹುಪ್ರೀತಿಯ ಹಳವಂಡ. ‘ಇನ್ನೊಮ್ಮೆ ಗೋಕಾಕ್‌ ಚಳವಳಿ ಆಗಬೇಕು’ ಎಂದು ಕನ್ನಡದ ಹೋರಾಟಗಾರರು ಆಗಾಗ ಗರ್ಜಿಸುವುದನ್ನು ನಾವು ಕೇಳುತ್ತೇವೆ. ಆದರೆ ಅಂಥ ಚಳವಳಿ ಸಾಧ್ಯವೇ? ಚಳವಳಿಗಾರರ ಧ್ವನಿಯಲ್ಲಿ ಆಗಿನ ತೀವ್ರತೆ ಈಗ ಇದೆಯೇ? ಹೋಗಲಿ, ಕನ್ನಡ ಈಗ ಯಾರಿಗಾದರೂ ಬೇಕಾಗಿದೆಯೇ? ಕರ್ನಾಟಕದಲ್ಲಿ ಮತ್ತೆ ಗೋಕಾಕ್‌ ಚಳವಳಿಯಂಥ ಕನ್ನಡಪರ ಚಳವಳಿ ನಡೆಯುವುದು ಬಹಳ ಕಷ್ಟ ಅನಿಸುತ್ತದೆ. ಏಕೆಂದರೆ ಕನ್ನಡ ಈಗ ಯಾರಿಗಾದರೂ ಬೇಕಾಗಿದೆ ಎಂದು ಅನಿಸುವುದಿಲ್ಲ.

ಸುದ್ದಿಯಾಗುವುದಷ್ಟೇ ಮುಖ್ಯ...

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕಕ್ಕೆ ಒಂದು ಸ್ವಂತ ಬಾವುಟ ಬೇಕು ಎನ್ನುತ್ತಾರೆ. ಅದಕ್ಕೆ ಸಮಿತಿ ರಚಿಸುತ್ತಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ (2012) ನಡೆದಿತ್ತು. ಅಲ್ಲಿ ಅವರು 25 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಳಗಾವಿಯಲ್ಲಿ ಲಾಲ್‌ಬಾಗ್ ಮಾದರಿಯ ಒಂದು ಉದ್ಯಾನ ನಿರ್ಮಿಸುತ್ತೇವೆ ಎಂದಿದ್ದರು.

ಅದಕ್ಕಿಂತ ಮುಂಚೆ ಬೆಂಗಳೂರಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (2011) ನಡೆದಿತ್ತು. ಅಲ್ಲಿ ಅವರು 25 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಭುವನೇಶ್ವರಿ ಮೂರ್ತಿ ನಿರ್ಮಿಸುವ ಭರವಸೆ ಕೊಟ್ಟಿದ್ದರು. ರಾಜಕೀಯ ನಾಯಕರಿಗೆ 'ಸುದ್ದಿಯಾಗುವ' ಇಂಥ ಸಂಕೇತಗಳು ಮುಖ್ಯ ಎನಿಸುತ್ತವೆ. ಪ್ರತಿ ವರ್ಷ 25 ಕೋಟಿ ರೂಪಾಯಿ ಖರ್ಚು ಮಾಡಿ ಕನಿಷ್ಠ 25 ಕನ್ನಡ ಮಾಧ್ಯಮ ಶಾಲೆಗಳನ್ನು ಉದ್ಧರಿಸುತ್ತೇವೆ ಎಂದು ಹೇಳುವುದು ಆಕರ್ಷಕ ಅಥವಾ ಜನಪರ ಎಂದು ಅವರಿಗೆ ಅನಿಸಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry